Apr 042012
 

ಅಮೆರಿಕದ ಹಿರಿಯ ಕನ್ನಡಿಗರಲ್ಲಿ ಒಬ್ಬರಾದ ಡಾ|| ಎಚ್. ಕೆ. ಚಂದ್ರಶೇಖರ್ ಅವರೆ,

ತಮ್ಮ ಸಹಸ್ರಚಂದ್ರ ದರ್ಶನದ ಶುಭಸಂದರ್ಭದಲ್ಲಿ, ಕನ್ನಡ ಸಾಹಿತ್ಯ ರಂಗದ ಪರವಾಗಿ ನಮ್ಮ ಹಾರ್ದಿಕ ಶುಭಾಶಯಗಳನ್ನು ಕೋರಲು ನನಗೆ ಅತ್ಯಂತ ಆನಂದವೂ ಹೆಮ್ಮೆಯೂ ಆಗುತ್ತಿದೆ. ಸಾಹಿತ್ಯ ರಂಗ ಹುಟ್ಟಿದಾಗಿನಿಂದ ತಾವು ಅದರ ನಾಯಕತ್ವದ ಸಕ್ರಿಯ ಭಾಗವಾಗಿದ್ದೀರಿ. ರಂಗದ ಕಾರ್ಯಕಾರೀ ಸಮಿತಿಯ ಉಪಾಧ್ಯಕ್ಷರಾಗಿ, ಆಡಳಿತ ಮಂಡಲಿಯ ಅಧ್ಯಕ್ಷರಾಗಿ ಮತ್ತು ಸಂಪಾದಕ ಮಂಡಲಿಯ ಸದಸ್ಯರಾಗಿ ನಮಗೆಲ್ಲಾ ತಮ್ಮ ಮುಂದಾಳತ್ವವನ್ನು ನೀಡಿದ್ದೀರಿ. ಸಾಹಿತ್ಯ ರಂಗ ಈವರೆಗೆ ನಡೆಸಿರುವ ಪ್ರತಿಯೊಂದು ಸಮ್ಮೇಳನದಲ್ಲೂ ಸಕ್ರಿಯವಾಗಿ ಭಾಗವಹಿಸಿ ನಮಗೆ ಮಾರ್ಗದರ್ಶನ ನೀಡಿದ್ದೀರಿ. ರಂಗದ ಕಾರ್ಯಚಟುವಟಿಕೆಗಳಿಗೆ ಬೇಕಾದ ಹಣವನ್ನು ಶೇಖರಿಸುವಲ್ಲಿ ತಾವು ಮಾಡಿರುವ ಸಹಾಯ ಅತ್ಯಮೂಲ್ಯವಾದುದು, ಜೊತೆಗೆ ತಾವೂ ತಮ್ಮ ಶ್ರೀಮತಿಯವರೂ ಸೇರಿ ಮಾಡಿರುವ ವೈಯಕ್ತಿಕ ಧನಸಹಾಯವನ್ನು ನಾವು ಮನಸಾರೆ ಕೃತಜ್ಞತೆಯಿಂದ ಈ ಸಂದರ್ಭದಲ್ಲಿ ನೆನೆಯುತ್ತೇವೆ.

ಕನ್ನಡ ಸಾಹಿತ್ಯ ರಂಗವೇ ಅಲ್ಲದೇ ನ್ಯೂಯಾರ್ಕ್ ಕನ್ನಡ ಕೂಟದ ಮೂಲಕ ತಾವು ಮಾಡಿರುವ ನಾಲ್ಕು ದಶಕಗಳಿಗೂ ಮೀರಿದ ಕನ್ನಡ ಸೇವೆ ಅಮೆರಿಕದ ಕನ್ನಡಿಗರ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನವನ್ನು ಗಳಿಸಿದೆ. ಅಮೆರಿಕದಲ್ಲಿ ಮೊದಲ ಬಾರಿಗೆ ಕನ್ನಡ ಸಮ್ಮೇಳನಗಳನ್ನು ಆಚರಿಸುವ ಯೋಜನೆಯನ್ನು ಪರಿಕಲ್ಪಿಸಿದವರು ನೀವು. ಆಚಾರ್ಯ ಎ.ಎನ್. ಮೂರ್ತಿರಾಯರ ‘ಪೂರ್ವಸೂರಿಗಳೊಡನೆ’ ಪುಸ್ತಕವನ್ನು ನ್ಯೂ ಯಾರ್ಕ್ ಕನ್ನಡ ಕೂಟದ ಮೂಲಕ ಪ್ರಕಟಿಸಿ ಇಲ್ಲಿನ ಕನ್ನಡ ಸ೦ಸ್ಥೆಗಳು ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟು ಮೌಲಿಕವಾದ ಕೆಲಸ ಮಾಡಬಹುದೆ೦ದು ತೋರಿಸಿಕೊಟ್ಟಿರಿ. ಸ್ವತಃ ಅನೇಕ ಲೇಖನಗಳನ್ನು ಬರೆದಿರುವುದಲ್ಲದೆ, ನೀವು ಭಾಷಾ೦ತರಿಸಿದ ‘ಭಾರತದ ಬೃಹತ್ ಬೇಲಿ’ ಪುಸ್ತಕದ ಮೂಲಕ ಬ್ರಿಟಿಷ್ ವಸಾಹತುಶಾಹಿ ಚರಿತ್ರೆಯ ಮರೆತುಹೋದ ಒ೦ದು ಪರಿಚ್ಛೇದವನ್ನು ಮತ್ತೆ ನಮ್ಮ ಕಣ್ಣೆದುರಿಗೆ ಇರಿಸಿದಿರಿ. ಗಾ೦ಧಿಯನ್ನು ನ್ಯೂ ಯಾರ್ಕ್ ಜನರ ಕಣ್ಣ ಮು೦ದೆ ತ೦ದಿಟ್ಟಿರಿ. ಕನ್ನಡಿಗರು ಮಾತ್ರವಲ್ಲದೆ, ಇಡೀ ಭಾರತೀಯ ಸಮಾಜವನ್ನೂ ದಾಟಿ ಒಟ್ಟಿನಲ್ಲಿ ಇಲ್ಲಿನ ಅಮೆರಿಕನ್ ಸಮಾಜಕ್ಕೂ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಯನ್ನು ಮಾಡುವುದರ ಮೂಲಕ ತಾವು ಸಲ್ಲಿಸಿರುವ ಸೇವೆಯ ಜೊತೆ ಜೊತೆಗೇ ಕನ್ನಡ ಮತ್ತು ಕನ್ನಡಿಗರ ಬಗ್ಗೆ ತಾವು ತೋರಿರುವ ಕಾಳಜಿ ಗಮನಾರ್ಹವಾದುದು. ತಮ್ಮ ಕನ್ನಡಸೇವೆ ಇದೇ ರೀತಿ ಮುಂದುವರೆಯಲಿ. ಕನ್ನಡ ಸಾಹಿತ್ಯ ರಂಗದ ಚಟುವಟಿಕೆಗಳ ಬಗ್ಗೆ ಹಿಂದೆ ತೋರಿರುವ ವಿಶ್ವಾಸ ಮತ್ತು ಕಾಳಜಿಯನ್ನು ಮುಂದೆಯೂ ತೋರಬೇಕೆಂದು ರಂಗದ ಪರವಾಗಿ ಕೇಳಿಕೊಳ್ಳುತ್ತೇನೆ. ತಾವು ಎಂಬತ್ತು ದಾಟಿರುವ ಈ ಸಂದರ್ಭದಲ್ಲಿ ಭಗವಂತನು ನಿಮಗೂ ನಿಮ್ಮ ಕುಟುಂಬದವರಿಗೂ ಆಯುರಾರೋಗ್ಯಗಳನ್ನು ದಯಪಾಲಿಸಲೆಂದು ಬೇಡುತ್ತಾ ಈ ನನ್ನ ಪತ್ರವನ್ನು ಮುಗಿಸುತ್ತೇನೆ.

ಇಂತು,
ತಮ್ಮವನೇ ಆದ

ಮೈ.ಶ್ರೀ. ನಟರಾಜ

 Posted by at 6:42 PM
Oct 252011
 

ಅಕ್ಟೋಬರ್ ೯ರಂದು ಪ್ಯಾಲಟೈನ್ ಪುಸ್ತಕಾಲಯದಲ್ಲಿ ಅನಿಲ್ ದೇಶಪಾಂಡೆ ಅವರ ನೇತೃತ್ವದಲ್ಲಿ ವಿದ್ಯಾರಣ್ಯ ಕನ್ನಡ ಕೂಟ ಸಾಹಿತ್ಯೋತ್ಸವವನ್ನು ಆಚರಿಸಿತು.  ಇದೊಂದು ಕಳೆದ ವರ್ಷ ತಾನೆ ಶುರು ಹಚ್ಚಿಕೊಂಡ ಹೊಸ ಕಾರ್ಯಕ್ರಮ.  ಇದೀಗ ಎರಡನೆಯ ವರ್ಷಕ್ಕೆ ಕಾಲಿಡುತ್ತಿದೆ.  ಯಾವುದೇ ಊರಿನಲ್ಲಾದರೂ ಸಾಹಿತ್ಯಾಸಕ್ತರು ಇರುವುದು ಬೆರಳೆಣಿಕೆಯಷ್ಟು ಜನ.  ಶಿಕಾಗೊ ನಗರವೂ ಇದಕ್ಕೆ ಅಪವಾದವಲ್ಲ.  ಬಂದವರು ಹೆಚ್ಚೆಂದರೆ ಇಪ್ಪತ್ತೈದು ಮಂದಿ ಇರಬಹುದು.  ಆದರೆ ಎಲ್ಲರೂ ಬಂದಿದ್ದು ಕನ್ನಡ ಸಾಹಿತ್ಯ ಸುಧೆಯನ್ನು ಸವಿಯುವುದಕ್ಕಾಗಿ ಮಾತ್ರ.  ಅಲ್ಲಿ ಭೂರಿಭೋಜನದ ಅಬ್ಬರವಿಲ್ಲ, ಜರಿ ಸೀರೆ ಆಭರಣಗಳ ಆಡಂಬರವಿಲ್ಲ, ಸ್ನೇಹಿತರನ್ನು ಅಪರೂಪಕ್ಕೆ ನೋಡಿದ್ದರಿಂದ ಹರಟೆ ಹೊಡೆಯಬೇಕೆಂಬ ಲವಲವಿಕೆ ಇಲ್ಲ. ಇರುವುದು ಕನ್ನಡ ಸಾಹಿತ್ಯದ ಬಗ್ಗೆ ಎದೆಯಲ್ಲಿ ತುಂಬಿಕೊಂಡ ಅಪಾರ ಅಭಿಮಾನ, ಹೆಮ್ಮೆ, ಆಸಕ್ತಿ. ಅಷ್ಟೆ.

invocation prayer

ಉದಯವಾಗಲಿ ಚೆಲುವ ಕನ್ನಡ ನಾಡು - ಹಾಡುತ್ತಿರುವ ಲೇಖಕಿಯರು - ತ್ರಿವೇಣಿ,ನಳಿನಿ ಮೈಯ, ಶಾರದ ಬೈಯಣ್ಣ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ….ಹುಯಿಲಹೋಳ ನಾರಾಯಣ ರಾಯರು ಬರೆದ ಈ ಜನಪ್ರಿಯ ಗೀತೆಯ ಗಾಯನದಿಂದ ಕಾರ್ಯಕ್ರಮ ಶುರುವಾಯಿತು.  ಅಧ್ಯಕ್ಷರಾದ ಸತೀಶ್ ಗೋಪಿನಾಥ್ ಅವರು ಸ್ವಾಗತ ಭಾಷಣ ಮಾಡುತ್ತಾ ಅವರ ಸ್ನೇಹಿತನ ಹತ್ತಿರ ನಡೆದ ಒಂದು ಸ್ವಾರಸ್ಯಕರವಾದ ಸಂಭಾಷಣೆಯನ್ನು ಪ್ರಸ್ತಾಪಿಸಿದರು.  “ನೀನು ಕನ್ನಡ ಕೂಟದ ಅಧ್ಯಕ್ಷನಾಗಿ ಕನ್ನಡಕ್ಕಾಗಿ ಏನು ಮಾಡಿದೆ?” ಎಂದು ಪ್ರಶ್ನಿಸಿದನಂತೆ ಅವರ ಸ್ನೇಹಿತ.  ಸತೀಶ್ ಅವರು ಈ ವರ್ಷ ವಿಂಟರ್ ಒ‌ಅಲಂಪಿಯಾಡ್  ನಡೆಸಿದ ಬಗ್ಗೆ, ಯುಗಾದಿ ಆಚರಣೆಯ ಬಗ್ಗೆ, ಪಿಕ್ನಿಕ್ ಬಗ್ಗೆ ಏನೆಲ್ಲಾ ಹೇಳಿದರೂ ಅವರ ಸ್ನೇಹಿತ ತನ್ನ ಪಟ್ಟು ಬಿಡಲಿಲ್ಲವಂತೆ.  “ಅದಿರಲಿ ಕನ್ನಡಕ್ಕಾಗಿ ಏನು ಮಾಡಿದ್ದೀ?” ಎಂಬುದೇ ಅವನ ಪ್ರಶ್ನೆ.  ಅದರಲ್ಲೂ ‘ಕನ್ನಡಕ್ಕಾಗಿ’ ಎಂಬ ಪದಕ್ಕೆ ಹೆಚ್ಚಿನ ಒತ್ತು! ನಿಜ.  ನಮ್ಮ ಕನ್ನಡ ಕೂಟದ ಎಲ್ಲ ಕಾರ್ಯಕಲಾಪಗಳ ನಡುವೆ ಒಮ್ಮೊಮ್ಮೆ ನಮಗೆ ನಾವೇ ಈ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗುತ್ತದೆ.

Satish

ವಿದ್ಯ್ರಾರಣ್ಯದ ಅಧ್ಯಕ್ಷರಾದ ಸತೀಶ್ ಗೋಪಿನಾಥ್ ಅವರಿಂದ ಸ್ವಾಗತ

ಈವರ್ಷ ಸಾಹಿತ್ಯ ಸಮ್ಮೇಳನಕ್ಕೆ ರಂಗೇರಿಸುವ, ಸಭಿಕರನ್ನೂ ಭಾಗವಹಿಸುವಂತೆ ಪ್ರೇರೇಪಿಸುವ ಹಲವು ಕಾರ್ಯಕ್ರಮಗಳಿದ್ದವು.  ಆಶುಭಾಷಣ, ಆಶುಕವಿತೆ, ಈ ಕವಿತೆ ನೆನಪಿದೆಯಾ? ಹಾಡು ಕಟ್ಟೋಣ ಬಾರಾ…ಮುಂತಾದವು ಬಂದವರನ್ನು ಸುಮ್ಮನೆ ಕಲ್ಲಿನಂತೆ ಕುಳಿತು ಕಾರ್ಯಕ್ರಮ ನೊಡಲು ಬಿಡದೆ ಎಲ್ಲರನ್ನೂ ಸೇರಿಸಿಕೊಂಡು ಸಂಭ್ರಮಿಸಿದ ಉತ್ಸವದ ವಾತಾವರಣವನ್ನು ಉಂಟು ಮಾಡಿತ್ತು.  ನಳಿನಿ ಮೈಯ ಅವರು ನಡೆಸಿಕೊಟ್ಟ “ಈ ಕವಿತೆ ನೆನಪಿದೆಯಾ?” ಎಂಬ ಕಾರ್ಯಕ್ರಮದಲ್ಲಿ ಚಿರಪರಿಚಿತ ಕವನಗಳ ಕೆಲವು ಸಾಲುಗಳನ್ನು ಹಾಡಿ ಮುಂದಿನ ಸಾಲುಗಳನ್ನು ಹೇಳಲು ಸಭಿಕರನ್ನು ಆಹ್ವಾನಿಸಲಾಯಿತು. ಎಲ್ಲರೂ ನೆನಪಿನಾಳದಲ್ಲಿ ಇಂದಿಗೂ ಬಿಡದೆ ಅನುರಣಿಸುತ್ತಿರುವ ಗೀತೆಗಳನ್ನು ಜೊತೆಗೂಡಿ ಹಾಡುತ್ತಿರಬೇಕಾದರೆ ಏನೋ ರೋಮಾಂಚನ!

ಹಾಗೆಯೇ “ಹಾಡು ಕಟ್ಟೋಣ ಬಾರಾ” ಕಾರ್ಯಕ್ರಮದಲ್ಲಿ ‘ಜೈ ಅಮೆರಿಕಾ ಜನನಿಯ ತನುಜಾತೆ, ಜಯ ಹೇ ಇಲಿನಾಯ್ ಸ್ಟೇಟ್ ಮಾತೆ” ಎಂಬ ಸಾಲುಗಳನ್ನು ಕೊಟ್ಟು ಮುಂದೆ ಈ ಹಾಡನ್ನು ಕಟ್ಟಿಕೊಂಡು ಹೋಗಲು ಪ್ರೇಕ್ಷಕರನ್ನು ಆಹ್ವಾನಿಸಲಾಯಿತು.  “ಜಯ ಮಿಶಿಗನ್ ಸರೋವರ ತೀರದ ನಾಡೆ, ಜಯಹೇ ಸುಂದರ ಕಟ್ಟಡಗಳ ಬೀಡೆ” ಎಂಬಲ್ಲಿಯವರೆಗೂ ಈ ಹಾಡು ಮುಂದುವರಿದಿತ್ತು.  ಆದರೆ ಕಡೆಯಲ್ಲಿ ಉಂಟಾದ ಸಮಯದ ಅಭಾವದಿಂದ ಅಲ್ಲಿಗೆ ನಿಂತಿತು.

ಕವನ ವಾಚನ

“ಆವಗಂ ಸ್ಫೂರ್ತಿಸುವ ಕಬ್ಬಿಗರ ನಲುನಾಡು”  ಚೆಲುವ ಕನ್ನಡ ನಾಡು ಮಾತ್ರವಲ್ಲ.  ಕನ್ನಡಿಗರು ಸೇ‌ಇದೆಡೆಯಲ್ಲೆಲ್ಲ “ಆವಗಂ ಸ್ಫೂರ್ತಿ” ಉಕ್ಕಿ ಹರಿಯುತ್ತದೆ ಎಂಬುದಕ್ಕೆ ನಿದರ್ಶನವಾಗಿ ಕವನ ವಾಚನದಲ್ಲಿ ಹಲವರು ಭಾಗವಹಿಸಿದ್ದರು.  ನಾಗಭೂಷಣ್ ಮುಲ್ಕಿ, ಉಷಾ ಕೊಲ್ಪೆ, ಸುಬ್ರಾಯ ಮೈಯ, ಅನುಪಮ ಮಂಗಳವೇದೆ, ದತ್ತ ಅಜ್ಜಂಪುರ, ತ್ರಿವೇಣಿ ಶ್ರೀನಿವಾಸ ರಾವ್, ಲಕ್ಷ್ಮಣ್ ಮಿಟ್ಟೂರ್, ಅನಿಲ್ ದೇಶಪಾಂಡೆ ಮುಂತಾದವರಿಂದ ತಮ್ಮ ತಮ್ಮ ಕವನಗಳ ಪ್ರಸ್ತುತಿ ನಡೆಯಿತು. ನಿತಿನ್ ಮಂಗಳವೇದೆ ಅವರು ಸೋಮೇಶ್ವರ ಶತಕದ ಕೆಲವು ಭಾಗಗಳನ್ನು ನಿರೂಪಿಸಿದರು.

Anil Deshapande

ಸಾಹಿತ್ಯೋತ್ಸವದ ರೂವಾರಿ - ಅನಿಲ್ ದೇಶಪಾಂಡೆ

ಮೆಚ್ಚಿನ ಲೇಖಕ/ಲೇಖಕಿ/ಕೃತಿ

‘ನನ್ನ ಮೆಚ್ಚಿನ ಲೇಖಕ’ ಎಂಬ ಬಗ್ಗೆ ಶಾರದಾ ಬೈಯಣ್ಣ ಬೀಚಿ ಅವರನ್ನು ಕುರಿತು ಮಾತನಾಡಿದರು.  ‘ನಾ ಮೆಚ್ಚಿದ ಲೇಖಕಿ’ ಎಂಬ ಶೀರ್ಷಿಕೆಯಲ್ಲಿ ನೀತಾ ಧನಂಜಯ್ ಅವರು ಅನುಪಮ ನಿರಂಜನ್ ಅವರನ್ನು ಕುರಿತು, ಮತ್ತು ಸುನೀತ ರಾವ್ ಅವರು ಸುಧಾ ಮೂರ್ತಿ ಅವರನ್ನು ಕುರಿತು ಮಾತನಾಡಿದರು.  ‘ನನ್ನ ಮೆಚ್ಚಿನ ಕೃತಿ’ ಎಂಬ ಶೀರ್ಷಿಕೆಯಲ್ಲಿ ನಳಿನಿ ಮೈಯ ಅವರು ಪ್ರಕಾಶ್ ಹೇಮಾವತಿ ಅವರು ಬರೆದ “ಅಮೋಘ ವರ್ಷ” ಕಾದಂಬರಿಯ ಬಗ್ಗೆ ಮಾತನಾಡಿದರು.

Prakash

ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಪರಿಚಯ ಪ್ರಕಾಶ್ ಹೇಮಾವತಿಯವರಿಂದ

ಭಾಷಣಗಳು :-   “ನಿಸರ್ಗ- ಕವಿಗಳು ಕಂಡಂತೆ” ಎಂಬ ವಿಷಯವಾಗಿ ಮಾತನಾಡುತ್ತಾ ತ್ರಿವೇಣಿ ಅವರು ಕನ್ನಡದ ವಿವಿಧ ಕವಿಗಳು ನಿಸರ್ಗವನ್ನು ವರ್ಣಿಸಿರುವ ಬಗ್ಗೆ ದೃಷ್ಟಾಂತಗಳ ಸಮೇತ  ಮಾತನಾಡಿದರು.  ಪ್ರಕಾಶ್ ಹೇಮಾವತಿ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಬಗ್ಗೆ ಮಾತನಾಡಿದರು. “ಪ್ರಚಲಿತ ಸಾಹಿತ್ಯ ವಸ್ತು, ವಿಚಾರ” ಎಂಬ ಶೀರ್ಷಿಕೆಯಲ್ಲಿ ಇಂದುಶೇಖರ್ ಅವರು ಮಾತನಾಡಿದರು.  ಅದಕ್ಕೆ ಪೂರಕವಾಗಿ ಶ್ರೇಯಾ ಧನಂಜಯ್ ಪರಿಸರ ಮಾಲಿನ್ಯದ ಬಗ್ಗೆ ಶಿವರುದ್ರಪ್ಪ ಅವರು ಬರೆದ ಒಂದು ಕವನವನ್ನು ಹಾಡಿದಳು.  “ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ” ಎಂಬ ಬಗ್ಗೆ ಇಂದಿರಾ ರೆಡ್ಡಿ ಅವರು, ಹಾಗೂ “ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ” ಎಂಬ ಬಗ್ಗೆ ಅನಿಲ್ ದೇಶಪಾಂಡೆ ಅವರು ಮಾತನಾಡಿದರು. “ಹಾಸ್ಯ ಸಾಹಿತ್ಯ” ಎಂಬ ಬಗ್ಗೆ ಶಾರದಾ ಬೈಯಣ್ಣ ಅವರು ಮಾತನಾಡಿದರು.

ತಾಯ್ತನದ ಎರಡು ಚಿತ್ರಗಳು

ಸಮ್ಮೇಳನದಲ್ಲಿ ಎಲ್ಲರ ಮನಸ್ಸು ಮಿಡಿದ ಎರಡು ದೃಶ್ಯಗಳ ಬಗ್ಗೆ ಹೇಳದಿದ್ದರೆ ಲೋಪವಾಗುತ್ತದೆ!  ಮೊದಲನೆಯದು ಮಾತೃವಾತ್ಸಲ್ಯದ ಆನಂದ ಭಾಷ್ಪ.  ಉಷಾ ಕೊಲ್ಪೆ ಅವರು ತಮ್ಮ ತಾಯಿಯ ಬಗ್ಗೆ ಅವರ ಕಾಲೇಜು ದಿನಗಳಲ್ಲಿ ಬರೆದ ಒಂದು ಕವನ ಓದಿದಾಗ ಇದೀಗ ಅಮೆರಿಕಾಗೆ ಬಂದ ಅವರ ವಯಸ್ಸಾದ ತಾಯಿ ಎದುರು ಸೀಟಿನಲ್ಲೇ ಕುಳಿತಿದ್ದರು.  ಕವನ ವಾಚನ  ಮಾಡುತ್ತಿರುವಾಗ ಆ ತಾಯಿಯ ಮುಖದಲ್ಲಿ  ಯಾವ ಭಾವೋದ್ವೇಗವೂ ಕಾಣಲಿಲ್ಲ!  ಆದರೆ ಉಷಾ ಅವರು ಕವನ ವಾಚನ ಮುಗಿಸಿ ಬಂದು ತಾಯಿಯ ಪಕ್ಕ ಕುಳಿತಾಗ ತಡೆಯದೆ ಉಕ್ಕಿಬಂದಿತ್ತು ಅವರ ಕಣ್ಣಲ್ಲಿ ಆನಂದ ಭಾಷ್ಪ!  ಮತ್ತೆ ಮತ್ತೆ ಕರವಸ್ತ್ರದಲ್ಲಿ ಕಣ್ಣೀರು ಒರೆಸುತ್ತಾ ಕುಳಿತ ಅವರನ್ನು ನೋಡುತ್ತಿದ್ದಂತೆಯೇ ನಮ್ಮೆಲ್ಲರ ಎದೆಯೂ ಸ್ಪಂದಿಸಿತ್ತು.  ಉಷಾ ಅವರು ತಾಯಿಯ ಬೆನ್ನು ಸವರಿ ಸಂತೈಸುವ ಆ ಕ್ಷಣಗಳನ್ನು  ನಮ್ಮ ಹೃದಯವೆಂಬ ಕ್ಯಾಮೆರಾ ಶಾಶ್ವತವಾಗಿ ಸೆರೆ ಹಿಡಿದಿತ್ತು.

ಇನ್ನೊಂದು ತಾಯ್ತನದ ಒಂದು ಉಲ್ಲಾಸಮಯ ಚಿತ್ರ

ಬಿಂದು ಸತೀಶ್ ಅವರು “ಅಮೆರಿಕನ್ನಡಿಗರು” ಎಂಬ ಬಗ್ಗೆ ಆಶುಭಾಷಣ ಮಾಡುವುದಕ್ಕೆ ಬಂದು ನಿಂತಾಗ ಯಾವ ಸಿದ್ಧತೆಯೂ ಇಲ್ಲದೆ ಮಾಡುವ ಭಾಷಣವಿದು ಎಂದು ಸ್ವಲ್ಪ ಅಳುಕು ಇದ್ದಿರಬಹುದು.  ನಮಗೇನೂ ಗೊತ್ತಾಗಲಿಲ್ಲ.  ಆದರೆ ಆ ಅಳುಕಿನ ಬಗ್ಗೆ ಯೋಚಿಸಲೂ ಅವಕಾಶ ಕೊಡದೆ ಅವರ ಪುಟ್ಟ ಮಗ (ನಾಲ್ಕು ವರ್ಷದವನಿರಬಹುದು)  ಅವರ ಕಾಲಿಗೆ ಜೋತು ಬಿದ್ದು, ಗೂಳಿಯಂತೆ ಡಿಕ್ಕಿ ಹೊಡೆದು, ಮಂಡಿಗಳ ನಡುವೆ ತಲೆ ತೂರಿಸಿ ಅಲ್ಲೊಂದು ಸಣ್ಣ ಗೋಕುಲವನ್ನೇ ನಿರ್ಮಿಸಿ  ತಾನು ಕೃಷ್ಣನಾದ!  ಅವನನ್ನು ಕರೆದುಕೊಂಡು ಹೋಗಲು ಸತೀಶ್ ಮತ್ತು ಇತರರು ಎಷ್ಟೇ ಪ್ರಯತ್ನಿಸಿದರೂ ಜಗ್ಗಲಿಲ್ಲ! ಇದೆಲ್ಲದರ ಮಧ್ಯೆ ಮಗನ ಚೇಷ್ಟೆಗಳನ್ನೆಲ್ಲ ನಗುನಗುತ್ತಲೇ ಸಹಿಸಿಕೊಂಡು ಬಿಂದು ಅವರು ಒಂದು ಒಳ್ಳೆಯ ಭಾಷಣವನ್ನೇ ಮಾಡಿದರು.  ಮುಗಿಯುತ್ತಲೇ ಮಗನನ್ನೆತ್ತಿ ಮುದ್ದಾಡಿದರು.

ಸಮಾರೋಪ

ಗಂಟೆಗಳು ನಿಮಿಷಗಳಂತೆ ಓಡಿ ಆಗಲೆ ಐದು ಗಂಟೆಯಾಗಿತ್ತು!  ಪುಸ್ತಕಾಲಯ ಮುಚ್ಚುವ ಸಮಯ!  ಹಾಗಾಗಿ ಆಶು ಕವಿತೆ ಮತ್ತು ಆಶು ಭಾಷಣಗಳಿಗೆ ತಿಲಾಂಜಲಿ ಕೊಡಲಾಯಿತು.  ಅರುಣ್ ಮೂರ್ತಿ ಅವರು ಕಾರ್ಯಕ್ರಮದ ಹಿನ್ನೋಟದ ಬಗ್ಗೆ ಮಾತನಾಡಿದರು.  ಧನಂಜಯ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.  ನಡುವೆ ವಿರಾಮದ ವೇಳೆಯಲ್ಲಿ ಉಪ್ಪಿಟ್ಟು, ಕೇಸರಿಭಾತುಗಳನ್ನು ಎಲ್ಲರೂ ಪೊಗದಸ್ತಾಗಿ ತಿಂದರು ಎಂದು ಪ್ರತ್ಯೇಕವಾಗಿ ಹೇಳಬೇಕೆ?  ಇಂಗ್ಲಿಷಿನಲ್ಲಿ ಹೇಳುವಂತೆ “ಇಟ್ ಈಸ್ ಅಂಡರ್ ಸ್ಟುಡ್”!

ವರದಿ : ನಳಿನಿ ಮೈಯ
ಚಿತ್ರಗಳು : ಶ್ರೀನಿವಾಸರಾವ್

 Posted by at 11:13 AM