Oct 182010
 

ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಆದರಪೂರ್ವಕ ನಮಸ್ಕಾರಗಳು. ಈಗಾಗಲೇ ನಾವು ಪ್ರಕಟಿಸಿರುವಂತೆ, ಕನ್ನಡ ಸಾಹಿತ್ಯ ರಂಗದ ಮುಂದಿನ ಅಧಿವೇಶನ 2011ರ ಮೇ ತಿಂಗಳಿನಲ್ಲಿ, ಅಮೆರಿಕದ ಪ್ರಮುಖ ಕನ್ನಡ ಕೂಟಗಳಲ್ಲಿ ಒಂದಾಗಿರುವ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ (KKNC) ಸಹಯೋಗದೊಂದಿಗೆ ಮತ್ತು ಸ್ಥಳೀಯ ಸಾಹಿತ್ಯಾಸಕ್ತರ ಬಳಗ ‘ಸಾಹಿತ್ಯಗೋಷ್ಠಿ’ಯ ಸಹಕಾರದೊಂದಿಗೆ ಸ್ಯಾನ್ ಫ಼್ರಾನ್ಸಿಸ್ಕೋ – ಬೇ ಏರಿಯ ಬಳಿ ನಡೆಯಲಿದೆ. ಈ ಸಂದರ್ಭದಲ್ಲಿ ಹಿಂದಿನ ಸಮ್ಮೇಳನಗಳಂತೆ ಈ ಸಲವೂ ಬಹುಮಟ್ಟಿಗೆ ಅಮೆರಿಕದ ಕನ್ನಡಿಗರೇ ಬರೆದಿರುವ ಕನ್ನಡ ಪುಸ್ತಕವೊಂದನ್ನು ಹೊರತರುತ್ತಿದ್ದೇವೆ. ಈ ಬಾರಿ ಲಲಿತ ಪ್ರಬಂಧಗಳಿಂದ ಕೂಡಿದ ಸಂಕಲನವೊಂದನ್ನು ಹೊರತರುವ ಯೋಜನೆ ನಮ್ಮದು. ಈ ಸಂಕಲನದ ಸಂಪಾದಕತ್ವವನ್ನು ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಮತ್ತು ಶ್ರೀ ಎಂ. ಆರ್. ದತ್ತಾತ್ರಿಯವರು ವಹಿಸಿಕೊಂಡಿದ್ದಾರೆ.

ಬಿಗಿಯಾಗಿರುವುದನ್ನು ಲಘುವಾಗಿ ಹೇಳುವುದೇ ಲಲಿತ ಪ್ರಬಂಧಗಳ ವೈಶಿಷ್ಟ್ಯವೆನ್ನಬಹುದು. ಲಲಿತ ಪ್ರಬಂಧಗಳು ಲಘುವಾಗಿದ್ದರೂ ಅದರ ದೃಷ್ಟಿಕೋನ ಮಾತ್ರ ಲಘುವಲ್ಲ. ಎರಡು ಸಂಸ್ಕೃತಿಗಳನ್ನು ಕಂಡವರಿಗೆ, ಹೊಸ ದೇಶಗಳನ್ನು ಕಂಡವರಿಗೆ ಅನೇಕ ಹೊಸ ಅನುಭವಗಳಾಗಿರುತ್ತವೆ, ಹೊಸ ವಿಚಾರಗಳು ಮನಸ್ಸಿಗೆ ಹೊಳೆದಿರುತ್ತವೆ. ಅವನ್ನು ಅವರು ನೋಡುವ, ತಮ್ಮದಾಗಿಸಿಕೊಳ್ಳುವ ರೀತಿಯೂ ಹೊಸದಾಗಿರಲು ಸಾಧ್ಯ. ಇಂಥವೆಲ್ಲ ಈ ಲಲಿತ ಪ್ರಬಂಧಗಳಿಗೆ ತಕ್ಕ ವಸ್ತುವಾಗಬಲ್ಲವು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಂತೂ ಲಲಿತ ಪ್ರಬಂಧಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಎ.ಎನ್. ಮೂರ್ತಿರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅ.ರಾ. ಮಿತ್ರರಿಂದ ಹಿಡಿದು ಈಚೆಗಿನ ವಸುಧೇಂದ್ರರವರೆಗೂ ಲಲಿತ ಪ್ರಬಂಧ ಸುಲಲಿತವಾದ ಹಾದಿಯಲ್ಲಿ ಸಾಗಿಬಂದಿದೆ. ಹಾಗಾಗಿ, ಸಾಹಿತ್ಯ ರಂಗ ತನ್ನ ಈ ಬಾರಿಯ ಪ್ರಕಟಣೆಗೆಂದು ‘ಲಲಿತ ಪ್ರಬಂಧ’ ಪ್ರಕಾರವನ್ನೇ ಆರಿಸಿಕೊಂಡಿದ್ದು, ಈ ಮೂಲಕ ನಿಮ್ಮ ಪ್ರಬಂಧಗಳನ್ನು ಪ್ರಕಟನೆಗೆಂದು ಆಹ್ವಾನಿಸುತ್ತಿದೆ.

ಅದಕ್ಕಾಗಿ ನಾವು ರೂಪಿಸಿರುವ ಕೆಲವು ನಿಯಮಗಳು ಈ ರೀತಿಯಾಗಿವೆ:

* ಲಲಿತ ಪ್ರಬಂಧಗಳಿಗೆ ವಿಷಯದ ಮಿತಿಯಿಲ್ಲ. ಆದರೂ ನೀವು ಆರಿಸಿಕೊಳ್ಳುವ ವಿಷಯ ಸಾರ್ವಕಾಲಿಕವಾಗಿದ್ದು, ಸರ್ವತ್ರ ಅನ್ವಯವಾಗುವಂತಿದ್ದರೆ ಒಳಿತು.

* ಅನಿವಾಸಿ ಕನ್ನಡಿಗರ ಬರಹಗಳಿಗೆ ಆದ್ಯತೆ. ಇತರರ ಬರಹಗಳನ್ನು ಯುಕ್ತವಾದಲ್ಲಿ ಸ್ವೀಕರಿಸಲಾಗುವುದು.

* ನಮಗೆ ಕಳಿಸುವ ಪ್ರಬಂಧಗಳು ಈ ಮೊದಲು ಬೇರೆಲ್ಲೂ ಪ್ರಕಟವಾಗಿರಬಾರದು, ಪ್ರಕಟನೆಗೆಂದು ಇನ್ನೆಲ್ಲಿಗೂ ಕಳುಹಿಸಿರಬಾರದು.

* ನಮಗೆ ಬರುವ ಎಲ್ಲಾ ಪ್ರಬಂಧಗಳಿಂದ, ಸಂಪಾದಕ ಮಂಡಲಿ ಅತ್ಯುತ್ತಮವೆಂದು ತೀರ್ಮಾನಿಸುವ ಇಪ್ಪತ್ತೈದು-ಮೂವತ್ತು ಪ್ರಬಂಧಗಳನ್ನು ಆಯ್ದುಕೊಳ್ಳಲಾಗುತ್ತದೆ. ಈ ಆಯ್ಕೆಯಲ್ಲಿ ಸಂಪಾದಕ ವರ್ಗದ ತೀರ್ಮಾನವೇ ಅಂತಿಮವಾದದ್ದು.

* ನಿಮ್ಮ ಪ್ರಬಂಧಗಳು ಸುಮಾರು ಎಂಟು ಪುಟಗಳ ಮಿತಿಯಲ್ಲಿರಬೇಕು (ಸಾಲುಗಳ ನಡುವೆ ಒಂದು ಅಂತರ ಮಾತ್ರ -‘ಸಿಂಗಲ್ ಸ್ಪೇಸಿಂಗ್’ ಮತ್ತು ಬರಹ ಫ಼ಾಂಟ್ ೧೪, ಒಟ್ಟಿನಲ್ಲಿ, ಸುಮಾರು ೨೫೦೦ ಪದಗಳು).

* ಲೇಖನಗಳನ್ನು ‘ಬರಹ’ ತಂತ್ರಾಂಶ ಉಪಯೋಗಿಸಿ, ವಿ-ಅಂಚೆಯ ಮೂಲಕ ಕಳುಹಿಸಬೇಕು.

* ನಿಮ್ಮ ಪ್ರಬಂಧಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ: ಡಿಸೆಂಬರ್, ೧೫, ೨೦೧೦

* ಪ್ರಬಂಧಗಳನ್ನು ಕಳಿಸಬೇಕಾದ ವಿಳಾಸ – sritri@gmail.com

ಈ ಹಿಂದಿನಂತೆಯೇ, ಕನ್ನಡ ಸಾಹಿತ್ಯರಂಗಕ್ಕೆ ನಿಮ್ಮೆಲ್ಲರ ಬೆಂಬಲ, ಉತ್ತೇಜನಗಳನ್ನು ನೀಡುತ್ತೀರೆಂಬ ಭರವಸೆ ನಮಗಿದೆ. ಈ ಸಂಬಂಧವಾಗಿ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ತ್ರಿವೇಣಿ ಶ್ರೀನಿವಾಸರಾವ್ (sritri@gmail.com ), ಎಂ. ಆರ್. ದತ್ತಾತ್ರಿ(dattathri_m_r@yahoo.com ) ಅಥವಾ ಕೆಳಕಾಣಿಸಿರುವ ಸಂಪಾದಕ ಮಂಡಲಿಯ ಯಾರನ್ನಾದರೂ ಸಂಪರ್ಕಿಸಬಹುದು: ಎಚ್.ವೈ. ರಾಜಗೋಪಾಲ್ (hyr1195@aol.com ), ಎಂ.ಎಸ್. ನಟರಾಜ (mysreena@aol.com ), ನಳಿನಿ ಮೈಯ (nmaiya@gmail.com), ನಾಗ ಐತಾಳ  (nagaaithal@yahoo.com ), ಮತ್ತು ಎಚ್.ಕೆ. ಚಂದ್ರಶೇಖರ್ (hkcssd@gmail.com ).

ಧನ್ಯವಾದಗಳು.

ಕನ್ನಡ ಸಾಹಿತ್ಯ ರಂಗದ ಪರವಾಗಿ,

ತ್ರಿವೇಣಿ ಶ್ರೀನಿವಾಸರಾವ್

ಎಂ.ಆರ್. ದತ್ತಾತ್ರಿ

 Posted by at 3:37 PM