May 252015
 

KSR-Logo

 

ಸೇಯಿಂಟ್ ಲೂಯಿಸ್ಸಿನ ಸಂಗಮದ ಆಶ್ರಯದಲ್ಲಿ, ಮಧ್ಯವಲಯದ ಇತರ ಕನ್ನಡ ಕೂಟಗಳ ಸಹಕಾರದೊಂದಿಗೆ ಇದೇ ಮೇ 30 ಮತ್ತು 31ರಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ತಪ್ಪದೇ ಬಾಗವಹಿಸಿ ಎಂದು ರಂಗದ ಪರವಾಗಿ ಮತ್ತು ಸಂಗಮದ ಪದಾಧಿಕಾರಿಗಳ ಪರವಾಗಿ ತಮ್ಮನ್ನೆಲ್ಲ ಆಹ್ವಾನಿಸಲು ನಮಗೆ ತುಂಬಾ ಸಂತಸವಾಗುತ್ತಿದೆ. ಈ ಬಾರಿಯ ನಮ್ಮ ಸಮ್ಮೇಳನದ ಮುಖ್ಯ ವಿಷಯ "ಅನುವಾದ ಸಾಹಿತ್ಯ." ಕನ್ನಡ ಅನುವಾದ ಸಾಹಿತ್ಯ ಪ್ರಪಂಚದಲ್ಲಿ ಮುಖ್ಯರಾದ ಡಾ|| ಪ್ರಧಾನ್ ಗುರುದತ್ತರು ಮುಖ್ಯ ಅತಿಥಿಗಳಾಗಿ ಭಾರತದಿಂದ ಆಗಮಿಸಿದ್ದಾರೆ, "ಅನುವಾದದ ಆಗುಹೋಗುಗಳು" ಎಂಬ ವಿಷಯದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ನಮ್ಮವರೇ ಆದ ಪ್ರಸಿದ್ಧ ಭಾಷಾವಿಜ್ಞಾನಿ, ಡಾ|| ಎಸ್.ಎನ್ ಶ್ರೀಧರ್ ಮತ್ತು ಅನುವಾದದ ವಿಷಯದಲ್ಲಿ ಪ್ರಾವೀಣ್ಯ ಗಳಿಸಿರುವ ಆಂಗ್ಲಭಾಷಾ ಪ್ರಾಧ್ಯಾಪಕ ಡಾ|| ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಆಗಮಿಸಿ "ಅನುವಾದ ಕಮ್ಮಟ" ಮತ್ತು "ಸಂವಾದ" ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಲೇಖನಗಳನ್ನೊಳಗೊಂಡ "ಅನುವಾದ ಸಂವಾದ" ಎಂಬ ಕನ್ನಡ ಪುಸ್ತಕ, ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದವಾದ ಲೇಖನಗಳನ್ನೊಳಗೊಂಡ "A Little Taste of Kannada-in English" ಎಂಬ ಆಂಗ್ಲ ಪುಸ್ತಕಗಳನ್ನು ರಂಗ ಲೋಕಾರ್ಪಣೆ ಗೊಳಿಸಲಿದೆ. ಇವೇ ಅಲ್ಲದೆ, ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಅವರು ಸಂಪಾದಿಸಿರುವ "ಅಮೆರಿಕನ್ನಡ ಬರಗಾರರ ಮಾಹಿತಿ ಕೋಶ" ಸಹ ಲೋಕಾರ್ಪಣೆಗೊಳ್ಳಲಿದೆ. ಸಂಗಮದ ಮುಂದಾಳತ್ವದಲ್ಲಿ "ಸೊಬಗು" ಎಂಬ ಸ್ಮರಣ ಸಂಚಿಕೆ ಸಹ ಸಿದ್ಧವಾಗುತ್ತಿದೆ. ರಂಗದ ಸಂಸ್ಥಾಪಕರಲ್ಲಿ ಮೊದಲಿಗರಾದ ಎಚ್.ವೈ. ರಾಜಗೋಪಾಲರು ಅನುವಾದಿಸಿರುವ "ಸೃಷ್ಟಿ" (ಅಮೆರಿಕದ ರೆಡ್ ಇಂಡಿಯನ್ ಕಥೆಗಳು) ಎಂಬ ಪುಸ್ತಕವನ್ನು ನೋಂದಾಯಿಸಿಕೊಂಡವರಿಗೆಲ್ಲ ರಂಗದ ವತಿಯಿಂದ ವಿತರಿಸಲಾಗುವುದು. ಪ್ರತಿ ಬಾರಿಯೂ ನಾವು ನಡೆಸುವ ಕವಿಗೋಷ್ಠಿ, ಬರಹಗಾರರ ಮತ್ತು ಅವರ ಇತ್ತೀಚಿನ ಪ್ರಕಟಣೆಗಳ ಪರಿಚಯ, ಇವುಗಳ ಜೊತೆಗೆ, ಈ ಬಾರಿ ಸ್ವಾರಸ್ಯಕರವಾದ ಒಂದು ಅನುವಾದ ಕಮ್ಮಟವನ್ನೂ ಏರ್ಪಡಿಸಲಾಗಿದೆ. ಕೇವಲ ಸಾಹಿತ್ಯ ಮಾತ್ರ ಎಂದು ದಿಗಿಲುಪಡದಿರಿ, ಸಂಗಮದ ನಾಟ್ಯಪಟು ಪ್ರಸನ್ನ ಕಸ್ತೂರಿಯವರ ನಿರ್ದೇಶನದಲ್ಲಿ ಗೀತ-ನಾಟ್ಯ-ನಟನ-ನಾಟಕ-ಪ್ರಿಯರ ಮನಸ್ಸನ್ನು ಸೂರೆಗೊಳ್ಳುವ ಮನರಂಜನಾ ಕಾರ್ಯಕ್ರಮಗಳಲ್ಲಿ ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಂಗಮದ ಜೊತೆಗೆ ಕೈಜೋಡಿಸಲು ಸಿನ್ಸಿನ್ಯಾಟಿ, ಶಿಕಾಗೋ, ಇಂಡಿಯನಾಪೊಲಿಸ್, ಲಿಟಲ್ ರಾಕ್, ನ್ಯಾಷವಿಲ್, ಮಿಲ್ವಾಕಿ, ಬ್ಲೂಮಿಂಗ್ ಟನ್ ಮುಂತಾದ ನಗರಗಳ ಕನ್ನಡ ಕೂಟಗಳೂ ಸಿದ್ಧವಾಗಿ ನಿಂತಿವೆ! ಮಕ್ಕಳಿಗಾಗಿ ಸವಿತಾ ರವಿಶಂಕರ್ ಅವರ "ಚಿಲಿಪಿಲಿ ಕನ್ನಡ ಕಲಿ" ಧ್ವನಿ ಸಂಪುಟ ಸಹ ಲೋಕಾರ್ಪಣೆಯಾಗಲಿದೆ. ಕನ್ನಡ ಪುಸ್ತಕಗಳ ಮಳಿಗೆಯಲ್ಲಿ ನಮ್ಮವರೇ ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗುತ್ತದೆ, ಕೊಂಡು ಓದಿ ಸಂತಸಪಡಲು ಇದೊಂದು ಉತ್ತಮ ಅವಕಾಶ. ಕೊನೆಯದಾಗಿ, ಆದರೆ ಮುಖ್ಯವಾಗಿ, ಉತ್ತಮ ಊಟೋಪಚಾರಗಳ ಏರ್ಪಾಟು ಭರದಿಂದ ಸಾಗಿದೆ! ಸಾಹಿತ್ಯಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಲು ಸಂಗಮದ ಜ್ಯೋತಿ ಮೈಸೂರ್ ಮತ್ತು ಶುಭಾ ಭಾಸ್ಕರ್ ಅವರ ತಂಡದ ಸ್ವಯಂಸೇವಕರು ತವಕದಿಂದ ಕಾದಿದ್ದಾರೆ. ಕಾರ್ಯಕ್ರಮಗಳ ಪಕ್ಷಿನೋಟವನ್ನು ಕೆಳಗೆ ಕೊಡಲಾಗಿದೆ, ಹೆಚ್ಚಿನ ವಿವರಗಳಿಗೆ kannadasahityaranga.org ಮತ್ತು sangamastl.com ಈ ಜಾಲತಾಣಗಳಿಗೆ ಭೇಟಿ ಕೊಡಿ.

] ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮದು!

ಮೈ.ಶ್ರೀ. ನಟರಾಜ, ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷ

ನಾಗ ಐತಾಳ, ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷ

 

 

 Posted by at 9:53 PM
May 252015
 

KSR-Logoಕಾರ್ಯಕ್ರಮಗಳ ವಿವರಗಳು ಹೀಗಿವೆ.

ಶನಿವಾರ

(1) ಮಧ್ಯಾಹ್ನ 12:00-1:00 - ಆಗಮನ ಮತ್ತು ನೋಂದಣಿ

(2) 1:00-2:00 - ಸ್ವಾಗತ ಗೀತೆ, ಉದ್ಘಾಟನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯ, ಪುಸ್ತಕಗಳ ಲೋಕಾರ್ಪಣೆ ಮತ್ತು ಬರಹಗಾರರಿಗೆ ವಿತರಣೆ

(3) 2:00-3:00 - ಪ್ರಾಸ್ತಾವಿಕ ಭಾಷಣ, "ಅನುವಾದದ ಆಗುಹೋಗುಗಳು" ಮುಖ್ಯ ಅತಿಥಿ ಪ್ರಧಾನ ಗುರುದತ್ತರಿಂದ

(4) 3:00-3:30 - ಚಹಾ ವಿರಾಮ

(5) 3:30-5:00 - ಸಾಹಿತ್ಯ ಗೋಷ್ಠಿ, ಸ್ವಂತ ಹಾಗು ಅನುವಾದಿತ ಕೃತಿಗಳ ಪ್ರಸ್ತುತಿ (ನಡೆಸಿಕೊಡುವವರು: ನಳಿನಿ ಮೈಯ ಮತ್ತು ವೈಶಾಲಿ ಹೆಗ್ಡೆ)

(6) 5:05-5:15 - ಕವಿ ನಮನ (ಸಂಗಮ ಕಲಾವಿದರಿಂದ)

(7) 5:15-5:30 - ಶ್ರದ್ಧಾಂಜಲಿ (ಅಗಲಿದ ಹಿರಿಯರ ಸ್ಮರಣೆ; ನಡೆಸಿಕೊಡುವವರು: ಎಚ್.ಕೆ. ಚಂದ್ರಶೇಖರ್ ಮತ್ತು ನಳಿನಿ ಕುಕ್ಕೆ)

(8) 5:30-6:00 - ಪುಸ್ತಕದಂಗಡಿಗೆ ಭೇಟಿ (ಮಂಜುನಾಥ್ ಮತ್ತು ಶಂಕರ ಹೆಗ್ಡೆ)

(9) 6:00-8:30 - ಸಾಂಸ್ಕೃತಿಕ ಕಾರ್ಯಕ್ರಮ (ಪ್ರಸನ್ನ ಕಸ್ತೂರಿ ಅವರ ನಿರ್ದೇಶನದಲ್ಲಿ ಸಂಗಮ ಹಾಗು ಇತರ ಮಧ್ಯವಲಯದ ಕನ್ನಡ ಕೂಟಗಳಿಂದ ನೃತ್ಯ ಮತ್ತು ನಾಟಕ ಪ್ರದರ್ಶನ)

(10) 8:00-10:00 - ಭೋಜನ

ಭಾನುವಾರ

(1) 8:00-9:00 - ಬೆಳಗಿನ ಉಪಾಹಾರ

(2) 9:00-9:10 - ಪ್ರಾರ್ಥನೆ ಮತ್ತು ವಾದ್ಯಗೋಷ್ಠಿ (ಸಂಗಮ ಮಕ್ಕಳಿಂದ)

(3) 9:10-10:40 - ಅನುವಾದ ಕಮ್ಮಟ (ಅನುವಾದಕ್ರಿಯೆಯ ಒಂದು ಮಿಂಚುನೋಟ; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ)

(4) 10:40-10:55 - ವಿವಿಧ ವಿಶೇಷಗಳು (ನಡೆಸಿಕೊಡುವವರು ಮೈ.ಶ್ರೀ. ನಟರಾಜ)

(5) 11:00-12:00 - ನಮ್ಮ ಬರಹಗಾರರು (ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಮತ್ತು ಬರಹಗಾರರ ಪರಿಚಯ; ನಡೆಸಿಕೊಡುವವರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಮೀರಾ ರಾಜಗೋಪಾಲ್)

(6) 12:00-1:00 - ಮಧ್ಯಾಹ್ನದ ಭೋಜನ

(7) 1:00-1:30 - ಪುಸ್ತಕದಂಗಡಿಗೆ ಭೇಟಿ

(8) 1:30-2:30 - ಅತಿಥಿಗಳೊಂದಿಗೆ ಸಂವಾದ (ಪ್ರಧಾನ ಗುರುದತ್ತ, ಎಸ್.ಎನ್. ಶ್ರೀಧರ್ ಮತ್ತು ನಾರಾಯಣ ಹೆಗ್ಡೆ ಅವರೊಂದಿಗೆ ಪ್ರಶ್ನೋತ್ತರಗಳು; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ ಮತ್ತಿತರರು)

(9) 2:30-2:45 - ಚಹಾ ವಿರಾಮ

(10) 2:45-3:45 - ಮಧ್ಯವಲಯದ ವಿವಿಧ ಕನ್ನಡ ಕೂಟಗಳ ಮಕ್ಕಳಿಂದ ಮನರಂಜನೆ ಮತ್ತು ಸವಿತಾ ರವಿಶಂಕರ್ ಅವರ "ಚಿಲಿಪಿಲಿ ಕನ್ನಡ ಕಲಿ" ಧ್ವನಿ ಸಂಪುಟ ಬಿಡುಗಡೆ

(11) 3:45-4:30 - ಸ್ವಯಂಸೇವಕರ ಪರಿಚಯ, ವಂದನಾರ್ಪಣೆ ಮತ್ತು ಸಮಾರೋಪ

(12) 4:30ಕ್ಕೆ ವಿದಾಯ!

 

ಒನ್.ಇಂಡಿಯಾದಲ್ಲಿ ಪ್ರಕಟವಾಗಿರುವ ಕಾರ್ಯಕ್ರಮಗಳ ಪಟ್ಟಿ:-

http://kannada.oneindia.com/nri/article/7th-vasantha-sahityotsava-program-details-093906.html

 Posted by at 9:39 PM
May 122015
 

 ಪ್ರಮುಖ ಮೈಲಿಗಲ್ಲುಗಳು

೨೦೧೨: KSR-Book Club ಸ್ಥಾಪನೆ. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಮ್ಮೇಳನದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ವಿಚಾರಶೀಲವೂ ಉಪಯುಕ್ತವೂ ಆಗಿದೆ.

೨೦೧೩ : ಆರನೆಯ ವಸಂತೋತ್ಸವ
ಮೇ ೧೮ ಮತ್ತು ೧೯, ಟೆಕ್ಸಸ್ ರಾಜ್ಯದ ಹ್ಯೂಸ್ಟನ್ನಿನಲ್ಲಿ, ಹ್ಯೂಸ್ಟನ್ ಕನ್ನಡ ವೃಂದ ಡಲ್ಲಾಸ್, ಆಸ್ಟಿನ್ ಮತ್ತಿತರ ಕನ್ನಡಕೂಟಗಳ ಸಹಯೋಗದೊಂದಿಗೆ ನಡೆಸಲಾಯಿತು. ಮುಖ್ಯ ಅತಿಥಿ: ಕನ್ನಡ ಸಾಹಿತಿ : ಕೆ.ವಿ. ತಿರುಮಲೇಶ್, ಮುಖ್ಯ ಭಾಷಣದ ವಿಷಯ : ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು
- ಪ್ರೊ. ಕೆ.ವಿ. ತಿರುಮಲೇಶ್, ಬಿಡುಗಡೆಯಾದ ಪುಸ್ತಕ : ಬೇರು ಸೂರು - ‘ಅಮೆರಿಕದಲ್ಲಿ ನಮ್ಮ ಬದುಕು’ ವಿಷಯ ಆಧಾರಿತ - (ಸಂ: ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್, ಜ್ಯೋತಿ ಮಹಾದೇವ)

೨೦೧೧: ಐದನೇ ವಸ೦ತ ಸಾಹಿತ್ಯೋತ್ಸವ, ಏಪ್ರಿಲ್ ೩೦-ಮೇ ೧, ಕ್ಯಾಲಿಫ಼ೋರ್ನಿಯಾ ಕೊಲ್ಲಿ ಪ್ರದೇಶದ ವುಡ್‌ಸೈಡ್ ಊರಿನಲ್ಲಿ; ಸಹಯೋಗ: ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ; ಸಹಕಾರ: ಸಾಹಿತ್ಯ ಗೋಷ್ಠಿ; ಮುಖ್ಯ ವಸ್ತು: ಕನ್ನಡ ಪ್ರಬಂಧ; ಮುಖ್ಯ ಅತಿಥಿ: ಡಾ. ಸುಮತೀ೦ದ್ರ ನಾಡಿಗ; ಪ್ರಮುಖ ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ;” ವಿಶೇಷ ಅತಿಥಿ: ಭುವನೇಶ್ವರಿ ಹೆಗಡೆ; ಭಾಷಣ: ಹಾಸ್ಯ ಲೇಖಕಿಯಾಗಿ ನನ್ನ ಅನುಭವಗಳು; ಪ್ರಕಟವಾದ ಪುಸ್ತಕ: “ಮಥಿಸಿದಷ್ಟೂ ಮಾತು” (ಸ೦ಪಾದಕರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎ೦.ಆರ್. ದತ್ತಾತ್ರಿ)

೨೦೦೯: ನಾಲ್ಕನೆಯ ವಸಂತ ಸಾಹಿತ್ಯೋತ್ಸವ, ಮೇ ೩೦-೩೧, ಬಾಲ್ಟಿಮೋರ್-ವಾಷಿಂಗ್ಟನ್ ನಡುವಿನ ರಾಕ್‌ವಿಲ್, ಮೇರಿಲೆಂಡ್‌ನಲ್ಲಿರುವ Universities at Shady Grove ನಲ್ಲಿ. ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ ಈ ಉತ್ಸವಕ್ಕೆ ಮುಖ್ಯ ವಸ್ತು: ಕನ್ನಡ ಕಾದಂಬರಿ; ಮುಖ್ಯ ಅತಿಥಿ: ಡಾ. ವೀಣಾ ಶಾಂತೇಶ್ವರ; ಭಾಷಣದ ಶೀರ್ಷಿಕೆ: "ಕನ್ನಡ ಕಾದಂಬರಿ - ಕಳೆದ ಕಾಲು ಶತಮಾನದಲ್ಲಿ;" ವಿಶೇಷ ಅತಿಥಿ ವೈದೇಹಿಯವರಿಂದ ಸ್ವಂತ ಕತೆಗಳ ವಾಚನ ಮತ್ತು ಅವರೊಂದಿಗೆ ಸಂವಾದ; ಪ್ರಕಟವಾದ ಪುಸ್ತಕ: "ಕನ್ನಡ ಕಾದಂಬರಿ ಲೋಕದಲ್ಲಿ...ಹೀಗೆ ಹಲವು..." (ಸಂಪಾದಕರು: ಮೈ.ಶ್ರೀ. ನಟರಾಜ).

೨೦೦೮: ಆಡಳಿತ ಮಂಡಲಿಯ ಪುನಾರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ.

೨೦೦೭: ಮೂರನೆಯ ವಸಂತ ಸಾಹಿತ್ಯೋತ್ಸವ, ಮೇ ೧೯-೨೦, ಚಿಕಾಗೋ ಬಳಿಯ ಅರೋರ, ಇಲಿನಾಯ್‌ನಲ್ಲಿನ ಶ್ರೀ ಬಾಲಾಜಿ ದೇವಾಲಯದಲ್ಲಿ. ಸಹಪ್ರವರ್ತಕರು: ವಿದ್ಯಾರಣ್ಯ ಕನ್ನಡ ಕೂಟ; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ; ಮುಖ್ಯ ಅತಿಥಿ: ಪ್ರೊ. ಅ.ರಾ. ಮಿತ್ರ; ಭಾಷಣದ ಶೀರ್ಷಿಕೆ: "ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ;" ವಿಶೇಷ ಅತಿಥಿ: ಡಾ. ಎಚ್.ಎಸ್. ರಾಘವೇಂದ್ರ ರಾವ್; ಭಾಷಣದ ಶೀರ್ಷಿಕೆ: "ಅಮೆರಿಕಾದ ಕನ್ನಡಿಗರ ಸಾಹಿತ್ಯ ಸೃಷ್ಟಿ - ಕೆಲವು ಅನಿಸಿಕೆಗಳು;" ಪ್ರಕಟವಾದ ಪುಸ್ತಕ: "ನಗೆಗನ್ನಡಂ ಗೆಲ್ಗೆ!" (ಸಂಪಾದಕರು: ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್).

ಲಾಸ್ ಏಂಜಲಿಸ್‌ನ "ಅಂಜಲಿ" ಪ್ರಕಟಿಸಿದ "ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)" ಯೋಜನೆಯಲ್ಲಿ ಆರ್ಥಿಕ ಸಹಾಯ; ಅಮೆರಿಕದ Internal Revenue Service (IRS)ನಿಂದ ಆದಾಯ ತೆರಿಗೆ ವಿನಾಯಿತಿ ಅನುದಾನ; ರಂಗದ ಅಂತರ್ಜಾಲ ತಾಣದ ಉದ್ಘಾಟನೆ (http://www.Kannadasahityaranga.org)

೨೦೦೬: ಕನ್ನಡ ಸಾಹಿತ್ಯ ಶಿಬಿರ - ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಎರಡು ದಿನಗಳ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ. ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಮುದ್ರಿಕೆಗಳ (CD) ಸಂಪುಟದ ಹಂಚಿಕೆ.

೨೦೦೫: ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮.

ಎರಡನೆಯ ಸಾಹಿತ್ಯೋತ್ಸವ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್‌ವುಡ್ ಎಂಬ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ. ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ - ದಕ್ಷಿಣ ಕ್ಯಾಲಿಫ಼ೋರ್ನಿಯ; ಕಸ್ತೂರಿ ಕನ್ನಡ ಸಂಘ - ಸ್ಯಾನ್ ಡಿಯೇಗೋ; ಮತ್ತು "ಅಂಜಲಿ" - ಲಾಸ್ ಏಂಜಲಿಸ್; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ; ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣದ ಶೀರ್ಷಿಕೆ: "ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ;" ಪ್ರಕಟವಾದ ಪುಸ್ತಕ: "ಆಚೀಚೆಯ ಕತೆಗಳು" (ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ).

೨೦೦೪: ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. (Federal EIN: 20-0939357)

ಮೇ ೨೯, ಮೊಟ್ಟಮೊದಲ ವಸಂತ ಸಾಹಿತ್ಯೋತ್ಸವ, ಫಿಲಿಡೆಲ್ಫಿಯ  ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ. ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ); ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ; ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣದ ಶೀರ್ಷಿಕೆ: "ಕನ್ನಡ ಸಾಹಿತ್ಯ -- ಒಂದು ಮಿಂಚು ನೋಟ;" ಪ್ರಕಟವಾದ ಪುಸ್ತಕ: "ಕುವೆಂಪು ಸಾಹಿತ್ಯ ಸಮೀಕ್ಷೆ"(ಪ್ರಧಾನ ಸಂಪಾದಕ: ನಾಗ ಐತಾಳ).

೨೦೦೩: ಕನ್ನಡ ಸಾಹಿತ್ಯ ರಂಗದ ಪರಿಕಲ್ಪನೆ ಹಾಗು ರಂಗದ ಆಶಯ ಮತ್ತು ಧ್ಯೇಯೋದ್ದೇಶಗಳ ಅಂಕುರಾರ್ಪಣೆ.

ವಿ.ಸೂ. ಎಲ್ಲ ಮುಖ್ಯ ಅತಿಥಿಗಳ ಭಾಷಣಗಳನ್ನು ಪ್ರತ್ಯೇಕವಾಗಿ ಮುದ್ರಿಸಿದೆ. ನಮ್ಮ ಪ್ರಕಟನೆಗಳನ್ನು ಅಭಿನವ ಮತ್ತು ವಸ೦ತ ಪ್ರಕಾಶನ,ಬೆ೦ಗಳೂರು, ಅವರಿ೦ದ ಪಡೆಯಬಹುದು.

 Posted by at 10:57 AM
May 122015
 

ಕನ್ನಡ ಸಾಹಿತ್ಯ ರಂಗ - ಉದ್ದೇಶಗಳು, ಸಾಧನೆಗಳು

ರ೦ಗದ ಕಲ್ಪನೆ, ಉದ್ದೇಶಗಳು. ನಮ್ಮ ಕನ್ನಡ ಸಾಹಿತ್ಯ ರಂಗದ ಮೂಲ ಉದ್ದೇಶ ಅಮೆರಿಕದಲ್ಲಿ ನೆಲಸಿರುವ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು, ಬೆಳೆಸುವುದು; ಅದರ ಸಾಧನೆಗಾಗಿ ಬೇಕಾದ ಎಲ್ಲ ಕಾರ್ಯಕ್ರಮಗಳನ್ನೂ ಕೈಗೊಳ್ಳುವುದು. ಇಂಥ ಒಂದು ಸಂಸ್ಥೆ ಏಕೆ ಬೇಕು, ಈಗಾಗಲೆ ಬೇಕಾದಷ್ಟು ಕನ್ನಡ ಸಂಘಗಳೂ, ಕೂಟಗಳೂ ಇಲ್ಲವೆ ಎಂದು ನೀವು ಕೇಳಬಹುದು. ನಿಜ, ಅಮೆರಿಕದಲ್ಲಿ ಕನ್ನಡಿಗರ ಜನಸಂಖ್ಯೆ ಹೆಚ್ಚಿದಂತೆಲ್ಲ ಕನ್ನಡ ಕೂಟಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಮೆರಿಕಾದ್ಯಂತ ಮೂವತ್ತಕ್ಕೂ ಮೇಲ್ಪಟ್ಟು ಕನ್ನಡ ಸಂಘಗಳಿವೆ. ಆದರೆ ಅವೆಲ್ಲ ಬಹುಮಟ್ಟಿಗೆ ಸಾಂಸ್ಕೃತಿಕ ಸಂಘಗಳು. ಯುಗಾದಿಯಿಂದ ದೀಪಾವಳಿಯವರೆಗೆ ನಾನಾ ಹಬ್ಬಗಳನ್ನಾಚರಿಸಿ ಕನ್ನಡಿಗರ ಮನ ತಣಿಸುತ್ತವೆ, ಬಿಸಿಬೇಳೆ ಹುಳಿಯನ್ನದಿಂದ ಅವರ ಹೊಟ್ಟೆ ತುಂಬಿಸುತ್ತವೆ. ಅದೊಂದು ಸಂಭ್ರಮದ ವಾತವರಣ. ಅದು ಎಲ್ಲರಿಗೂ ಬೇಕು. ಇನ್ನು ಎರಡು ವರ್ಷಕ್ಕೊಮ್ಮೆ ಅಮೆರಿಕದ ವಿವಿಧ ಮುಖ್ಯ ಪಟ್ಟಣಗಳಲ್ಲಿ ನಡೆಯುವ ಅಕ್ಕ ವಿಶ್ವ ಸಮ್ಮೇಳನಗಳ ಅದ್ಧೂರಿಯನ್ನು ನೀವು ನೋಡೇ ಅರಿಯಬೇಕು. ಹೊರದೇಶವೊಂದರಲ್ಲಿ ನಾಲ್ಕಾರುಸಾವಿರ ಕನ್ನಡಿಗರನ್ನು ಒಂದೇ ಚಾವಣಿಯ ಕೆಳಗೆ ನೋಡುವ ಸೌಭಾಗ್ಯ ಯಾರಿಗೆ ಬೇಡ? ೨೦೧೦ರಲ್ಲಿ ನಾವಿಕ ಎಂಬ ಹೊಸ ಸಂಸ್ಥೆ ಇದೇ ರೀತಿ ಒಂದು ದೊಡ್ಡ ಸಮ್ಮೇಳನವನ್ನು ಕ್ಯಾಲಿಫ಼ೋರ್ನಿಯಾದಲ್ಲಿ ನಡೆಸಿತು. ಅದೆಲ್ಲ ನಿಜವೆ ಸರಿ, ಆದರೆ ಅಂಥ ಹಬ್ಬದ ಸಂಭ್ರಮದಲ್ಲಿ ಸಾಹಿತ್ಯ ಚಿಂತನೆಯಂಥ ಗಂಭೀರ ಮನೋವ್ಯಾಪಾರಕ್ಕೆ ತಾವೆಲ್ಲಿ?-ಎಂಬ ಯೋಚನೆಯೂ ಸಾಹಿತ್ಯಾಸಕ್ತರಿಗೆ ಬಾರದೆ ಇರದು. ಅದರಿಂದಲೇ ಕನ್ನಡ ಸಾಹಿತ್ಯ ರಂಗದಂಥ ರಾಷ್ಟ್ರೀಯ ಸಂಸ್ಥೆಯೊಂದು ಹಲವರಿಗೆ ಬೇಕೆನಿಸಿತು; ಅದರ ಫಲವಾಗಿ ೨೦೦೩ರಲ್ಲಿ ಉದ್ಭವವಾದ ಆ ಸಂಸ್ಥೆ ೨೦೦೪ರಲ್ಲಿ ತನ್ನ ಮೊದಲ ಕನ್ನಡ ವಸಂತ ಸಾಹಿತ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಶ್ರದ್ಧೆಯಿಂದ ನೆರವೇರಿಸಿತು.

ಆಂದಿನಿಂದ ಮೊದಲುಗೊಂಡು ಈ ಸಂಸ್ಥೆ ಸಾಹಿತ್ಯ ಕ್ಷೇತ್ರದ ಹಲವಾರು ಆಯಾಮಗಳಲ್ಲಿ ಮಾಡಿರುವ ಸಾಧನೆಗಳನ್ನು ಕೆಳಗೆ ಕೊಟ್ಟಿದೆ. ಹೆಚ್ಚಿನ ವಿವರಗಳಿಗೆ ‘ಪ್ರಮುಖ ಮೈಲಿಗಲ್ಲುಗಳು’ ನೋಡಿ.

ನಮ್ಮ ಅತಿಥಿಗಳು. ಪ್ರತಿ ಸಮ್ಮೇಳನಕ್ಕೂ ನಾವು ಕರ್ನಾಟಕದಿ೦ದ ಒಬ್ಬರಿಬ್ಬರು ಉತ್ತಮ ಸಾಹಿತಿಗಳನ್ನು, ವಿದ್ವಾ೦ಸರನ್ನು ಕರೆಸಿ ಅವರ ಭಾಷಣಗಳನ್ನು ಏರ್ಪಡಿಸಿದ್ದೇವೆ. ಇದುವರೆಗೆ ಡಾ. ಪ್ರಭುಶ೦ಕರ (೨೦೦೪), ಪ್ರೊ. ಬರಗೂರು ರಾಮಚ೦ದ್ರಪ್ಪ (೨೦೦೫), ಪ್ರೊ. ಅ.ರಾ. ಮಿತ್ರ ಮತ್ತು ಡಾ. ಎಚ್.ಎಸ್. ರಾಘವೇ೦ದ್ರ ರಾವ್ (೨೦೦೭), ಡಾ. ವೀಣಾ ಶಾ೦ತೇಶ್ವರ ಮತ್ತು ಶ್ರೀಮತಿ ವೈದೇಹಿ (೨೦೦೯), ಡಾ. ಸುಮತೀ೦ದ್ರ ನಾಡಿಗ ಮತ್ತು ಶ್ರೀಮತಿ ಭುವನೇಶ್ವರಿ ಹೆಗಡೆ (೨೦೧೧) – ಇವರೆಲ್ಲ ಬ೦ದು ನಮ್ಮ ಸಾಹಿತ್ಯಾಭಿರುಚಿಯನ್ನು ಬೆಳೆಸಿಹೋಗಿದ್ದಾರೆ.

ನಮ್ಮ ಪ್ರಕಟನೆಗಳು. ಪ್ರತಿ ಸಮ್ಮೇಳನದ ಅಂಗವಾಗಿ ಒಂದೊಂದು ಗ್ರಂಥವನ್ನು ಹೊರತಂದಿದ್ದೇವೆ: ‘ಕುವೆಂಪು ಸಾಹಿತ್ಯ ಸಮೀಕ್ಷೆ’ (೨೦೦೪), ‘ಆಚೀಚೆಯ ಕತೆಗಳು’ (೨೦೦೫), ‘ನಗೆಗನ್ನಡಂ ಗೆಲ್ಗೆ!’ (೨೦೦೭), ‘ಕನ್ನಡ ಕಾದಂಬರಿ ಲೋಕದಲ್ಲಿ... ಹೀಗೆ ಹಲವು...’ (೨೦೦೯) ಮತ್ತು ‘ಮಥಿಸಿದಷ್ಟೂ ಮಾತು’ (೨೦೧೧). ೨೦೧೩ರಲ್ಲಿ ‘ಬೇರು ಸೂರು – ಅಮೆರಿಕದಲ್ಲಿ ನಮ್ಮ ಬದುಕು’ ಪುಸ್ತಕವನ್ನು ಹೊರತರುತ್ತಿದ್ದೇವೆ.

ನಮ್ಮ ಪ್ರಕಟನೆಗಳ ಒಂದು ವೈಶಿಷ್ಟ್ಯವೆಂದರೆ ಸಾಧ್ಯವಾದ ಮಟ್ಟಿಗೆ ಎಲ್ಲ ಲೇಖನಗಳನ್ನೂ (ಮುನ್ನುಡಿ, ಇತ್ಯಾದಿ ಬಿಟ್ಟು) ಇಲ್ಲಿ ನೆಲಸಿರುವ ಕನ್ನಡಿಗರ ಕೈಯಲ್ಲೇ ಬರೆಸಿರುವುದು. ಈ ಮೂಲಕ ನಮ್ಮಲ್ಲಿರುವ ಸಾಹಿತ್ಯಾಸಕ್ತಿಯನ್ನು ಹೆಚ್ಚು ಕೃಷಿ ಮಾಡಿದಂತಾಗುತ್ತದೆ ಎಂಬುದು ನಮ್ಮ ಮೂಲ ನಂಬಿಕೆ.

ಕನ್ನಡ ಸಾಹಿತ್ಯ ಶಿಬಿರ. ಕನ್ನಡ ಸಾಹಿತ್ಯ ರಂಗ ಕೈಗೊಂಡ ಒಂದು ವಿಶಿಷ್ಟ ಕೆಲಸವೆಂದರೆ ೨೦೦೬ರಲ್ಲಿ ಅಮೆರಿಕಾದ್ಯಂತ ಒಂಭತ್ತು ಕಡೆ ಕನ್ನಡ ಸಾಹಿತ್ಯ ಶಿಬಿರವನ್ನು ನಡೆಸಿದ್ದು. ಇಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಅಧಿಕ ಮ೦ದಿ ಸಾಹಿತ್ಯೇತರ ಕ್ಷೇತ್ರಗಳಲ್ಲಿ (ವೈದ್ಯ, ತಾ೦ತ್ರಿಕ, ವಾಣಿಜ್ಯ, ಗಣಕತ೦ತ್ರ, ಇತ್ಯಾದಿ) ಪರಿಣತಿ ಪಡೆದವರು. ಅವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯು೦ಟು. ಆದರೆ ಅದರ ಚಾರಿತ್ರಿಕ ಬೆಳವಣಿಗೆಯ ಪರಿಚಯವಿಲ್ಲ. ಅ೦ಥವರ ಹಾಗೂ ಇತರರ ಅನುಕೂಲಕ್ಕಾಗಿ ರ೦ಗ ಒ೦ದು ಸಾಹಿತ್ಯ ಶಿಬಿರ ನಡೆಸಿತು. ಶಿಲಾಶಾಸನಗಳಿಂದ ಹಿಡಿದು ನವೋದಯದವರೆಗೂ ನಮ್ಮ ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿಯಲ್ಲಿ ಮುಖ್ಯ ಮೈಲಿಗಲ್ಲುಗಳನ್ನು ಗುರುತಿಸಿ ಅವುಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಹೆಸರಾಂತ ಕವಿ ಮತ್ತು ಉಪನ್ಯಾಸಕಾರ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಂದ ಏರ್ಪಡಿಸಿತ್ತು. ಈ ಶಿಬಿರದ ಅ೦ಗವಾಗಿ ಡಾ. ಭಟ್ಟರು ತಯಾರಿಸಿದ ನಾಲ್ಕು ಧ್ವನಿಮುದ್ರಿಕೆಗಳ ಸ೦ಪುಟವನ್ನೂ ಒ೦ದು ಉಪಯುಕ್ತ ಕೈಪಿಡಿಯನ್ನೂ ಕೊಡಲಾಯಿತು. ಎರಡು ದಿನದ ಈ ಶಿಬಿರದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಅಮೆರಿಕದಲ್ಲಿ ಇಂಥ ಒಂದು ಶಿಬಿರ ಈ ಪ್ರಮಾಣದಲ್ಲಿ ನಡೆದದ್ದು ಅದೇ ಮೊದಲು.

ನಮ್ಮ ಬರಹಗಾರರು ಮತ್ತು ಅವರ ಕೃತಿಗಳ ಪರಿಚಯ, ಮಾರಾm . ಸಮ್ಮೇಳನದ ಅಂಗವಾಗಿ ನಾವು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲೂ ಇಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪ್ರಚೋದಿಸುವ, ಅವರ ಸಾಹಿತ್ಯ ಸಾಧನೆಗಳನ್ನು ಎತ್ತಿ ಹಿಡಿಯುವ ಆಶಯವಿರುತ್ತದೆ. ಈ ದಿಕ್ಕಿನಲ್ಲಿ, ಇಲ್ಲಿನ ಬರಹಗಾರರನ್ನೂ, ಅವರ ಕೃತಿಗಳನ್ನೂ ಜನರ ಮುಂದಿಡುವ ‘ನಮ್ಮ ಬರಹಗಾರರು’ ಕಾರ್ಯಕ್ರಮ, ಅವರ ಪುಸ್ತಕಗಳನ್ನು ಕೊಳ್ಳಲು ಅನುಕೂಲವಾದ ಒಂದು ಪುಸ್ತಕ ಭಂಡಾರ – ಇದು ರ೦ಗ ಕೈಗೊ೦ಡಿರುವ ಒ೦ದು ಮುಖ್ಯ ಕೆಲಸ. ನಮ್ಮ ಪುಸ್ತಕಗಳಲ್ಲಿ ಬರೆಯುವ ಎಷ್ಟೋ ಮಂದಿ ಇಲ್ಲಿನ ಲೇಖಕರು ಇದೇ ತಮ್ಮ ಮೊತ್ತಮೊದಲ ಅಚ್ಚಾದ ಲೇಖನ ಎಂದು ಹಿಗ್ಗಿದ್ದಾರೆ. ರಂಗಕ್ಕೆ ಅದೊಂದು ತೃಪ್ತಿ.

ದೂರವಾಣಿ ಕಿರುಸಮ್ಮೇಳನಗಳು. ೨೦೧೨ರಲ್ಲಿ ರ೦ಗ KSR-Book Club ಅನ್ನು ಸ್ಥಾಪಿಸಿತು. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಮ್ಮೇಳನದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ಉತ್ಸಾಹಕಾರಿಯೂ ಉಪಯುಕ್ತವೂ ಆಗಿದೆ.

ಅ೦ತರ್ಜಾಲ ತಾಣ. ರ೦ಗದ ಮತ್ತು ಅದರ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಮತ್ತು ನಮ್ಮ ಸದಸ್ಯರ ಬರಹಗಳನ್ನು ಪ್ರಕಟಿಸಲು ಅನುಕೂಲವಾಗುವ೦ತೆ ರ೦ಗ ಒ೦ದು ಅ೦ತರ್ಜಾಲ ತಾಣವನ್ನು ಸ್ಥಾಪಿಸಿದೆ. ದಯವಿಟ್ಟು ಈ ತಾಣಕ್ಕೆ ಭೇಟಿಕೊಡಿ: www.kannadasahityaranga.org

ಇತರ ಸಂಸ್ಥೆಗಳೊ೦ದಿಗೆ ಸ೦ಪರ್ಕ. ನಮ್ಮ ಸಮ್ಮೇಳನಗಳನ್ನು ನಡೆಸುವಲ್ಲಿ ಹಲವಾರು ಸ್ಥಳೀಯ ಕನ್ನಡ ಕೂಟಗಳು ನಮ್ಮೊಂದಿಗೆ ಸಹಕರಿಸಿವೆ, ನಮ್ಮ ಸಹಪ್ರಾಯೋಜಕರಾಗಿ ನೆರವಿತ್ತಿವೆ. ಪೆನ್ಸಿಲ್ವೇನಿಯಾ, ನ್ಯೂ ಜೆರ್ಸಿ ಮತ್ತು ಡೆಲವೇರ್ ತ್ರಿರಾಜ್ಯಗಳ ತ್ರಿವೇಣಿ ಕನ್ನಡ ಕೂಟ, ಲಾಸ್ ಏ೦ಜಲಿಸ್‌ನ ದಕ್ಷಿಣ ಕ್ಯಾಲಿಫ಼ೋರ್ನಿಯಾ ಕನ್ನಡ ಸಾ೦ಸ್ಕೃತಿಕ ಸ೦ಘ, ಚಿಕಾಗೋ ವಿದ್ಯಾರಣ್ಯ, ಮೇರಿಲ್ಯಾ೦ಡ್, ವರ್ಜೀನಿಯ ಮತ್ತು ವಾಷಿ೦ಗ್ಟನ್ನಿನ ಕಾವೇರಿ, ಸಾನ್ ಫ಼್ರಾನ್ಸಿಸ್ಕೋ ಬಳಿಯ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟ, ಟೆಕ್ಸಸ್‌ನ ಹ್ಯೂಸ್ಟನ್ ಕನ್ನಡ ವೃ೦ದ – ಈ ಎಲ್ಲ ಸ೦ಸ್ಥೆಗಳೂ ನಮಗೆ ತಮ್ಮ ಸಹಕಾರವಿತ್ತಿದ್ದಾರೆ. ಈ ಬರುವ ಸಮ್ಮೇಳನ (೨೦೧೫)    ಸೈಂಟ್ ಲೂಯಿಸ್‍ನ ‘ಸಂಗಮ’  ಮತ್ತು  ಇತರ ಮಧ್ಯವಲಯ ಕನ್ನಡಕೂಟಗಳ  ಸಹಯೋಗದಲ್ಲಿ  ನಡೆಯುತ್ತಿದೆ. ಕನ್ನಡದ ಕೆಲಸಕ್ಕಾಗಿ ನಮ್ಮೊ೦ದಿಗೆ ಕೈಜೋಡಿಸಿರುವ ಈ ಎಲ್ಲ ಸಂಸ್ಥೆಗಳಿಗೂ ನಮ್ಮ ಧನ್ಯವಾದಗಳು.

೨೦೦೫ರಲ್ಲಿ ತ್ರಿವೇಣಿ ಸ೦ಸ್ಥೆ ಆಚರಿಸಿದ ‘ಪುತಿನ ಶತಮಾನೋತ್ಸವ’ ಸ೦ದರ್ಭದಲ್ಲಿ ಕಸಾರ೦ ಆ ಸ೦ಸ್ಥೆಗೆ ಉದಾರವಾಗಿ ಧನ ಸಹಾಯ ನೀಡಿತು. ಅ೦ತೆಯೇ ಕ್ಯಾಲಿಫ಼ೋರ್ನಿಯಾದ ಸಾಹಿತ್ಯಾ೦ಜಲಿ ೨೦೦೭ರಲ್ಲಿ ಪ್ರಕಟಿಸಿದ ‘ಕನ್ನಡದಮರ ಚೇತನ – ಮಾಸ್ತಿ ವೆ೦ಕಟೇಶ ಅಯ್ಯ೦ಗಾರ್ ಸಾಹಿತ್ಯ ಸಮೀಕ್ಷೆ’ ಗ್ರ೦ಥ ಪ್ರಕಟನೆಗೂ ಕಸಾರ೦ ಸಹಾಯ ದ್ರವ್ಯ ನೀಡಿದೆ.

ವಿಶಿಷ್ಟ ಸ೦ಸ್ಥೆ. ಕನ್ನಡ ಸಾಹಿತ್ಯ ರಂಗ ಒಂದು ವಿಶಿಷ್ಟ ಸಂಸ್ಥೆ. ಅದಕ್ಕೆ ಒಂದು ನಿರ್ದಿಷ್ಟವಾದ ಗುರಿಯಿದೆ, ಕಾರ್ಯಕ್ಷೇತ್ರವಿದೆ. ಸಾಹಿತ್ಯಿಕ ಮೌಲ್ಯವಿಲ್ಲದ ಕಾರ್ಯಕ್ರಮಗಳಲ್ಲಿ ಅದಕ್ಕೆ ಆಸಕ್ತಿಯಿಲ್ಲ. ಅದರ ಕಾರ್ಯಸಾಧನೆಗೆ ಸಾಹಿತ್ಯದಲ್ಲಿ ಒಲವುಳ್ಳ ಕನ್ನಡಿಗರೆಲ್ಲರ ಬೆಂಬಲ, ಪ್ರೋತ್ಸಾಹ, ಸಹಾಯ ಅಗತ್ಯ. ಅದು ಇದುವರೆಗೆ ಮಾಡಿರುವ ಕೆಲಸ ಅದರ ಬಗ್ಗೆ ನಿಮ್ಮಲ್ಲಿ ಭರವಸೆ ಮೂಡಿಸುವುದೆಂದು ನಂಬಿದ್ದೇವೆ. ಅದು ಒಂದು ಲಾಭೋದ್ದೇಶವಿಲ್ಲದ  ಸಾಂಸ್ಕೃತಿಕ ಸಂಸ್ಥೆ (Non-profit organization) ಎಂದು ಅಮೆರಿಕದ Internal Revenue Service ಮನ್ನಣೆ ನೀಡಿದೆ. ನಮ್ಮಲ್ಲಿ ವಿಶ್ವಾಸ ತೋರಿ ನಮ್ಮ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಧನ ಸಹಾಯ ಮಾಡಿ ನಮ್ಮನ್ನು ಪ್ರೋತ್ಸಾಹಿಸಿರುವ ಎಲ್ಲ ಸಹೃದಯರಿಗೂ ರಂಗದ ಅನಂತ ವಂದನೆಗಳು.

ಇಂಥ ಒಂದು ಸಂಸ್ಥೆ ಬೆಳೆಯಬೇಕಾದರೆ ಕರ್ನಾಟಕದ, ಭಾರತದ, ಅಮೆರಿಕದ ಮತ್ತು ಇತರ ದೇಶಗಳಲ್ಲಿರುವ ಎಲ್ಲ ಕನ್ನಡಿಗರ ಬೆಂಬಲ, ವಿಶ್ವಾಸ ಅಗತ್ಯ. ಅಂಥ ಬೆಂಬಲವನ್ನು ಅದು ಸದುಪಯೋಗಿಸಿಕೊಂಡು, ಕನ್ನಡ ಸಾಹಿತ್ಯ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೆಂದು ಆಶ್ವಾಸನೆ ನೀಡುತ್ತೇವೆ. ಇದು ನಮ್ಮ ಪ್ರೀತಿಯ ಕನ್ನಡ ತಾಯಿಗೆ ನಾವು ಅರ್ಪಿಸುವ ಒ೦ದು ಚಿಕ್ಕ ಕಾಣಿಕೆ.
***

 Posted by at 10:55 AM