Mar 222012
 

ವಿಶ್ವನಾಥ್ ಹುಲಿಕಲ್

ಕನ್ನಡ ಸಾಹಿತ್ಯ ರಂಗದ ಐದನೆಯ ವಸಂತ ಸಾಹಿತ್ಯೋತ್ಸವವು ವುಡ್‌ಸೈಡ್ ಪ್ರೌಢಶಾಲೆಯ ಸಭಾಂಗಣದಲ್ಲಿ ಏಪ್ರಿಲ್ ೩೦ ಮತ್ತು ಮೇ ೧, ೨೦೧೧ರಂದು ಆಯೋಜನಗೊಂಡಿತ್ತು. ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ ಸಹಯೋಗ ಮತ್ತು ಸ್ಥಳೀಯ ‘ಸಾಹಿತ್ಯ ಗೋಷ್ಠಿ’ಯ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಮತ್ತು ಉಲ್ಲಾಸಗಳಿಂದ ನಡೆಯಿತು.

ಏಪ್ರಿಲ್ ೩೦ರ ಮಧ್ಯಾಹ್ನ ೧:೫೦ಕ್ಕೆ ‘ಕನ್ನಡ ಜನ ಮತ್ತು ಕನ್ನಡ ಮನ’ ಎಂಬ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಚ್.ಕೆ.ಚಂದ್ರಶೇಖರ್ ಮತ್ತು ಕಿರಣ್ ಮೈಯ ನೆರೆದಿದ್ದ ಸಾಹಿತ್ಯಾಸಕ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ನಂತರ, ಸಾಹಿತ್ಯೋತ್ಸವದ ಆರಂಭ ಘೋಷಣೆಯನ್ನು ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ ಎಚ್.ವೈ.ರಾಜಗೋಪಾಲ್ ಮತ್ತು ಕನ್ನಡ ಕೂಟದ ಅಧ್ಯಕ್ಷೆ ಪದ್ಮ ರಾವ್ ಅವರು ಮಾಡಿದರು. ಸಮ್ಮೇಳನದ ಮಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿದ್ದ ಪ್ರಮುಖ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ ಅವರುಗಳನ್ನು ಅನುಕ್ರಮವಾಗಿ ರಾಜಗೋಪಾಲ್ ಮತ್ತು ಗುರುಪ್ರಸಾದ್ ಕಾಗಿನೆಲೆ ಆತ್ಮೀಯವಾಗಿ ಸಭೆಗೆ ಪರಿಚಯಿಸಿದರು. ತದನಂತರ, ಸಾಹಿತ್ಯ ರಂಗದ ಐದನೆಯ ಪ್ರಕಟಣೆಯಾದ ‘ಮಥಿಸಿದಷ್ಟೂ ಮಾತು’ (ಸಂ: ತ್ರಿವೇಣಿ ಶ್ರೀನಿವಾಸರಾವ್ ಮತ್ತು ಎಂ.ಆರ್.ದತ್ತಾತ್ರಿ) ಎಂಬ ಲಲಿತ ಪ್ರಬಂಧ ಸಂಕಲನವನ್ನು ನಾಡಿಗರು ಲೋಕಾರ್ಪಣೆ ಮಾಡಿದರು; ಈ ಕೃತಿಯಲ್ಲಿ ಅಮೇರಿಕದ ಕನ್ನಡಿಗರ ಸಲ್ಲಾಪ, ಹರಟೆ ಮತ್ತು ಚಿಂತನೆಗಳ ೨೭ ಲಲಿತ ಪ್ರಬಂಧಗಳಿವೆ. ನಂತರ ‘ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ’ ಎಂಬ ವಿಷಯದ ಬಗ್ಗೆ ನಾಡಿಗರು ತಮ್ಮ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ವಿಶ್ವ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರದ ಉಗಮ ಮತ್ತು ಅದರ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಪಟ್ಟಿಮಾಡುತ್ತಾ ಮಾಂತೇನ್, ಬೇಕನ್, ಲ್ಯಾಂಬ್, ಅಡಿಸನ್, ಎಮರ್ಸನ್, ಥೋರೊ ಅವರುಗಳ ಕೊಡುಗೆಯನ್ನು ಸ್ಮರಿಸಿದರು. ಹಾಗೆಯೇ, ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಲಲಿತ ಪ್ರಬಂಧ ಪ್ರಕಾರದ ಹುಟ್ಟು ಮತ್ತು ಅಭಿವೃದ್ಧಿ ಪಥವನ್ನು ಚಿತ್ರಿಸಿದರು. ಕುವೆಂಪುರವರ ‘ರಾಮರಾವಣರ ಯುದ್ಧ’, ಎ.ಎನ್.ಮೂರ್ತಿರಾಯರ ‘ಅಕ್ಕಿ ಹೆಬ್ಬಾಳು’ ಮತ್ತು ಪು.ತಿ.ನ. ಅವರ ‘ಧೇನುಕೋಪಾಖ್ಯಾನ’ ಎಂಬ ಲಲಿತ ಪ್ರಬಂಧಗಳನ್ನು ಸೋದಾಹರಣವಾಗಿ ವಿವರಿಸಿದರು. ಲಲಿತ ಪ್ರಬಂಧ ಎಂಬುದು ಒಂದು ಕ್ಷಣದಲ್ಲಿ ಹೊಳೆದ ಅಥವಾ ಸ್ಫೂರ್ತಿಕೊಟ್ಟ ಒಂದು ವಿಷಯದ ಸುತ್ತ ಮನಸ್ಸನ್ನು ಹರಿಯಬಿಟ್ಟು ರಚಿಸಿದ ಗದ್ಯಪ್ರಕಾರವೆನ್ನಬಹುದು. ಒಟ್ಟಿನಲ್ಲಿ, ನಾಡಿಗರು, ಲಲಿತಪ್ರಬಂಧಗಳ ಲಕ್ಷಣ, ಗುಣವಿಶೇಷ ಮತ್ತು ವೈಶಿಷ್ಠ್ಯಗಳನ್ನು ಸಂಗ್ರಾಹ್ಯವಾಗಿ ಪರಿಚಯಿಸಿದರು.

ಚಹಾ ವಿರಾಮದ ನಂತರ ಮುಂದುವರೆದ ಸಮ್ಮೇಳನದ ಕಾರ್ಯಕ್ರಮ ‘ನಮ್ಮ ಹೆಮ್ಮೆಯ ಬರಹಗಾರರು’; ಅಮೇರಿಕದಲ್ಲಿ ಸಕ್ರಿಯವಾಗಿ ಸಾಹಿತ್ಯಕೃಷಿ ಮಾಡುತ್ತಿರುವ ಲೇಖಕರ ಕೃತಿಗಳನ್ನು ನಾಡಿಗರು ಬಿಡುಗಡೆ ಮಾಡಿದರು (ನಿರ್ವಹಣೆ: ಮಧುಕಾಂತ್ ಕೃಷ್ಣಮೂರ್ತಿ): ‘The Void and the Womb’ (ಎಂ.ಎಸ್.ನಟರಾಜ), ‘ಸಾಗರದಾಚೆಯ ಸ್ಪಂದನ’ (ಮಂಗಳಾ ಕುಮಾರ್), ‘ಗೃಹಪ್ರವೇಶ’ (ವಿಶ್ವನಾಥ್ ಹುಲಿಕಲ್), ‘ತಿಳಿ ನೀಲಿ ಪೆನ್ನು’ (ತ್ರಿವೇಣಿ ಶ್ರೀನಿವಾಸರಾವ್), ‘ಬೊಗಸೆಯಲ್ಲಿ ಬೆಳದಿಂಗಳು’ (ಶಾಂತಲಾ ಭಂಡಿ), ‘ಜೀವನ ರಹಸ್ಯ’ (ನಾಗ ಐತಾಳ್) ಮತ್ತು ‘ಸ್ನೇಹದಲ್ಲಿ ನಿಮ್ಮ ಹರಿ’. ನಂತರದ ಕಾರ್ಯಕ್ರಮ ‘ಸಾಹಿತ್ಯ ಸಂಕಿರಣ’; ಇದನ್ನು ಆಯೋಜಿಸಿ, ಪ್ರಸ್ತುತ ಪಡಿಸಿದವರು ‘ಸಾಹಿತ್ಯ ಗೋಷ್ಠಿ’ಯ ಅಧ್ಯಕ್ಷ ವಿಶ್ವನಾಥ್ ಹುಲಿಕಲ್. ಅಮೇರಿಕಾದ ಉದಯೋನ್ಮುಖ ಮತ್ತು ನೆಲೆಯೂರಿದ ಕನ್ನಡ ಲೇಖಕರಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ, ಅವರುಗಳ ಸ್ವರಚಿತ ಕೃತಿಗಳ ವಾಚನಕ್ಕೆ ಅವಕಾಶ ಮಾಡಿಕೊಡುವ ವೇದಿಕೆ ಇದಾಗಿತ್ತು. ಇದರಲ್ಲಿ ವಾಚನವಾದ ಲೇಖನ/ಕವನಗಳೆಂದರೆ, ‘ಕಾಲ’ (ಪ್ರಕಾಶ ನಾಯಕ್), ‘ಆಗಸ ಸೋರಿ ಅಕ್ಷರವಾಗೆ’ (ಶಾಂತಲಾ ಭಂಡಿ), ‘ವರಾನ್ವೇಷಣೆ – ಸಂಭಾಷಣೆ’ (ಮೀನಾ ಸುಬ್ಬರಾವ್), ‘ಕಾಲದ ಘಂಟೆ’ (ತ್ರಿವೇಣಿ ಶ್ರೀನಿವಾಸರಾವ್), ‘ಸುಕುಮಾರ ರಾಯ್’ (ಹಂ.ಕ.ಕೃಷ್ಣಪ್ರಿಯ), ‘ವಚನಗಳು ಮತ್ತು ಎಕಾರ್ಟ್ ಅವರ ಪುಸ್ತಕ ದಿ ಪವರ್ ಆಫ಼್ ನೌ’ (ಶಶಿಕಲಾ ನಿಂಬಾಳ), ‘ಕನ್ನಡ ಕವಿಗಳ ಸಂಪರ್ಕ – ಸಾಹಿತ್ಯ ಯಾತ್ರೆ’ (ಜಿ.ಎಸ್.ಸತ್ಯ), ‘ಕನ್ನಡವೆಂದರೆ . . .’ (ಪಿ.ಆರ್.ಮೀರಾ), ‘ಬಿತ್ತು, ಬಿತ್ತದಿರು’ (ರವಿ ಗೋಪಾಲರಾವ್) ಮತ್ತು ‘ಹೂ ಬಾಣ ಹಿಡಿದವನಿಗೆ’ (ಕೆ.ವಿ.ರಾಮಪ್ರಸಾದ್).

ಆ ದಿನ ಸಾಯಂಕಾಲ ಮನರಂಜನಾ ಕಾರ್ಯಕ್ರಮ ಆಯೋಜನಗೊಂಡಿತ್ತು (ನಿರ್ವಹಣೆ: ಸಂಧ್ಯಾ ರವೀಂದ್ರನಾಥ್): ಮೊದಲಿಗೆ ಕನ್ನಡ ಕೂಟ ಅರ್ಪಿಸಿದ ಯಕ್ಷಗಾನ ‘ಕಂಸವಧೆ’(ಪಾತ್ರಧಾರಿ: ಅಶೋಕ ಉಪಾಧ್ಯ). ಅತ್ಯುತ್ತಮ ಪೋಷಾಕು, ನರ್ತನ ಮತ್ತು ಕುಶಲ ಸಂಭಾಷಣೆಗಳಿಂದ ಅದು ಪ್ರೇಕ್ಷಕರ ಮನಸೆಳೆಯಿತು. ಆ ದಿನ ರಾತ್ರಿ, ವಿದ್ಯಾ ಗುರಿಕಾರರ ಅಡುಗೆಯ ರಸದೌತಣ ಹಸಿದಿದ್ದ ದೇಹಗಳಿಗೆ ಸುಗ್ರಾಸ ಭೋಜನದಿಂದ ತೃಪ್ತಿನೀಡಿತು. ನಂತರದ ಅದ್ಭುತ ಕಾರ್ಯಕ್ರಮ ಪು.ತಿ.ನ. ಅವರ ಗೀತನಾಟಕ ‘ಹರಿಣಾಭಿಸರಣ’. ತನ್ನ ಶಕ್ತಿಯುತ ಸಾಹಿತ್ಯ, ರಂಗಸಜ್ಜಿಕೆ, ಅಭಿನಯ, ನೃತ್ಯ ಹಾಗೂ ಸಂಗೀತದ ಅನೂಹ್ಯ ಸಂಯೋಗ ಮತ್ತು ಕರಾರುವಾಕ್ಕಾದ ನಿರ್ದೇಶನದಿಂದ ಪ್ರೇಕ್ಷಕರನ್ನು ರಾಮಾಯಣದ ಅದ್ಭುತ ಲೋಕಕ್ಕೆ ಕರೆದೊಯ್ಯಿತು (ನಿರ್ಮಾಣ: ಅಲಮೇಲು ಅಯ್ಯಂಗಾರ್, ನೃತ್ಯ ನಿರ್ದೇಶನ: ಡಾ. ತುಳಸಿ ರಾಮಚಂದ್ರ, ಸಂಗೀತ ನಿರ್ದೇಶನ: ಶುಭಪ್ರಿಯ ಶ್ರೀವತ್ಸನ್ ಮತ್ತು ನಿರ್ವಹಣೆ: ತಿರುನಾರಾಯಣ ಅಯ್ಯಂಂಗಾರ್). ನಂತರದ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದವರು ವಿದ್ಯಲತ ಜೀರಗೆ ಮತ್ತು ಕನ್ನಡ ಕೂಟದ ಯುವ ಸದಸ್ಯರು. ಮುಂದಿನ ಕಾರ್ಯಕ್ರಮ ಭುವನೇಶ್ವರಿ ಹೆಗಡೆ ಅವರಿಂದ ‘ಹಾಸ್ಯದ ಹೊನಲು’. ತಮ್ಮ ಅತಿಶಯವಾದ ಹಾಸ್ಯ ಪ್ರಜ್ಞೆಯಿಂದ ಮತ್ತು ಅಸ್ಖಲಿತ ವಾಣಿಯಿಂದ ನೆರೆದಿದ್ದ ಸಭಿಕರೆಲ್ಲರನ್ನೂ ಹಾಸ್ಯದ ಕಡಲಲ್ಲಿ ಮುಳುಗಿಸಿ ತೇಲಿಸಿದರು. ವಂದನಾರ್ಪಣೆಯನ್ನು ಪದ್ಮ ರಾವ್ ಅವರು ನೆರವೇರಿಸಿದರು. ನಾಡಗೀತೆಯೊಂದಿಗೆ, ಆ ದಿನದ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮಾರನೇ ದಿನ ಮೇ ೧ರ ಬೆಳಿಗ್ಗೆ ಸಂಧ್ಯಾ ಗಾಯತ್ರಿ ಮತ್ತು ತಂಡದವರಿಂದ ‘ಎಲ್ಲಿದ್ದರು ಎಂತಿದ್ದರು ಕನ್ನಡಿಗರು ನಾವು’ ಎಂಬ ಆರಂಭಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ನಂತರ ಅಲಮೇಲು ಅಯ್ಯಂಗಾರ್ ಅವರ ಸಾರಥ್ಯದಲ್ಲಿ ‘ಕನ್ನಡ್ ಪದಗೊಳ್ ನುಗ್ಲಿ!’ ಎಂಬ ಶೀರ್ಷಿಕೆಯಲ್ಲಿ ಕನ್ನಡ ಪದಗಳ ಬಳಕೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಅದರಲ್ಲಿ ‘ಸಂಭಾಷಣೆಯಲ್ಲಿ ಕನ್ನಡ’ (ರಘು ಹಾಲೂರ್), ‘ಗಣಕಯಂತ್ರದಲ್ಲಿ ಕನ್ನಡ’ (ಕೆ.ವಿ.ರಾಮಪ್ರಸಾದ್), ‘ಮನೆಯಲ್ಲಿ ಕನ್ನಡ’ (ಪಿ.ಆರ್.ಮೀರಾ), ‘ಜನಪದಗೀತೆಗಳಲ್ಲಿ ಪ್ರಾದೇಶಿಕ ಕನ್ನಡ’ (ವಿಮಲ ರಾಜಗೋಪಾಲ್) ಮತ್ತು ‘ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ’ (ಶಾಂತಲಾ ಭಂಡಿ) ಎಂಬ ಪ್ರಬಂಧಗಳ ಮಂಡನೆಯಾಯಿತು. ವಸ್ತು ವಿಷಯದ ಪ್ರಸ್ತುತತೆ ಮತ್ತು ನೂತನ ಆಲೋಚನೆಗಳಿಂದಾಗಿ ಈ ವಿಚಾರ ಸಂಕಿರಣ ಗಮನ ಸೆಳೆಯಿತು. ನಂತರ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭುವನೇಶ್ವರಿ ಹೆಗಡೆ ಅವರು ‘ಲೇಖಕಿಯಾಗಿ ನನ್ನ ಅನುಭವಗಳು’ ಎಂಬ ಬಗ್ಗೆ ಸ್ವಾರಸ್ಯಕರವಾಗಿ ಮಾತನಾಡಿ, ಹಿಂದಿನ ದಿನದಂತೆಯೇ ಸಭಿಕರೆಲ್ಲರ ಗಮನ ಸೆಳೆದರು. ಅವರ ಹಾಸ್ಯಭರಿತವಾದ ಭಾಷಣ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಕಾಲ ಉಳಿಯುವಂತುದು ಎಂದರೆ ಅತಿಶಯೋಕ್ತಿಯಾಗಲಾರದು. ನಂತರ ‘ನಮ್ಮ ಹೆಮ್ಮೆಯ ಬರಹಗಾರರ ಕೃತಿಗಳು’ ಎನ್ನುವ ಕಾರ್ಯಕ್ರಮದಲ್ಲಿ (ನಿರ್ವಹಣೆ: ಮೈ.ಶ್ರೀ.ನಟರಾಜ), ಅಮೇರಿಕ ಕನ್ನಡ ಲೇಖಕರಿಂದ ರಚಿತವಾದ, ಇತ್ತೀಚಿಗೆ ಬಿಡುಗಡೆಯಾದ ಪುಸ್ತಕಗಳ ಪರಿಚಯ ಮಾಡಲಾಯಿತು: ಗುರುಪ್ರಸಾದ್ ಕಾಗಿನೆಲೆ ಅವರ ‘ಗುಣ’ ಕಾದಂಬರಿಯನ್ನ್ನು ಶಾಂತಲಾ ಭಂಡಿ, ‘ಕನ್ನಡ ಕಾದಂಬರಿ ಲೋಕದಲ್ಲಿ. . . ಹೀಗೆ ಹಲವು’ ವಿಮರ್ಶಾಕೃತಿಯನ್ನು ನಳಿನಿ ಮೈಯ, ಎಂ.ಆರ್.ದತ್ತಾತ್ರಿ ಅವರ ‘ದ್ವೀಪವ ಬಯಸಿ’ ಕಾದಂಬರಿಯನ್ನು ವಿಮಲ ರಾಜಗೋಪಾಲ್, ‘ದೀಪ ತೋರಿದೆಡೆಗೆ’ ಕಥಾಸಂಗ್ರಹವನ್ನು ತ್ರಿವೇಣಿ ಶ್ರೀನಿವಾಸರಾವ್, ‘ಗುಬ್ಬಿ ಗೂಡು’ ಕೃತಿಯನ್ನು ಗುರುಪ್ರಸಾದ್ ಕಾಗಿನೆಲೆ, ‘ಅನಂತಮುಖದಮೂರ್ತಿ’ ವಿಮರ್ಶಾಕೃತಿಯನ್ನು ಮಧುಕಾಂತ್ ಕೃಷ್ಣಮೂರ್ತಿ ಮತ್ತು ವಿಶ್ವನಾಥ್ ಹುಲಿಕಲ್ ಅವರ ‘ಗೃಹಪ್ರವೇಶ’ ಕಥಾಸಂಕಲನವನ್ನು ಪ್ರಕಾಶ ನಾಯಕ್ ಅವರು ವಿಮರ್ಶಾತ್ಮಕವಾಗಿ ಪರಿಚಯಿಸಿದರು. ಹೀಗೆ ಬೆಳಗಿನ ಸ್ವಾರಸ್ಯಭರಿತ ಸಾಹಿತ್ಯಿಕ ಕಾರ್ಯಕ್ರಮ ಸುಗ್ರಾಸ ಭೋಜನದೊಂದಿಗೆ ಮುಗಿಯಿತು. ಅದೇ ದಿನದ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ‘ಕನ್ನಡ ಕಲಿ’ ಸಂಸ್ಥೆಯ ಮಕ್ಕಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು (ನಿರ್ವಹಣೆ: ಸಂಧ್ಯಾ ರವೀಂದ್ರನಾಥ್). ನಂತರ ಮುಖ್ಯ ಅತಿಥಿಗಳಿಬ್ಬರ ಜೊತೆ ವಲ್ಲೀಶ ಶಾಸ್ತ್ರಿಯವರು ಸಾಹಿತ್ಯಿಕ ಸಂವಾದ ನಡೆಸಿದರು. ಇಡೀ ಸಮ್ಮೇಳನದ ವಂದನಾರ್ಪಣೆಯನ್ನು ಎಚ್.ವೈ. ರಾಜಗೋಪಾಲರು ಸಲ್ಲಿಸಿದರು; ಈ ಕಾರ್ಯಕ್ರಮ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯೊಂದಿಗೆ ಮುಕ್ತಾಯವಾಯಿತು. ಈ ಸಮ್ಮೇಳನದ ಮತ್ತೊಂದು ವೈಶಿಷ್ಠ್ಯವೆಂದರೆ, ಅಮೇರಿಕ ಕನ್ನಡ ಲೇಖಕರ ಕೃತಿಗಳನ್ನು ಮಾರಾಟಮಾಡುವ ಪುಸ್ತಕ ಮಳಿಗೆಯ ವ್ಯವಸ್ಥೆಮಾಡಲಾಗಿತ್ತು (ನಿರ್ವಹಣೆ: ಆನಂದ ರಾಮಮೂರ್ತಿ); ಈ ಜವಾಬುದಾರಿಯೂ ಸಹ ‘ಸಾಹಿತ್ಯ ಗೋಷಿ’ಯ ಮೇಲಿತ್ತು. ೧೮೦೦ ಡಾಲರುಗಳಿಗಿಂತಲೂ ಅಧಿಕ ಮೊತ್ತದ ಪುಸ್ತಕಗಳ ಮಾರಾಟವಾಯಿತು. ಒಟ್ಟಿನಲ್ಲಿ ಹೇಳುವುದಾದರೆ, ಸುದೀರ್ಘವಾಗಿ ಆಯೋಜಿಸಿ, ಅತ್ಯಂತ ಅಚ್ಚುಕಟ್ಟಾಗಿ, ಸ್ವಾರಸ್ಯಕರವಾಗಿ ನಡೆಸಿಕೊಟ್ಟ ಈ ಮೌಲಿಕ ಸಮ್ಮೇಳನದ ಯಶಸ್ಸಿಗೆ, ಶ್ರದ್ಧೆ ಉತ್ಸಾಹಗಳಿಂದ ದುಡಿದ ಕನ್ನಡ ಸಾಹಿತ್ಯ ರಂಗ, ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟ ಮತ್ತು ‘ಸಾಹಿತ್ಯ ಗೋಷ್ಠಿ’ ಭಾಜನರಾದವು.

 Posted by at 1:57 PM