Mar 012011
 

ಕನ್ನಡ ಸಾಹಿತ್ಯ ರಂಗದ ಐದನೆಯ ವಸಂತ ಸಾಹಿತ್ಯೋತ್ಸವು ಕ್ಯಾಲಿಫ಼ೋರ್ನಿಯಾದ ಸ್ಯಾನ್ ಫ಼್ರಾನ್ಸಿಸ್ಕೋ ನಗರದ ಸಮೀಪದ ವುಡ್‌ಸೈಡ್ ಎಂಬ ಊರಿನಲ್ಲಿ ಏಪ್ರಿಲ್ ೩೦ ಮತ್ತು ಮೇ ೧ ರಂದು ನಡೆಯಲಿರುವ ಸಂಗತಿ, ಸಾಹಿತ್ಯಾಸಕ್ತಿಗಳಾದ ತಮ್ಮ ಗಮನಕ್ಕೆ ಬಂದಿದೆಯೆಂದು ನಾವು ಭಾವಿಸಿದ್ದೇವೆ. ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಸಹಯೋಗ ಮತ್ತು ಅಲ್ಲಿನ ಸಾಹಿತ್ಯ ಗೋಷ್ಠಿಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀವು ಇದೇ ಅಂತರ್ಜಾಲ ತಾಣದಲ್ಲಿ ಪಡೆಯಬಹುದು.ಈ ಸಾಹಿತ್ಯೋತ್ಸವದ ಅಂಗವಾಗಿ ಆಯೋಜಿಸಲಿರುವ ಒಂದು ಪ್ರಮುಖ ಕಾರ್ಯಕ್ರಮ ‘ಸಾಹಿತ್ಯ ಸಂಕಿರಣ’; ಇದನ್ನು ಆಯೋಜಿಸಿ, ಪ್ರಸ್ತುತ ಪಡಿಸುವ ಜವಾಬುದಾರಿ ಸಾಹಿತ್ಯ ಗೋಷ್ಠಿಯ ಮೇಲಿದೆ. ಅಮೇರಿಕಾದ ಕನ್ನಡದ ಬರಹಗಾರರನ್ನು – ಉದಯೋನ್ಮುಖ ಮತ್ತು ನೆಲೆಯೂರಿದ – ಉತ್ತೇಜಿಸಿ, ಗೌರವಿಸಿವುದು ಇದರ ಉದ್ದೇಶ. ಪ್ರತಿಯೊಬ್ಬ ಲೇಖಕನಿಗೂ ತಾನು ರಚಿಸಿದ ಕೃತಿಯನ್ನು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ವಾಚಿಸುವ ಅಪೇಕ್ಷೆ ಇರುವುದು ಸಹಜ. ಇಂತಹ ಒಂದು ಸುವರ್ಣಾವಕಾಶವನ್ನು ಈ ‘ಸಾಹಿತ್ಯ ಸಂಕಿರಣ’ ನಿಮಗೆ ನೀಡುತ್ತಿದೆ.ಈ ‘ಸಾಹಿತ್ಯ ಸಂಕಿರಣ’ ದಲ್ಲಿ ನೀವು ಬರೆದ ಕವನ, ಸಣ್ಣಕಥೆ, ಪ್ರಬಂಧ, ಕಿರು ವಿಮರ್ಶೆ, ಅನುವಾದಿತ ರಚನೆ, ಹಾಸ್ಯ ಚಟಾಕಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರದ ಕ್ರೃತಿಯನ್ನು ಮಂಡಿಸಬಹುದಾಗಿದೆ. (ಇದರಲ್ಲಿ ಅನ್ಯರು ರಚಿಸಿದ ಕೃತಿಯನ್ನು ನೀವು ವಾಚನ ಮಾಡುವ ಹಾಗಿಲ್ಲ!) ಈ ಕಾರ್ಯಕ್ರಮದಲ್ಲಿ ನಾವು ಆದಷ್ಟು ಹೆಚ್ಚಿನ ಲೇಖಕರಿಗೆ ವೇದಿಕೆಯನ್ನು ನೀಡಲು ಉತ್ಸುಕರಾಗಿದ್ದೇವೆ. ವಸ್ತು ವಿಷಯದ ಆಯ್ಕೆ ಮತ್ತು ಅದನ್ನು ಅಭಿವ್ಯಕ್ತಪಡಿಸುವ ತಂತ್ರದ ಬಳಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನಿಮಗೆ ಬಿಡಲಾಗಿದೆ. ಗದ್ಯದ ಮಂಡನೆಗೆ ಕವನದ ವಾಚನಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದೆಂಬುದನ್ನು ಮನಗೊಂಡು, ಗದ್ಯಕ್ಕೆ ಸುಮಾರು ೮ ನಿಮಿಷ ಮತ್ತು ಪದ್ಯಕ್ಕೆ ೫ ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿಮ್ಮ ಸಾಹಿತ್ಯಿಕ ರಚನೆಯ ಮಂಡನೆಗೆ ನೀಡಿದ ಕಾಲಾವಧಿಯನ್ನು ದಯವಿಟ್ಟು ಮೀರಬಾರದೆಂದು ಕೋರುತ್ತೇವೆ.ಇನ್ನು ತಡವೇತಕೆ? ನಿಮ್ಮ ಬರವಣಿಗೆಯನ್ನು ಆರಂಭಿಸಿ! ನಿಮ್ಮ ಮನಸ್ಸಿನ ತುಡಿತಕ್ಕೊಂದು ಸೃಜನಶೀಲ ಅಭಿವ್ಯಕ್ತಿ ನೀಡಿ! ಸಾವಧಾನದಿಂದ ಅದನ್ನು ಪರಿಷ್ಕರಿಸಿ, ನಂತರ ನಮಗೆ ಕಳುಹಿಸಿಕೊಡಿ! ಉತ್ಸುಕ ಆಭಿಮಾನಿಗಳ ವೃಂದವನ್ನು ನಿಮಗೆ ಒದಗಿಸುವ ಭರವಸೆಯನ್ನು ನಾವು ನೀಡುತ್ತೇವೆ!  ನಿಮ್ಮ ರಚನೆ (ಇಲ್ಲಿಯವರೆಗೆ ಬೇರೆಲ್ಲಿಯೂ ಪ್ರಕಟವಾಗಿರದ ಹೊಚ್ಚ ಹೊಸ ಲೇಖನಗಳಿಗೆ ಆದ್ಯತೆ ಉಂಟು) ಮತ್ತು ನಿಮ್ಮ ಕಿರು ಪರಿಚಯವನ್ನು (೮೦ ಪದಗಳಿಗೆ ಮೀರದಂತೆ), ನಮಗೆ ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ ೩೧, ೨೦೧೧.  ಸಂಪರ್ಕ: ವಿಶ್ವನಾಥ್ ಹುಲಿಕಲ್ (vhulikal@yahoo.com ; 408-343-3900) ‘ಸಾಹಿತ್ಯ ಸಂಕಿರಣ’ದಲ್ಲಿ ನಿಮ್ಮ ಕೃತಿಯ ಮಂಡನೆಗೆ ಅವಕಾಶ ಮಾಡಿಕೊಡುವ ನಿರ್ಧಾರ ಮಂಡಳಿಯದು. ಸ್ವೀಕೃತ ಕೃತಿಗಳ ಪಟ್ಟಿ ಏಪ್ರಿಲ್ ೧೫ ರ ವೇಳೆಗೆ ಸಿದ್ಧವಾಗಿ, ನಿಮಗೆ ತಿಳಿಸಲಾಗುತ್ತದೆ.ಈ ಕಾರ್ಯಕ್ರಮದಲ್ಲಿ ನೀವು ಉತ್ಸಾಹದಿಂದ ಪಾಲುಗೊಳ್ಳುವುದನ್ನು ಎದುರುನೋಡುತ್ತೇವೆ.

 Posted by at 9:01 PM

ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವ

 ೨೦೧೧ ನೇ ವಸಂತ ಸಾಹಿತ್ಯೋತ್ಸವ  Comments Off on ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವ
Jan 282011
 

ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವದ ಬಗ್ಗೆ ಈಗಾಗಲೇ ಬಂದ ಪ್ರಕಟನೆಯನ್ನು ಸಾಹಿತ್ಯಾಭಿಮಾನಿಗಳೆಲ್ಲರೂ ನೋಡಿರುವರೆಂದು ನಂಬಿದ್ದೇವೆ. ಈ ಪ್ರಕಟನೆಯಲ್ಲಿ ಸಾಹಿತ್ಯೋತ್ಸವದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಿದ್ದೇವೆ. ದಯವಿಟ್ಟು ಗಮನಿಸಿ.

ಹಿಂದೆಯೇ ಹೇಳಿದಂತೆ ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ ಸಹಯೋಗದೊಂದಿಗೆ ಮತ್ತು ಅಲ್ಲಿನ ಸಾಹಿತ್ಯ ಗೋಷ್ಠಿ ಸಂಸ್ಥೆಯ ಸಹಕಾರದೊಂದಿಗೆ ನಡೆಯುತ್ತಿದೆ.
ಈ ಕಾರ್ಯಕ್ರಮ ಏಪ್ರಿಲ್ ೩೦ (ಶನಿವಾರ) ಮತ್ತು ಮೇ ೧ (ಭಾನುವಾರ), ೨೦೧೧ ಸಾನ್ ಫ಼್ರಾನ್ಸಿಸ್ಕೋಗೆ ಸುಮಾರು ೩೦ ಮೈಲಿ ದಕ್ಷಿಣದಲ್ಲಿರುವ ವುಡ್‌ಸೈಡ್ ಎಂಬ ಊರಿನ ವುಡ್‌ಸೈಡ್ ಹೈ ಸ್ಕೂಲ್‌ನ ಸುಂದರ ನಿವೇಶನದಲ್ಲಿ  ನಡೆಯುತ್ತಿದೆ. ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಸುಮಾರು ೧:೩೦ ಹೊತ್ತಿಗೆ ಮೊದಲಾಗಿ ರಾತ್ರಿ ೧೦:೩೦ ವರೆಗೆ ನಡೆದು, ಮತ್ತೆ ಮರುದಿನ ಬೆಳಿಗ್ಗೆ ಸುಮಾರು ೮ ರಿಂದ ಮಧ್ಯಾಹ್ನ ೪ರ ವರೆಗೂ ನಡೆಯುತ್ತದೆ. ಹೊರ ಊರುಗಳಿಂದ ಬಂದು ಹೋಗುವವರಿಗೆ ಅನುಕೂಲವಾಗಲೆಂದೇ ಕಾರ್ಯಕ್ರಮ ಸಮಗಳನ್ನು ಈ ರೀತಿ ನಿಯೋಜಿಸಲಾಗಿದೆ. ಉತ್ತಮ ಊಟ ಉಪಾಹಾರಗಳನ್ನೂ, ತಕ್ಕ ವಸತಿ ಸೌಕರ್ಯಗಳನ್ನೂ ಸಿದ್ಧಗೊಳಿಸಲಾಗುತ್ತಿದೆ. ಕೆಲಸಗಳು ಹುರುಪಿನಿಂದ ಸಾಗುತ್ತಿವೆ.
ಈ ಸಾಹಿತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಬರಹಗಾರರೂ ವಿಮರ್ಶಕರೂ ಆದ ಡಾ. ಗಿರಡ್ಡಿ ಗೋವಿಂದರಾಜ ಅವರು ಬರುತ್ತಿದ್ದಾರೆ. ಅಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಾಹಿತಿಗಳಲ್ಲೊಬ್ಬರಾದ ಶ್ರೀಮತಿ ಭುವನೇಶ್ವರಿ ಹೆಗಡೆ ಅವರೂ ಬರುತ್ತಿದ್ದಾರೆ. ಒಂದು ಕಡೆ ಗಂಭೀರ ಸಾಹಿತ್ಯ ವಿಷಯಗಳತ್ತ ನಿಮ್ಮ ಮನಸ್ಸನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಿಮ್ಮ ಮನಸ್ಸನ್ನು ಹಾಸ್ಯಕಿರಣಗಳಿಂದ ಹಗುರಗೊಳಿಸುವ ಕಾರ್ಯವೂ ನಡೆಯುತ್ತದೆ.  ಡಾ. ಗಿರಡ್ಡಿಯವರು ತಮ್ಮ ಕಥೆ, ಕವಿತೆ, ಪ್ರಬಂಧ  ಮತ್ತು ವಿಮರ್ಶೆಗಳಿಂದ ಇಂದಿನ ಪ್ರಮುಖ ಸಾಹಿತಿಗಳಲ್ಲೊಬ್ಬರೆಂದು ಪ್ರಖ್ಯಾತರಾಗಿದ್ದಾರೆ. ವಿಮರ್ಶೆಯ ಕ್ಷೇತ್ರದಲ್ಲಿ ಅವರ ಕೀರ್ತಿ ನಾಡಿನಾದ್ಯಂತ ಹರಡಿದೆ. ಶ್ರೀಮತಿ ಭುವನೇಶ್ವರಿ ಹೆಗಡೆಯವರ ಹಾಸ್ಯ ಲೇಖನಗಳನ್ನೋದಿ ಆನಂದಿಸದವರಾರು? ಹೀಗೆ ಜೀವನ ಸಾಹಿತ್ಯಗಳ ವಿವಿಧ ಮುಖಗಳನ್ನು ಪರಿಚಯಿಸುವ ಇಂಥ ಇಬ್ಬರು ಉತ್ತಮ ಸಾಹಿತಿಗಳು ಇಲ್ಲಿ ಬರುತ್ತಿರುವುದು ಒಂದು ವೈಶಿಷ್ಟ್ಯ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗ ತನ್ನ ಐದನೇ ಪ್ರಕಟನೆಯನ್ನು ಲೋಕಾರ್ಪಣ ಮಾಡುತ್ತಿದೆ. ಅಮೆರಿಕದ ಕನ್ನಡಿಗರು ಬರೆದ ಸುಮಾರು ೨೫ ಲಘು ಪ್ರಬಂಧಗಳ ಸಂಕಲನ ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಮತ್ತು  ಶ್ರೀ ಎಂ. ಆರ್. ದತ್ತಾತ್ರಿಯವರ ಸಂಪಾದಕತ್ವದಲ್ಲಿ ಹೊರಬರುತ್ತಿದೆ. ಪುಸ್ತಕ ಇನ್ನೇನು ಅಚ್ಚಿನಮನೆಗೆ ಹೋಗುತ್ತಿದೆ.
ಇದರ ಜೊತೆಗೆ ಈ ಸಾಹಿತ್ಯೋತ್ಸವದಲ್ಲಿ, ಇಲ್ಲಿನವರೇ ಬರೆದ, ಇದುವರೆಗೆ ಪ್ರಕಟವಾಗಿಲ್ಲದ, ಹೊಸ ಪುಸ್ತಕಗಳನ್ನೂ ಲೋಕಾರ್ಪಣೆ ಮಾಡುವ ಅವಕಾಶವಿರುತ್ತದೆ. ಆ ಬಗ್ಗೆ ಆಸಕ್ತಿಯುಳ್ಳ ಲೇಖಕರು ನಮ್ಮನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.
ಮೇ ೨೦೦೯ರ ತರುವಾಯ ಇಲ್ಲಿನವರು ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಜನರ ಗಮನಕ್ಕೆ ತರುವ ಸಲುವಾಗಿ ‘ನಮ್ಮ ಬರಹಗಾರರು’ ಕಾರ್ಯಕ್ರಮ ನಿಯೋಜಿಸಲಾಗಿದೆ. ಬರಹಗಾರರನ್ನೂ, ಅವರ ಪುಸ್ತಕಗಳನ್ನೂ, ಅವುಗಳ ಬಗ್ಗೆ ಯುಕ್ತ ರೀತಿಯ ವಿಮರ್ಶೆಗಳನ್ನೂ ಜನಕ್ಕೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ. ಇದರಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ದಯವಿಟ್ಟು ನಮ್ಮನ್ನು ಸಂಪರ್ಕ ಮಾಡಿ.
ಇಲ್ಲಿನ ಕನ್ನಡಿಗರು ಬರೆದ ಪುಸ್ತಕಗಳು ಎಷ್ಟೋ ವೇಳೆ ಇಲ್ಲಿನವರಿಗೇ ದೊರೆಯುವುದಿಲ್ಲ – ಲೇಖಕರು ತಾವಾಗಿ ‘ವಿಶ್ವಾಸಪೂರ್ವಕ’ ಕೊಟ್ಟ ಹೊರತು! ಈ ಪರಿಸ್ಥಿತಿ ಬದಲಾಗಬೇಕು. ಇಲ್ಲಿನವರು ಬರೆದ ಪುಸ್ತಕಗಳನ್ನು ನಾವು ಇಲ್ಲಿಯೇ ಕೊಳ್ಳುವಂತಾಗಬೇಕು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ನಮ್ಮ ಸಾಹಿತ್ಯೋತ್ಸವದಲ್ಲಿ ಒಂದು ಪುಸ್ತಕ ಮಳಿಗೆ ತೆರೆಯುತ್ತೇವೆ. ಇಲ್ಲಿನ ಲೇಖಕರು ತಮ್ಮ ಪುಸ್ತಕಗಳನ್ನು ನಮ್ಮ ರಂಗದ ಮೂಲಕ ಅಲ್ಲಿ ಮಾರಾಟಮಾಡಬಹುದು.
ನಮ್ಮ  ಕನ್ನಡಿಗರ ಸೃಜನಶೀಲತೆಗೆ ಇಂಬುಗೊಡುವ ಕಾರ್ಯಕ್ರಮ ಕವಿಗೋಷ್ಠಿ. ಇದರಲ್ಲಿ ಭಾಗವಹಿಸಲು ಇಚ್ಛೆಯುಳ್ಳವರಿಗೆ ನಮ್ಮ ಆದರದ ಸ್ವಾಗತ. ಈ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನೊಳಗೊಂಡ ವಿಶೇಷ ಪ್ರಕಟನೆಯೊಂದು ಸದ್ಯದಲ್ಲೇ ಬರಲಿದೆ. ಅದನ್ನು ಗಮನಿಸಿ.
ವಸಂತ ಸಾಹಿತ್ಯೋತ್ಸವ ಒಂದು ಅಪೂರ್ವ ಪ್ರಯೋಗ, ಒಂದು ಅಪೂರ್ವ ಅನುಭವ. ಬಹಳ ಮುತುವರ್ಜಿಯಿಂದ, ಪೂರ್ವಾಲೋಚನೆಯಿಂದ ಸಿದ್ಧಗೊಳಿಸಿದ ಕಾರ್ಯಕ್ರಮಗಳು, ಬಿಗಿಯಾಗಿ ಯಾರ ಸಮಯವನ್ನೂ ವ್ಯರ್ಥಗೊಳಿಸದೆ ಕಾರ್ಯನಿರ್ವಹಣೆ ಮಾಡುವ ಶಿಸ್ತು, ಉತ್ತಮವಾದ ಮನರಂಜನೆ, ಸಹೃದಯ ವಾತಾವರಣ, ಹಿತವಾದ ಊಟೋಪಚಾರ, ಸನ್ಮಿತ್ರರೊಂದಿಗೆ ಹಂಚಿಕೊಳ್ಳುವ ರಸನಿಮಿಷಗಳು… ಇವೆಲ್ಲ ನಿಮಗೆ ಅಲ್ಲಿ ಲಭ್ಯ. ಕಾರ್ಯಕ್ರಮ, ನೋಂದಣಿ, ಇತ್ಯಾದಿ ವಿವರಗಳು ಸಿದ್ಧವಾದಂತೆಲ್ಲ ಅವನ್ನು ಈ ತಾಣದಲ್ಲೂ,  ಮತ್ತು  ತಾಣಗಳಲ್ಲೂ ಪ್ರಕಟಿಸುತ್ತೇವೆ.
ಸಂಪರ್ಕ : ಎಚ್.ವೈ.ರಾಜಗೋಪಾಲ್ (hyrajagopal@gmail.com); ವಲ್ಲೀಶ ಶಾಸ್ತ್ರಿ (vshastry@yahoo.com); ಅಲಮೇಲು ಐಯಂಗಾರ್ (iyengars@gmail.com); ಪದ್ಮಾ ರಾವ್ (padmita@hotmail.com)
ಮತ್ತೊಮ್ಮೆ ನಿಮ್ಮೆಲ್ಲರಿಗೂ ಸುಸ್ವಾಗತ.
– ಎಚ್.ವೈ. ರಾಜಗೋಪಾಲ್

 Posted by at 2:31 PM