Jun 222013
 

 

ನಾನು ಬಹಳಷ್ಟಲ್ಲದಿದ್ದರೂ ಇಲ್ಲಿ ನಡೆಯುವ ಸಮ್ಮೇಳನಗಳನ್ನು ನೋಡಿದ್ದೇನೆ, ಅಲ್ಲಿ ನಡೆಯುವ ಸಮ್ಮೇಳನಗಳ ಬಗ್ಗೆ ಸಾಕಷ್ಟು ಓದಿ ಕೇಳಿ ತಿಳಿದಿದ್ದೇನೆ. ಹಾಗಾಗಿ ಸಮ್ಮೇಳನಗಳ ಬಗ್ಗೆ ನನ್ನದೊಂದು ಸಣ್ಣ ಚಿಕಿತ್ಸಕ ಬುದ್ಧಿ ಜಾಗೃತವಾಗಿಯೇ ಇರುತ್ತದೆ. ಆದರೂ ಇಲ್ಲಿ ನಡೆಯುವ ಇತರ ಕನ್ನಡ ಸಮ್ಮೇಳನಗಳಲ್ಲಿ ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ನಡೆಯುವ ಸಾಹಿತ್ಯ ಸಭೆಗಳಿಗಿಂತ ಸಾಹಿತ್ಯಕ್ಕಾಗಿಯೇ ಮೀಸಲಿರುವ ಸಮ್ಮೇಳನಕ್ಕೆ ಹೊರಟಿರುವುದು ಬೇಡವೆಂದರೂ ಪುಳಕಕ್ಕೆ ಕಾರಣವಾಗಿತ್ತು. ಶುಕ್ರವಾರದ ಬೆಳಗು. ಚುರುಕು ಬಿಸಿಲಿನ ಹಿತವಾದ ಗಾಳಿಯ “ಸ್ಪ್ರಿಂಗ್” ಹಗಲಿನಲ್ಲಿ ಮನಸ್ಸೂ ಸ್ಸ್ಪ್ರಿಂಗ್ನಂತೆ ಪುಟಿಯುತ್ತಿತ್ತು.  ನಾನು ಟೆಕ್ಸಾಸ್ ರಾಜ್ಯಕ್ಕೆ ವಸಂತ ಸಾಹಿತ್ಯೋತ್ಸವಕ್ಕೆ ಹೊರಟಿದ್ದೆ. ಸಮ್ಮೇಳನವನ್ನು ಆಯೋಜಿಸುವ ಸಂಪೂರ್ಣ ಜವಾಬ್ದಾರಿಯನ್ನು ಹ್ಯೂಸ್ಟನ್ ಕನ್ನಡ ವೃಂದ, ಟೆಕ್ಸಸ್ ರಾಜ್ಯದ ಇತರ ಕನ್ನಡ ಕೂಟಗಳ ಸಹಯೋಗದಲ್ಲಿ ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿತ್ತು. ಸಮ್ಮೇಳನ ನಡೆಯುವ ಸ್ಥಳ ರೈಸ್ ಯುನಿವರ್ಸಿಟಿಯ ಹಮ್ಮನ್ ಹಾಲ್. ಹ್ಯೋಸ್ಟನ್ನಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ವ್ಯಾನ್ ಒಂದರಲ್ಲಿ ಮುಗಿಯದ ಪಯಣ ಮುಗಿಸಿ ಅಂತೂ ಹೊಟೆಲ್ ತಲುಪಿ, ಹಲವು ಪರಿಚಿತ ಹೆಸರುಗಳ ಒಡೆಯರು ಸಿಕ್ಕಾಗ ಪ್ರಯಾಣದ ಏಕತಾನತೆಯ ಸಂಕಟ, ಸಟಕ್ಕಂತ ಸ್ವಿಚ್ ಒತ್ತಿದಂತೆ ಮೂಡ್ ಬದಲಾಗಿ ಹೋಯಿತು.  ಅಲ್ಲಿಂದ ಆರಂಭವಾದದ್ದು ೨, ಎರಡೂವರೆ ದಿನಗಳ ಸಮೃದ್ಧ ಸಾಹಿತ್ಯಾನುಭವ. ಬಹು ಆಪ್ತ ,ಆತ್ಮೀಯ ಎನಿಸುವಂತ ಒಡನಾಟ.

 

banner

ಸಮ್ಮೇಳನದ ಪೂರ್ವತಯಾರಿ ವೀಕ್ಷಿಸಲು ಮತ್ತು ರಾತ್ರಿ ಊಟಕ್ಕೆಂದು ಹಮ್ಮನ್ ಹಾಲಿಗೆ ಹೊರಡಲು ಅಣಿಯಾದೆ. ಸಂಭ್ರಮ ಹೋಟೆಲ್ ಲಾಬಿಯಿಂದಲೇ ಶುರು. ಅಲ್ಲಿ ಆಗಲೇ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಚಿರಪರಿಚಿತ ಸಾಹಿತಿ, ಪ್ರಖ್ಯಾತ ಭಾಷಾಶಾಸ್ತ್ರಜ್ಞ, ನೇರ ನುಡಿಯ ಬರಹಗಾರ ಕೆ. ವಿ. ತಿರುಮಲೇಶ್ ರವರು ಸಪತ್ನೀಕರಾಗಿ ಉಪಸ್ಥಿತರಿದ್ದರು.  ಇನ್ನಿಬ್ಬರು ಮುಖ್ಯ ಅತಿಥಿಗಳು ಎಸ್. ಎನ್. ಶ್ರೀಧರ್- ನ್ಯೂ ಯಾರ್ಕ ಯುನಿವರ್ಸಿಟಿ, ಸ್ಟೊನಿಬ್ರೂಕ್ನಲ್ಲಿಯ ಭಾರತ ಅಧ್ಯಯನ ಕೇಂದ್ರದಲ್ಲಿನ ಭಾಷಾ ಶಾಸ್ತ್ರಜ್ಞ. ಉಡುಪಿಯಿಂದ ಆಗಮಿಸಿದ್ದ ಪ್ರೊಫ಼್. ಶ್ರೀಪತಿ ತಂತ್ರಿ, ಮತ್ತು ಸಾಹಿತ್ಯರಂಗದ ಸಮಸ್ತ ಪದಾಧಿಕಾರಿಗಳು ಎಲ್ಲರ ಔಪಚಾರಿಕ ಪರಿಚಯದೊಂದಿಗೆ ಆರಂಭವಾದ ಮಾತುಕತೆ ನಗು ಹರಟೆ ಸಭಾಂಗಣ ತಲುಪಿದ ಮೇಲೆ ಅಲ್ಲಿನ ಸ್ವಯಂಸೇವಕರ ಹುಮ್ಮಸ್ಸಿನೊಂದಿಗೆ ಬೆರೆತು ಹದವಾಯ್ತು. ಅಲ್ಲಿ ಸಭಾಂಗಣ ಸಿಂಗಾರಗೊಳಿಸುವವರೇನು, ಪುಸ್ತಕ ಮಳಿಗೆಯನ್ನು ಸಜ್ಜುಗೊಳಿಸುವವರೇನು, ಹೆಸರಿನ ಚೀಟಿ, ರಿಜಿಸ್ತ್ರಶನ್ ತಯಾರಿಯಲ್ಲಿ ಮುಳುಗಿರುವವರೇನು, ಮರುದಿನದ ಮನರಂಜನೆ ಕಾರ್ಯಕ್ರಮಗಳ ಕೊನೆಯ ಹಂತದ ರಿಹರ್ಸಲ್ ಗಳೇನು, ಎಲ್ಲರೂ ಉತ್ಸಾಹದ ಚಿಲುಮೆಗಳಂತೆ ಓಡಾಡಿಕೊಂಡಿದ್ದರು. ತ್ರಿವೇಣಿಯವರು, “ಒಂತರ ಮದುವೆ ಹಿಂದಿನ ವರಪೂಜೆ ತರ ಇದೆ” ಅಂದಿದ್ದು ಸರಿಯಾದ ಉಪಮೆಯಾಗಿತ್ತು. ಎಲ್ಲರಲ್ಲಿ ಏನೋ ಕನ್ನಡ ಕಾರ್ಯವೆಂಬ ಹುಮ್ಮಸ್ಸು.  ಮರುದಿವಸ ಬೆಳಿಗ್ಗೆ ೮ ಗಂಟೆಗೆ ರುಚಿಕರ ಉಡುಪಿ ಹೋಟೆಲಿನ ಉಪಹಾರದೊಂದಿಗೆ ಆರಂಭವಾದ ಸಭೆಯಲ್ಲಿನ  ಸಾಹಿತ್ಯ  ಗೋಷ್ಠಿ, ಸಂವಾದ, ಭಾಷಣ, ಪುಸ್ತಕ ಬಿಡುಗಡೆ, ಪ್ರಖ್ಯಾತ ಸಾಹಿತಿ ರಾಜಾರಾವ್ ರವರ ಕೃತಿಗಳ ಪುನರ್ ನಿರ್ಮಾಣದ ಬಿಡುಗಡೆ, ನಾಟಕ , ಯಕ್ಷಗಾನ, ಮನರಂಜನೆ, ರಾತ್ರಿ ಹತ್ತು ಗಂಟೆ ಹೊಡೆದರೂ ಎಲ್ಲೂ ಒಂದು ನಿಮಿಷವೂ ಬೋರಾಯಿತೆನ್ನುವ ಕ್ಷಣಗಳೇ ಇರಲಿಲ್ಲ.

HYR_Harish

 

ಮೊದಲನೇ ದಿವಸದ  ಕಾರ್ಯಕ್ರಮವನ್ನು ಉದ್ಘಾಟಿಸಲು ಭಾರತೀಯ ಕಾನ್ಸುಲೇಟ್ ಜನರಲ್ ಪಿ. ಹರೀಶ್ ರವರು ಆಗಮಿಸಲಿದ್ದರು. ಕಾರ್ಯಕ್ರಮ ಆರಂಭವಾಗಬೇಕಿದ್ದುದು ೯ವರೆಗೆ. ಆದರೆ ಅವರ ಪತ್ತೆ ಇಲ್ಲ.  “ಕಳೆದ ೫ ಸಮ್ಮೇಳನಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ಎಲ್ಲ ಕಾರ್ಯಕ್ರಮಗಳನ್ನು ಸಮಯದ ಮಿತಿಯಲ್ಲಿ ಮುಗಿಸಿದ್ದು ದಾಖಲೆ. ಯಾರು ಬರಲಿ ಬಿಡಲಿ, ಕಾರ್ಯಕ್ರಮ ಆರಂಭ” ಎಂದು ವಲ್ಲೀಶ ಶಾಸ್ತ್ರಿಯವರು ಘೋಷಿಸಿ ಆರಂಭಿಸಿದ್ದು, ಸಾಹಿತ್ಯ ರಂಗದ ಬಗ್ಗೆ ಆರಂಭದಲ್ಲೇ ಒಳ್ಳೆಯ ಅಭಿಪ್ರಾಯ ಮೂಡಿಸಿತ್ತು. ಅಂತೆಯೇ ಎಲ್ಲ ಕಾರ್ಯಕ್ರಮಗಳು ಕೂಡ ಗಂಟೆ ಹೊಡೆದಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಿ ಸಮಯಕ್ಕೆ ಸರಿಯಾಗಿ ಮುಗಿದಿದ್ದವು. ಅವರು ಘೋಷಿಸಿ ಮುಗಿಸಿ, ಮುಖ್ಯ ಅತಿಥಿಗಳು ವೇದಿಕೆಯಲ್ಲಿ ಆಸೀನರಾಗುವಷ್ಟರಲ್ಲೆ, ಪಿ. ಹರೀಶ್ ಕೂಡ ಆಗಮಿಸಿ, ಉದ್ಘಾಟನೆ ಸಾಂಗವಾಗಿ ನೆರವೇರಿತು. ಸುಶ್ರಾವ್ಯವಾದ ಸ್ವಾಗತ ಗೀತೆಗಳೊಂದಿಗೆ ಆರಂಭವಾದ ಕಾರ್ಯಕ್ರಮ, ಹರೀಶ್ ರವರು ದೀಪ ಬೆಳಗಿಸಿ ಮಾತನಾಡಿದಾಗ ಕನ್ನಡಭಾಷೆಯೊಂದೆ ಅಲ್ಲ ಹಲವು ಭಾಷೆಗಳು ಇಲ್ಲಿನ ಮುಂದಿನ ತಲೆಮಾರಿಗೆ ದಾಟುತ್ತಿಲ್ಲ, ಅಲ್ಲಿಂದ ವಲಸೆ ಬಂದ ತಲೆಮಾರೊಂದೆ ಅದನ್ನು ಹಿಡಿದಿಟ್ಟುಕೊಂಡು ಬರುತ್ತಿದೆ ಎಂಬ ಕಳಕಳಿ ಅವರದ್ದೂ ಆಗಿತ್ತು.  ಮುಂದಿನ ಕಾರ್ಯಕ್ರಮ ಕನ್ನಡ ಸಾಹಿತ್ಯ ರಂಗ ಸಮ್ಮೇಳನದ ಅಂಗವಾಗಿ ಹೊರತಂದಿದ್ದ ಪುಸ್ತಕ “ಬೇರು ಸೂರು”  ಬಿಡುಗಡೆ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಿರುಮಲೇಶ್ ಪುಸ್ತಕ ಬಿಡುಗಡೆಗೊಳಿಸಿ, ಅಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಬರಹಗಾರರಿಗೆಲ್ಲ ಪುಸ್ತಕದ ಪ್ರತಿಯನ್ನು ವಿತರಿಸಿದರು.

beru_sooru_book_release

 

ಇಲ್ಲಿ ಈ ಪುಸ್ತಕದ ಬಗ್ಗೆ ಹೇಳಬೇಕೆಂದರೆ, “ಬೇರು ಸೂರು” ಡಾ. ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಜ್ಯೋತಿ ಮಹದೇವ್ ಮುಂದಾಳತ್ವದ ಸಂಪಾದಕ ಸಮಿತಿಯಲ್ಲಿ ಮೂಡಿಬಂದ ಅಮೆರಿಕೆಯ ಹಲವಾರು ಕನ್ನಡ ಬರಹಗಾರರ ಲೇಖನಗಳನ್ನೊಳಗೊಂಡ ಗ್ರಂಥ. ಹೆಸರೇ ಸೂಚಿಸುವಂತೆ ಪುಸ್ತಕದ ಮುಖ್ಯ ಉದ್ದೇಶ ಇಲ್ಲಿನ ಕನ್ನಡಿಗರ ನೆನಪು, ಅನುಭವಗಳನ್ನು ಸೆರೆಹಿಡಿದು ಅನಿವಾಸಿ ಸಾಹಿತ್ಯ, ವಲಸೆ ಸಾಹಿತ್ಯದಂತ ಶೈಲಿಯ ಬರಹಗಳನ್ನು ಬಲಪಡಿಸುವುದು. ವಸಂತ  ಪ್ರಕಾಶನದಿಂದ ಪ್ರಕಟವಾದ ಪುಸ್ತಕದ ಮುಖಪುಟ ಸುಂದರವಾಗಿದೆ.  ಕನ್ನಡ ನೆಲದ ಹಳಹಳಿಕೆಯಾಗದೆ, ಅಮೆರಿಕೆಯ ನೆಲ ನೀಡಿದ ಅನುಭವಗಳು, ಹೊಸ ಅವಕಾಶ, ಭರವಸೆಗಳು, ಹೊಂದಾಣಿಕೆಗಳನ್ನು ಬಹಳಷ್ಟು ಬರಹಗಳು ಬಿಂಬಿಸುತ್ತಾ ಇಲ್ಲಿನ ಜೀವನಕ್ಕೊಂದು ಸಶಕ್ತ ಒಳನೋಟವನ್ನು ನೀಡುತ್ತವೆ. ಬೇರು ಸೂರು ಹಾಗೆ ನೋಡಿದರೆ ಈವರೆಗೆ ಸಾಹಿತ್ಯ ರಂಗ ಹೊರತಂದ ಪುಸ್ತಕಗಳಿಗಿಂತ ಬಹು  ಭಿನ್ನ ಎನಿಸಿತು.  ಹಿಂದೆಂದಿಗಿಂತಲೂ ಬಹಳಷ್ಟು ಬರಹಗಾರರು ತಮ್ಮ ಅನುಭವಗಳನ್ನು ಇಲ್ಲಿ ದನಿಯಾಗಿಸಿದ್ದಲ್ಲದೆ, ಬರಹಗಳಲ್ಲಿ  ಲಘು ಹಾಸ್ಯ, ಲಲಿತ ಪ್ರಬಂಧ, ಸಂಶೋಧನಾ ವರದಿ ಶೈಲಿಯ ಬರಹಗಳಲ್ಲದೆ, ಇಂಥವೇ ಬಗೆಯ ಬರಹಗಳು ಎಂಬಂತೆ ವಿಂಗಡಿಸಲು ಸಾಧ್ಯವಿಲ್ಲ ಎನ್ನುವಂತ ಬರಹಗಳೂ ಇವೆ. ಜೀವನದ ಅತೀವ ನೋವಿನ ಕ್ಷಣಗಳನ್ನು ಹಂಚಿಕೊಂಡವರೂ ಇದ್ದಾರೆ. ಅತ್ಯುತ್ತಮ ಲೇಖನ ವಾಹ್ ಎನುವಂತ ಬರಹಗಳೂ ಇವೆ.  ಹಾಗಾಗಿ ಎಲ್ಲ ಬರಹಗಳೂ ಸಾಹಿತ್ಯಕವಾಗಿ ಉತ್ಕ್ರುಷ್ಠ  ಎಂದು ಒಟ್ಟಾರೆ ಪುಸ್ತಕವನ್ನು ವಿಂಗಡಿಸಲಾಗದಿದ್ದರೂ ಆಸಕ್ತಿದಾಯಕ ಓದಿಗೆ ಪೂರಕವಾಗಿ ಪುಸ್ತಕ ಮೂಡಿ ಬಂದಿದೆ. ಅದರಲ್ಲೂ ಇಲ್ಲಿನ ಜೀವಿತಾವಧಿಯ ವಿವಿಧ ಮಜಲುಗಳಲ್ಲಿರುವ ಬರಹಗಾರರು ಇಲ್ಲಿ ಹಂಚಿಕೊಂಡಿರುವ ಅನುಭವಗಳಿಂದಾಗಿ, ಈ ಪುಸ್ತಕದ ಓದು ಒಂದು ಕಾಲಮಾನದ ಪಯಣದ ಅನುಭವ ನೀಡುತ್ತದೆ.

vaishali_book

ಮುಂದಿನ ಕಾರ್ಯಕ್ರಮ ನಾನು ಬಹು ಕಾತರದಿಂದ ಕಾಯುತ್ತಿದ್ದ ಭಾಗ. ತಿರುಮಲೇಶರ ಭಾಷಣ.  ತಿರುಮಲೇಶರ ಸಾಹಿತ್ಯಕ ಚಟುವಟಿಕೆಗಳ ಕೊಂಚ ತಿಳುವಳಿಕೆಯಿದ್ದ ನನಗೆ, ಅವರ ನೇರ ವ್ಯಕ್ತಿತ್ವದ ಸೆಳಕಿನ ಕಿರುಪರಿಚಯವಿದ್ದುದರಿಂದ, ಅಂದಿನ ಅವರ ಭಾಷಣ ಹೇಗಿರಬಹುದೆಂಬ ಬಗ್ಗೆ ತುಂಬಾ ಕುತೂಹಲವಿತ್ತು. ತಿರುಮಲೇಶರು ಕೂಡ ಅವರ ಸಾಹಿತ್ಯಕ ಚಟುವಟಿಕೆಗಳನೆಲ್ಲ ಕರ್ನಾಟಕದಿಂದ ಹೊರಗಿದ್ದು ದುಡಿವ ಸಮಯದಲ್ಲಿಯೆ ಹೆಚ್ಚಾಗಿ ನಡೆಸಿದ್ದು, ಅವರ ಮನೋಧರ್ಮ, ಭಾಷೆಯ ಬಗೆಗಿನ ಸ್ಪಂದನ ಅಮೆರಿಕನ್ನಡಿಗರಿಗೆ ಅರ್ಥ ಮಾಡಿಕೊಳ್ಳಲು ಹೆಚ್ಚು ಸುಲಭವೂ ಸೂಕ್ತವೂ ಅಗಿತ್ತೇನೋ. ಹೊರನಾಡ ಕನ್ನಡಿಗ  ಹಣೆಪಟ್ಟಿಯನ್ನೆಂದೂ  ಒಪ್ಪದ ಅವರು ಒಬ್ಬ ಕನ್ನಡಿಗ ಎಲ್ಲಿದ್ದರೂ “ಒಬ್ಬ ಕನ್ನಡಿಗನೇ” ಎಂಬುದಕ್ಕೆ ಹಲವರ ಸಮ್ಮತವಿತ್ತು. ಒಂದು ಭಾಷೆ ಹೇಗೆ ಹುಟ್ಟಿತೆಂಬುದಕ್ಕೆ ಇಸವಿಯನ್ನು ಹಚ್ಚುವುದು ಕಷ್ಟ ಆದರೆ ಅದು ಸತ್ತ ದಿನವನ್ನು ಸರಿಯಾಗಿ ಗುರುತಿಸಬಹುದು ಎನ್ನುತ್ತಾ, ಅಮೆರಿಕೆಯ ಮೂಲ ನಿವಾಸಿಗಳ ಭಾಷೆಗಳು ಸತ್ತಿದ್ದನ್ನು, ಸಾಯುತ್ತಿರುವುದನ್ನು ನೆನಪಿಸಿ ತಿಳಿಸಿದಾಗ, ನಮ್ಮ ಮನದಲ್ಲಿದ್ದ ಆತಂಕವನ್ನು ಎದುರು ನಿಲ್ಲಿಸಿ ಹೆದರಿಸಿದಂತಾಯ್ತು. ಕನ್ನಡದ ಹುಟ್ಟು, ಮೂಲ, ವೈವಿಧ್ಯತೆಯ ಬಗ್ಗೆ ಮಾತನಾಡುತ್ತ, ಕನ್ನಡ ಈಗಾಗಲೇ ಕಳಕೊಂಡಿರುವ ಹಲವು ಶಬ್ದ ಸಂಪತ್ತು, ವ್ಯಾಕರಣದ ಬದಲಾವಣೆ, ಶೈಲೀಕೃತ ಸಾಹಿತ್ಯದಿಂದ ಇಂದಿನ ಸರಳ  ಆಡುಮಾತಿನ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯಲೋಕದ ವ್ಯತ್ಯಯಗಳನೆಲ್ಲ ಬಹು ಸ್ವಾರಸ್ಯವಾಗಿ ಎದುರಿಗಿಟ್ಟರು. ಈಗಾಗಲೇ ಕಳೆದುಹೋಗಿರುವ ಕನ್ನಡದ ಶಬ್ದಸಂಪತ್ತನ್ನು ಇನ್ನಷ್ಟು ತಿಳಿಗೊಳಿಸುವುದು ಬೇಡ ಎಂದರು. ಮೊದಲ ತಲೆಮಾರಿನ ವಲಸಿಗರಿಗೆ ಭಾಷೆಯ ಬಗೆಗಿನ ಒಲವು ಹೆಚ್ಚು.  ಹಾಗಾಗಿ ಯಾವ ರೂಪದಲ್ಲಾದರೂ ಹಿಡಿದಿಟ್ಟುಕೊಳ್ಳುವರು, ಆದರೆ ಮುಂದಿನ ತಲೆಮಾರು ಕೇವಲ ಮಾತಾಡಿ ಉಳಿಸಿಕೊಳ್ಳುವುದೇ ವಿನಃ ಸಾಹಿತ್ಯ ಸೃಷ್ಟಿಗೆ ಕಾರಣವಾಗುವಷ್ಟು ಸಶಕ್ತವಿರುವುದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಆಗ ನನ್ನ ತಲೆಯಲ್ಲಿ ಮೂಡಿದ ಪ್ರಶ್ನೆ – “ಸರಿ ನಮ್ಮ ಮಕ್ಕಳಿಗೆ ಇಲ್ಲಿನ ಸುತ್ತಲಿನ ಪರಿಸರ ಕನ್ನಡದ್ದಲ್ಲ, ಅದು ಸಹಜವಾಗಿ ಅವರಿಗೆ ಒದಗಿ ಬರುವುದಿಲ್ಲ, ಹಾಗಾಗಿ ಕನ್ನಡ ಸಂಘಗಳನ್ನು ಕಟ್ಟುತ್ತೇವೆ, ಕನ್ನಡ ಕಲಿ ತರಗತಿಗಳನ್ನು ಕಲಿಸುತ್ತೇವೆ. ಆದರೆ ಕರ್ನಾಟಕದ ಮುಂದಿನ ಪೀಳಿಗೆ ತನ್ನ ಸುತ್ತಲಿದ್ದ ಕನ್ನಡ ಪರಿಸರವನ್ನು ತಾನೇ ಕೊಂದು ಕೊಳ್ಳುತ್ತಿದೆಯಲ್ಲ, ಅದಕ್ಕೇನು ಮಾಡೋಣ? ಕಳೆದುಕೊಳ್ಳುವ ಮುನ್ನ ಇದ್ದುದರ ಬೆಲೆಯ ಅರಿವಾಗುವುದಿಲ್ಲವೇನೋ! ” ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ.

ಉದ್ಘಾಟನೆಯಲ್ಲಿ ಮತ್ತೊಂದು ಗಮನ ಸೆಳೆದ ಅಂಶವೆಂದರೆ ರಾಜಾರಾವ್ ಅವರ ಎಲ್ಲೋ ಕಳೆದು ಹೋಗಬೇಕಿದ್ದ ಸಾಹಿತ್ಯ ಸಂಪತ್ತಿಗೆ ಪುನರ್ಜೀವನ ಒದಗಿದ್ದು! ಇದಕ್ಕಾಗಿ ಹ್ಯೂಸ್ತನ್ ಕನ್ನಡ ಕೂಟಕ್ಕೂ, ಕನ್ನಡ ಸಾಹಿತ್ಯ ರಂಗಕ್ಕೂ ಅಭಿನಂದನೆಗಳು. ರಾಜಾರಾವ್ ಅವ್ರ ಅಪ್ರಕಟಿತ ಕೃತಿ “ಸಾಂಗ್  ಆಫ್ ಅ ವುಮನ್” ಅನ್ನು ಸಿ. ಏನ್. ಶ್ರೀನಾಥ್ ಅವರು ಸುಂದರವಾಗಿ ಅನುವಾದಿಸಿದ್ದು, ಎಸ್. ಏನ್.  ಶ್ರೀಧರ್ ಅವರು ಕೃತಿ ಬಿಡುಗಡೆಗೊಳಿಸಿ ಪುಸ್ತಕದ ಸಂಕ್ಷಿಪ್ತ ನೋಟವನ್ನು ತುಂಬಾ ಸಶಕ್ತವಾಗಿ ಒದಗಿಸಿದಾಗ, ನಿಜಕ್ಕೂ ಇಂತ ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎಂದು ಸಭಿಕರಿಗೆಲ್ಲ ಅನಿಸಿತ್ತು. ರಾಜಾರಾವ್ ಅವರ ಪತ್ನಿ ಸೂಸನ್ ರಾಜಾರಾವ್ ಅವರು ರಾಜಾರಾವ್ ಅವರ ಹಳೆಯ ಭಾಷಣವೊಂದನ್ನು ಓದಿದಾಗ, ರಾಜಾರಾವ್, ಬರಹಗಾರನಿಗಿಂತ ಹೆಚ್ಚಿನ ಚಿಂತಕರಿರಬಹುದೆಂದುಕೊಂಡೆ. ಇದೆ ಸಂದರ್ಭದಲ್ಲಿ ಶ್ರೀಪತಿ ತಂತ್ರಿಯವರು ಮೈ.  ಶ್ರೀ.  ನಟರಾಜರ ೨ ಪುಸ್ತಕಗಳನ್ನು ಕೂಡ ಬಿಡುಗಡೆಗೊಳಿಸಿದರು. ಈ ಪುಸ್ತಕಗಳು ಕೂಡ ಅನುವಾದಗಳು,  “ಬಿಯೊಂಡ್ ವರ್ಡ್ಸ್” ಕನ್ನಡದಿಂದ ಇಂಗ್ಲೀಷಿಗೆ ಅನುವಾದಗೊಂಡ ಕವಿತೆಗಳು. “ಭಾಷೆಯಿಂದ ಭಾಷೆಗೆ” ಹಲವು ಭಾಷೆಗಳಿಂದ ಕನ್ನಡೀಕರಣಗೊಂಡ ಕವಿತೆಗಳು.

ಸಾಹಿತ್ಯ ಗೋಷ್ಟಿ

 

ಸಭಿಕರಿಂದ ಬಹಳಷ್ಟು ಪ್ರೋತ್ಸಾಹದ ನುಡಿಗಳನ್ನು ಪಡೆದಿದ್ದು ನಳಿನಿ ಮೈಯ್ಯ ಅವರು ನಡೆಸಿಕೊಟ್ಟ ಸಾಹಿತ್ಯಗೋಷ್ಠಿ. ಕವಿತೆ, ಹಾಸ್ಯ, ಪ್ರಬಂಧ, ಅನುವಾದ ಇತ್ಯಾದಿಗಳ ಹದವಾದ ಮಿಳಿತದ ಕಾರ್ಯಕ್ರಮ.  ಹೊಸ ಪ್ರತಿಭೆಗಳಿಗೊಂದು ವೇದಿಕೆ ದೊರೆತಿದ್ದು ಮಾತ್ರವಲ್ಲದೆ, ಹಲವು ಅನುಭವಗಳು ತಮ್ಮದೇ ಎನ್ನುವಂತ ಆಪ್ತ ಭಾವನೆ ಮೂಡಿಸಿದ್ದವು. ಗೋಷ್ಠಿಯಲ್ಲಿ ಭಾಗವಹಿಸಿದ ನನಗೆ ಅತ್ಯಂತ ಆತ್ಮೀಯ ಅನುಭವವೆಂದರೆ, ಎಷ್ಟೊಂದು ಜನ ಹಿರಿಯರು ಬಂದು, ನನ್ನ ಪ್ರಬಂಧದ ಅನುಭವವನ್ನು ಹೆಸರಿಸಿ ತನ್ನದೇ ಅನುಭವವಿದು ಎಂಬಂತಿತ್ತು ಎಂದು ಉದ್ಗರಿಸಿದಾಗ ಆದ ಸಾರ್ಥಕ ಕ್ಷಣ.  ಓದುಗರೋ ಇಲ್ಲವೇ ಕೇಳುಗರೊ ಬರಹದೊಂದಿಗೆ ಕನೆಕ್ಟ್” ಆಗುವ ಅವಕಾಶಗಳನ್ನು ಒಂದು ಸಾಹಿತ್ಯ ಸಮ್ಮೇಳನ ಒದಗಿಸಿಕೊಟ್ಟರೆ ಅದಕ್ಕಿಂತ ಹೆಚ್ಚಿನ ಸಾರ್ಥಕತೆ ಬೇಕೇ?  ಇಲ್ಲಿನ ಮುಖ್ಯ ಅಂಶವೆಂದರೆ, ಇತರ ಸಮ್ಮೆಳನಗಳಂತೆ  ಏನೋ ಜಾತ್ರೆ ಎಂದು ಬರುವ ಕನ್ನಡಿಗರಿಗಿಂತ ಶುದ್ಧ ಸಾಹಿತ್ಯಾಸಕ್ತ ಶ್ರೋತ್ರ ವರ್ಗ. ಹಾಗಾಗಿಯೇ ಸಭಿಕರಿಗೂ, ಸಭೆ ನಡೆಸುವವರಿಗೂ ಕೊಂಡಿ ಎಲ್ಲೂ ತಪ್ಪುವುದಿಲ್ಲವೇನೋ.

ಸಾಹಿತ್ಯ ಸಮ್ಮೇಳನದಲ್ಲಿ ವಿಶಿಷ್ಟವಾಗಿ ಗಮನ ಸೆಳೆದ ರಂಗಪ್ರಯೋಗವೆಂದರೆ ವಿವೇಕ್ ಶಾನಭಾಗ್ ರ “ನಿರ್ವಾಣ” ಕತೆಯನ್ನು ಡಾ. ಗುರುಪ್ರಸಾದ್ ಕಾಗಿನೆಲೆಯವರು ನಾಟಕವನ್ನಾಗಿಸಿದ ಪರಿ.  ಅದು ಹಾಗೆ ನೋಡಿದರೆ ಸಂಪೂರ್ಣ ನಾಟಕಾಭಿನಯವಲ್ಲ. ನಾಟಕ ವಾಚನ. ರಂಗದ ಮಂದ ಬೆಳಕಿನಲ್ಲಿ, ಬರೀ ಮಾತಿನ ಭಾವಭಿವ್ಯಕ್ತಿಯಲ್ಲೇ ಒಡಮೂಡಿದ ಕಥಾಹಂದರ.  ಆದರೆ ಅದಕ್ಕಿಂತ ಸಮರ್ಥವಾಗಿ ಆ ನಾಟಕವನ್ನು ರಂಗಕ್ಕಿಳಿಸಲು ಸಾಧ್ಯವಿಲ್ಲವೇನೋ ಎಂಬಂತಿತ್ತು. ವಲ್ಲೀಶ್ ಶಾಸ್ತ್ರಿ, ಮೀರಾ ರಾಜಗೋಪಾಲ್ ಮತ್ತು ಮೋಹನ್ ರಾಮ್ ರವರ ವಾಚನ ಕೌಶಲದಲ್ಲಿ ಮೂಡಿಬಂದ “ನಿರ್ವಾಣ” ದ ಕತೆಯಲ್ಲಿನ ಅಸಂಗತ ಸತ್ಯ,  ವ್ಯಕ್ತಿಗಳು ರತನ್  ಕಾವಲೆ, ಜ್ಯೋತಿರ್ಮಯಿ, ಫಣೀಶ ಎಲ್ಲ ಹೆಸರು ಕಳಚಿಕೊಳ್ಳುತ್ತ ಸಾಗುವ ನಿತ್ಯಜೀವನದ ಏಕತಾನತೆಯ ಅನಾವರಣವನ್ನು ಬಹು ಸಶಕ್ತವಾಗಿ ಮೂಡಿಸಿದರು. ಹಾಗೆ ನೋಡಿದರೆ ಕಥೆ ಓದಿದಾಗ ಮೂಡುವ ಪ್ರತಿಯೊಬ್ಬನ ಅಸ್ಮಿತೆಯ ನಶ್ವರ ಭಾವನೆಯನ್ನು ನಾಟಕ ಪರಿಣಾಮಕಾರಿಯಾಗಿ ದಾಟಿಸಿತ್ತು.

 

 

yakshagana_1

ಸಂಜೆ ನಡೆದ ಯಕ್ಷಕಲಾವೃಂದ ತಂಡದವರಿಂದ ನಡೆದ “ಶ್ಯಮಂತಕೋಪಾಖ್ಯಾನ” ಯಕ್ಷಗಾನ, ಕನ್ನಡದಲ್ಲಿ  ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳ ಮಿಳಿತದೊಂದಿಗೆ ರಂಜಿಸಿದ “ಸ್ವಾನ್ ಲೇಕ್” ರೂಪಕ, ಕನ್ನಡ ಕವಿಗಳ ಪದ್ಯಗಳೊಂದಿಗೆ ನಡೆದ ನೃತ್ಯರೂಪಕ ಎಲ್ಲವೂ ಸಾಹಿತ್ಯ-ಸಂಸ್ಕೃತಿಗೆ ಹಾಗೂ ಸಮ್ಮೇಳನದ ಅಭಿರುಚಿಗೆ ಸಮರ್ಪಕವಾಗಿ ಹೊಂದುವಂತೆ ಇದ್ದುದು ಸಾಹಿತ್ಯ ರಂಗದ ಕಾರ್ಯ ನಿರ್ವಹಣೆ ಮತ್ತು ಧೋರಣೆಗಳ ಬಗ್ಗೆ ನನಗೆ ಇನ್ನೂ ಭರವಸೆ ಮೂಡಿತು.

ಸಾಹಿತ್ಯರಂಗ ಈ ಸಮ್ಮೇಳನದ ಭಾಗವಾಗಿ ಹಮ್ಮಿಕೊಳ್ಳುವ ಇನ್ನೊಂದು ಉತ್ತಮ ಕಾರ್ಯಕ್ರಮವೆಂದರೆ “ನಮ್ಮ ಬರಹಗಾರರು”. ಇದು ಕಳೆದ ಸಮ್ಮೇಳನಾಂತರ ಬಿಡುಗಡೆಯಾದ ಅಮೆರಿಕೆಯ ಕನ್ನಡ ಬರಹಗಾರರ ಪುಸ್ತಕಗಳ ಕಿರುಪರಿಚಯ ಮತ್ತು ಚಿಕ್ಕ ಪ್ರಶ್ನೋತ್ತರ ಕಾರ್ಯಕ್ರಮ. ಇದರಿಂದ ಇಲ್ಲಿನ ಬರಹಗಾರರ  ಪುಸ್ತಕಗಳಿಗಿರುವ ಚಿಕ್ಕ ಮಾರುಕಟ್ಟೆಗೆ ಬೆಂಬಲ ಸಿಗುವುದೇ ಅಲ್ಲದೆ, ಪ್ರಚಾರ ಕೂಡ. ಮೀರಾ ರಾಜಗೋಪಾಲ್ ಮತ್ತು ಗುರುಪ್ರಸಾದ್ ಕಾಗಿನೆಲೆಯವರು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈ ಕಾರ್ಯಕ್ರಮದಿಂದಾಗಿ, ಪುಸ್ತಕ ಮಳಿಗೆಯಲ್ಲಿದ್ದ ಹಲವರ ಪುಸ್ತಕಗಳು ಬಿಸಿದೋಸೆಯಂತೆ ಖರ್ಚಾದವು.

ನಮ್ಮ ಬರಹಗಾರರು

ನನ್ನ ಮಟ್ಟಿಗೆ ಅಂದಿನ ಸಮ್ಮೇಳನದ ಹೈಲೈಟ್ ಎಂದರೆ ಬಿರುಸಿನ ಸಂವಾದ ಕಾರ್ಯಕ್ರಮ. ಅದು ಇನ್ನೂ ಕೊಂಚ ಹೊತ್ತು ಇದ್ದರೆ ಚೆನ್ನಿತ್ತು, ಬೇಗ ಮುಗಿಯಿತು ಎನಿಸಿತು. ಮೂವರು ಮುಖ್ಯ ಅಥಿತಿಗಳೂ ವೇದಿಕೆಯ ಮೇಲಿದ್ದು, ವಲ್ಲೀಶ ಶಾಶ್ತ್ರಿಗಳು ಸಂಗ್ರಹಿಸಿದ್ದ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುವ ಪ್ರತ್ಯುತ್ತರಿಸುವ ಕಾರ್ಯಕ್ರಮ.  ಅಲ್ಲಿನ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಕರ್ನಾಟಕದ ಸಾಹಿತಿಗಳ, ವಿಮರ್ಶಕರ ಅಭಿಪ್ರಾಯ, ಅನಿಸಿಕೆಗಳು ಏನು? ಎಷ್ಟು ಸಮಂಜಸ? ಅಂತರ್ಜಾಲದಲ್ಲಿ ನಡೆಯುವ ಸಾಹಿತ್ಯಿಕ ಚಟುವಟಿಕೆಗಳು ಸಾಹಿತ್ಯ ವಲಯದಲ್ಲಿ ಎಷ್ಟರಮಟ್ಟಿಗೆ ಪ್ರಭಾವಕಾರಿ? ಅವು ಜನರನ್ನು ಮುದ್ರಿತ ಮಾಧ್ಯಮಗಳಷ್ಟೇ  ಪ್ರಭಾವಕಾರಿಯಾಗಿ ತಲುಪಬಲ್ಲವೇ? ಸಾಹಿತ್ಯವನ್ನು ಇಂದು ಹೊಸಬಗೆಯಲ್ಲಿ ಹಸಿವುಂಡವರ ಸಾಹಿತ್ಯ, ಹಸಿವಿನರಿವಿರದವರ ಸಾಹಿತ್ಯ ಎಂದೆಲ್ಲ ವರ್ಗೀಕರಿಸುವುದು ಎಷ್ಟು ಸರಿ? ಸಾಹಿತ್ಯಕ ವಲಯಕ್ಕೆ ಹೆಚ್ಚಿನ ಕೊಡುಗೆ ಇಲ್ಲಿನ ಕನ್ನಡಿಗರಿಂದ ಬರಬೇಕಾದರೆ ಆ ನಿಟ್ಟಿನಲ್ಲಿ ಏನೇನು ಬೆಳವಣಿಗೆಯಾಗಬೇಕು, ಬದಲಾವಣೆಯಾಗಬೇಕು? ಕರ್ನಾಟಕ ಸರ್ಕಾರ,  ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಏನು ಮಾಡಬಹುದು? ಎಂಬಿತ್ಯಾದಿ ಪ್ರಸ್ತುತ ಪ್ರಶ್ನೆಗಳ ಬಗ್ಗೆ ನೇರಾನೇರ ಚರ್ಚೆ ನಡೆಯಿತು.  ತಿರುಮಲೇಶರು ಹೇಳಿದ “ಊರ ನೀರಿಗೆ ದೊಣ್ಣೆನಾಯಕನ ಅಪ್ಪಣೆ”  ಎನ್ನುವಂತೆ ಯಾರ ಅಪ್ಪ್ರೂವಲ್ ನಿಮಗೆ ಯಾಕೆ ಬೇಕು? ನಿಮಗೆ ಬರೆಯಬೇಕೆನಿಸಿದರೆ ಬರೆಯಿರಿ, ಇನ್ನಷ್ಟು ಹೆಚ್ಚು ಬರೆಯಿರಿ.  ಕನ್ನಡ ನನ್ನ ಭಾಷೆ, ನಿಮ್ಮ ಭಾಷೆ, ಅದನ್ನಾಡುವ ಎಲ್ಲರ ಭಾಷೆ.  ಸಾಹಿತ್ಯ ವೃದ್ಧಿಯಾಗುವುದು ಸೃಜನಶೀಲ ಬರವಣಿಗೆಯಿಂದ ಮಾತ್ರ. ಎಂದಿದ್ದಕ್ಕೆ ಕರತಾಡನದ ಸುರಿಮಳೆಯಾಗಿತ್ತು. ತಂತ್ರಿಯವರ ಅಂತರ್ಜಾಲದ ಬಗೆಗಿನ ಋಣಾತ್ಮಕ ಧೋರಣೆ ಹಲವರಿಗೆ ಒಪ್ಪಿಗೆಯಾಗದೇ ಚರ್ಚಿತಗೊಂಡಿತು. ವಲ್ಲೀಶರ ಯಾವ ಪ್ರಶ್ನೆಯೂ ಬಿಸಿಬಿಸಿ ಚರ್ಚೆಯಾಗದೆ ಹೋಗಲಿಲ್ಲ. ತಂತ್ರಿಯವರ ಸಾಂಪ್ರದಾಯಿಕ ವಿಚಾರಧಾರೆ, ತಿರುಮಲೇಶರ ಹೊಸ ವಿಚಾರಗಳಿಗೆ, ಪ್ರಸ್ತುತ ಬದಲಾವಣೆಗಳಿಗೆ ಒಡ್ಡಿಕೊಳ್ಳುವ ಧೋರಣೆ, ಎಲ್ಲ ಚರ್ಚೆಯನ್ನೂ ಎಸ್.  ಏನ್.  ಶ್ರೀಧರ್ ಅವರ ಸಮತೋಲಿತ ವಾಕ್ಯಗಳು, ಎಲ್ಲರೂ ಒಪ್ಪುವ ಬಗೆಯಲ್ಲಿ ತುಂಟನಗೆಯೊಂದಿಗೆ ಕೊನೆಗೊಳಿಸುತ್ತಿದ್ದು ಬಲು ಮೋಜಾಗಿತ್ತು.

Volunteers

ಇನ್ನು ಹೇಳಬೇಕೆಂದರೆ ಪುಸ್ತಕ ಮಳಿಗೆ ಮತ್ತು ಅಲ್ಲಿನ ಸ್ವಯಂಸೇವಕರ ಅದಮ್ಯ ಉತ್ಸಾಹ.  ಪುಸ್ತಕಮಳಿಗೆಗಳಲ್ಲಿದ್ದ ಉತ್ತಮ ಪುಸ್ತಕಗಳನೆಲ್ಲ ಸೂಟ್ ಕೇಸಿನ ಬಾಯಿ ಹರಿದುಹೋಗುವಷ್ಟರ ಮಟ್ಟಿಗೆ ಕೊಂಡು ತರಲು ಇದ್ದ ಅವಕಾಶವನ್ನು ನಾನಂತೂ ಕಳೆದುಕೊಳ್ಳಲಿಲ್ಲ. ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ,  ಇಲ್ಲಿ ಅದನ್ನು ನಡೆಸುವ ನೈಜ ಉತ್ಸಾಹ ಎದೆಯಲ್ಲಿ ಮೂಡದೆ ಬಲವಂತದಿಂದ ಸಾಧ್ಯವಿಲ್ಲ. ಎರಡು ದಿನ ಮಳಿಗೆಯಲ್ಲಿ ನಗುಮೊಗದಿಂದ ಎಡೆಬಿಡದೆ ಪುಸ್ತಕ ಮಾರಿದ ಶ್ವೇತ, ಕಾರ್ಯನಿರ್ವಹಿಸಿದ ಯಶ್, ನಟರಾಜ್, ನಟ್ಟು, ಮಹೇಶ್, ಮಂಗಳಪ್ರಸಾದ್  ಮತ್ತು ನನಗೆ ಹೆಸರು ತಿಳಿಯದ ಹಲವರ, ಒಂದು ನಿಮಿಷ ಬಿಡದ ಚಟುವಟಿಕೆಗಳು, ವತ್ಸ ಕುಮಾರ್ ಅವರ ನೇತೃತ್ವದಲ್ಲಿ ಒಂದು ಮನೆಯವರಂತೆ ದುಡಿದ ಹ್ಯುಸ್ಟನ್ ಕನ್ನಡ ವೃಂದಕ್ಕೆ, ಅವರ ಆಥಿತ್ಯಕ್ಕೆ ಶರಣು.  ಎಷ್ಟೊಂದು ಕಷ್ಟಪಟ್ಟಿದೀರ ನೀವೆಲ್ಲ ಎಂದಾಗ, “ಅಯ್ಯೋ ಕಷ್ಟ ಪಟ್ಟು ಮಾಡಿದ್ದಲ್ಲ, ಇಷ್ಟಪಟ್ಟು ಮಾಡಿದ್ದು”  ಎನ್ನುವ ಉತ್ತರ ಅವರ ಆತಿಥ್ಯದಲ್ಲಿ, ಕಾರ್ಯನಿರ್ವಹಣೆಯಲ್ಲಿ ಎದ್ದು ಕಾಣುತ್ತಿತ್ತು.

 

ಇಂಥ “ಕನ್ನಡದ ಸಮ್ಮೇಳನ”ಗಳು ನನಗೆ ಕನ್ನಡಿಗರ ಜಾತ್ರೆ ಎನ್ನುವಂತ ಸಮ್ಮೇಳನಗಳಿಗಿಂತ ಹೆಚ್ಚಿನ ಖುಷಿ ಕೊಡುತ್ತವೆ. ಕನ್ನಡದ ಒಡನಾಟ ಆತ್ಮೀಯ ಬಗೆಯಲ್ಲಿ ಆಗುತ್ತದೆ. ನಿಜವಾದ ಆಶೋತ್ತರಗಳ ಬಗ್ಗೆ ಚರ್ಚೆಯಾಗುತ್ತದೆ. ಹೊಸ ಹೊಸ ಸಾಹಿತಿಗಳ, ಸಾಹಿತ್ಯಕ ಕೃತಿಗಳ ಪರಿಚಯ, ಭಾರತದಿಂದ ಆಗಮಿಸಿರುವ ಸಾಹಿತಿಗಳ ಜೊತೆ ಮುಕ್ತ ಚರ್ಚೆ ಇವೆಲ್ಲ ಹೊಸ ಉತ್ಸಾಹವನ್ನ ಒದಗಿಸಿ ಹೆಚ್ಚಿನ ಬಗೆಯಲ್ಲಿ ಕನ್ನಡ ನಂಟನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತವೆ. ಕನ್ನಡ ಸಾಹಿತ್ಯ ರಂಗ ಈ ನಿಟ್ಟಿನಲ್ಲಿ ಬಹು ಮುಖ್ಯ ಕಾರ್ಯವಹಿಸುತ್ತಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಚರ್ಚೆಗಳು ಆ ನಂತರವೂ ಆ ಒಂದು ಬಡಿತವನ್ನು ನಿರಂತರವಾಗಿ ನಡುವೆಯೂ ಉಳಿಸಿಕೊಳ್ಳುವಂತಾದರೆ, ಇಲ್ಲಿನ ಬರಹಗಾರಿಗೆ ಅಲ್ಲಿನವರ ಜೊತೆಗಿನ, ಅಲ್ಲಿನವರಿಗೆ ಇಲ್ಲಿನ ಸಂವಹನವನ್ನು ಹೆಚ್ಚಿಸುವ ಬಗೆಯಲ್ಲಿ ಶ್ರಮ ವಹಿಸಿದರೆ, ಇದು ಕನ್ನಡಕ್ಕೆ ಒಳ್ಳೆಯದು. ನಾವು ನೀವೆಂಬ ಅಲಿಖಿತ ಗಡಿಯೊಳಗೆ ಹುಟ್ಟಿಕೊಳ್ಳುವ ಪೂರ್ವಾಗ್ರಹಗಳು ಕಡಿಮೆಯಾದಾವು. ಇಂದು ಯಾವ ಕ್ಷೇತ್ರವೂ ಭೌಗೋಲಿಕ ಗಡಿಗೆ ಸೇಮಿತವಾಗಿಲ್ಲ. ದೇಶ ದೇಶ ಗಳ ಗಡಿ ಮೀರಿದ ಭಾಷೆ  ಬೆಳೆದರೆ, ಹೊಸ ವಿಚಾರಗಳೊಂದಿಗೆ ಪುಷ್ಟಿಗೊಂಡರೆ ಲಾಭ ಭಾಷೆಯದ್ದು, ಸಾಹಿತ್ಯದ್ದು ತಾನೇ? ಕನ್ನಡಿಗ ಎಲ್ಲಿದ್ದರೇನು? ಕನ್ನಡದ ಕೆಲಸ ಎಲ್ಲಿ ಆದರೇನು, ಅದರ ಪ್ರಯೋಜನ ಎಲ್ಲ ಕನ್ನಡಿಗರಿಗಾಗಬೇಕು.

 

 Posted by at 10:32 PM