Apr 262017
 

ಏಪ್ರಿಲ್-೨೯ ಮತ್ತು ೩೦ ರಂದು ನಡೆಯಲಿರುವ ಸಮ್ಮೇಳನದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಿಡುಗಡೆಯಾಗಲಿರುವ ಕೃತಿ – ‘ಅವರವರ ಭಕುತಿಗೆ’

 Posted by at 8:35 AM
Apr 262017
 

ಕನ್ನಡ ಸಾಹಿತ್ಯ ರಂಗ – ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡಕೂಟ, ಬಾಸ್ಟನ್ – ಸಹಯೋಗದಲ್ಲಿ ನಡೆಯಲಿರುವ ಅದ್ಧೂರಿಯ ಸಮ್ಮೇಳನದ ದಿನ ಹತ್ತಿರವಾಗಿದೆ.   (ಏಪ್ರಿಲ್ ೨೯, ೩೦, ಶನಿವಾರ ಮತ್ತು ಭಾನುವಾರ)

ಬನ್ನಿ, ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿ.

 

 

 Posted by at 7:45 AM
Apr 182017
 

ಬಾಸ್ಟನ್ನಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯರಂಗದ ಎಂಟನೆಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷೀಶ ತೋಳ್ಪಾಡಿಯವರು ಆಗಮಿಸುತ್ತಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ:-


ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಕನ್ನಡದ ಪ್ರತಿಭಾವಂತ ಲೇಖಕರು ಮತ್ತು ಚಿಂತಕರಾಗಿ ಹೆಸರಾದವರು. ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಉತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಲಕ್ಷ್ಮೀಶ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಡುಪಿ ಮತ್ತು ಪುತ್ತೂರಿನಲ್ಲಿ ಆರಂಭಿಸಿ, ಉನ್ನತ ವ್ಯಾಸಂಗವನ್ನು ಮಂಗಳೂರು ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.  ತಾಯಿ ರತ್ನಾವತಿ ಮತ್ತು ತಂದೆಯವರಾದ ವಿಷ್ಣುಮೂರ್ತಿ ತೋಳ್ಪಾಡಿಯವರ ಅಕ್ಕರೆ, ಆಶೀರ್ವಾದದೊಂದಿಗೆ ಬೆಳೆದು ವೃತ್ತಿ ಸಾಧನೆಯಲ್ಲಿ ತೊಡಗಿ, ಬಾಳ ಸಂಗಾತಿ ವಿಜಯಲಕ್ಷ್ಮಿಯವರ ಜೊತೆಯಲ್ಲಿ ಜೀವನದ ಗುರಿಯತ್ತ ಪ್ರಯಾಣ ಮುಂದುವರಿಸಿದ್ದಾರೆ.
ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ “ಮಹಾಯುದ್ಧಕ್ಕೆ ಮುನ್ನ”, “ಬೆಟ್ಟ ಮೊಹಮದನ ಬಳಿಗೆ ಬಾರದಿದ್ದರೆ”, “ಸಂಪಿಗೆ ಭಾಗವತ”, “ಭವತಲ್ಲಣ” ಮತ್ತು “ಆನಂದಲಹರಿ” ಯಂತಹ ಉತ್ತಮ ಕೃತಿಗಳು ಸಫಲವಾಗಿ ಪ್ರಕಟಣೆಗೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಖ್ಯಾತಿಯನ್ನು ಒದಗಿಸಿ ಕೊಟ್ಟಿವೆ. ತೋಳ್ಪಾಡಿಯವರು ತಮ್ಮ ಪಾಂಡಿತ್ಯಪೂರ್ಣ ಬರಹಗಳ ಮೂಲಕ ಸಾಹಿತ್ಯ ಸೇವೆ ಸಲ್ಲಿಸುತ್ತಾ  ಹಲವು ಗೌರವ, ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ತೋಳ್ಪಾಡಿಯವರಿಗೆ ಸಂದಿರುವ ಗೌರವಾನ್ವಿತ ಪ್ರಶಸ್ತಿ ಸನ್ಮಾನಗಳ ಸಾಲಿನಲ್ಲಿ, ೨೦೧೨ರ “ಪೊಳಲಿ ಶಾಸ್ತ್ರಿ ಪ್ರಶಸ್ತಿ”, ೨೦೧೩ರಲ್ಲಿ ಬಂದ “ಕಡವ ಶಂಭುಕರ್ಮ ಪ್ರಶಸ್ತಿ”, “ಕಾಂತಾವರ ಸಾಹಿತ್ಯ” ಪುರಸ್ಕಾರ, “ರಾಮವಿಠಲ ಪ್ರಶಸ್ತಿ” ಮತ್ತು ೨೦೧೬ರಲ್ಲಿ ಕೈಗೂಡಿದ”ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ” ಗಳೂ ಸೇರಿವೆ.

ಮುಂದೆ ಇದೇ ರೀತಿಯಲ್ಲಿ, ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ ಲೇಖನಿಯಿಂದ ಮತ್ತಷ್ಟು ವಿದ್ವತ್ಪೂರ್ಣ ಸಾಹಿತ್ಯ ಕೃತಿಗಳು ಹೊರಬಂದು, ಅದನ್ನು ಓದುವ ಭಾಗ್ಯ ತಮಗೆ ಸಿಗುತ್ತಿರಲಿ ಎನ್ನುವುದು ಅವರ ಸಾಹಿತ್ಯಾಭಿಮಾನಿಗಳೆಲ್ಲರ ತುಂಬು ಹೃದಯದ ಹಾರೈಕೆಯಾಗಿದೆ.

 Posted by at 11:04 PM
Feb 272017
 
ಭಾಷಾಬಾಂಧವರಿಗೆ ವಂದನೆ.
ಮತ್ತೊಮ್ಮೆ ನಿಮ್ಮನ್ನೆಲ್ಲ ಎದುರುಗೊಳ್ಳುವ ಸಂದರ್ಭ ಕೂಡಿಬಂದಿದೆ.
ಮತ್ತೊಂದು ವಸಂತ ಸಾಹಿತ್ಯೋತ್ಸವಕ್ಕೆ ನಮ್ಮ ಕನ್ನಡ ಸಾಹಿತ್ಯ ರಂಗ ಅಣಿಯಾಗಿದೆ. ಕನ್ನಡ ಸಾಹಿತ್ಯಕ್ಕೆಂದೇ ಮೀಸಲಾಗಿ ಅದನ್ನೇ ಗುರಿಯಾಗಿರಿಸಿಕೊಂಡು ತುಡಿಯುತ್ತಿರುವ ಸಮಾನಾಸಕ್ತರ ರಾಷ್ಟ್ರೀಯ ಒಕ್ಕೂಟ, ಅಮೆರಿಕದ ಉದ್ದಗಲದಲ್ಲಿ ಕನ್ನಡ ಸಾಹಿತ್ಯದ ಅಚ್ಚರುಚಿಯನ್ನು ಹರಡುವಲ್ಲಿ ಸಕ್ರಿಯವಾಗಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ರಂಗ. ತಮಗೆಲ್ಲರಿಗೂ ತಿಳಿದೇ ಇದೆ.
ಈಗ ನಮ್ಮ ಎಂಟನೇ ವಸಂತ ಸಾಹಿತ್ಯೋತ್ಸವ.
ಎಂದಿನಂತೆಯೇ ಈ ಬಾರಿಯೂ, ನಮ್ಮೆಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು, ಒಟ್ಟು ಸಾಹಿತ್ಯೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಸಹಭಾಗಿಯಾಗಲು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ.
ಈ ಬಾರಿ, ಮತ್ತೊಮ್ಮೆ ನಾವು ಗೆಳತಿಯರಿಬ್ಬರೂ ಕೂಡಿಕೊಂಡು ‘ಸಾಹಿತ್ಯ ಸಲ್ಲಾಪ’ವನ್ನು ನಡೆಸಿಕೊಡಲು ನಿಯೋಜಿತರಾಗಿದ್ದೇವೆ, ಅದನ್ನು ಅತ್ಯಂತ ಪ್ರೀತ್ಯಾಸಕ್ತಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆ ಈ ಕಾರ್ಯಕ್ರಮವನ್ನು ಸುಲಲಿತ ಸಲ್ಲಾಪವಾಗಿಸಲು ನಿಮ್ಮೆಲ್ಲರ ಒಳಗೊಳ್ಳುವಿಕೆಯನ್ನು ವಿನಮ್ರವಾಗಿ ಆಶಿಸುತ್ತಿದ್ದೇವೆ.
೧- ಅಮೆರಿಕನ್ನಡ ಬರಹಗಾರರು ಇದರಲ್ಲಿ ಭಾಗವಹಿಸಬಹುದು.
೨- ಗದ್ಯ ಅಥವಾ ಪದ್ಯ ರೂಪದ ತಮ್ಮ ಸ್ವಂತ ಕೃತಿಯನ್ನು ಇದರಲ್ಲಿ ತಾವು ಸ್ವತಹ ಹಾಜರಿದ್ದು ಪ್ರಸ್ತುತಪಡಿಸುವ ಅವಕಾಶವಿದು.
೩- ಗದ್ಯವಾದರೆ ಏಳು ನಿಮಿಷಗಳ ಪ್ರಸ್ತುತಿ ಹಾಗೂ ಪದ್ಯವಾದರೆ ಐದು ನಿಮಿಷಗಳ ಪ್ರಸ್ತುತಿ. ಈ ಸಮಯ ಮಿತಿಯೊಳಗೆ ತಮ್ಮ ಪ್ರಸ್ತುತಿಯನ್ನು ಕ್ಲಪ್ತವಾಗಿ ಮುಗಿಸಿಕೊಡಿ.
೪- ಒಬ್ಬರಿಗೆ ಒಂದೇ ಅವಕಾಶ.
೫- ತಮ್ಮ ಕೃತಿ ಮಾರ್ಚ್ ಕೊನೆಯಲ್ಲಿ, ತಾ. ಮೂವತ್ತೊಂದರೊಳಗಾಗಿ, ನಮಗೆ- ತ್ರಿವೇಣಿ ರಾವ್ (sritri@gmail.com) ಅಥವಾ ಜ್ಯೋತಿ ಮಹಾದೇವ್ (jyothimahadev@gmail.com) -ತಲುಪಿಸಿರಿ. ನಿರ್ವಹಣೆಗೆ ಅನುಕೂಲವಾಗುವುದು.
೬- ತಮ್ಮ ಪ್ರಸ್ತುತಿಯನ್ನು ಕಳುಹಿಸುವ ಮೊದಲೊಮ್ಮೆ ತಾವೇ ಓದಿಕೊಂಡು ನಿಗದಿತ ಸಮಯದ ಮಿತಿಯೊಳಗೆ ಇದೆಯೆಂದು ಖಚಿತಪಡಿಸಿಕೊಂಡರೆ ಒಳಿತು. ಸಮಯಾನುಸಂಧಾನ ಮೀರುವಂತಿದ್ದರೆ ನಿರಾಕರಣೆಯ ಸಾಧ್ಯತೆಯಿದೆ.
೭- ಕೃತಿ ಕನ್ನಡದಲ್ಲೇ ಇರಬೇಕು. ‘ಭಕ್ತಿ ಸಾಹಿತ್ಯ’ವೆನ್ನುವ ಈ ಬಾರಿಯ ಆಶಯ-ಚಿಂತನೆಗೆ ಹೊಂದುವಂತಿದ್ದರೆ ಉತ್ತಮ. ಆದರೆ ಅದು ಕಡ್ಡಾಯವಲ್ಲ. ವೈವಿಧ್ಯಮಯ ಬರಹಗಳಿಗೂ ಸ್ವಾಗತವಿದೆ.
ನಿಮ್ಮನ್ನು ಬಾಸ್ಟನ್ನಿನಲ್ಲಿ, ವಸಂತ ಸಾಹಿತ್ಯೋತ್ಸವದ ವೇದಿಕೆಯಲ್ಲಿ ಭೇಟಿಯಾಗುವ ಉತ್ಸಾಹದಲ್ಲಿ,
ಇಂತಿ,
ತ್ರಿವೇಣಿ, ಜ್ಯೋತಿ.
ಸಮ್ಮೇಳನದ ಸುದ್ದಿಗಳಿಗಾಗಿ ನಮ್ಮ ತಾಣಕ್ಕೆ ಭೇಟಿಕೊಡುತ್ತಿರಿ:
 Posted by at 3:58 PM