Jul 282013
 

 

 

 

Beyond Words – Selected  Kannada Poems in English

ಪ್ರಕಾಶಕರು: ರೂವಾರಿ- ಅಭಿನವ ಪ್ರಕಾಶನ, ಬೆಂಗಳೂರು

ಬೆಲೆ: 250 ರೂಪಾಯಿ

ಕನ್ನಡ ಕೃತಿಯ ಇಂಗ್ಲಿಷ್ ಭಾಷಾಂತರ ಅಂದೊಡನೆ ಮನಸ್ಸಿಗೆ ಬರುವ ಮೊದಲ ಪ್ರಶ್ನೆ “ಕನ್ನಡದ ಸೊಗಡನ್ನು ಇಂಗ್ಲಿಷ್ ಭಾಷೆಯಲ್ಲಿ ಹೊಮ್ಮಿಸಲು ಸಾಧ್ಯವೆ?” ಅಂತ. ಟೊಮ್ಯಾಟೊ ಸಾಸ್ ನಲ್ಲಿ ಸಾರು ಮಾಡೋಕಾಗುತ್ತಾ? ಆದರೂ ಅಂತಹ ಒಂದು ಸಾಹಸಕ್ಕೆ ಕೈ ಹಾಕಿ ತಕ್ಕಮಟ್ಟಿಗೆ ಯಶಸ್ವಿಯಾದ ಹೆಗ್ಗಳಿಕೆ ಮೈ ಶ್ರೀ ನಟರಾಜ ಅವರದ್ದು. ಶ್ರೀಯುತರು ಕನ್ನಡದ ಆಯ್ದ ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ ಹೊರ ತಂದ ಪುಸ್ತಕ “Beyond words”.

ಪುಸ್ತಕದ ಮುನ್ನುಡಿಯಲ್ಲಿ ಸಿ. ಎನ್ ರಾಮಚಂದ್ರನ್ ಅವರು ಹೀಗೆ ಹೇಳುತ್ತಾರೆ- “”ಖೇದದ ಸಂಗತಿ ಎಂದರೆ ಇಲ್ಲಿಯವರೆಗೂ(ನನಗೆ ತಿಳಿದಮಟ್ಟಿಗೆ) ವೈಯಕ್ತಿಕ ಮಟ್ಟದಲ್ಲಾಗಲಿ, ಸಂಸ್ಥೆಗಳ ಮಟ್ಟದಲ್ಲಾಗಲಿ ಇಂತಹ ಶ್ರೇಷ್ಠ ಕನ್ನಡ ಕಾವ್ಯ ಸಂಪತ್ತನ್ನು ಕನ್ನಡೇತರರಿಗೆ ಪರಿಚಯಿಸುವ ಯತ್ನ ನಡೆದೇ ಇಲ್ಲ. ಕೆಲವು ಪ್ರಮುಖ ಕವಿಗಳ ಆಯ್ದ ಕವಿತೆಗಳು ಆಂಗ್ಲ ಭಾಷೆಗೂ ನಮ್ಮ ನೆರೆಹೊರೆಯ ಭಾಷೆಗಳಿಗೂ ಅನುವಾದಿಸಲ್ಪಟ್ಟಿವೆ ಎನ್ನುವುದು ನಿಜವಾದರೂ ಇಡೀ ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯದ ಒಟ್ಟಾರೆ ಚಿತ್ರವನ್ನು ಒಂದು ಸಂಪುಟದಲ್ಲಿ ಅನುವಾದಮುಖೇನ ಬೆಳಕಿಗೆ ತರುವ ಪ್ರಯತ್ನ ನಡೆದೇ ಇಲ್ಲವೆನ್ನಬೇಕು.” ಹೀಗಿರುತ್ತಾ ಇದೀಗ ಬಹಳ ಅವಶ್ಯವಾಗಿ ಆಗಲೇಬೇಕಾಗಿದ್ದ ಈ ಅನುವಾದ ಕಾರ್ಯಕ್ಕೆ ತಮ್ಮ ಕೃತಿಯ ಮೂಲಕ ನಾಂದಿ ಹಾಡಿದ ನಟರಾಜ ಅವರಿಗೆ ಅಭಿನಂದನೆಗಳು ಸಲ್ಲಬೇಕು.

ಈ ಅನುವಾದಿತ ಕವನಗಳನ್ನು ಓದುತ್ತಾ ಹೋದ ಹಾಗೆ ಅಮೆರಿಕೆಯಲ್ಲಿ ದಶಕಗಳಿಂದ ನೆಲೆಸಿ ದಿನದಿನದ ವ್ಯವಹಾರದಲ್ಲಿ ಇಂಗ್ಲಿಷ್ ಭಾಷೆಯನ್ನೇ ಉಸಿರಾಡುವ ನಟರಾಜ ಅವರಿಗೆ, ಜೀವ ಜೀವಾಳದ ಆಳದಲ್ಲಿ ಕನ್ನಡವನ್ನೇ ಹಾಸಿ ಹೊದ್ದು ಮಲಗುವ ನಟರಾಜ ಅವರಿಗೆ ಎರಡು ಭಾಷೆಗಳಲ್ಲೂ ಒಳ್ಳೆಯ ಪ್ರಭುತ್ವವಿದೆ ಎಂಬ ಅಂಶ ಎದ್ದು ಕಾಣುತ್ತದೆ.

ನಾನು ಈ ಹಿಂದೆ ಒಂದು ಕೃತಿಯ ಹೆಸರಿನ ಅನುವಾದ ನೋಡಿ ಹೌಹಾರಿದ್ದು ನೆನಪಾಗುತ್ತಿದೆ! ಕುವೆಂಪು ಅವರ “ಬೆರಳ್ಗೆ ಕೊರಳ್” ನಾಟಕದ ಅನುವಾದವನ್ನು Throat for a finger ಅಂತ ಅಕ್ಷರಶಃ ಅನುವಾದ ಮಾಡಿದ್ದರು ಯಾರೋ! ನೋಡಿದಾಗ ಒಮ್ಮೆಲೆ ಮೈ ಮೇಲೆ ಚೇಳು ಸರಿದ ಹಾಗಾಯಿತು. ‘ಕೊರಳ್’ ಎಂಬ ಪದಕ್ಕೆ ಎಂತಹ ದೊಡ್ಡ ಅರ್ಥವಿದೆ ಈ ಸಂದರ್ಭದಲ್ಲಿ! ‘ಕೊರಳ್’ ಅಂದರೆ ಜೀವ, ‘ಬೆರಳ್ಗೆ ಕೊರಳ್’ ಅಂದರೆ ಅನ್ಯಾಯವಾಗಿ ಕಡಿದ ಅಮಾಯಕನಾದ ಏಕಲವ್ಯನ ಹೆಬ್ಬೆಟ್ಟು ಕೊರಳಿಗೆ ಉರುಳಾಗಿ, ಪ್ರಾಣಕ್ಕೆ ಮುಳುವಾಗಿ ಕಾಡುತ್ತಿದೆ ಎಂಬ ಶಬ್ದವನ್ನು ಮೀರಿದ ಭಾವವನ್ನು ಹೊಮ್ಮಿಸುವ ನುಡಿಗಟ್ಟು. ಪ್ರತಿಯೊಂದು ಭಾಷೆಯಲ್ಲೂ ಅಲ್ಲಲ್ಲಿ ಬಳಸುವ ಪದಪುಂಜಕ್ಕೆ ನಿಘಂಟು ಕೊಡುವ ಅರ್ಥವನ್ನು ಮೀರಿದ ಆಯಾ ಸಂಸ್ಕೃತಿಯ ಲೇಪ ತಂದುಕೊಟ್ಟ ವಿಶಿಷ್ಟ ಅರ್ಥಗಳಿರುತ್ತವೆ. ಇದೇ ಕಾರಣದಿಂದ ಸಾರ್ಥಕ ಭಾಷಾಂತರ ಎಂಬುದು ಭಾಷಾಂತರಕಾರನಿಗೆ ಒಂದು ದೊಡ್ಡ ಸವಾಲಾಗುವುದು. ಒಂದು ಭಾಷೆಯ ಅಂತಃ ಸತ್ವವನ್ನು ಇನ್ನೊಂದು ಭಾಷೆಯಲ್ಲಿ ಹೊಮ್ಮಿಸುವುದು ಹರಸಾಹಸ. ಭಾಷಾಂತರಕಾರನಿಗೆ ಎರಡು ಭಾಷೆಗಳಲ್ಲೂ ಸ್ವಾಮ್ಯವಿದ್ದ ಹೊರತು ಸಾರ್ಥಕ ಭಾಷಾಂತರ ಸಾಧ್ಯವಿಲ್ಲ.

 

MSN_Books

ನಟರಾಜ ಅವರು ಭಾಷಾಂತರಿಸಿದ ಕವನ ಸಂಗ್ರಹ “Beyond words” ಅಂತಹ ಒಂದು ಸಾರ್ಥಕ ಭಾಷಾಂತರ ಕಾರ್ಯ. ಮೊದಲನೆಯದಾಗಿ ಇಲ್ಲಿ ಅವರು ಭಾಷಾಂತರಕ್ಕಾಗಿ ಆಯ್ದುಕೊಂಡ ಕವನಗಳು ಒಂದೊಂದೂ ತಮ್ಮದೇ ಆದ ರೀತಿಯಲ್ಲಿ ಅನನ್ಯವಾದ ಕವನಗಳು. ಇಲ್ಲಿ ಮೂವತ್ತೊಂದು ಕವಿಗಳ ಒಟ್ಟು ನಲವತ್ತೆರಡು ಕವನಗಳನ್ನು ಆಯ್ದುಕೊಳ್ಳಲಾಗಿದೆ. ಆಧುನಿಕ ಕನ್ನಡ ಕಾವ್ಯ ಲೋಕದಲ್ಲಿ ಹಾಯ್ದು ಹೋದ ನವೋದಯ, ನವ್ಯ, ದಲಿತ, ಬಂಡಾಯ, ಮುಂತಾದ ವಿಭಿನ್ನ ಶೈಲಿಗಳ ಕವನಗಳು ಇಲ್ಲಿ ಅನುವಾದಗೊಂಡಿವೆ. ಕುವೆಂಪು, ಬೇಂದ್ರೆ, ಅಡಿಗರಂತಹ ಪ್ರಭೃತಿಗಳಿಂದ ಹಿಡಿದು ಮುಂದಿನ ಪೀಳಿಗೆಯ ಧೀಮಂತ ಕವಿಗಳಾದ ಲಂಕೇಶ್, ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ, ಎಚ್. ಎಸ್ ವೆಂಕಟೇಶ ಮೂರ್ತಿ, ಬಿ. ಆರ್ ಲಕ್ಷ್ಮಣ್ ರಾವ್, ಅವರನ್ನು ಒಳಗೊಂಡು ಹೊಸ ಪೀಳಿಗೆಯ ಸಿದ್ಧಲಿಂಗಯ್ಯ,ಪ್ರತಿಭಾ ನಂದಕುಮಾರ್, ಪಿ. ಚಂದ್ರಿಕಾ ಅಮೆರಿಕನ್ನಡತಿ ಶಶಿಕಲಾ ಚಂದ್ರ ಶೇಖರ್ ಅವರ ಕವನಗಳವರೆಗೆ ಕನ್ನಡ ಕಾವ್ಯಲೋಕದ ವೈವಿಧ್ಯಮಯತೆ ಇಲ್ಲಿ ಸಾಕಾರಗೊಂಡಿದೆ. ಹಾಗೆಂದು ಇದು ಆಧುನಿಕ ಕನ್ನಡ ಕಾವ್ಯ ಲೋಕವನ್ನು ಸಮಗ್ರವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದಿಲ್ಲ. ನಟರಾಜರ ಉದ್ದೇಶವೂ ಅಂತಹದಾಗಿರಲಿಲ್ಲ. “ನಾನೋದಿ ಖುಷಿ ಪಟ್ಟ ಕವಿತೆಗಳನ್ನು ಅವುಗಳ ಅನುವಾದದೊಂದಿಗೆ ಓದುಗರಿಗೆ ತಲುಪಿಸಬೇಕೆಂಬ ಸದಿಚ್ಛೆ” ತಮಗಿತ್ತು ಎಂದು ಅವರೇ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಿ ಪ್ರಸ್ತುತ ಪಡಿಸಿರುವ ಕವನಗಳನ್ನು ಕನ್ನಡದಲ್ಲಿ ಓದುತ್ತಿದ್ದ ಹಾಗೆ ಮನಸ್ಸು ಯಾವುದೋ ರಸಲೋಕದಲ್ಲಿ ಕಳೆದು ಹೋಗುತ್ತದೆ. ಆದರೆ ಅದರ ಇಂಗ್ಲಿಷ್ ಭಾಷಾಂತರ ಓದಿದಾಗ “ವಾಹ್” ಎಂಬ ಉದ್ಗಾರ ತಾನಾಗಿಯೇ ಹೊಮ್ಮುತ್ತದೆ.

ಇದರಲ್ಲಿ ನನ್ನ ಮನಸ್ಸನ್ನು ಹಲವಾರು ದಿನಗಳ ಕಾಲ ಪೂರ್ತಿಯಾಗಿ ಆಕ್ರಮಿಸಿದ ಕವನ ಅಂದರೆ ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಉತ್ತರಾಯಣ. ಇದನ್ನು ಎಚ್.ಎಸ್.ವಿ ಅವರು ಅಕ್ಷರಗಳಲ್ಲಿ ಕಟ್ಟಿದ ತಾಜಮಹಲ್ ಎಂದು ಕರೆಯಬೇಕು. ಚಿಕ್ಕಂದಿನಲ್ಲೇ ಮದುವೆಯಾಗಿ ಬಂದು ಕವಿಯ ಮನಸ್ಸನ್ನು, ಹೃದಯವನ್ನು, ಜೀವದ ಕಣಕಣವನ್ನು ತುಂಬಿದ ಬಾಳಸಂಗಾತಿ ಇದ್ದಕ್ಕಿದ್ದ ಹಾಗೆ ರೋಗ ಪೀಡಿತಳಾಗಿ ಇಲ್ಲವಾದಾಗ ಆಗುವ ಆಘಾತ ಸಾಮಾನ್ಯವೆ? ಅಲ್ಲೋಲಕಲ್ಲೋಲವಾದ ಮನಸ್ಸಿನಲ್ಲಿ ಉಂಟಾದ ಕ್ಷೋಭೆ, ವಿರಹ, ಉದ್ವಿಗ್ನತೆ, ವಿಷಣ್ಣತೆ ಎಲ್ಲವನ್ನೂ ಕಲೆಯ ಕುಂಚದಲ್ಲಿ ಬಣ್ಣಬಣ್ಣದ ಚಿತ್ರವಾಗಿ ಬಿಡಿಸಿದ ಅಪರೂಪದ ಕಲಾಕೃತಿ ಈ ಕವನ. ಕವಿಯ ಮನಸ್ಸು ದುಃಖದ ಪಾತಾಳಕ್ಕಿಳಿದು , ವಿರಹದಲ್ಲಿ ಒದ್ದಾಡಿ, ಪಶ್ಚಾತ್ತಾಪದಲ್ಲಿ ಬೆಂದು, ಸಂಗಾತಿಗಾಗಿ ಹಂಬಲಿಸಿ ನಿಧಾನವಾಗಿ ಪರಮಾರ್ಥದಲ್ಲಿ ಶಾಂತಿಯನ್ನು ಕಾಣುವ ಒಂದು ಅದ್ಭುತ ಒಳಗಿನ ಪಯಣ ಇಲ್ಲಿ ಪ್ರತ್ಯಕ್ಷವಾಗುತ್ತದೆ. ಇಂತಹ ಒಂದು ಕಲಾಕೃತಿಯನ್ನು ಅದರ ಒಳಸತ್ವವನ್ನು ಮತ್ತೊಂದು ಭಾಷೆಯಲ್ಲಿ ಹೊರತರುವುದೆಂದರೆ ಸಾಮಾನ್ಯದ ಕೆಲಸವಲ್ಲ. ಆದರೆ ನಟರಾಜ ಅವರ ಭಾಷಾಂತರ ಮೂಲಕೃತಿಗೆ ಬಹಳಷ್ಟು ಬದ್ಧವಾಗಿದೆ, ಮೂಲ ಆಶಯಕ್ಕೆ ಯಾವ ಕುಂದನ್ನೂ ತಂದಿಲ್ಲ. ಈ ಕೆಳಗಿನ ಸಾಲುಗಳನ್ನು ನೋಡಿ.

ಕಣ್ಣಿಂದ ನೀರು ಸುರಿಯುತ್ತೆ ತನಗೆ ತಾನೇ, ಗಂಟಲಲ್ಲಿ

ಬೆಂಕಿ ಉರಿಯುತ್ತೆ ತನಗೆ ತಾನೇ.. ಶುರುವಾಗಿದೆ ಬಟ್ಟಂಬಯಲಲ್ಲಿ

ನಿರಂತರ ನೆಪ್ಪಿನ ನಾಟಕ. ಶಬ್ದದ ಹಂಗಿಲ್ಲದ ಮಾತು;

ಬಣ್ಣದ ಹಂಗಿಲ್ಲದ ರೂಪು; ಗಾಳಿಯ ಹಂಗಿಲ್ಲದ ಉಸಿರಾಟ

……..

……..

ಕನ್ನಡಿಯಾಚೆ ಪ್ರತಿಬಿಂಬ…ಹಿಡಿಯಲು ಕೈ ಚಾಚಿದರೆ

ಅಡ್ಡ ನಿಂತಿದೆ ಬೂತುಗನ್ನಡಿ…ಕನ್ನಡಿಯನ್ನು ಒಡೆಯುವಂತಿಲ್ಲ;

ಪ್ರತಿಬಿಂಬವನ್ನು ಹಿಡಿಯುವಂತಿಲ್ಲ …ಕನ್ನಡಿಯ ಸುತ್ತಾ

ಕತ್ತಲು…ಕನ್ನಡಿಯೊಳಗಿದೆ ಬೆಳಕು- ದೀಪದ ಕಣ್ಣು ಧಿಗ್ಗನುರಿಯುತ್ತಾ

 

Voluntary tears roll down, throat smolders on its own,

unending drama of recollection unfolds in the open void

Dialogues unobligated to words, forms unobligated to colors

breathing without obligation of air, go on and on

….

Reflection beyond the mirror, unreachable by extended hands

There’s the mirror in between, cannot break the darn mirror

can not catch a virtual image, darkness pervades all around

Light-like eyes, inside the glass, burns away incandescently

 

ವಿದಾಯ ಹೇಳಬಹುದೆ ಇಷ್ಟು ಸುಲಭಕ್ಕೆ ನಿನಗೆ?

ಕಣ್ಣಿಗಂಟಿದ ಕನಸೇ…ಅರಿವಲ್ಲಿಂಗಿದ ಜಿನುಗು ಬೆವರೇ

ಬಾಯೊಳಗುಳಿದ ನಾಲಗೆಯೆಂಜಲ ಮುತ್ತೆ

 

Can anyone say goodbye to you so easily?

Oh, dream that stuck to my eye…

The trickling sweat merged with understanding,

The saliva contaminated tongue that remained

inside my mouth along with those kisses

ಮೇಲೆ ‘ಬಾಯೊಳಗುಳಿದ ನಾಲಗೆಯೆಂಜಲ ಮುತ್ತೇ..’ಎಂಬ ಪದ ಪುಂಜ ಅಷ್ಟು ಸುಲಭಕ್ಕೆ ಭಾಷಾಂತರಕ್ಕೆ ದಕ್ಕುವಂಥದ್ದಲ್ಲ. ಎಂಜಲು ಎಂಬ ಪರಿಕಲ್ಪನೆಯೇ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿಲ್ಲ. ಆದರೆ ಆ ಕಲ್ಪನೆಯನ್ನು saliva contaminated tongue ಎಂದು ಸಮರ್ಥವಾಗಿ ಪಡಿಮೂಡಿಸಿದ್ದಾರೆ ನಟರಾಜ ಅವರು. ಒಂದು ಸಲ ಎಂಜಲಾದ ಪದಾರ್ಥವನ್ನು ಮತ್ತೊಬ್ಬರು ಮುಟ್ಟುವುದಿಲ್ಲ, ಅದು ಮೈಲಿಗೆ ಎಂಬ ಕನ್ನಡದ ಸಂಸ್ಕೃತಿಯ ರಿವಾಜು ಈ ರೀತಿಯಾಗಿ ಇಂಗ್ಲಿಷ್ ನಲ್ಲಿ ವ್ಯಕ್ತವಾಗಿದೆ.

ಸಾರ್ಥಕ ಭಾಷಾಂತರ ಎದ್ದು ಕಾಣುವ ಇನ್ನೊಂದು ಕವನ ಅನಂತ ಮೂರ್ತಿ ಅವರ ‘ಊರು-ದೇಶ’. ಈ ಕೆಳಗಿನ ಆಯ್ದ ಸಾಲುಗಳನ್ನು ಗಮನಿಸಿ-

ಗೊತ್ತಾಗಿ ಇರೋದು ಊರು

ಗುರಿಯಾಗಿ ಉಳಿಯೋದು ದೇಶ

ಎಣ್ಣಿ ಊರು; ಎಣಿಸಿ ದೇಶ

ಹರಟಿ ಊರು; ಸ್ತುತಿಸಿ ದೇಶ

ಒಂದು ಮಮತೆಗೆ ಇನ್ನೊಂದು ಘನತೆಗೆ

ಬದುಕಿದ್ದು ಊರು; ಭಾವಿಸಿದ್ದು ದೇಶ

ಒಂದು ಕಥೆ

ಇನ್ನೊಂದು ಇತಿಹಾಸ

 

You know the town in and out

Country remains a goal through out

Hometown you own up; Country you reckon

Hometown for gossip; Country for bragging

One is for love, the other for status

One must be lived in; the other conceived

Hometown is a love story

Country is a glorious history

ಮೇಲಿನ ಸಾಲುಗಳಲ್ಲಿ ‘ಎಣ್ಣಿ ಊರು, ಎಣಿಸಿ ದೇಶ’ ಮತ್ತು ‘ಒಂದು ಮಮತೆಗೆ, ಇನ್ನೊಂದು ಘನತೆಗೆ’ ಮುಂತಾದ ಪದಗಳು ಎಷ್ಟು ಸಮರ್ಥವಾಗಿ ಭಾಷಾಂತರ ಹೊಂದಿವೆ! ಎಲ್ಲಕ್ಕಿಂತ ‘ಊರು’ ಎಂಬ ಪದವನ್ನು ಸುಮ್ಮನೆ town ಅಂತ ಹೇಳುವ ಬದಲು hometown ಅಂತ ಕರೆದು ‘ಊರು’ ಎಂಬ ಶಬ್ದದಲ್ಲಿರುವ ಆಪ್ತತೆಯನ್ನು ಅಂತಃಸತ್ವವನ್ನು ಉಳಿಸಿಕೊಂಡಿದ್ದಾರೆ ನಟರಾಜ ಅವರು. ಇಂತಹ ಉದಾಹರಣೆಗಳು ಪುಸ್ತಕದ ಉದ್ದಕ್ಕೂ ನಮಗೆ ಕಾಣಸಿಗುತ್ತವೆ.

ನಟರಾಜ ಅವರೇ ಬರೆದ ‘ಅಯ್ಯೋ ಕುಸಿಯಿತೆ ಸಿರಿ ಕೇಂದ್ರ’ ಎಂಬ ಕವನ ಸೆಪ್ಟೆಂಬರ್ ಹನ್ನೊಂದರ ದುರಂತವನ್ನು ಕುರಿತದ್ದು. ಅದರ ಭಾಷಾಂತರವಂತೂ ಇಂಗ್ಲಿಷ್ ಕವನವೇ ಮೂಲವಿರಬಹುದು ಎಂಬಷ್ಟು ಚೆನ್ನಾಗಿ ಬಂದಿದೆ. ಈ ಕೆಳಗಿನ ಸಾಲುಗಳನ್ನು ನೋಡಿ-

ಮುಗ್ಧರ ಕೊಲ್ಲುವ ಧರ್ಮಾಂಧರಿಗೆ

ಸ್ವರ್ಗವ ತೋರ್ವನೆ ಅಲ್ಲಾ?

ಉಗ್ರರ ನಾಶದ ನಾಂದಿಯ ಹಾಡನು

ಹಾಡಲು ಬನ್ನಿರಿ ಎಲ್ಲಾ

“ಗಡಿ ಇಲ್ಲದ ನಾಡಿನ ಅಲೆಮಾರಿ

ಮುಖವಿಲ್ಲದ ದೇಹದ ಎಲೆ ವೈರಿ

ಹಿಂಸೆಯ ಬೋಧಿಪ ಚಿತ್ತವಿಕಾರಿ

ನೀ ರೌರವ ನರಕದ ಸಂಚಾರಿ”

Misguided fanatics are defaming Allah

No one has promised them a heavenly villa

Listen nomads of the country with out borders

From hateful fanatics you shall not take orders

You shall not destroy nor commit murders

No civilized nation shall count you as martyrs

ನಾನು ಈ ಹಿಂದೆ ಎಲ್ಲೋ ಒಂದು ಹೇಳಿಕೆ ಕೇಳಿದ್ದೆ. ಯಾರದ್ದು ಅಂತ ನೆನಪಿಲ್ಲ A translation is like a woman. If she is beautiful, she is not faithful. If she is faithful, she is not beautiful. ಆದರೆ ನಟರಾಜರ ಈ ಭಾಷಾಂತರ ಮಾತ್ರ ಆ ಹೇಳಿಕೆಗೆ ಅಪವಾದವೆಂಬಂತೆ ಮೂಲ ಕೃತಿಗೆ ಬದ್ಧವಾಗಿದ್ದೂ ಸುಂದರವಾಗಿ ಮೂಡಿ ಬಂದಿದೆ. ನಟರಾಜ ಅವರೇ ಪುಸ್ತಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ- “ರೂಪಾಂತರಗೊಂಡ ಕವನವೂ ಮೂಲದಂತೆ, ಅನುವಾದಗೊಂಡ ಭಾಷೆಯಲ್ಲೇ ಬರೆದ ಕವಿತೆಯಂತಿರಬೇಕಾದರೆ ಅನುವಾದಕ ಎರಡು ವಿಷಯಗಳನ್ನು ಸಮತೋಲನಗೊಳಿಸಬೇಕು- ಅವು ಯಾವುವೆಂದರೆ ಮೂಲಕ್ಕೆ ಪ್ರಶ್ನಾತೀತ ಬದ್ಧತೆ, ಮತ್ತು ಮೂಲ ಕವಿತೆಯ ಪರಂಪರೆ ಮತ್ತು ಆ ಭಾಷೆಯ ಸಾಂಸ್ಕೃತಿಕ ಚೌಕಟ್ಟಿನ ಪರಿಚಯವೇ ಇಲ್ಲದವನಿಗೂ ಕವಿತೆಯ ಸೊಬಗನ್ನು ತೋರಿಸುವ ಮತ್ತು ವಿಶ್ವಾಸಾರ್ಹತೆಯನ್ನು ಉಂಟುಮಾಡುವ ಅಗತ್ಯ.” ಈ ಸಮತೋಲನವನ್ನು ಕಾಯ್ದುಕೊಳ್ಳುವುದೇ ಭಾಷಾಂತರಕಾರನಿಗಿರುವ ದೊಡ್ಡ ಸವಾಲು. Beyond Words ಎಂಬ ಪುಸ್ತಕದ ಹೆಸರೇ ಹೇಳುವಂತೆ ಶಬ್ದವನ್ನು ಮೀರಿದ ಭಾವವನ್ನು ದಕ್ಕಿಸಿಕೊಂಡ ಅನುವಾದಿತ ಕವನಗಳು ಉದ್ದಕ್ಕೂ ಮಿಂಚುತ್ತವೆ ಇಲ್ಲಿ. ಮೂಲಕ್ಕೆ ಬದ್ಧತೆ ಮತ್ತು ಲಾಲಿತ್ಯ ಎರಡರ ಸಮತೋಲನವನ್ನು ಸಾಧಿಸಿರುವುದೇ ಈ ಕೃತಿಯ ಹೆಗ್ಗಳಿಕೆ. ಇಂತಹ ಭಾಷಾಂತರ ಕೃತಿಗಳು ಇನ್ನಷ್ಟು ಮೂಡಿ ಬರಲಿ ನಟರಾಜ ಅವರ ಲೇಖನಿಯಿಂದ ಎಂಬುದು ನಮ್ಮೆಲ್ಲರ ಹಾರೈಕೆ.

 

 Posted by at 11:50 AM
Jul 012013
 

 

 

 

 

 

 

ಪುತ್ಥಳಿ

ಎದ್ದೇಳು ಮಗಳೆ, ಸವಿಕಿತ್ತಳೆಯ ತಿರುಳೆ
ಕನಸ ಲೋಕವ ನೀ ಮರೆತು ಎದ್ದೇಳು
ಮುಂಜಾನೆಯ ರಂಗು ಅಂಗಳವ ಬೆಳಗಿಹುದು
ನಸುನಗುತ ಮೆಲ್ಲನೆ ಎದ್ದೇಳು|

ಬಿಸಿನೀರು ಕಾದಿಹುದು, ನೊರೆಹಾಲಲಿ ಜೇನಿಹುದು
ಮೆತ್ತನೆಯ ನೀ ಅಗಲಿ ಎದ್ದೇಳು
ಭುವಿಗಿಳಿದ ಪರಶಿವನ ಚಂದುಳ್ಳಿ ಸಿರಿಗೌರಿ
ಏಳಮ್ಮ ನೀ ಬೇಗ ಎದ್ದೇಳು|

ಬಿಂದಿಗೆ ತಾರಮ್ಮ, ಮೈಗೆಣ್ಣೆ ಸವರಮ್ಮ
ಹೆರಳಿಗೆ ಬಿಸಿನೀರ ಮೆಲ್ಲನೆ ಎರೆಯಮ್ಮ
ಹೊಸ ಗೀತೆ ಹಾಡುತ್ತ, ಹಸುಗೂಸ ಹರಸುತ್ತ
ಒಳಮನೆಗೆ ಮೈವರಸಿ ತಾರಮ್ಮ|

ಮೃದುಚರ್ಮದ ಮೈಯಿಗೆ, ಸಿರಿಗಂಧದ ಸೇವೆಯು
ಹೊಳೆಯೊ ಕಣ್ಣಿಗೆ ಸೆಳೆಯೊ ಕಾಡಿಗೆಯು
ಕೆಣಕೊ ಮುಂಗುರುಳೊಡನೆ ಸೆಣಸೊ ಕುಂಕುಮವು
ಸಡಗರದೆ ನಾನಿತ್ತೆ ಕೆಂದುಟಿಗೆ ಚುಂಬನವು|

ಕೊರಳಿಗೆ ಅಡ್ಡಿಗೆಯು, ಹೆರಳಿಗೆ ಮಲ್ಲಿಗೆಯು
ಕಾಲ್ಗೆಜ್ಜೆ ನಾದಕ್ಕೆ ಕುಣಿಯೊ ಹೊನ್ನ ಜುಮುಕಿಯು
ಪಚ್ಚೆ ರಂಗಿನ ಲಂಗಕ್ಕೆ ಒಪ್ಪೊ ಕೆಂಪಂಚಿನ ರೇಷ್ಮೆ ಜರಿಯು
ನಿನ್ಮೆಚ್ಚುತ್ತ ಮರೆತನಲ್ಲೆ ಮುಂದಾಡುವ ನುಡಿಯು|

ಕುಳಿ ಕೆನ್ನೆ ಚೆಲುವೆಗೆ ತುಪ್ಪದ ಆರತಿಯು
ಗುರುಹಿರಿಯರ ಹಾರೈಕೆ ಇರಲಿ ನಿತ್ಯ ಸಾರಥಿಯು
ಚಿಗುರೊ ಬುದ್ಧಿಗಿರಲವ್ವ ಶಾರದೆಯ ಆಶ್ರಯವು
ಬೆಳೆಯೊ ಮೈಯಿಗೆ ಆಯುರಾರೋಗ್ಯದ ಸುಖವು|

ನೀನಿಂದಾಡಿದ ಆಟ ನವಿಲ ನರ್ತನದಂತೆ
ನುಡಿದ ಮಾತುಗಳು ಅರಗಿಣಿಯ ಹರ್ಷದ ಸ್ವರವು
ನಿನ್ನಗಲಿರಲಾರದೆ ನಿಂತಲ್ಲಿಯೆ ನಾ ನಿಂತೆ
ನಿನ್ನೆದುರಲ್ಲಿ ಮರೆತೆ ನಾ ಚಿಂತೆಯ ಹೊರೆಯು|

ದೇವರ ವರದಿಂದ ಕಂಡೆ ನಾ ಈ ಸುದಿನ
ನೀನಿರುವ ಮನೆಯೆಂದೆಂದು ಆನಂದ ಸದನ
ಇರುಳ ಬೆಳಗೊ ನಿನ್ನ ಮುಖಕಾಂತಿಯ ಪ್ರಭೆಯಲ್ಲಿ
ಕಂಡೆನಾ ಮುಗ್ಧತೆಯ ಸವಿಪ್ರೇಮ ಕಿರಣ
ಆ ಪರಮಾತ್ಮನ ಚಿರಪುಣ್ಯ ವದನ
ಪ್ರಿಯ ಕನ್ನಡತಿಯ ಅಕ್ಕರೆಯ ಕವನ|

 Posted by at 2:30 PM
Jul 012013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧ.)

 

ನನ್ನ ಪಾಲಿಗೆ ಅದೊಂದು ಕರಾಳ ದಿನವೆನ್ನಬೇಕು. ಹತ್ತು ವರ್ಷವಿದ್ದ ಮನೆಯಿಂದ ನನ್ನನ್ನು ಹೊರಹಾಕಿದ್ದರು. ನನ್ನ ಸೃಷ್ಟಿಯಿಂದ ಇಲ್ಲಿಯವರೆಗೆ ಇದ್ದಿದ್ದು ಇದೊಂದೆ ಮನೆ. ಹತ್ತು ವರ್ಷಕ್ಕೇ ಹಳಸಿ ಹೋದನೆ ನಾನು? ನನ್ನನ್ನೇಕೆ ಹೊರದಬ್ಬಿದರು? ಎಂದಾದರೂ ತೊಂದರೆ ಕೊಟ್ಟಿದ್ದನೇನು? ಎಂದಾರದರೂ ನನ್ನ ರಿಪೇರಿಗಾಗಿ ಹಣದ ಖರ್ಚನ್ನು ಮಾಡಿಸಿದ್ದೆನೇನು?. ಒಪ್ಪಿಕೊಳ್ಳೋಣ ಹತ್ತು ವರ್ಷಕ್ಕೆ ನನ್ನ ಬಣ್ಣ ಸ್ವಲ್ಪ ಮಾಸಿದ್ದಿರಬಹುದು. ಮತ್ತೆ ನನ್ನ ರೂಪವನ್ನು ತರಲು ನನ್ನನ್ನೇನು ಬ್ಯೂಟಿ ಪಾರ್ಲರ್ಗೆ ಕರೆದುಕೊಂಡು ಹೋಗ ಬೇಕಾಗಿತ್ತೇ?. ಮನೆಯಲ್ಲೇ ಯಾವುದೋ ರಾಸಾಯನಿಕ ವಸ್ತುಗಳನ್ನು ಹಾಕಿ ಸ್ನಾನ ಮಾಡಿಸಿದ್ದರೂ ನನಗೇನು ಅನ್ನಿಸುತ್ತಿರಲಿಲ್ಲ. ಅದೂ ಬೇಡ ಅಂದರೆ ನನಗೆ ಹೊಸ ಬಟ್ಟೆಯನ್ನೇ ಹೊಲಿಸಬಹುದಾಗಿತ್ತು. ಅದೆಲ್ಲವನ್ನೂ ಬಿಟ್ಟು ನನ್ನನ್ನು ಮನೆಯಿಂದ ಹೊರಗೇ ನೂಕಿದ್ದಾರಲ್ಲ, ಯಾರ ಹತ್ತಿರ ಹೇಳಿಕೊಳ್ಳಲಿ ನನ್ನ ಈ ದುರಂತ ಕಥೆಯನ್ನು.

ನನ್ನ ಸೃಷ್ಟಿ ಆಗಿದ್ದು 1998ರಲ್ಲಿ. ನ್ಯೂಜೆರ್ಸಿಯ ಒಂದು ಬಡಾವಣೆಯಲ್ಲಿ. ಅದೂ ಒಂದು ಕಾರ್ ಗ್ಯಾರಾಜಿನಲ್ಲಿ. ಸೃಷ್ಟಿಗೊಂಡ ಸಮಯದಿಂದಲೇ ಬಿಳಿ ಬಣ್ಣದನು ನಾನು. ಸೃಷ್ಟಿಗೊಂಡ ಕೆಲವೇ ವಾರಗಳಲ್ಲಿ ಇವರ ಮನೆ ಸೇರಿದವನು ನಾನು. ಹೊಸದಾಗಿ ಬಂದಾಗ ಇದ್ದ ಹೊಸ ಬಟ್ಟೆಯ ಸುವಾಸನೆ ಬರಬರುತ್ತಾ ಮಸಾಲೆಗಳ ಗಾಟುಗಳಿಂದ ಮಾಸುತ್ತಾ ಬಂತು. ಹಾಗೆಯೇ 13 ವರ್ಷಗಳು ಕಳೆದಿದ್ದವು. ಈ ಹದಿಮೂರು ವರ್ಷಗಳಲ್ಲಿ ನನ್ನೊಂದಿಗೆ ಕಾಲ ಕಳೆದವರ ಪಟ್ಟಿ ಮಾಡಲು ಪುಟಗಳೇ ಹಿಡಿಯುತ್ತದೆ. ಮೊದ ಮೊದಲು ನ್ಯೂಜೆರ್ಸಿಯಲ್ಲಿದ್ದಾಗ ನನ್ನ ಮಾಲೀಕರ ತಂದೆ ತಾಯಂದಿರೇ ನನ್ನ ಜೊತೆ ಕಾಲಕಳೆದವರು. ನನ್ನ ಮಾಲೀಕರ ತಂದೆಯಂತೂ ನನ್ನ ಮೇಲೆ ಕೂತು ಹೇಳುತ್ತಿದ್ದ ಸಂಗೀತ, ಕಿವಿಗೆ ಇಂಪಾಗಿರುತ್ತಿತ್ತು. ಮಾಲೀಕರ ಮಾವನವರು ಪ್ರತಿ ದಿನ ಅವರ ಮಧ್ಯಾಹ್ನದ ಭೋಜನದ ನಂತರ ನನ್ನೊಂದಿಗೆ ವಿಶ್ರಮಿಸಿಕೊಳ್ಳುತ್ತಿದ್ದಿದ್ದು ನನಗೆ ವಾಡಿಕೆಯಾಗಿತ್ತು. ಈ ಮನೆಯಲ್ಲಿ ಎರಡು ವಾರಕ್ಕೊಂದಾದರೂ ಒಂದು ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ಎಂದರೆ ನನಗೆ ನಡುಕವೇ ಬರುತ್ತಿತ್ತು. ಏಕೆಂದರೆ ದೊಡ್ಡವರು ನನ್ನ ಮೇಲೆ ಬೀರುಗಳನ್ನು ಸುರಿಸುತ್ತಾ, ಮಕ್ಕಳಂತೂ ನನಗೇ ಊಟವನ್ನೇ ಮಾಡಿಸುತ್ತಾ, ಆಗಾಗ್ಗೆ ನೀರೂ ಸಹ ಕುಡಿಸುತ್ತಿದ್ದಿದ್ದನ್ನು ಮರೆಯಲು ಸಾಧ್ಯವಿಲ್ಲ. ಮಾಲೀಕರು ತಿಂಗಳಿಗೊಮ್ಮೆಯಾದರೂ ನನ್ನ ಸ್ಥಳವನ್ನು ಬದಲಾಯಿಸುತ್ತಿದ್ದರು. ಒಮ್ಮೊಮ್ಮೆ ಮನೆಯ ನೆಲಮಾಳಿಗೆಯಲ್ಲಿ ಪಾರ್ಟಿ ನಡೆಯುತ್ತದೆ ಎಂದಾಗ ನಾನು ನಿಟ್ಟುಸಿರು ಬಿಡುತ್ತಿದ್ದೆ. ಏಕೆಂದರೆ ಬಂದ ಜನ ನೆಲಮಾಳಿಗೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ನನಗೆ ಆಗ ಸ್ವಲ್ಪ ವಿರಾಮವಿರುತ್ತಿತ್ತು. ಮೂರು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಒಂದು ದಿವಸ ನಾಲ್ಕಾರು ಜನ ಬಂದು ಎತ್ತುಕೊಂಡು ಒಂದು ಟ್ರಕ್ನೊಳಗೆ ಹಾಕಿ ಬಾಗಿಲು ಮುಚ್ಚಿದ್ದರು. ಕತ್ತಲೆ ತುಂಬಿತ್ತು.

KSR_WEB-500
ಬಾಗಿಲು ತೆರೆದಾಗ ಬೆಳಕು ಹರಿದಿತ್ತು. ನನಗೆ ಜೀವ ಬಂದ ಹಾಗೆ ಆಗಿತ್ತು. ಟ್ರಕ್ಕಿನ ಕತ್ತಲ ರೂಮಿನಲ್ಲಿ ಎನಿಲ್ಲವಾದರೂ ಒಂದು ವಾರ ಕೂಡಿ ಹಾಕಿದ್ದರೋ ಏನೋ? ಮತ್ತೆ ನನ್ನನ್ನು ಎತ್ತಿಕೊಂಡು ಮನೆಯ ಒಳಗೆ ಕರೆದು ತಂದಿದ್ದರು. ಹೊಸ ಮನೆ. ಹೊಸ ಜಾಗ. ಮನೆಯವರ ಮಾತನ್ನು ಕೇಳಿಸಿಕೊಂಡಾಗಲೇ ಗೊತ್ತಾಗಿದ್ದು, ನನ್ನ ಮಾಲೀಕರು ನ್ಯೂಜೆರ್ಸಿಯಿಂದ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆಗಿದ್ದಾರೆ ಎಂದು, ಇಲ್ಲಿಯ ನನ್ನ 10 ವರ್ಷದ ವಾಸ ನನ್ನ ಜೀವನದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನಗಳು ಎಂದೇ ಹೇಳಬೇಕು. ಕನ್ನಡದ ಬಹುತೇಕ ಪ್ರಸಿದ್ಧ ಸಿನಿಮಾ ನಟರು, ಕಿರುತೆರೆಯ ನಟರೂ, ಸಾಹಿತಿಗಳು ಹಾಗೂ ಹಾಡುಗಾರರೊಡನೆ ಕಳೆದ ದಿನಗಳು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿದೆ. ಒಮ್ಮೆ ಸಂಗೀತಗಾರರ ದಂಡೇ ಬಂದಿದ್ದು ಜ್ಞಾಪಕ. ದಿನವೆಲ್ಲಾ ಮನೆಯಲ್ಲಿ ಸಂಗೀತ ಗುಂಯಾಡಿಸುತ್ತಿತ್ತು. ನನ್ನ ಮೇಲೆ ಕುಳಿತು ಹಾಡಿದವರೆಷ್ಡು. ರತ್ನಮಾಲಾ ಪ್ರಕಾಶ್, ಎಂ ಡಿ ಪಲ್ಲವಿ, ಬಿ ಕೆ ಸುಮಿತ್ರಾ, ರಾಜೇಶ್ ಕೃಷ್ಣನ್, ಅರ್ಚನಾ ಉಡುಪ, ನಾಗರಾಜ್ ಹವಲ್ದಾರ್, ಶ್ರೀನಿವಾಸ ಉಡುಪ, ಅಪ್ಪಗೆರೆ ತಿಮ್ಮರಾಜು, ಬಿ ಆರ್ ಛಾಯಾ, ಮುದ್ದು ಕೃಷ್ಣ, ಬಿ ಜಯಶ್ರೀ, ಮಾಲತಿ ಶರ್ಮಾ, ಶಮಿತ ಮಲ್ನಾಡ್, ಎಲ್ ಎನ್ ಶಾಸ್ತ್ರಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಸ್ಯಗಾರರಿಗೇನು ಕಮ್ಮಿ ಇರಲಿಲ್ಲ. ಒಮ್ಮೆ ಪ್ರೊ. ಕೃಷ್ಣೇಗೌಡ ಹಾಗೂ ಪ್ರೊ. ಅ ರಾ ಮಿತ್ರ ಅವರ ಹಾಸ್ಯ ಜುಗಲ ಬಂದಿ ವಾರಗಟ್ಟಲೆ ಹಗಲು ರಾತ್ರಿ ಎನ್ನದೇ ಎಲ್ಲರನ್ನು ನಗೆಗಡಲಲ್ಲಿ ಮುಳಗಿಸಿತ್ತು. ರಿಚರ್ಡ್ ಲೂಯಿಸ್ ಬಂದಾಗಲಂತೂ ಗುಂಡಿನ ಪಾರ್ಟಿಯ ಜೊತೆಗೆ ಹಾಸ್ಯದ ಹೊನಲೇ ಹರಿದಿತ್ತು. ಮೈಸೂರು ಆನಂದ್ ಅಂತೂ ನನ್ನ ಮೇಲೆ ಬಲ ಬಾಗದ ಮೂಲೆಯಲ್ಲಿ ಕುಳಿತು ಕೊಂಡು ಜೋಕುಗಳನ್ನು ಹೇಳುವುದೆಂದರೆ ಅವರಿಗೂ ಇಷ್ಟ, ನನಗೂ ಇಷ್ಟ. ಒಮ್ಮೆ ಮನೆಯಲ್ಲಿ ಎಷ್ಟು ಕಲಾವಿದರಿಂದ ತುಂಬಿತ್ತೆಂದರೆ ನನ್ನ ಮೇಲೆಲ್ಲಾ ಕುಳಿತು ಮಾತನಾಡುತ್ತಿದ್ದರು. ಒಮ್ಮ ಕನ್ನಡದ ಕುಳ್ಳ ದ್ವಾರಕೀಶ್ ನನ್ನ ಮೇಲೆ ಕೂತು ಚಿತ್ರರಂಗದ ತಮ್ಮ ಅನುಭವಗಳನ್ನು ನಮ್ಮ ಮಾಲೀಕರೊಡನೆ ಹಂಚಿಗೊಂಡಿದ್ದು ಭಾವಪೂರ್ಣವಾಗಿತ್ತು. ಮುಖ್ಯಮಂತ್ರಿ ಚಂದ್ರು ಅವರ ಪ್ರತಿ ಸಂಭಾಷಣೆಯಲ್ಲೂ ಹುಟ್ಟಿಸುತ್ತಿದ್ದ ಹಾಸ್ಯ ಮನೆಯಲ್ಲಿನ ಗಾಳಿಯಲ್ಲೂ ಹರಿಯುತ್ತಿತ್ತು. ಬಹು ಮುಖ್ಯ ದಿನಗಳು ಎಂದರೆ ಟಿ ಎನ್ ಸೀತಾರಾಂ, ಕಪ್ಪಣ್ಣ, ಮುದ್ದುಕೃಷ್ಣ ಹಾಗೂ ಅಪ್ಪಗೆರೆ ತಿಮ್ಮರಾಜು ಅವರು ಮನೆಯಲ್ಲಿ ಇದ್ದಾಗ. ನನ್ನ ಮೇಲೆ ಕೂತು ನಡೆದ ಗುಂಡಿನ ಪಾರ್ಟಿಗಳೇನು! ಜಾನಪದ ಹಾಡುಗಳ ಸಂಭ್ರಮವೇನು! ಹೇಳತೀರದು. ಅದೇ ಸಂದರ್ಭದಲ್ಲಿ ಒಂದು ದಿನ ನನ್ನ ಮೇಲೆ ಕೂತು ಮುದ್ದುಕೃಷ್ಣ ಹಾಗೂ ಅಪ್ಪಿಗೆರೆ ತಿಮ್ಮರಾಜು ಅವರ ಬಿಸಿ ಬಿಸಿ ಮಾತುಗಳು ನನ್ನನ್ನೂ ಬಿಸಿ ಮಾಡಿದಂತಿತ್ತು. ಅವರಿಗೆ ಸಮಾದಾನ ಮಾಡಲು ನನ್ನ ಮೇಲೆ ಕೂತಿದ್ದ ಕಪ್ಪಣ್ಣ ಹಾಗೂ ಟಿ ಎನ್ ಎಸ್ ರವರು ಹರ ಸಾಹಸ ಮಾಡುತ್ತಿದ್ದ ದೃಶ್ಯ ಕಣ್ಮುಂದೆ ಈಗಲೂ ಇದೆ. ಕಪ್ಪಣ್ಣರವರು ಅಂದು ರಾತ್ರಿ ನನ್ನ ಮೇಲೆ ಮಲಗಿದ್ದಲ್ಲದೇ ಜೋರು ಗೊರಕೆ ಹೊಡದಿದ್ದು ನಾನಂತೂ ಮರೆಯಲಾರೆ. ಅಪ್ಪಿಗೆ ತಿಮ್ಮರಾಜುವರಂತೂ ಅವರು ಇರುವಷ್ಟು ದಿವಸವೂ ನನ್ನ ಮೇಲೆ ಕೂತೆ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತು ಕೊಳ್ಳುತ್ತಿದ್ದರು. ನಮ್ಮ ಮಾಲೀಕರ ನಾಟಕದ ಗುರು ಸ್ನೇಹಿತ ನಾಗಾಭರಣ, ರಾಣಿ ಭರಣ ಹಾಗೂ ಕಲ್ಪನಾ ಅವರುಗಳು ಬಂದಾಗಲಂತೂ ಮನೆ ರಂಗ ಗೀತೆಗಳಿಂದ ಪ್ರತಿಧ್ವನಿಸುತ್ತಿದ್ದವು. ಸಿಹಿಕಹಿ ಚಂದ್ರು ತಮ್ಮ ಬೊಂಭಾಟ್ ಭೋಜನದ ನಂತರ ನನ್ನ ಮೇಲೆ ಆರಾಮವಾಗಿ ಕೂತು ವಿಶ್ರಮಿಸುತ್ತಿದ್ದರು. ಕನ್ನಡದ ಸಾಹಿತ್ಯ ದಿಗ್ಗಜರುಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರು ಬಂದಾಗ ಮನೆಯಲ್ಲಿದ್ದ ಸಾಹಿತ್ಯಾತ್ಮಕ ವಾತಾವರಣ ಪಡೆಯಲು ನಮ್ಮ ಮಾಲೀಕರ ಮನೆ ಸೇರಿದ್ದು ನನ್ನ ಪುಣ್ಯ ಎನ್ನಬೇಕು.
ಈ ಮನೆಯಲ್ಲೂ ಬಹಳಷ್ಟು ಪಾರ್ಟಿಗಳು ನಡೆಯುತ್ತಿದ್ದವು. ಹಳೆ ಮನೆಯಲ್ಲಿ ನೆಳಮಾಳಿಗೆಯಾದರೂ ಇತ್ತು, ಕೆಲ ಪಾರ್ಟಿಗಳಲ್ಲಿ ನನಗೆ ವಿಶ್ರಮಿಸಲು ಸ್ವಲ್ಪ ಕಾಲವಕಾಶವಾದರೂ ಇತ್ತು. ಈ ಹೊಸ ಮನೆಯಲ್ಲೂ ನನ್ನ ಮೇಲೆ ಎಲ್ಲ ತರಹದ ಪಾನೀಯಗಳು, ತಿಂಡಿ ತಿನಿಸಿಗಳನ್ನು ಮನೆಗೆ ಬಂದ ಅತಿಥಿಗಳು ತಿನ್ನಿಸಿದ್ದಾರೆ. ಆಧರೆ ಕ್ಯಾಲಿಫೋರ್ನಯಾದ ಈ ಮನೆಯಲ್ಲಿ ಆಗಿಂದಾಗ್ಗೆ ನನ್ನನ್ನು ಯಾರೋ ಅಲ್ಲಾಡಿಸಿದಂತಾಗುತ್ತಿತ್ತು. ಅದು ಭೂಕಂಪ ಎಂದು ಗೊತ್ತಾಗಿದ್ದು ಬಹಳ ದಿವಸದ ಮೇಲೆಯೇ. ನನ್ನ ಈ 13 ವರ್ಷಗಳ ಆತ್ಮ ಕತೆಯನ್ನು ನಿಮ್ಮಲ್ಲಿ ಹೇಳಿಕೊಳ್ಳೋಣವೆಂದೆನಿಸಿತ್ತು. ಆದ್ದರಿಂದ ಈ ಪತ್ರದ ಬರೆದಿದ್ದೇನೆ. ನನ್ನನ್ನು ಮನೆಯಿಂದ ಹೊರ ತಳ್ಳಿದಾಗ ಮಾಲೀಕರ ಕಣ್ಣಲ್ಲೂ ಹನಿಗಳು ಹರಿದಿದ್ದು ಕಾಣಿಸಿತು. ಅಮ್ಮನವರಂತೂ ಅತ್ತೇಬಿಟ್ಟಿದ್ದರು. ಮಾಲೀಕರು ನನ್ನನ್ನು ಎತ್ತಿ ಟ್ರಕ್ಕಿನ ಒಳಗೆ ತಳ್ಳುತ್ತಿದ್ದಾಗ ತೆಗೆದ ಫೋಟೋ ಅವರ ಬಳಿಯೇ ಇರಬೇಕು ಅಂದು ಕೊಂಡಿದ್ದೇನೆ. ಅವರ ಮನೆಯಿಂದ ನನ್ನನ್ನು ಕರೆದು ತಂದು ಯಾವುದೋ ಒಂದು ಉಗ್ರಾಣದಲ್ಲಿ ತುರುಕಿದ್ದಾರೆ. ಧೂಳು ಹೊಡೆಯುವವರೂ ಯಾರೂ ಇಲ್ಲ. ಖಾಯಿಲೆ ಬಂದವರಂತೆ ಕಾಣುತ್ತಿದ್ದೇನೆ. ನಮ್ಮ ಹಳೆಯ ಮಾಲೀಕರಿಗೆ ಮನೆಗೆ ವಾಪಸ್ ಕರೆದುಕೊಂಡು ಹೋಗಿ ಎಂದು ಹೇಳಲಿಕ್ಕೆ ಅವರ ಸಂಬಂಧ ಹದಿಮೂರು ವರ್ಷಗಳ ಸಂಬಂಧ. ಈ ಹದಿಮೂರು ವರ್ಷಗಳಲ್ಲಿ ನನ್ನ ವಂಶಜರಿಗೆ ಸಿಗದ ಅವಕಾಶವನ್ನು ಅವರು ನನಗೆ ಒದಗಿಸಿದ್ದಾರೆ. ಅವರಿಗೆ ನಾನು ಚಿರ ಋಣಿ.
ಇತಿ,
ವಲ್ಲೀಶ ಶಾಸ್ತ್ರಿಯವರ ಮನೆಯ ಹಳೆ ಬಿಳಿ ಸೋಫಾ

 

 Posted by at 2:10 PM
Jul 012013
 

 

 

 

 

 

 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಕವನಗಳು.)

ಮಳೆ ಎಂದರೆ…

ಮಳೆ ಎಂದರೆ ಕೆಲವರಿಗೆ-
ಹರಳುಗಟ್ಟಿದ ಹಿನ್ನೋಟ,
ಭರವಸೆಯ ಮಿಂಚೋಟ,
ಮಣ್ಣ ಘಮದೊಳ ಹೂದೋಟ.

ಮಳೆ ಎಂದರೆ ಕೆಲವರಿಗೆ-
ಕವಿತೆ ಬರೆಸುವ ಚಿತ್ರ,
ಕಥೆಗೊಂದು ಪಾತ್ರ,
ಪ್ರಣಯದಾಟಕೆ ತಂತ್ರ.

ಮಳೆ ಎಂದರೆ ಕೆಲವರಿಗೆ-
ತೆನೆಯು ತೂಗಿದ ನೆನಪು,
ಕಣಜ ತುಂಬಿದ ಕನಸು,
ಮಣ್ಣ ಮಡಿಲಿನ ಬದುಕು.

ಮಳೆ ಎಂದರೆ ಕೆಲವರಿಗೆ-
ಬಿಡದೇ ಸುರಿವ ಶನಿ.
ಶೀತಹವೆ ಥಂಡಿಗಾಳಿ,
ಹವಾಮಾನ ವರದಿ.

ಮಳೆ ಎಂದರೆ ಮಳೆಗೆ ?
ಇಡಿಯು ಬಿಡಿ ಬಿಡಿಯಾಗಿ
ಗಮ್ಯದೆಡೆಗಿನ ಯಾನ.
ಹನಿಹನಿಯ ಎದೆಯಲ್ಲೂ
ಅದ್ವೈತ ಧ್ಯಾನ.

****************

 

ಚಂದಿರಗೊಂದು ಕಾಗದ

ಅಮ್ಮಾ..,
ಚಂದಿರಗೊಂದು ಕಾಗದ ಬರೆಯುವೆ
ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು ತಿನ್ನುವೆ
ಮೊಗವನು ತೋರೆಂದು.

ಉರಿವ ಸೂರ್ಯನ ಹೇಗೆ ನೋಡಲೇ
ನೀನು ಉಣಿಸುವಾಗ?
ತಾರೆಯ ಜೊತೆಯಲಿ ಚಂದಿರ ನಿಂತಿರೆ
ಊಟಕೆ ರುಚಿ ಆಗ.

ನನ್ನಯ ಕಾಗದ ಓದಲು ಅವನಿಗೆ
ಬರುವುದೇ ಕನ್ನಡ?
ಬಾರದೆ ಇದ್ದರೆ ನೀನೇ ಕಲಿಸೇ
ನನ್ನಯ ಸಂಗಡ.

ಹುಣ್ಣಿಮೆ ಬಂದರೆ ಬಾನಿನ ಬಣ್ಣವು
ಬಿಳುಪಾಯಿತು ಹೇಗೇ!?
ಚಂದ್ರನೂ ನನ್ನಂತೆ ಬಟ್ಟಲ ಹಾಲನು
ಚೆಲ್ಲಿಕೊಂಡನೇನೇ ಅಮ್ಮಾ,
ಚೆಲ್ಲಿಕೊಂಡನೇನೇ !?

 Posted by at 1:50 PM