Mar 032012
 

ಒಂದು ಸ್ಪಂದನ…

ಹಿರಿಯ ಗೆಳೆಯ ನಾಗ ಐತಾಳರ ಮೊದಲ ಕಾದಂಬರಿ ‘ತಲೆಮಾರ ಸೆಲೆ’ ಕಾದಂಬರಿಯನ್ನು ಓದಿಯಾದ ನಂತರ ನನ್ನ ಮೊದಲ ಓದಿಗೆ ದಕ್ಕಿದ್ದನ್ನು ಐತಾಳರ ಬಳಿ ಹಂಚಿಕೊಂಡಿದ್ದೆ. ಅದನ್ನೇ ಮುನ್ನುಡಿಯಾಗಿ ಬರೆದುಕೊಡಿ ಎಂದು ಐತಾಳರು ನನ್ನನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸಿದಾಗ, ಅದನ್ನೇ ಸ್ವಲ್ಪ ತಿದ್ದಿ ಓದುಗರ ಜತೆ ಹಂಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದನ್ನು ಮುನ್ನುಡಿಯೆನ್ನುವುದಕ್ಕಿಂತ ಒಂದು ಪ್ರತಿಕ್ರಿಯೆ ಎಂದು ಕರೆಯುವುದು ಸಾಧುವೇನೋ? ಇದನ್ನು ನಾನು ಪ್ರತಿಕ್ರಿಯೆ ಎಂಬ ಉದ್ದೇಶದಿಂದ ಬರೆದಿದ್ದಾದರಿಂದ ಕಾದಂಬರಿ ಓದಿದ ಮೇಲೆ ನನ್ನ ಈ ಮಾತನ್ನು ಓದಿದಲ್ಲಿ ಹೆಚ್ಚು ಅರ್ಥಪೂರ್ಣವಾಗಬಹುದು.

ಮೊಟ್ಟಮೊದಲಿಗೆ ನನಗನಿಸಿದ್ದು ಈ ಕಾದಂಬರಿ ಬಹಳ ಮಹತ್ವಾಕಂಕ್ಷೆಯನ್ನುಳ್ಳದ್ದಾಗಿದೆ. ಮೂರು ಅಥವಾ ಇನ್ನೂ ಹೆಚ್ಚಿನ ಪೀಳಿಗೆಗಳ ಸಂವೇದನೆಗಳನ್ನು ದೇಶ ಕಾಲಾಂತರದ ಪ್ರವಾಹಕ್ಕೆ ಒಡ್ಡಿ ಪರೀಕ್ಷಿಸುವುದು ಒಂದು ಸುಲಭವಾದ ಸವಾಲಲ್ಲ. ಅಂತಹ ಸವಾಲಿಗೆ ಶ್ರೀ ನಾಗ ಐತಾಳರು ತಮ್ಮನ್ನು ತಾವೇ ಒಡ್ಡಿಕೊಂಡಿದ್ದಾರೆ. ಇಂತಹ ಸವಾಲಿನಲ್ಲಿ ಯಶಸ್ಸು ಎಂಬುದಕ್ಕೆ ಅರ್ಥ ನಾನಾ ಮಟ್ಟದಲ್ಲಿ ಹುಟ್ಟಬಹುದು. ಬರಹಗಾರನಿಗೆ ಇಂಥಹ ಒಂದು ಕಾದಂಬರಿಯನ್ನು ಬರೆದು ಮುಗಿಸುವುದೇ ಯಶಸ್ಸಾದಲ್ಲಿ, ಯಾವ ಅಡೆತಡೆಗಳಿಲ್ಲದೇ ಒಂದೇ ಏಟಿಗೆ ಓದಿ ಮುಗಿಸುವುದು ಓದುಗನ ಯಶಸ್ಸು. (ಗಮನಿಸಿ, ಈ ಕಾದಂಬರಿಯನ್ನು ಬರೆದಿರುವುದು ನಮ್ಮ ಓದುಗರ ಧ್ಯಾನಸ್ಥ ಸ್ಥಿತಿ ಎನ್ನುವುದು ಎಸ್ಸೆಮ್ಮೆಸ್‌ಗೆ ಓಕೆ, ಅಥವಾ ಕಂಪ್ಯೂಟರಿನ ಚ್ಯಾಟ್ ಬಾಕ್ಸುಗಳಲ್ಲಿ ಮುಗುಳ್ನಗೆಯ ಮುಖವನ್ನು ಟೈಪಿಸುವುದಕ್ಕಷ್ಟೇ ಮಿತಿಯಾಗಿರುವ ೨೦೧೧ರಲ್ಲಿ). ಇಂಥ ಒಂದು ಸಾಹಸಕ್ಕೆ ಪ್ರಯತ್ನಪಟ್ಟ ಐತಾಳರ ಧೈರ್ಯಕ್ಕೆ ನಾನು ಮೊಟ್ಟಮೊದಲು ಅಭಿನಂದನೆ ಸಲ್ಲಿಸುತ್ತೇನೆ.

ದೇಶದಿಂದ ಹೊರಗಿದ್ದು ಬರೆಯುವವರ ಬರವಣಿಗೆಗೆ ಒಂದು ಸಾಮಾನ್ಯವಾದ ಗುಣವಿರುತ್ತದೆ ಎಂಬುದು ಒಂದು ನಂಬಿಕೆ. ಅದರಲ್ಲಿ ಬಹಳ ಮುಖ್ಯವಾದದ್ದು ಬಾಲ್ಯದ ನೆನಪುಗಳು. ಅದನ್ನು ಬಿಟ್ಟರೆ ಹುಟ್ಟಿ ಬೆಳೆದ ನಾಡನ್ನು ತೊರೆದು, ಬೇರೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಪಡುವ ಬವಣೆ, ಹೊಸ ಸಂಸ್ಕೃತಿಯಲ್ಲಿ ಬೆಳೆವ ಮಕ್ಕಳು, ಎರಡು ಸಂಸ್ಕೃತಿಗಳಲ್ಲಿನ ಭಿನ್ನತೆ, ಸಾಮ್ಯ, ಎಲ್ಲ ಅನುಭವಿಸಿಯಾದ ಮೇಲೆ ಕೊನೆಗೆ ‘ಲೈಫ಼ು ಇಷ್ಟೇನೆ’ ಎನ್ನುವ ವಾನಪ್ರಸ್ಥದ ವೈರಾಗ್ಯ ಪರ್ವ, ಮಧ್ಯೆ ಮಧ್ಯೆ ಬದುಕಿನಲ್ಲಿ ಕಷ್ಟಗಳು ಬಂದಾಗ, ಒಂಟಿತನ ಕಾಡಿದಾಗ ‘ಭಾರತದಲ್ಲಿದ್ದರೆ ಹೀಗಾಗುತ್ತಿರಲಿಲ್ಲ’ ‘ಅಯ್ಯೋ ಇದಕ್ಕಾಗಿ ಇಲ್ಲಿಗೆ ಎಲ್ಲವನ್ನೂ ಬಿಟ್ಟು ಬಂದವಾ’ ಎಂಬ ಭ್ರಮನಿರಸನ, ಇತ್ಯಾದಿ- ಈ ವಸ್ತುಗಳನ್ನು ನಿಭಾಯಿಸಿರುವ ಕಾದಂಬರಿಗಳು ಬಹಳಷ್ಟಿವೆ. ಇಲ್ಲಿ ಭಿನ್ನತೆ, ಸಂಸ್ಕೃತಿಗಳ ಕರ್ಷಣೆ, ವೈರಾಗ್ಯಗಳ ಕುರಿತ ಬರಹಗಳನ್ನು ಒಪ್ಪುವ ಸಹೃದಯ ಓದುಗರು ಮತ್ತು ಕ್ರಿಟಿಕಲ್ ವಿಮರ್ಶಕರು, ಅನಿವಾಸಿಗಳ ಬಾಲ್ಯದ ನೆನಪುಗಳನ್ನು, ಭ್ರಮನಿರಸನಗಳನ್ನು ಒಂದು ಮಟ್ಟದಲ್ಲಿ ತಿರಸ್ಕರಿಸುತ್ತಾ ಬಂದಿದ್ದಾರೆ. ಹಳವಂಡ, ಕನವರಿಕೆಗಳು ಬಂದಾಗೆಲ್ಲ ‘ಈ ಎನ್ ಆರ್ ಐ ಗಳದ್ದೇ ಇಷ್ಟು’ ‘ಇಷ್ಟು ದೇಶದ ಮೇಲೆ ಇಷ್ಟವಿದ್ದವರು ದೇಶ ಬಿಟ್ಟು ಹೋದದ್ದಾದರೂ ಏಕೆ?’ ಎಂಬ ಪ್ರತಿಕ್ರಿಯೆಗಳು ಬಂದಿವೆ. ಹಾಗೆಯೆ ಈ ಬರಹಗಾರರ ಭ್ರಮನಿರಸನ ವಾಚ್ಯವಾಗುವುದು ಬೇರೆ ಬೇರೆ ರೀತಿ. ಅದು ಉಧೋ ಎಂದು ತೋಡಿಕೊಳ್ಳುವ ದುಃಖವಾಗಬಹುದು, ಹೃದಯ ಕರಗಿಸುವ ವ್ಯಥೆಯಾಗಬಹುದು, ಬೇಸತ್ತು ವಾಪಸಾಗಿ ಭಾರತದ ಜೀವನಶೈಲಿಯನ್ನು ಒಪ್ಪಿಕೊಳ್ಳುವ ಸಂತನ ಸಮಾಧಾನವಿರಬಹುದು ಅಥವಾ ಅಲ್ಲಿಯೂ ಸಲ್ಲದವನ ಹಪಾಪಿಯಿರಬಹುದು. ಉಳಿಯಬೇಕಾದ ಅನಿವಾರ್ಯತೆ ಹೆಚ್ಚಾದಲ್ಲಿ ಈ ಅಭಿವ್ಯಕ್ತಿ ವ್ಯವಸ್ಥೆಯನ್ನು ಒಪ್ಪಿಕೊಂಡ ನಾಲ್ಕನೇ ಆಯಾಮದ ವಕ್ರಕೋನದ ಮೊನಚಾದ ವ್ಯಾಂಗ್ಯಿಕ ರೂಪವನ್ನೂ ಪಡೆದುಕೊಳ್ಳಬಹುದು. ಈ ಕಡೆಯ ಪ್ರಯತ್ನ ಬಹಳ ಅಪಾಯಕಾರಿಯಾದದ್ದು. ಇದನ್ನು ಪದೇ ಪದೇ ಪ್ರಯತ್ನಿಸಿದ ರಶ್ದಿ, ಹರಿ ಕುಂಜ಼್ರು, ಅರವಿಂದ ಅಡಿಗ (ಅರವಿಂದ ಅಡಿಗ ಭಾರತದಲ್ಲಿದಾರೆ ಎಂದು ಅರಿವಿದ್ದೂ ಈ ಮಾತನ್ನು ಹೇಳುತ್ತಿದ್ದೇನೆ) ಮುಂತಾದವರು ಅಟ್ಲಾಂಟಿಕ್‌ನ ಎರಡೂ ಬದಿಯ ಓದುಗರ ವಿರೋಧ ಕಟ್ಟಿಕೊಳ್ಳುತ್ತಾರೆ. ರಶ್ದೀಯಂಥವರ ಅನನ್ಯ ಶೈಲಿಯಿಂದ ಆತ ಕಟ್ಟಿಕೊಂಡ ನಿಷ್ಟ ಓದುಗ ಬಳಗ ಆತನ ಪುಸ್ತಕಗಳನ್ನು ಇನ್ನೂ ಬೆಸ್ಟ್ ಸೆಲ್ಲರ‍್ಗಳಾಗಿ ಮಾಡಿವೆ.
ಈ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ ಭಾರತದಲ್ಲಿದ್ದವರು ಭಾರತದಲ್ಲಿನ ವಸ್ತುಸ್ಥಿತಿ ಕುರಿತು ಬರೆದಲ್ಲಿ ಅವರು ಕ್ರಿಟಿಕಲ್ ಇನ್‌ಸೈಡರ್ ಗಳಾಗುತ್ತಾರೆ. ಅನಿವಾಸಿಗಳು ತಮ್ಮ ಭೌತಿಕ ಅನುಪಸ್ಥಿತಿಯ ಕಾರಣದಿಂದ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಯ ಮೇಲೆ ಟೀಕೆ ಟಿಪ್ಪಣಿ ಮಾಡುವ ಹಕ್ಕನ್ನು ನೈತಿಕವಾಗಿ ಕಳೆದುಕೊಂಡಿದ್ದಾರೆ ಎನ್ನುವ ಒಂದು ವಾದ ಬರಹಗಾರರಿಗೂ, ಓದುಗರಿಗೂ ಮತ್ತು ವಿಮರ್ಶಕರಿಗೂ ‘ಡೋಂಟ್ ಆಸ್ಕ್ ಡೋಂಟ್ ಟೆಲ್’ ಮಟ್ಟದಲ್ಲಿ ನಿಜ. ಹೀಗಾಗಿ ಚಿತ್ತಾಲರು ಹೇಳುವ ಕಥಾಲೋಕದ ಕ್ಯಾನ್‌ವಾಸನ್ನು ಈ ಬರಹಗಾರರು ಅನಿವಾರ್ಯವಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ, ಆ ಕ್ಯಾನ್‌ವಾಸ್ ಅನಿವಾರ್ಯವಾಗಿ ವಿಶಾಲವಾಗಿದೆ. ಅದರ ಸರಹದ್ದುಗಳು ಮಸುಕಾಗಿವೆ. ಆದರೆ ಇವ್ಯಾವುಗಳ ಮೇಲೂ ಇವರ ಹತೋಟಿಯಿಲ್ಲ. ಅಲ್ಲಿರುವ ನೆನಪುಗಳು, ಪ್ರತಿಮೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಈ ಬರಹಗಾರರು ಉಪಯೋಗಿಸಿಕೊಳ್ಳುತ್ತಾರೆ, ಅದು ಯಾರ್ಯಾರಿಗೆ ಎಷ್ಟರಮಟ್ಟಿಗೆ ಒಲಿಯುತ್ತದೆ ಎನ್ನುವುದು ಅವರವರ ಅದೃಷ್ಟ.

* * *
ಐತಾಳರ ಕಾದಂಬರಿಯೂ ಈ ಎಲ್ಲ ಗುಣಗಳಿಂದ ಹೊರತಾಗಿಲ್ಲ. ಕಾದಂಬರಿಯ ನಿರೂಪಣೆ ಸರಳವಾಗಿರುವುದರಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಶೀರ್ಷಿಕೆಯೇ ಹೇಳುವಂತೆ ವಂಶಾವಳಿಯ ಸೆಲೆ ಕೊಕ್ಕೋಡಿನಿಂದ ಲಾಸ್ ಏಂಜಲೀಸ್ ನವರೆಗೆ ಹರಿದುಬರುತ್ತದೆ. ಕಾದಂಬರಿಯ ಮೊದಲ ಅಧ್ಯಾಯಗಳ ನಿರೂಪಣೆಯಂತೂ ಬಹಳವೇ ಸೊಗಸಾಗಿ ಬಂದಿದೆ. ಸುಮತಿಯ ಮೇಲಿನ ಸಿಂಗಾರಮ್ಮನವರ ಹಿಡಿತ, ಮಗಳ ವಿದ್ಯೆಗಾಗಿ ಸುಬ್ರಾಯಭಟ್ಟರ ಒತ್ತಾಸೆ, ಸೋಮಯಾಜಿಗಳ ಜ್ಯೋತಿಷ್ಯ, ಸುಮತಿಗೆ ಬರುವ ಸಂಬಂಧದ ವಿವರಗಳು,ವಿಶ್ವೇಶ್ವರನ ಸಂಬಂಧ ಮತ್ತು ಅದು ಮುರಿದು ಬೀಳುವ ಪರಿ- ಎಲ್ಲ ಸುಲಲಿತವಾಗಿ ಓzಸಿಕೊಂಡು ಹೋಗುತ್ತವೆ.
ಎಲ್ಲ ಮಧ್ಯಮವರ್ಗದ ಕುಟುಂಬದಂತೆ ದೈವ, ದೈನಂದಿನ ಏರುಪೇರು, ಅಲ್ಲಲ್ಲಿ ಉಪನದಿಗಳಂತೆ ಬಂದು ಸೇರುವ ವಂಶಾವಳಿ, ಕೊಂಚ ಇರುಸುಮುರುಸು, ಕೊಂಚ ಖುಷಿ- ಹೀಗೆ ಎಲ್ಲವೂ ಸಹಜವಾಗಿ ನಡೆದುಕೊಂಡು ಹೋಗುತ್ತಿದ್ದ ಸಂಸಾರದ ಸ್ಥಿತಿ ಪ್ರಭಾಕರ, ಸುಮತಿ ಅಮೆರಿಕಾಕ್ಕೆ ಬರುವುದರ ಮೂಲಕ ಬೇರೆಯೇ ಒಂದು ಗತಿಯನ್ನು ಪಡೆಯುತ್ತದೆ. ಎರಡೂ ಸಂಸಾರದ ಎಲ್ಲ ಕಾರ್ಯಗಳು, ನಡಾವಳಿಗಳು ಈ ಪ್ರಭಾಕರ, ಸುಮತಿಯರ ಅಮೆರಿಕಾ ವಲಸೆಯೊಂದಿಗೆ ಪೂರಾ ಬದಲಾಗುತ್ತದೆ. ಒಂದು ಸಂಸಾರದಲ್ಲಿ ಒಂದು ಜೋಡಿ ದೇಶ ಬಿಟ್ಟು ಹೋಗುವುದು ಮತ್ತು ಆ ಪ್ರಕ್ರಿಯೆಗೆ ಹೊಂದಿಕೊಳ್ಳುವುದು ಬರೇ ಆ ಜೋಡಿಗಷ್ಟೇ ಸೀಮಿತವಾಗದೇ, ಸಂಸಾರದ ಎಲ್ಲರ ಜವಾಬ್ದಾರಿಯಾಗುತ್ತದೆ. ಮುಂದಿನ ಘಟನೆಗಳು ಪ್ರಭಾಕರ, ಸುಮತಿ ಅಮೆರಿಕಾದಲ್ಲಿ ನೆಲೆ ಕಂಡುಕೊಳ್ಳುವುದರ ವಿಸ್ತೃತ ಚಿತ್ರಣ. ಘಟನೆಗಳು ಸಾಮಾನ್ಯವಾಗಿ ಅಮೆರಿಕಾದಲ್ಲಿ ನೆಲಸಿರುವವರ ಮನೆಯಲ್ಲಿ ನಡೆಯುವ ಘಟನೆಗಳೇ ಆಗಿವೆ. ಆದರೆ, ತೀರ ವಿಲಂಬಗತಿಯಲ್ಲಿ ಬೆಳೆಯುವ ಈ ಘಟನೆಗಳಲ್ಲಿ ಸುಮತಿಯ ವ್ಯಕ್ತಿತ್ವ ವಿಕಸಿತವಾಗುವುದನ್ನು ನಾವು ಕಾಣಬಹುದು. ಆಕೆ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ವತಂತ್ರವಾಗುವುದು ಕಾದಂಬರಿಯ ಒಂದು ಘಟ್ಟ. ಇದು ಸಾಧ್ಯವಾಗುವುದು ಆಕೆ ಇರುವ ಅಮೆರಿಕಾದಿಂದಲೇ.
ಈ ಘಟ್ಟದಲ್ಲಿ ವಿವರಗಳ ಬಗ್ಗೆ ಒಂದು ಮಾತು. ಕಾದಂಬರಿಯ ವಿವರಗಳು ಬಹಳ ಸುದೀರ್ಘವಾಗಿ ಬಂದಿವೆ. ಎಷ್ಟರಮಟ್ಟಿಗೆ ಎಂದರೆ ಬಹಳ ಕಡೆ ಕಾದಂಬರಿ, ಆಗುತ್ತಿರುವ ಘಟನೆಗಳ ರಿಯಲ್ ಟೈಮ್ ವರದಿ ಎಂದನಿಸುತ್ತದೆ, ಉದಾಹರಣೆಗೆ, ಸುಮತಿ ಅಮೆರಿಕನ್ ಉಚ್ಚಾರ ಅಥವಾ ಸ್ಲಾಂಗ್‌ಗಳನ್ನು ಕಲಿತುಕೊಳ್ಳುವುದು, ಕರ್ಡ್ಸ್ ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವುದು, ನ್ಯೂಯಾರ್ಕ್ ಮತ್ತು ನ್ಯು‌ಅರ್ಕ್ ಹೇಗೆ ಬೇರೆ ಅಂದು ತಿಳಕೊಳ್ಳುವುದು- ಇವೆಲ್ಲ ಓದುಗರಿಗೆ ೨೦೧೧ರಲ್ಲಿ ಅವಶ್ಯಕತೆಯಿದೆಯೇ ಎಂಬ ಅನುಮಾನ ಬರುತ್ತದೆ. ಓದುಗರಿಗಿರಲಿ, ಸುಮತಿ ಎಂಬ ಪಾತ್ರಕ್ಕೂ ಈ ವಿವರಗಳು ಇಷ್ಟರಮಟ್ಟಿಗೆ ಅವಶ್ಯಕತೆಯಿದೆಯೇ, ಆಕೆ ಹಾಗೆ ಕಲಿಯುವುದೂ, ಬೆಳೆಯುವುದೂ ಅನಿವಾರ್ಯವಾಗಿರಬಹುದು. ಆದರೆ, ಈ ಕಲಿಕೆ, ಬೆಳವಣಿಗೆಗಳೆಲ್ಲ ನಾನು ಇದನ್ನು ಕಲಿತೆ ಹೀಗೆ ಬೆಳೆದೆ ಎಂದು ಹೇಳಿಕೊಂಡು ಆಗುವಂಥದ್ದಲ್ಲವಲ್ಲ.
ಈ ಅತಿವಿವರಗಳ ಇನ್ನೊಂದು ತೊಡಕೆಂದರೆ ಬರೇ ಈ ಮೇಲಿನ ವಿವರಗಳನ್ನಷ್ಟೇ ಮೆಚ್ಚ್ಚಿಕೊಂಡು ಕಾದಂಬರಿಯ ಆಶಯವನ್ನು ಅರಿಯದೇ ಹೋಗುವುದು. ಕಾದಂಬರಿ ಕಟ್ಟುವುದೇ ವಿವರಗಳನ್ನು ಬೆಳೆಸುವುದಿಂದಾದರೂ ಕೆಲವೊಮ್ಮೆ ವಿವರಗಳು ಕಥನಕ್ಕೆ ಪೂರಕವಾಗಿದೆಯೇ ಇಲ್ಲವೇ ಎಂಬ ಯೋಚನೆ ಬಂತು. ಓದುವ ಓಘಕ್ಕೆ ಇದು ಅಡ್ಡಿಯನ್ನುಂಟುಮಾಡದಿದ್ದರೂ, ಕಾದಂಬರಿಯ ಕೇಂದ್ರಕ್ಕೆ ಇದರ ಅಗತ್ಯವಿತ್ತೇ ಎಂದು ಕೆಲವೊಮ್ಮೆ ಅನಿಸುತ್ತದೆ. ಎರಡನೆಯ ಬಾರಿ ಕಾದಂಬರಿಯನ್ನು ಓದಿದಾಗ ಪುಟಗಳನ್ನು ಸ್ಕ್ರೋಲ್ ಮಾಡಿಕೊಂಡು ಹೋಗುವುದು ತೀರಾ ಸುಲಭವಾಗಿಬಿಟ್ಟಿತು. ಇದು, ಶಕ್ತಿಯೋ, ದೌರ್ಬಲ್ಯವೋ ನಾ ಹೇಳಲಾರೆ. ಎಸೆಂಷಿಯಲ್ ಡೀಟೈಲ್ಸ್ ಎನ್ನುವ ವಿಮರ್ಶಕರ ಮಾತು ಇಲ್ಲಿ ಸುಮ್ಮನೆ ನೆನಪಾಯಿತು.
ಐತಾಳರು ನಮಗೆ ತೋರಿಸುವ ಅಮೆರಿಕಾ ನಾವೀಗ ನೋಡುತ್ತಿರುವ ಅಮೆರಿಕಾದ ಮೂರ್ನಾಲ್ಕು ದಶಕದ ಹಿಂದಿನ ಅಮೆರಿಕಾ. ಸೆಲ್‌ಫ಼ೋನು, ಕಂಪ್ಯೂಟರುಗಳಿಲ್ಲದ ಅಮೆರಿಕಾ, ಟೆಲಿಫೋನಿಗೆ ಗಂಟೆಗಟ್ಟಲೆ ಕಾಯಬೇಕಾದ ಅಮೆರಿಕಾ, ಲಾಸ್ ಏಂಜಲೀಸ್ ಏರಿಯಾದಲ್ಲಿ ಅರ್ಮೇನಿಯನ್ ಅಂಗಡಿಯಿಂದ ಭಾರತೀಯ ಗ್ರಾಸರಿಯನ್ನು ತರುವ ಭಾರತೀಯರಿದ್ದ ಅಮೆರಿಕಾ. ಹಾಗಾಗಿ, ಇಲ್ಲಿ ನೆಲಸಿರುವ ಇತ್ತೀಚಿನ ಎರಡು ತಲೆಮಾರಿನ ಕನ್ನಡಿಗರಿಗರಲ್ಲಿ ಕೆಲವರಿಗೆ ಇದೊಂದು ಅವರ ಅಜ್ಜನ ಕಥೆಯೆನಿಸಿದರೆ ಅವರ ಹಿಂದಿನವರಿಗೆ ಅವರ ಕಥೆಯೇ ಎನಿಸುತ್ತದೆ. ಆ ಮೂಲಕ ಒಂದು ತಲೆಮಾರಿನ ಚರಿತ್ರೆಯಂತೂ ದಾಖಲೆಯಾಗುತ್ತದೆ.
ಕಾದಂಬರಿಯ ಹೆಣ್ಣುಪಾತ್ರಗಳ ಬಗ್ಗೆ ಕೆಲಮಾತುಗಳನ್ನು ಹೇಳಲೇಬೇಕೆನಿಸಿದೆ. ಏಕೆಂದರೆ, ಈ ಪಾತ್ರಗಳಿಂದಲೇ ಕಾದಂಬರಿ ಬೆಳೆಯುವುದು. ಸುಮತಿ ಈ ಕಾದಂಬರಿಯ ಕೇಂದ್ರಪಾತ್ರ, ಮಗಳಾಗಿ, ಹೆಂಡತಿಯಾU, ಅಮ್ಮನಾಗಿ, ಅಜ್ಜಿಯಾಗಿ ಒಂದು ಕುಟುಂಬವನ್ನು ನಿಭಾಯಿಸುತ್ತಾಳೆ-ಆ ಆರ್ಥದಲ್ಲಿ ಆಕೆ ಸ್ತ್ರೀ. ಸಂಸಾರದ ಬೇರೆ ಬೇರೆ ಸವಾಲುಗಳನ್ನು ಬೇರೆ ಬೇರೆ ಘಟ್ಟದಲ್ಲಿ ಆಕೆ ತಾಳ್ಮೆಯಿಂದ ನಿಭಾಯಿಸುವುದು, ನಿಧಾನವಾಗಿ ಬೆಳೆಸಿಕೊಳ್ಳುವ ಆಕೆಯ ಸ್ವತಂತ್ರ ವ್ಯಕ್ತಿತ್ವ ಬಹಳ ಸರಳವಾಗಿಯಾದರೂ ಚೆಂದಾಗಿ ನಿರೂಪಿತವಾಗಿವೆ. ನನಗೆ ಸ್ವಲ್ಪ ಸಮಸ್ಯೆಯೆನಿಸಿದ್ದು ಕಾದಂಬರಿಯ ಬೇರೆ ಹೆಣ್ಣು ಪಾತ್ರಗಳನ್ನು ಚಿತ್ರಿಸಿರುವಲ್ಲಿ. ಸಿಂಗಾರಮ್ಮನ ಪೇಟ್ರನೈಜ಼ಿಂಗ್ ಧೋರಣೆಗೆ ಆಕೆಯ ಬೆಳವಣಿಗೆಯ ಹಿನ್ನೆಲೆಯ ಸಮಜಾಯಿಷಿಯನ್ನು ಕೊಡಬಹುದಾದರೂ, ಮೇಗನ್ ಮತ್ತು ಆಕೆಯ ಅಮ್ಮ ಮೆಲಿಸ್ಸಾರ ಪಾತ್ರಗಳ ಬಗ್ಗೆ ನನಗೆ ಕೊಂಚ ತಕರಾರಿದೆ. ಮೆಲಿಸ್ಸಾ ಒಂದು ಭಾಷೆಯಲ್ಲಿ ಹೇಳಬೇಕೆಂದರೆ ಒಂಥರಾ ರೆಡ್‌ನೆಕ್. ಆಕೆಗೆ ತನ್ನ ಜನಾಂಗದವರನ್ನು ಬಿಟ್ಟರೆ ಬೇರ್ಯಾವ ಜನಾಂಗದ ಮೇಲೆಯೂ ಪ್ರೀತಿಯಿಲ್ಲ. ಗೌರವವಿಲ್ಲ. ಇರಲಿ, ಆ ರೀತಿಯ ಜನರನ್ನು ನಾವು ದಿನಾಲೂ ನೋಡುತ್ತೇವೆ. ಆದರೆ, ಆ ಪಾತ್ರದ ಬಗ್ಗೆ ಲೇಖಕರಿಗೆ ಕೊಂಚವೂ ಪ್ರೀತಿಯಿಲ್ಲವೇನೋ ಅನ್ನಿಸಿತು. ಆಕೆಯೂ ಸುಮತಿಯಂತೆ ವಲಸೆಗಾರ್ತಿ. ಆಕೆಗೂ ತನ್ನ ಸಂಸ್ಕೃತಿ, ಇತರೇ ಎಲ್ಲವನ್ನು ಕಾಪಾಡಿಕೊಳ್ಳುವುದರಲ್ಲಿ ಸುಮತಿಯಷ್ಟೇ ಕಾಳಜಿಯಿದೆ. ಮೂಲತಃ ತನ್ನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಾಗಿಸುವ ಕಾಳಜಿಯಲ್ಲಿ ಮೆಲಿಸ್ಸಾ ಮತ್ತು ಸುಮತಿ ಬೇರೆಯಲ್ಲ. ಆದರೆ, ಹಾಗೆ ಮಾಡುವ ಈ ಕ್ರಿಯೆಯಲ್ಲಿ ಆಕೆ ಕಡೆಗೆ ವ್ಯಾಂಪ್ ಆಗಿಬಿಡುತ್ತಾಳೆ. ಸುಮತಿಗೆ ಮಗನ ಮದುವೆಯನ್ನು ಹಿಂದೂ ಪದ್ಧತಿಯ ರೀತಿ ಮಾಡಲು ಅವಕಾಶ ಸಿಗುತ್ತದೆ. ಆದರೆ, ಮದುವೆ ರಿಜಿಸ್ಟರ್ ಆಗಿದೆ ಅನ್ನುವ ಒಂದೇ ಕಾರಣದಿಂದ ಮೆಲಿಸ್ಸಾಗೆ ಕ್ಯಾಥೊಲಿಕ್ ಸಂಸ್ಕೃತಿಯಲ್ಲಿ ಮಗಳ ಮದುವೆ ಮಾಡಲಾಗುವುದಿಲ್ಲ. ಮೆಲಿಸ್ಸಾ ಮಾಂಸದ ಅಡುಗೆಯನ್ನು ತೆಗೆದುಕೊಂಡು ಹೋಗುವುದು, ಮಗುವಿಗೆ ಜೆರೋಮ್ ಎಂಬ ಹೆಸರನ್ನು ಲಾಸ್ಟ್ ನೇಮ್ ಆಗಿ ಇರಿಸಲು ಒತ್ತಾಯಿಸುವುದು, ಮೊಮ್ಮಗುವಿನ ಮೇಲೆ ಅತೀ ಅಕ್ಕರೆಯನ್ನು ತೋರಿಸುವುದು- ಇವೆಲ್ಲವೂ ತಾನು ಒಂಟಿಯಾಗಿಬಿಟ್ಟೆ ಎಂಬ ಭಾವನೆಗೆ ಬರುವ ಅಂತರಾಳದ ರಕ್ಷಣೆಯೂ ಆಗುತ್ತದಲ್ಲವೇ? ಆಕೆಯ ನಡಾವಳಿ ಜಯರಾಮನ ಕುಟುಂಬದ ಮತ್ತು ಸುಮತಿಯ ದೃಷ್ಟಿಯಿಂದ ಮಾತ್ರ ನೋಡಿದಲ್ಲಿ ಅದು ತಪ್ಪಾಗಿ, ಅನಾಗರಿಕವಾಗಿ ಕಂಡುಬರುತ್ತದೆ. ಆದರೆ, ಲೇಖಕ ಇಲ್ಲಿ ಒಂದು ನಿರಪೇಕ್ಷ ನಿಲುವನ್ನು ಹೊಂದಿಲ್ಲ ಎಂದು ನನಗನಿಸಿತು.
ಮೇಗನ್ ತನ್ನ ಮತ್ತು ಜಯರಾಮನ ಸಂಸಾರದಲ್ಲಿರುವ ಬಿಕ್ಕಟ್ಟನ್ನು ಆದಷ್ಟು ನಾಗರಿಕವಾಗಿ ನಿಭಾಯಿಸಲು ಪ್ರಯತ್ನಿಸುವುದು ಪ್ರತೀ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂಬ ಹೊಸಾ ಪೀಳಿಗೆಯ ದೃಢ ನಂಬಿಕೆ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳಲು ಮಾಡುವ ಪ್ರಜ್ಞಾಪೂರ್ವಕ ಶ್ರಮವನ್ನು ತೋರಿಸುತ್ತದೆ. ಇಬ್ಬರೂ ಮನಶ್ಯಾಸ್ತ್ರಜ್ಞರ ಮೊರೆ ಹೋಗಿ ಸಂಬಂಧವನ್ನು ಉಳಿಸಿಕೊಳ್ಳಲು ತಾವಿಬ್ಬರೂ ಕೆಲವಾದರೂ ಸಮಯ ದೂರವಿದ್ದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುವುದು ಸಂಸಾರದ ನೆಮ್ಮದಿಗೆ ಈ ಪೀಳಿಗೆ ತಂತಾನೇ ಕಂಡುಕೊಂದಿರುವ ರಕ್ಷಣಾ ವ್ಯವಸ್ಥೆ ಮತ್ತು ಬದಲಾದ ಮೌಲ್ಯವನ್ನು ತೋರಿಸುತ್ತದೆ.
ಕಾದಂಬರಿಯಲ್ಲಾಗುವ ಕೆಲವು ಸಾವುಗಳು ಕಾದಂಬರಿಯ ಮುಂದುವರಿಕೆಗೆ ಮತ್ತು ಕಾದಂಬರಿಯ ಒಟ್ಟಾರೆ ಆಶಯಕ್ಕೆ ಪೂರಕವಾಗಲೆಂದೇ ಉದ್ದೇಶಪೂರ್ವಕವಾಗಿ ಮಾಡಿದೆ ಅನಿಸಿತು. ಐತಾಳರ ವಂಶದ ಗಂಡುಸಂತಾನ ಡೆನಿಸ್ ಅಥವಾ ದಿನೇಶ, ನೋಡಲು ಅಮೆರಿಕನ್‌ನಂತಿದ್ದರೂ ಆತನ ಆತ್ಮ ಭಾರತೀಯವಾದದ್ದು. ಆತನ ಈ ಭಾರತೀಯತೆಯ ಇರವಿಗೆ ಇರಬಹುದಾದ ತೊಡಕೆಂದರೆ ಮೆಲಿಸ್ಸಾ ಮತ್ತು ಮೇಗನ್ ಮಾತ್ರ. ಮೆಲಿಸ್ಸಾ ಬೇರೆ ಸಂಸ್ಕೃತಿಯ ಬಗ್ಗೆ ಅನಾದರವನ್ನು ಮೊದಲಿಂದಲೂ ಇಟ್ಟುಕೊಂಡು ಬಂದವಳು. ಆಕೆ ಲ್ಯುಕೇಮಿಯ ಬಂದು ಇದ್ದಕ್ಕಿದ್ದಂತೆ ಸಾಯುತ್ತಾಳೆ. ಹಾಗೆಯೇ ಮೇಗನ್ ಕೂಡ ಅಪಘಾತದಲ್ಲಿ ಸಾಯುತ್ತಾಳೆ. ನಮ್ಮ ಜೀವನದಲ್ಲಿಯೂ ಇಂಥ ಅನೇಕ ಅನಿರೀಕ್ಷಿತ ಸಾವುಗಳು ಆಗುತ್ತವೆ. ಇಲ್ಲವೆಂದಲ್ಲ. ಆದರೆ, ಈ ಕಾದಂಬರಿಯ ಮಟ್ಟಿಗೆ ಮಾತ್ರ ಯೋಚಿಸಿದಲ್ಲಿ- ಒಂದು ಪಕ್ಷ ಮೇಗನ್ ಅಥವಾ ಮೆಲಿಸ್ಸಾ ಇಬ್ಬರಲ್ಲಿ ಯಾರಾದರೂ ಒಬ್ಬರು ಬದುಕಿದ್ದರೆ, ಡೆನಿಸ್ ದಿನೇಶನಾಗುತ್ತಿದ್ದನೇ, ಮುಂದೆ ಭಾರತದಲ್ಲಿ ಐತಾಳರ ಕುಟುಂಬದ ವಂಶವೃಕ್ಷವನ್ನು ಬರೆಸುತ್ತಿದ್ದನೇ? ಅದಿರಲಿ, ಹಾಗೆ ಅವನಿಗೆ ತೊಡಕಾಗಬಲ್ಲ ಯಾವುದೇ ಎರಡನೇ ಪೀಳಿಗೆಯವರೂ ಉಳಿಯುವುದಿಲ್ಲ. (ಅವನಪ್ಪ ಜಯರಾಮನನ್ನು ಸೇರಿ). ಅಷ್ಟೇ ಅಲ್ಲ, ಜಯರಾಮ ಮತ್ತೆ ಮದುವೆ ಆಗುವುದು ಜಾನಕಿ ಎಂಬ ಭಾರತೀಯಳನ್ನು. ಡೆನಿಸ್ ಮದುವೆಯಾಗುವುದೂ ಮೇಘನಾ ಎಂಬ ಭಾರತೀಯಳನ್ನು. ಒಟ್ಟಾರೆ ಕಾರಂತರ ಮರಳಿಮಣ್ಣಿಗೆಯ ನಾಯಕನ ತರ ಅಮೆರಿಕಾ, ಭಾರತ, ಬ್ರೆಜ಼ಿಲ್ ಎಲ್ಲ ಸಂಸ್ಕೃತಿಗಳನ್ನೂ ನೋಡಿ ಕೊನೆಗೆ ಅಜ್ಜಿ ಸುಮತಿಯ ಹಾದಿಯನ್ನೇ ಆತ ಅನುಸರಿಸುತ್ತಾನೆ. ಇಲ್ಲಿ ಕಾದಂಬರಿಕಾರನ ಉದ್ದೇಶವೇನು? ನಮ್ಮ ಸಂಸ್ಕೃತಿಯ ಬೇರುಗಳು ಬೇರೆಲ್ಲ ಸಂಸ್ಕೃತಿಗಳಿಗಿಂತ ಹೆಚ್ಚು ಭದ್ರವಾಗಿರುವುದರಿಂದ ಬೇರೊಂದು ಸಸಿ, ಬಳ್ಳಿಗಳಿಗೂ ನಾವು ಆಶ್ರಯ ಕೊಡುತ್ತೇವೆಯೆಂದೇ? ಇಲ್ಲ, ಇದನ್ನು ಸಾರ್ವತ್ರಿಕಗೊಳಿಸುವ ಗೋಜಿಗೆ ಹೋಗುವುದು ಬೇಡ, ಇದೊಂದು ಸಂಸಾರದ ಕಥೆ ಎಂದೂ ನಾವು ಹೇಳಬಹುದು. ಆದರೆ, ಈ ಕಾದಂಬರಿಯನ್ನು ಒಂದು ಸಂಸಾರದ ಕಥೆಯೆಂದು ಜನ ಓದುವುದಿಲ್ಲ ಎಂದು ನನಗೆನಿಸುತ್ತದೆ.
ಕಾದಂಬರಿಯಲ್ಲಿ ಬರುವ ಸುಮತಿ, ಪ್ರಭಾಕರರ ನಡುವಿನ, ಮೇಗನ್ ಮೆಲಿಸ್ಸಾ ನಡುವಿನ, ಮೇಗನ್ ಜೆರೋಮ್ ನಡುವಿನ ವಾಗ್ವಾದಗಳು ಒಂದು ಅಂತರ್‌ಸಂಸ್ಕೃತೀಯ ಪಠ್ಯವಾಗುತ್ತದೆ. ಇಲ್ಲಿ ಮದುವೆ, ಗಂಡು ಹೆಣ್ಣಿನ ಸಂಬಂಧ ಇಂಥ ಸಾಮಾನ್ಯ ಸಂಗತಿಗಳು ಭಿನ್ನ ಸಂಸ್ಕೃತಿ ಎಂಬ ಒಂದೇ ಕಾರಣಕ್ಕಾಗಿ ಎಷ್ಟು ಜಟಿಲವಾಗುತ್ತದೆ, ಎಂದು ಆಶ್ಚರ್ಯವಾಗುತ್ತದೆ.
ನನಗೆ ಈ ಕಾದಂಬರಿಯನ್ನು ಓದಿದ ಮೇಲೆ ಇಂಥ ದೊಡ್ಡ ಕಾದಂಬರಿಯನ್ನು ಬರೆದ ಐತಾಳರ ತಾಳ್ಮೆಯ ಬಗ್ಗೆ ಅಪಾರವಾದ ಗೌರವ ಬರುತ್ತದೆ. ಯಾವುದೇ ಫಿರ್ಯಾದಿಲ್ಲದೆ, ತಮ್ಮ ಪಾಡಿಗೆ ತಾವು ಬರೆದುಕೊಂಡು ಹೋಗುವ ಐತಾಳರ ಹುಮ್ಮಸ್ಸಿನಲ್ಲಿ ಅರ್ಧಭಾಗದಷ್ಟಾದರೂ ನನ್ನಂಥವರಿಗೆ ಆ ಪರಮಾತ್ಮ ಕೊಡಬಾರದೇ ಎಂದೆಸುತ್ತದೆ. ಇನ್ನು ಹತ್ತುವರ್ಷದ ನಂತರ ನಾನೀ ಕಾದಂಬರಿಯನ್ನು ಮತ್ತೆ ಓದಿದಲ್ಲಿ, ಪ್ರಭಾಕರನೊಂದಿಗೆಯಲ್ಲದಿದ್ದರೂ, ಜಯರಾಮನೊಂದಿಗೆ ನನ್ನನ್ನು ನಾನು ಸಮೀಕರಿಸಿಕೊಳ್ಳಬಹುದೇನೋ. ಈ ವಲಸೆ ಅನ್ನುವ ಪ್ರಕ್ರಿಯೆಯನ್ನು ಜೀರ್ಣಿಸಿಕೊಳ್ಳುವುದಕ್ಕೆ ಒಂದು ಪೀಳಿಗೆಯ ಸಮಯ ಸಾಕಾಗಲಾರದು. ಅದು ಸುಮಾರು ಐದು ದಶಕಗಳ ಹಿಂದೆ ಅಮೆರಿಕೆಗೆ ವಲಸೆಯಾದ ಐತಾಳರಿಗೂ ಸತ್ಯ. ಇತ್ತೀಚೆಗೆ ಬಂದ ನಮಗೂ ಸತ್ಯ.
ಕಾದಂಬರಿಯ ಕರಡನ್ನು ಅಭಿಮಾನದಿಂದ ನನ್ನಿಂದ ಓದಿಸಿದಕ್ಕಾಗಿ ಐತಾಳರಿಗೆ ಧನ್ಯವಾದಗಳು.

ಗುರುಪ್ರಸಾದ ಕಾಗಿನೆಲೆ.
ಸೆಪ್ಟೆಂಬರ್ ೧೨, ೨೦೧೧

 Posted by at 8:30 AM