Apr 032018
 

ಕನ್ನಡ ಸಾಹಿತ್ಯರಂಗದ ಸಂಸ್ಥಾಪಕರಲ್ಲೊಬ್ಬರಾದ ಮತ್ತು ಕಸಾರಂ ನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ ಡಾ. ಎಚ್. ವೈ. ರಾಜಗೋಪಾಲ್ ಅವರು ಈ ದಿನ ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿ ದಿವಂಗತರಾದರೆಂದು ತಿಳಿಸಲು ತೀವ್ರ ವಿಷಾದವಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ ಪ್ರೇರಕ ಶಕ್ತಿಯಾಗಿದ್ದ ರಾಜಗೋಪಾಲ್ ಅವರನ್ನು ಕಳೆದುಕೊಂಡ ನೋವು ನಮ್ಮದು. ಕನ್ನಡ ಸಾಹಿತ್ಯ ರಂಗವು ಈ ಮೂಲಕ ಎಚ್.ವೈ .ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

ಏಪ್ರಿಲ್ 2 ರ ಬೆಳಿಗ್ಗೆ University of Pennsylvania Main Hospital ನಲ್ಲಿ ನಿಧನರಾದ ರಾಜಗೋಪಾಲ್ ಅವರು ಪತ್ನಿ ವಿಮಲಾ ರಾಜಗೋಪಾಲ್, ಮಕ್ಕಳಾದ ಮಾಧವಿ ರಿಜ್ಜೊ, ರಾಮ್ ರಾಜಗೋಪಾಲ್, ಚೇತನಾ ಜೋಯ್ಸ್ ಮತ್ತು ಅಪಾರ ಕನ್ನಡ ಬಳಗವನ್ನು ಅಗಲಿದ್ದಾರೆ. ರಾಜಗೋಪಾಲ್ ಅವರ ಕುಟುಂಬಕ್ಕೆ ಸಾಂತ್ವನ, ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇವೆ! 🙏

 

 Posted by at 5:55 PM
Aug 022010
 

ಗುರುಹರಿಗೆ ಸಂಧ್ಯಾರವಿ ಗುರುವಂದನೆ

ಆವತ್ತು ನಮ್ಮ ಮನೆಗೆ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಬಂದಿದ್ದರು. ಅವರು ಬರುತ್ತಾರೆ ಎಂದರೆ ನನಗೆ ಎಲ್ಲಿಲ್ಲದ ಸಡಗರ, ಉತ್ಸಾಹ. ಮನೆಗೆ ಹಿರಿಯ ದಂಪತಿಗಳು ಬರುವರೆಂದು ಮಾತ್ರವಲ್ಲ, ಪ್ರೀತಿಪಾತ್ರರಾದ ಸ್ನೇಹಿತರು. ಕನ್ನಡದ ಬಗ್ಗೆ ಹುರುಪು ತುಂಬುವವರು, ಬದುಕಿಗೆ ಚೇತನ ತುಂಬುವ ಮಾರ್ಗದರ್ಶಿಗಳು ನಮ್ಮಂಥವರ ಮನೆಗೆ ಬರುವುದು ಕಡಲು ತೊರೆ ಅರಸಿ ಬಂದಂತೆ.

ಅವರು ಬಂದ ಕ್ಷಣದಿಂದ ಪ್ರಾರಂಭವಾಗುವ ನಮ್ಮ ಸಂಭಾಷಣೆ ಎಡೆತಡೆಯಿಲ್ಲದೆ ಸಾಗುವುದು. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ, ಬೇಸರದ ಸುಳಿವೇ ಇಲ್ಲ. ಹರಿಹರೇಶ್ವರ ಅವರು ವಿವಿಧ ವಿಷಯಗಳಲ್ಲಿ ಹೊಂದಿದ್ದ ಅಗಾಧವಾದ ಜ್ಞಾನದಿಂದ ನಮ್ಮ ಸಂಭಾಷಣೆಗಳು ಶಾಲೆಯಲ್ಲಿ ಕುಳಿತು ಗುರುಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವಂತೆ ಇರುತ್ತಿತ್ತು. ಏಕವ್ಯಕ್ತಿ ವಿಶ್ವವಿದ್ಯಾಲಯ ಎಂದು ಕರೆಯುವುದು ಇಂಥವರಿಗೇ.

ಕಳೆದ ಗುರುವಾರ ನಮ್ಮನ್ನಗಲಿದ ಶಿಕಾರಿಪುರ ಹರಿಹರೇಶ್ವರ ತಾವು ಓದಿದ ಪ್ರತಿಯೊಂದು ಪುಸ್ತಕವನ್ನೂ ಪತ್ನಿ ನಾಗಲಕ್ಷ್ಮಿಯವರೊಡನೆ ಹಂಚಿಕೊಳ್ಳುತ್ತಿದ್ದರು. ಸಾಹಿತ್ಯ, ನಿರೂಪಣೆ, ಪದಬಳಕೆ ಬಗೆಗೆ ಅವರವರಲ್ಲಿ ಚರ್ಚೆ ಸಾಗುತ್ತಿತ್ತು. ಹರಿ ಅವರೇ ಹೇಳಿದಂತೆ ತಾವು ಬರೆಯುವ ಪ್ರತಿಯೊಂದು ಬರಹವನ್ನೂ ನಾಗಲಕ್ಷ್ಮಿ ವಿಮರ್ಶಿಸುತ್ತಿದ್ದರು. ಅವರದ್ದು ಅನುರೂಪ, ಅಪರೂಪದ ದಾಂಪತ್ಯ. ಇಬ್ಬರ ಆಸೆ, ಆಸಕ್ತಿಗಳು ಒಂದೇ ಆದ್ದರಿಂದ ಜೀವನ ಸುಗಮ, ಸರಾಗ, ಸ್ನೇಹಮಯ. ಅವರಿಬ್ಬರ ಹೆಸರೂ ಅನುರೂಪವಾಗಿಯೇ ಇದೆ, ಅವರು ಹರಿ ಆದರೆ ಇವರು ಲಕ್ಷ್ಮಿಯಾಗುತ್ತಾರೆ, ಅವರು ಹರೇಶ್ವರರಾದರೆ, ಇವರು ನಾಗ!

ಹರಿ ನಾಗಲಕ್ಷಿಯವರದ್ದು ಕೊಡುವ ಕೈ. ಇವರು ಇಲ್ಲಿ, ಅಂದರೆ ಅಮೇರಿಕಾದಲ್ಲಿ ಇದ್ದಾಗ ಮಾಡಿದ ಕನ್ನಡ ಪರ ಕೆಲಸಗಳು ಅನೇಕ. ಅಮೆರಿಕನ್ನಡ ಪತ್ರಿಕೆ ಪ್ರಾರಂಭಿಸುವುದರ ಮೂಲಕ 1980ರ ದಶಕದಲ್ಲಿ ಅಮೇರಿಕಾದಾದ್ಯಂತ ಮನೆಮಾತಾಗಿದ್ದರು. ಕನ್ನಡವೇ ಕಾಣದ, ಕೇಳದ ಈ ಪರಿಸರದಲ್ಲಿ, ಆ ಸಮಯದಲ್ಲಿ ನನ್ನಂತಹ ಕನ್ನಡಪ್ರೇಮಿಗಳಿಗೆ ಅಮೆರಿಕನ್ನಡ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಇತ್ತು.

ನನ್ನ ಗುರು, ನಮಗೆಲ್ಲ ಗುರು : ಅವರು ಕ್ಯಾಲಿಫೋರ್ನಿಯಾಗೆ ಬಂದ ಮೇಲಂತೂ ನನ್ನ ಬರವಣಿಗೆಗೆ ಅವರಿಂದ ತುಂಬು ಹೃದಯದ ಬೆಂಬಲ ದೊರಕಿತು. ಪ್ರತಿವಾರ ಒಂದಲ್ಲ ಒಂದು ಕಾರ್ಯಕ್ರಮ ಹೂಡುತ್ತಿದ್ದರು. ಅವರು ಹೋಮ್‌ವರ್ಕ್ ಕೊಟ್ಟು ನನ್ನ ಕನ್ನಡದ ಬರವಣಿಗೆಗೆ ಪ್ರೋತ್ಸಾಹವಿತ್ತರು. ಹೀಗೆ ಇಲ್ಲಿನ ಕನ್ನಡಿಗರಿಗೆ ಕನ್ನಡ ಸಾರುವುದಕ್ಕೆ, ಬೆಳೆಸುವುದಕ್ಕೆ ಹರಿ ಊರುಗೋಲಾಗಿದ್ದರು. ಅವರು ಮೈಸೂರಿಗೆ ಮರಳಿದ ಮೇಲೆ ಊರುಗೋಲು ಖಂಡಾಂತರದ ಸೇತುವೆಯಾಯಿತು. ನಾನು ಮೈಸೂರಿನಿಂದ ನಿಮ್ಮ ಕನ್ನಡಪರ ಕಾರ್ಯಕ್ರಮಗಳಿಗೆ ಹೇಗೆ ಸಹಾಯ ಮಾಡಲಿ? ಎನ್ನುವುದು ಅವರು ಪ್ರತಿಸಲಿ ನನ್ನೊಡನೆ ಮಾತನಾಡಿದಾಗ ಕೇಳುವ ಪ್ರಶ್ನೆ! ನನ್ನ ಸಣ್ಣಕಥೆಗಳ ಸಂಗ್ರಹ ಬೆಳಕು ಕಾಣುವುದಕ್ಕೆ ಈ ದಂಪತಿಗಳೇ ಕಾರಣ. ಹಲವಾರು ವರುಷಗಳಿಂದ ಬರೆದಿದ್ದ ಕಥೆಗಳು ಒಂದು ಪುಸ್ತಕವಾಗಿ ಹೊರಹೊಮ್ಮಿತು. ಉತ್ತರ ಕ್ಯಾಲಿಫೋರ್ನಿಯಾದಿಂದ ನಾನು ಕಳಿಸಿದ ಕಥೆಗಳನ್ನು ಮೂರು ವಾರಗಳಲ್ಲಿ ಅಚ್ಚು ಮಾಡಲು, ಪ್ರಕಟಗೊಳಿಸಲು ಸಿದ್ಧಗೊಳಿಸಿ, ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೂ ಅಚ್ಚುಕಟ್ಟಾಗಿ ಮಾಡಿಬಿಟ್ಟರು.
ಅಧ್ಯಯನಶೀಲ : ಹರಿಯವರು ಯಾವ ವಿಷಯವನ್ನೇ ತೆಗೆದುಕೊಂಡರೂ ಅದನ್ನು ಆಮೂಲಾಗ್ರವಾಗಿ ಓದಿ, ಸಂಶೋಧಿಸಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಗುಬ್ಬಿ ಕುರಿತೇ ಇರಲಿ ಅಥವಾ ಮಹಾಲಕ್ಷ್ಮಿ ಬಗ್ಗೆಯೇ ಇರಲಿ. ವೇದ, ವೇದಾಂತ, ಜಾನಪದ, ಸಾಹಿತ್ಯಲೋಕದಲ್ಲಿ ಎಲ್ಲೆಲ್ಲಿ ಅದರ ಉಲ್ಲೇಖನವಿರುತ್ತದೋ ಅದೆಲ್ಲವು ಹರಿಯವರಿಗೆ ಕರತಲಾಮಲಕ. ಅವರೇ ಬರೆದಿರುವ ಅನೇಕ ಪುಸ್ತಕಗಳಲ್ಲಿರುವ ಟಿಪ್ಪಣಿಗಳಿಂದ ಇದು ನಮಗೆ ತಿಳಿದು ಬರುತ್ತದೆ. ಹರಿಯವರು ಹಲವಾರು ವಿಷಯಗಳ ಕುರಿತು 20ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹರಿಯವರ ಕನ್ನಡ ಪ್ರೀತಿಗೆ ಇನ್ನೊಂದು ಉದಾಹರಣೆಯೆಂದರೆ ಅವರೇ ಹಣ ಕೊಟ್ಟು ಇತರರ ಪುಸ್ತಕಗಳನ್ನು ಪ್ರಕಟಿಸುವುದು. ಕನ್ನಡದಲ್ಲಿ ಬರೆಯುವವರಿಗೆ ಇವರು ಈ ರೀತಿ ಪ್ರೋತ್ಸಾಹಿಸುವುದಲ್ಲದೆ, ಓದುವವರಿಗೆ ಬಿಟ್ಟಿ ಪುಸ್ತಕಗಳನ್ನು ಕೊಟ್ಟು ಓದುವಂತೆ ಕೋರಿಕೊಳ್ಳುತಿದ್ದರು! ಬಂದೆಡೆಯೆಲ್ಲ ಅವರು ಬರಿಯ ಕೈಯಲ್ಲಿ ಬರುವ ವ್ಯಕ್ತಿಯಲ್ಲ. ಇತರರಿಗೆ ಕೊಡುವುದಕ್ಕೆ ಕೃತಿಗಳು ಜೋಳಿಗೆಯಲ್ಲಿ ಸದಾ ಇರುತ್ತಿದ್ದವು. ಹರಿ ದಂಪತಿಗಳು ತಾಯ್ನಾಡಿಗೆ ಮರಳಿದ ಮೇಲೆ ಅನೇಕ ರೀತಿಯಲ್ಲಿ ಸಮಾಜಸೇವೆಯನ್ನು ಜತೆಜತೆಯಾಗಿ ಮಾಡುತ್ತಿದ್ದರು. ಅವರ ನೆರವಿನಿಂದ ಅನೇಕರು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮುಂದುವರೆಸಲು ಸಾಧ್ಯವಾಗಿದೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ನೀಡುವ ಅನೇಕ ಕಾರ್ಯಕ್ರಮಗಳಿಗೆ ತಮ್ಮ ತನು, ಮನ, ಧನವನ್ನು ಮುಡಿಪಾಗಿಟ್ಟಿದ್ದರು. ತಾಯ್ನಾಡಿಗೆ ಒಂದು ನಿರ್ದಿಷ್ಟ ಉದ್ದಿಶ್ಯವಿಟ್ಟುಕೊಂಡು ವಾಪಸ್ಸು ಹೋಗಿದ್ದರು. ಉದ್ದೇಶ ಸ್ಪಷ್ಟ, ಶ್ರದ್ಧೆ ಅಚಲ, ಫಲಿತಾಂಶ ಸಾರ್ಥಕತೆ. ಹರಿ ಮತ್ತು ನಾಗಲಕ್ಷ್ಮಿ ಅವರ ವೈವಾಹಿಕ ಜೀವನಕ್ಕೆ ಇದೇ ಆಗಸ್ಟ್ ಗೆ 40 ವರ್ಷ ತುಂಬುತ್ತದೆ. ಆ ದಿವಸಕ್ಕಾಗಿ ಅವರ ಮಕ್ಕಳು ಸುಮನಾ ಮತ್ತು ನಂದಿನಿ ಹಾಗೂ ನಾವೆಲ್ಲ ಸೇರಿ ಹರಿ ನಾಗೂ ಅವರಿಗೆ ಸರ್ ಪ್ರೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಮಗೆ ಆ ಪುಣ್ಯ ಇಲ್ಲದಂತಾಯಿತು. ಹರಿಯನ್ನು ವಿಧಿ ಕರೆಸಿಕೊಂಡಿತು. ಅನ್ಯ ಮಾರ್ಗವಿಲ್ಲ. ಹಾಗಂತ ಪತ್ನಿ ನಾಗು ಅವರಾಗಲೀ, ನನ್ನಂಥ ಹರಿ ಅಭಿಮಾನಿಗಳಾಗಲೀ ಅನಾಥರಾದೆವೆಂದು ಭಾವಿಸಬೇಕಿಲ್ಲ. ಬದುಕಿರುವವರೆಗೂ ಭಾವನಾತ್ಮಕ ನೆಲೆಯಲ್ಲಿ ಒಟ್ಟಿಗೇ ಇರುವ ನೇಮವನ್ನು ತಾವು ತೊರೆಯುವುದಿಲ್ಲ.

 Posted by at 11:44 PM
Aug 022010
 

“ಅಮೆರಿಕನ್ನಡದ ಹರಿಯವ್ರು ಹೋದ್ರು ಎಂದೆನಬೇಡಿ

ಹೋದ್ರೂ ಇಲ್ಲೇ ಕುಂತವ್ರೆ ಪುಣ್ಯಾತ್ಮರು

ಬಿತ್ತಿ ಹೋಗವ್ರೆ ಇಲ್ಲಿ ಕನ್ನಡವಾ”

ಇದು ನನ್ನ ಮನಸ್ಸಿನಲ್ಲಿ ಮೂಡಿ ಬಂದ ಭಾವನೆ, ಹರಿಹರೇಶ್ವರರ ನಿಧನ ವಾರ್ತೆ ಕೇಳಿ. ಅಂದು ಗೆಳೆಯ ಶ್ರೀನಿವಾಸ ಭಟ್ಟರು ದೂರವಾಣಿಯಲ್ಲಿ ನನಗೆ ಹರಿಯವರ ನಿಧನದ ವಾರ್ತೆ ಮುಟ್ಟಿಸಿದಾಗ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ ‘ಜನಪದ ಮಹಾಭಾರತ”ವನ್ನು ಓದುತ್ತಿದ್ದೆ. ಆ ಗ್ರಂಥವನ್ನು ಹರಿಹರೇಶ್ವರರು ನಾನು ಮೈಸೂರಿನಲ್ಲಿ ಸರಸ್ವತೀಪುರದ ಅವರ ಮನೆಯಲ್ಲಿ ಕಳೆದ ಜನವರಿಯಲ್ಲಿ ಭೇಟಿ ಮಾಡಿದಾಗ ಉಡುಗೊರೆಯಾಗಿ ನನಗೆ ಕೊಟ್ಟಿದ್ದರು. ಅದೊಂದು ಕಾಕತಾಳೀಯ ನ್ಯಾಯವೆಂದರೂ ಸರಿಯೇ!

ಆ ಗ್ರಂಥವನ್ನು ತಮ್ಮ ಸ್ವಹಸ್ತದಲ್ಲಿ, ‘ಆತ್ಮೀಯ ಡಾ. ಎಚ್.ಎನ್. ಐತಾಳ್ ಅವರಿಗೆ’ ಎಂದು ಪ್ರೀತಿಯಿಂದ ಬರೆದು ಕೊಟ್ಟಿದ್ದರು. (ನನ್ನ ಹೆಸರು ನಾಗ ಐತಾಳ ಎಂತಿದ್ದರೂ, ಅವರು ನನ್ನನ್ನು ಎಚ್.ಎನ್. ಐತಾಳ ಎಂದೇ ಸಂಬೋಧಿಸುತ್ತಿದ್ದರು.) ಅಂದು ಅವರೊಡನೆ ಮಾತಾಡುತ್ತ ನಾನು ಆ ಗ್ರಂಥದ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದೆ. ಹರಿಹರೇಶ್ವರರು ತಟ್ಟನೆ ಎದ್ದು ಮಹಡಿಯಿಂದ ಆ ಗ್ರಂಥದ ಪ್ರತಿಯೊಂದನ್ನು ತಂದು, ‘ಐತಾಳ್ರೇ…, ನಿಮಗೆ ಜಾನಪದದ ಮೇಲಿನ ಆಸಕ್ತಿ ಇರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಬಳಿ ಹೆಚ್ಚಿನ ಪ್ರತಿಯೊಂದಿದೆ. ಇಗೊಳ್ಳಿ, ಅದನ್ನು ಅಮೆರಿಕಕ್ಕೆ ಕೊಂಡು ಹೋಗಿ; ಓದಿ ಆನಂದ ಪಡಿರಿ, ಹಾಗೂ ಆ ಬಗ್ಗೆ ಸ್ವಲ್ಪ ಪ್ರಚಾರ ಮಾಡಿ…’ ಎಂದು ಹೇಳಿ ಕೊಟ್ಟಿದ್ದರು. ಅದರಲ್ಲಿ ಉಲ್ಲೇಖಿತವಾದ:

“ಸತ್ಯವಂತ ಪಾಂಡವರು ಸತ್ತರೆಂದೆನಬ್ಯಾಡಿ

ಸತ್ತರೆ ಲೋಕ ಉಳಿಯಾವು – ಪಾಂಡವರು

ಬಿತ್ತಿ ಹೋಗವರೆ ಅವರೇಯ”

ಎಂಬ ತ್ರಿಪದಿಯನ್ನು ಉಲ್ಲೇಖಿಸಿದ್ದರು ಅಂದು. ಅದು ನನ್ನ ಮನಸ್ಸಿನಲ್ಲಿ ಕಂತಿ ಹೋಗಿತ್ತು. ಹರಿಹರೇಶ್ವರರು ಸ್ವರ್ಗಸ್ಥರಾದ ವಾರ್ತೆ ಕೇಳಿದ ನನ್ನಲ್ಲಿ ತಟ್ಟನೆ ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ (‘ಅಮೆರಿಕನ್ನಡದ ಹರಿಯವ್ರು…’) ಸಾಲುಗಳು ಮೂಡಿ ಬಂದುವು. ಅದಕ್ಕೆ ಬಲವಾದ ಕಾರಣವಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹರಿಹರೇಶ್ವರರ ಕೊಡುಗೆ ಅಪಾರವಾದದ್ದು. ಎಷ್ಟೋ ಮಂದಿ ಹವ್ಯಾಸಿ ಕನ್ನಡಿಗರನ್ನು ಹುರಿದುಂಬಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿದ ‘ಹರಿಕಾರ’ರು, ಹರಿಹರೇಶ್ವರರು. ಅದು ತಮ್ಮ ಕರ್ತವ್ಯವೆಂದೇ ತಿಳಿದಿದ್ದರು ಅವರು. ಅವರ ಈ ನಿಸ್ವಾರ್ಥ ಸೇವೆಯನ್ನು ನಾವು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅಂಥ ಮಹಾಕಾರ್ಯ, ಹರಿಯವರು ಇಲ್ಲಿ ಬಿಟ್ಟು ಹೋದ, ಬಿತ್ತಿ ಹೋದ ಪರಂಪರೆ, ಉಡುಗೊರೆ, ಬಳುವಳಿ! ಅದಕ್ಕಾಗಿ ಅವರಿಗೆ ಅಮೆರಿಕನ್ನಡಿಗರು ಸದಾ ಕೃತಜ್ಞರೇ!

ನನ್ನ ಮತ್ತು ಹರಿಹರೇಶ್ವರರ ಸಂಪರ್ಕ ಸುಮಾರು 30 ವರ್ಷಗಳಿಗೂ ಮಿಕ್ಕಿದ್ದುದು. ಈ ಕಾಲಾವಧಿಯಲ್ಲಿ ಅವರು ನನಗೆ ನೀಡಿದ ಹಲವು ವಿಧದ ಪ್ರೋತ್ಸಾಹಗಳನ್ನು ನಾನಿಲ್ಲಿ ಕೃತಜ್ಞತಾ ಭಾವನೆಯಿಂದ ನೆನೆದುಕೊಳ್ಳುತ್ತಿದ್ದೇನೆ. ಅವುಗಳಲ್ಲಿ ಒಂದೆರಡು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಲೇಖನಗಳನ್ನು ಬರೆಯಲು ಉತ್ತೇಜಿಸಿದ್ದರು. ನಾನು ಸಂಪಾದಿಸಿದ ‘ಕಾರಂತ ಚಿಂತನ…’ ಗ್ರಂಥಕ್ಕೆ ತಮ್ಮೆಲ್ಲ ಸಹಕಾರವನ್ನೂ ಕೊಟ್ಟು, ಅದರ ಸಹಸಂಪಾದಕರಾಗಿಯೂ, ಗ್ರಂಥಕ್ಕೆ ಲೇಖಕನವನ್ನು ಒದಗಿಸುವ ಇತರ ಲೇಖಕರನ್ನು ಸೂಚಿಸುವಲ್ಲಿಯೂ ನೆರವಾಗಿದ್ದರು. ಇದು ನನ್ನ ಸಾಹಿತ್ಯ ಸಂಪರ್ಕವನ್ನು ಬೆಳೆಸಿಕೊಳ್ಳಲು ತುಂಬಾ ಸಹಾಯವಾಗಿತ್ತು. ಶಿಕಾಗೋದಲ್ಲಿ ನಾನು ಅಭಿನಯಿಸಿದ ಸಂಸ್ಕೃತ ನಾಟಕ ‘ಅಭಿಜ್ಞಾನ ಶಾಕುಂತಲ’ದಲ್ಲಿ ನನ್ನ ಕಣ್ವ ಋಷಿಯ ಪಾತ್ರವನ್ನು ಮೆಚ್ಚಿ ನುಡಿದ ಉತ್ತೇಜಿತ ಮಾತುಗಳನ್ನು ನಾನೆಂದಿಗೂ ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಕಾಳಿದಾಸನ ಕೃತಿಯೊಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದರು. ಒಂದು ವಿಧದಲ್ಲಿ ಅವರು ನನ್ನ ಸಾಹಿತ್ಯ ಕ್ಷೇತ್ರದ mentor ಎಂದರೂ ಸರಿಯೇ.

ಅವರು ‘ಅಮೆರಿಕನ್ನಡ’ ದ್ವೈಮಾಸಪತ್ರಿಕೆ ಪ್ರಾರಂಬಿಸುವ ಮೊದಲು, ಶಿಕಾಗೋಗೆ ಬಂದು (ಆಗ ನಾನು ಶಿಕಾಕಾಗೋ ನಿವಾಸಿಯಾಗಿದ್ದೆ) ನನ್ನ ಸಹಕಾರ ಕೋರಿದ್ದರು. ನಾನು ಅವರಿಗೆ ಆ ಬಗ್ಗೆ ನನ್ನ ಬೆಂಬಲ ಕೊಟ್ಟುದಲ್ಲದೆ, ಹಲವು ಚಂದಾದಾರರನ್ನೂ ಗಳಿಸಿಕೊಟ್ಟಿದ್ದೆ. ಆ ಪತ್ರಿಕೆಯ ‘ಬಿಡುಗಡೆ’ ದೇಶದ ವಿವಿಧ ಕಡೆಗಳಲ್ಲಿ ನಡೆದಿದ್ದು, ಮಧ್ಯವಲಯದಲ್ಲಿ ನಮ್ಮ ಮನೆಯಲ್ಲಿ ಆ ಸಮಾರಂಭವನ್ನು ಏರ್ಪಡಿಸಿದ್ದೆ. ಆ ಬಗ್ಗೆ ಈಗಲೂ ನನ್ನಲ್ಲಿ ಹೆಮ್ಮೆ ಹುಟ್ಟಿಸುತ್ತಿದೆ. ಮುಂದೆ ಮೈ.ಶ್ರೀ.ನಟರಾಜ ಅವರ ‘ನಾನೂ ಅಮೆರಿಕನಾಗಿಬಿಟ್ಟೆ’ ಕವನ ಸಂಗ್ರಹ ಪ್ರಕಟವಾದಾಗ (ಅದು ಅಮೆರಿಕನ್ನಡದ ಪ್ರಕಾಶನವಾಗಿತ್ತು) ನನಗೆ ಕೆಲವು ಪುಸ್ತಕಗಳನ್ನು ಕಳುಹಿಸಿ, ಆ ಗ್ರಂಥದ ಬಗ್ಗೆ ಪ್ರಚಾರ ಮಾಡಲು ಆದೇಶ ಕೊಟ್ಟಿದ್ದರು. ಅದನ್ನು ನಾನು ಸೈಂಟ್ ಲೂಯಿಸ್ ಕನ್ನಡ ಕೂಟದ ಸ್ಥಾಪನೆಯ ಸಮಯದಲ್ಲಿ ಅಲ್ಲಿಗೆ ಕೊಂಡು ಹೋಗಿ ಕೆಲವು ಪ್ರತಿಗಳನ್ನು ಮಾರಾಟ ಮಾಡಿದ ನೆನಪು ಇನ್ನೂ ಹಸಿರಾಗಿ ಉಳಿದಿದೆ.

ಮುಂದೆ ಅವರು ವೈ.ಆರ್. ಮೋಹನ್ ಅವರ ‘ನೆನಪುಗಳು’ ಗ್ರಂಥದ ಪ್ರಕಟಣೆಗೂ ಸಹಾಯ ಮಾಡಿದ್ದರು. ಹೀಗೆ ಅವರು ಹಲವು ಅಮೆರಿಕನ್ನಡಿಗರಿಗೆ ನೀಡಿದ ಪ್ರೋತ್ಸಾಹದ ನೆನಪನ್ನು ಮರೆಯಲು ಸಾಧ್ಯವಿಲ್ಲ. ತಾವು ನಿರ್ವಹಿಸಿದ ಕಾರ್ಯಗಳಲ್ಲಿ ಬೇರೆಯವರನ್ನೂ ಜೊತೆಗೂಡಿಸಿಕೊಂಡು, ಅಂಥವರಲ್ಲಿ ಸಾಹಿತ್ಯ ಸೇವೆಯ ಆಸಕ್ತಿಯನ್ನು ಕೆರಳಿಸುತ್ತಿದ್ದುದು ಹರಿಯವರ ಒಂದು ವಿಶೇಷ ಗುಣ.

ಹರಿಹರೇಶ್ವರರ ಬಗ್ಗೆ ಬರೆಯುತ್ತ ಹೋದಲ್ಲಿ ಪುಟಗಟ್ಟಲೆ ಬರೆಯಬಹುದು. ಎಲ್ಲ ಸೂಚಿಸುವುದೂ ಒಂದನ್ನೇ; ಅವರ ನಿಸ್ವಾರ್ಥ ಸೇವೆ. ಒಂದೇ ಮಾತಿನಲ್ಲಿ ‘ಹರಿಹರೇಶ್ವರ, ನೀವೊಬ್ಬ ಆದರ್ಶ ನಿಸ್ವಾರ್ಥ ಕನ್ನಡಿಗ’ ಎಂದಿಷ್ಟೇ ಹೇಳಬಹುದು. ಅಷ್ಟೇ ಸಾಕು ಅವರ ವ್ಯಕ್ತಿತ್ವವನ್ನು ಸಂಪೂರ್ಣ ವರ್ಣಿಸಲು. ಅಷ್ಟೇ ಹೇಳಿ ನನ್ನ ಗೌರವವನ್ನು ಈ ಮೂಲಕ ಅವರಿಗೆ ಸಲ್ಲಿಸುತ್ತಿದ್ದೇನೆ.

ಮುಗಿಸುವ ಮುನ್ನ, ಅವರೇ ತಮ್ಮ ಲೇಖನವೊಂದರಲ್ಲಿ ತಿಳಿಸಿದಂತೆ, ನಮ್ಮ ಸಂಸ್ಕೃತಿಯಲ್ಲಿ ಯಾವುದಾದರೂ ಶುಭವನ್ನು ಮೂರು ಬಾರಿ ಹೇಳುವ, ಉದಾಹರಣೆಗೆ ಓಂ ಶಾಂತಿ ಶಾಂತಿ ಶಾಂತಿಃ, ಪದ್ಧತಿಯನ್ನು ಇಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ಅವರ ಹೆಸರೇ ದೇವರನ್ನು ಮೂರು ಬಾರಿ ನೆನೆಯುವಂತಿದೆ. ಆ ಮೂರು ನಾಮವನ್ನು ನೆನೆಸಿಕೊಂಡೇ ಅವರಿಗೆ ವಿದಾಯ ಹೇಳಬಯಸುತ್ತೇನೆ: ಹರಿ ಹರ ಈಶ್ವರಃ!

*  ಕೃಪೆ : ದಟ್ಸ್‌ಕನ್ನಡ.ಕಾಂ

 

 Posted by at 11:26 PM