Jun 162009
 

ಇದು, ಕನ್ನಡವನ್ನು ಶಾಸ್ತ್ರೀಯಭಾಷೆಯೆಂದು ಗುರುತಿಸಿರುವ ಸನ್ನಿವೇಶ. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಗಳ ಪಾರಂಪರಿಕ ನೆಲೆಗಳನ್ನು ಕುರಿತ ತಿಳಿವಳಿಕೆಯನ್ನು, ಆಸಕ್ತರಾದವರಿಗೆ ತಲುಪಿಸುವುದು ಇಂದಿನ ಅಗತ್ಯ ಇಂತಹ ಅಗತ್ಯಗಳನ್ನು ಪೂರೈಸಲೆಂದು ಈ ವಿದ್ಯುನ್ಮಾನ ತಾಣವು (ವೆಬ್ ಸೈಟ್) ರೂಪಿತವಾಗಿದೆ. ಇದು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಇರುವ ಮಾಹಿತಿ ತಾಣ. ಕನ್ನಡ ಭಾಷೆಯನ್ನು ತಿಳಿಯದವರಿಗಾಗಿ ಇಂಗ್ಲಿಷಿನಲ್ಲಿಯೂ ಮತ್ತು ಕನ್ನಡ ಬಂದರೂ ಸಂಸ್ಕೃತಿ-ಸಾಹಿತ್ಯಗಳಲ್ಲಿ ಪರಿಣಿತರಲ್ಲದವರಿಗಾಗಿ ಕನ್ನಡದಲ್ಲಿಯೂ ಈ ವೆಬ್ ಸೈಟ್ ಅನ್ನು ರೂಪಿಸಲಾಗಿದೆ. ಆದ್ದರಿಂದ ಮಾಹಿತಿ ಮತ್ತು ವಿಶ್ಲೇಷಣೆಗಳು ಇಲ್ಲಿನ ಮೂಲ ನೆಲೆಗಳು. ಕನ್ನಡದಲ್ಲಿ ನಡೆದಿರುವ ಕೆಲಸವನ್ನು ಅನ್ಯಭಾಷೆಗಳವರಿಗೆ ಮತ್ತು ಅವರು ನಮ್ಮ ನಾಡು-ನುಡಿಗಳ ಬಗ್ಗೆ ಮಾಡಿರುವ ಕೆಲಸವನ್ನು ಕನ್ನಡ ಬಲ್ಲವರಿಗೆ ತಲುಪಿಸುವುದೂ ನಮ್ಮ ಆಶಯವಾಗಿದೆ. ಕರ್ನಾಟಕದ ಬಹುಭಾಷಿಕ ಮತ್ತು ಬಹುಸಾಂಸ್ಕೃತಿಕ ಆಯಾಮಗಳನ್ನು ಇಲ್ಲಿ ಗಮನಿಸಲಾಗಿದೆ.

ಈ ವೆಬ್ ಸೈಟ್ ನಲ್ಲಿ ಭಾಷೆ, ಸಾಹಿತ್ಯ, ಶಾಸನಗಳು, ಕಲೆಗಳು ಮತ್ತು ವಾಸ್ತುಶಿಲ್ಪ, ಜಾನಪದ ಮತ್ತು ಜನಪದ ಕಲೆಗಳು, ಪಾರಂಪರಿಕ ಜ್ಞಾನದ ಆಕರಗಳು, ಸಂಶೋಧಕರು, ಪ್ರಮುಖ ಸ್ಥಳಗಳು, ಧರ್ಮಗಳು, ಕರ್ನಾಟಕ ಅಧ್ಯಯನಗಳು ಮತ್ತು ನಾಡು, ನುಡಿ ಹಾಗೂ ಪ್ರಮುಖ ವ್ಯಕ್ತಿಗಳು ಎಂಬ ಹನ್ನೊಂದು ವಿಭಾಗಗಳಲ್ಲಿ ವಿಷಯಗಳನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ನಮೂದಿಗೂ, ಪೂರಕವಾದ ಅಧ್ಯಯನ ಸಾಮಗ್ರಿಯನ್ನು ಸೂಚಿಸಲಾಗಿದೆ. ಅಗತ್ಯವಿರುವ ನಮೂದುಗಳಿಗೆ ದೃಶ್ಯ ಹಾಗೂ ಶ್ರವ್ಯರೂಪದ ಮಾಹಿತಿಗಳನ್ನೂ ಒದಗಿಸಲಾಗುತ್ತದೆ. ಒಂದು ನಮೂದನ್ನು ಓದುವಾಗ ಸಂಬಂಧಿಸಿದ ಇತರ ನಮೂದುಗಳಿಗೂ ಲಿಂಕ್ ಅನ್ನು ಒದಗಿಸಲಾಗಿದೆ. ಈ ತಾಣದಲ್ಲಿ ಹದಿನೇಳನೆಯ ಶತಮಾನದ ಕೊನೆಯವರೆಗಿನ ಆಗುಹೋಗುಗಳಿಗೆ ಒತ್ತು ಕೊಡಲಾಗಿದೆ. ಅನಂತರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳು ಹೊಸ ದಿಕ್ಕನ್ನು ಹಿಡಿದವೆನ್ನುವುದು ಇಲ್ಲಿನ ಗ್ರಹಿಕೆ. ಹೊಸಗನ್ನಡದ ಬಳಕೆಯೂ ಸರಿಸುಮಾರು ಆಗಲೇ ಮೊದಲಾಯಿತು.  ಇದು ನಿರಂತರವಾಗಿ ಬೆಳೆಯುವ ತಾಣ. ಹೊಸ ನಮೂದುಗಳನ್ನು ಸೇರಿಸಲು, ಇರುವ ನಮೂದುಗಳಿಗೆ ಹೊಸ ಮಾಹಿತಿಯನ್ನು ಸೇರಿಸಲು, ಅರೆ-ಕೊರೆಗಳನ್ನು ಸರಿಪಡಿಸಿಕೊಳ್ಳಲು ಸದಾ ಅವಕಾಶವಿರುತ್ತದೆ. ಈ ತಾಣವನ್ನು ಉಪಯೋಗಿಸುವವರ ಪ್ರತಿಕ್ರಿಯೆಗಳು ಕೂಡ ಇದು ಇನ್ನಷ್ಟು ಒಪ್ಪವಾಗಲು ನೆರವಾಗುತ್ತದೆ. ಕರ್ನಾಟಕವನ್ನು ಕುರಿತು ತಿಳಿಯಲು ಬಯಸುವ ಎಲ್ಲ ಆಸಕ್ತರಿಗೂ ಇದು ಉಪಯುಕ್ತವಾದ ತಾಣವಾಗುವುದೆಂದು ನಮ್ಮ ನಂಬಿಕೆ.

ಈ ತಾಣವು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥಾನದಲ್ಲಿ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್) ರೂಪಿತವಾಗಿದೆ. ಕರ್ನಾಟಕದ ಹಿರಿಯ ವಿದ್ವಾಂಸರಾದ ಪ್ರೊ. ಎಂ. ಚಿದಾನಂದಮೂರ್ತಿ,  ಪ್ರೊ. ಎಂ.ಎಂ. ಕಲಬುರ್ಗಿ, ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರೀ, ಪ್ರೊ. ಕೆ.ವಿ.ನಾರಾಯಣ ಮತ್ತು ಡಾ. ಎನ್.ಎಸ್. ತಾರಾನಾಥ ಅವರು ಸದಸ್ಯರಾಗಿರುವ ಸಲಹಾ ಸಮಿತಿಯು ಈ ಯೋಜನೆಯ ಹೊಳಹು ಹಾಕಿತು. ಭಾಷಾಸಂಸ್ಥಾನದ ನಿರ್ದೇಶಕರಾದ ಪ್ರೊ. ಉದಯನಾರಾಯಣಸಿಂಗ್ ಮತ್ತು ಪ್ರೊ. ಕೆ.ವಿ. ನಾರಾಯಣ ಅವರು ಸಲಹೆಗಾರರಾಗಿ ಅಮೂಲ್ಯ ಸೂಚನೆಗಳನ್ನು ನೀಡಿದ್ದಾರೆ. ಈ ಯೋಜನೆಗೆ ಶ್ರೀ ಲಿಂಗದೇವರು ಹಳೇಮನೆಯವರು ಶೈಕ್ಷಣಿಕ ಸಂಯೋಜಕರಾಗಿಯೂ ಡಾ. ಮಲ್ಲಿಕಾರ್ಜುನ ಅವರು ತಾಂತ್ರಿಕ ಸಂಯೋಜಕ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು ಈ ಯೋಜನೆಯ ಸಂಪನ್ಮೂಲ ವ್ಯಕ್ತಿಗಳು. ಶ್ರೀಮತಿ ಸುನೀತಾ ರಾಜೇಂದ್ರ, ಶ್ರೀ ಕೆ.ಎನ್. ಅಶೋಕ್ ಮತ್ತು ಶ್ರೀ ಕೇಶವಮೂರ್ತಿಯವರು ಅಗತ್ಯವಾದ ತಾಂತ್ರಿಕ ನೆರವನ್ನು ನೀಡಿದ್ದಾರೆ. ಈಗ ಆಂಶಿಕವಾಗಿ ಬಿಡುಗಡೆಯಾಗುತ್ತಿರುವ ಈ ವೆಬ್ ಸೈಟ್ ಅನತಿಕಾಲದಲ್ಲಿಯೇ ಪೂರ್ಣಪ್ರಮಾಣವನ್ನು ಪಡೆಯಲಿದೆ.

 Posted by at 7:09 PM