Dec 222013
 

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ – ೨೦೧೩. ಕನ್ನಡ ನುಡಿಹಬ್ಬದಲ್ಲಿ ನಾಗಾ ಐತಾಳರ ಉಪನ್ಯಾಸ ಮತ್ತು ಎಚ್. ವೈ. ಆರ್ ಅವರಿಗೆ ಸನ್ಮಾನ

 

ಇಂದಿನ ಹೊತ್ತಿನಲ್ಲಿ ಕನ್ನಡ ನಾಡಿನಾದ್ಯಂತ ಮಾತ್ರವಲ್ಲದೆ ಕನ್ನಡ ಉಸಿರಾಡುವೆಡೆಗಳಲ್ಲೆಲ್ಲ ಆಡ್ಯಾಡುತ್ತಿರುವ ಹೊಸ ಸುದ್ದಿ- ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ – ೨೦೧೩. ಕನ್ನಡ ನುಡಿಹಬ್ಬ ನಾಡಿನ ಗಡಿದಾಟಿ ಪ್ರಪಂಚದೆಲ್ಲೆಡೆ ಹಬ್ಬಿದ ಮತ್ತು ಎಲ್ಲೆಡೆಗಳಿಂದ ವಿಶೇಷ ಸಾಂಸ್ಕೃತಿಕ ಕಲಾವಿದರ ಸಾಲುಸಾಲನ್ನೇ ಕನ್ನಡ ಮಣ್ಣಿನೆಡೆ ಸೆಳೆದು ತಂದಿರುವ ಹೊಸ ಶಕ್ತಿ ಅಲೆಯೆಬ್ಬಿಸುತ್ತಿರುವ ಹೊತ್ತಿದು.

nudisiri_HYR

ಮೂಡಬಿದರೆಯು ಜೈನ ಕಾಶಿಯೆಂದು ಪ್ರತೀತಿ ಹೊಂದಿದೆ. ಜೊತೆಗೇ ಇಂದು ಅದು ವಿದ್ಯಾಸರಸ್ವತಿಯ ಅಂಗಳವಾಗಿಯೂ ಕನ್ನಡ ನುಡಿ-ಸಂಸ್ಕೃತಿಗಳ ವೇದಿಕೆಯಾಗಿಯೂ ಹೆಸರು ಮಾಡಿದ್ದರ ಹಿಂದಿನ ಕರ್ತೃತ್ವ ಶಕ್ತಿ ಡಾ. ಮೋಹನ ಆಳ್ವರದು. ಈ ವ್ಯಕ್ತಿಯ ಕನಸಿನ ಪ್ರತಿಯೊಂದು ಎಳೆಯನ್ನು ಸಾಕಾರಗೊಳಿಸಲು ಅವರ ಹಿಂದೆ ಟೊಂಕಕಟ್ಟಿ ನಿಲ್ಲುವ ಉತ್ಸಾಹೀ ಅಧ್ಯಾಪಕ-ವಿದ್ಯಾರ್ಥಿ ಪಡೆಯಿದೆ. ಇವರು ಪ್ರತಿ ವರ್ಷವೂ ನುಡಿಸಿರಿ ಮತ್ತು ವಿರಾಸತ್ ಎಂಬ ಎರಡೆರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ವರ್ಷ ನುಡಿಸಿರಿಯ ದಶಮಾನೋತ್ಸವವೂ ವಿರಾಸತ್‌ನ ದ್ವಿದಶಮಾನೋತ್ಸವವೂ ಜೊತೆಗೂಡಿ ಭರ್ಜರಿಯ ನಾಲ್ಕುದಿನಗಳ ಕನ್ನಡ ಹಬ್ಬ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನೆರವೇರಿತು. ಇದೇ ೨೦೧೩ರ ದಶಂಬರ ೧೯, ೨೦, ೨೧, ೨೨ರಂದು ನಡೆದ ಈ ಕನ್ನಡ ಜಾತ್ರೆಯಲ್ಲಿ ಏನಿತ್ತು ಏನಿಲ್ಲ ಎನ್ನುವಂತಿಲ್ಲ. ವಿವರಗಳೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಬ್ಲಾಗುಗಳಲ್ಲಿ ಈಗಾಗಲೇ ಹರಿದಾಡಿದೆ.ಇಂಥ ದೊಡ್ಡ ಮಟ್ಟದ ಸಂಭ್ರಮದಲ್ಲಿ ಅಮೆರಿಕನ್ನಡಿಗರಿಗೆಲ್ಲ ಹೆಮ್ಮೆಯೆನಿಸುವಂಥ ತುಣುಕಗಳೆರಡು ಸೇರಿದ್ದವು.

Nudisiri1

ಮೊದಲನೆಯದು- ತಾ. ೨೦ರಂದು ಬೆಳಗ್ಗೆ ವಿಚಾರಗೋಷ್ಠಿಯಲ್ಲಿ ನಾಗ ಐತಾಳರು ‘ಹೊರದೇಶದಲ್ಲಿ ಕನ್ನಡ’ ಎನ್ನುವ ವಿಷಯವಾಗಿ ಅರ್ಧ ಗಂಟೆಯ ಉಪನ್ಯಾಸ ನೀಡಿದರು. ಸಂಪೂರ್ಣ ನುಡಿಸಿರಿ ಕಾರ್ಯಕ್ರಮಗಳಲ್ಲಿ ಮೊದಲನೇ ವಿಚಾರಗೋಷ್ಠಿಯಲ್ಲಿ ಮೊದಲನೇ ಉಪನ್ಯಾಸಕರಾಗಿ ಐತಾಳರು ವಿಚಾರ ಮಂಡನೆ ಮಾಡಿರುವುದು ಗಮನೀಯ ಅಂಶ. ಐತಾಳರಿಗೆ ಅಭಿನಂದನೆಗಳು.

nudisiri2

ಎರಡನೆಯದು- ತಾ. ೨೧ರಂದು ಸಂಜೆ, ‘ವಿದೇಶ, ಹೊರನಾಡು, ಗಡಿನಾಡುಗಳಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಸಮಾರಂಭ’ದಲ್ಲಿ ವಿದೇಶದಲ್ಲಿ ಕನ್ನಡ ಸೇವೆಯನ್ನು ಗುರುತಿಸಿ ಡಾ. ಎಚ್.ವೈ. ರಾಜಗೋಪಾಲರನ್ನು ಗೌರವಿಸಲಾಯಿತು. ನಾಲ್ಕು ದಶಕಗಳಿಗೂ ಮೀರಿ ಅಮೆರಿಕದಲ್ಲಿ ಬಾಳುತ್ತಾ, ಆ ಸಮಯದುದ್ದಕ್ಕೂ ಕನ್ನಡವನ್ನು ನಾಡಿಮಿಡಿತದಂತೆ ತನ್ನೊಳಗೆ ಇರಿಸಿಕೊಂಡಿರುವ ರಾಜಗೋಪಾಲರಿಗೆ ಸಂದ ಈ ಸನ್ಮಾನ ಅವರೇ ಸಮಾನಾಸಕ್ತರ ಜೊತೆಗೂಡಿ ಹುಟ್ಟುಹಾಕಿದ ಕನ್ನಡ ಸಾಹಿತ್ಯ ರಂಗದ ಸದಸ್ಯರಿಗೆ ಹೆಮ್ಮೆಯ ಗರಿ. ಈ ಸಮ್ಮಾನ ಸಮಾರಂಭದ ಕೆಲವೇ ಕೆಲವು ಕ್ಷಣಗಳ ಮೊದಲು, ನುಡಿಸಿರಿಯ ಮುಖ್ಯ ವೇದಿಕೆ- ಕವಿ ರತ್ನಾಕರ ವರ್ಣಿ ವೇದಿಕೆಯ ಪಕ್ಕದಲ್ಲೇ ಇದ್ದ ಮಂಗಳೂರು ಆಕಾಶವಾಣಿಯ ಬಿಡಾರದಿಂದಲೇ ರಾಜಗೋಪಾಲರು ತಮ್ಮ ಕನ್ನಡತನದ ಕುರಿತು, ಕನ್ನಡ ಸಾಹಿತ್ಯ ರಂಗದ ಹುಟ್ಟು-ಬೆಳವಣಿಗೆಯ ಕುರಿತು ಕೆಲನಿಮಿಷ ಮಾತನಾಡಿದರು. ಆಕಾಶವಾಣಿಯ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಈ ಸಂದರ್ಶನ ನಡೆಸಿದರು.

ಇದುತನಕ ಒಂದು ರೀತಿಯಲ್ಲಿ ಕೆಲವೇ ಕೆಲವು ಬೆಂಗಳೂರಿಗರಿಗೆ ಅರಿವಿದ್ದ ಕನ್ನಡ ಸಾಹಿತ್ಯ ರಂಗ, ಅಮೆರಿಕನ್ನಡ ಕಾರ್ಯ ಚಟುವಟಿಕೆಗಳು ಈ ವಿಶ್ವ ನುಡಿಸಿರಿಯಲ್ಲಿ ದೊರೆತ ಅವಕಾಶಗಳಿಂದ ವಿಶಾಲ ಕರ್ನಾಟಕದ ಇತರ ಕನ್ನಡಿಗರ ಗಮನಕ್ಕೂ ಬರಬಹುದೆನ್ನುವುದು ಸದ್ಯದ ಆಶಯ.

ಲೇಖನ ಮತ್ತು ಫೋಟೋ:
ಜ್ಯೋತಿ ಮಹಾದೇವ್, ಮಣಿಪಾಲ.

 Posted by at 7:38 PM