May 212013
 

ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವಕ್ಕೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ!

 

ಸಾಹಿತ್ಯ ರಂಗದ ದಶಮಾನೋತ್ಸವದ ಆಚರಣೆಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ.. ಹ್ಯೂಸ್ಟನ್ ಕನ್ನಡ ವೃಂದದವರ ಈ ದಶಮಾನೋತ್ಸವದ ಕೊಡುಗೆ ಎಂದೂ ಮರೆಯಲು ಸಾಧ್ಯವಿಲ್ಲ. ಆದಿಯಿಂದ ಕಡೆಯವರೆಗೂ ಒಂದೂ ಕಪ್ಪು ಛಾಯೆಗಳೇ ಇಲ್ಲದಂತ ಈ ಸಮಾವೇಶ ಬಹುಶಃ ಈ 6 ವಸಂತ ಸಾಹಿತ್ಯೋತ್ಸಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ.

ವಸಂತೋತ್ಸವ ಇದ್ದಿದ್ದು ಮೇ 18 (ಶನಿವಾರ) ಹಾಗೂ 19 (ಭಾನುವಾರ) ಆದರೂ, ನಿಜವಾದ ಉತ್ಸವ ಶುಕ್ರವಾರವೇ ಪ್ರಾರಂಭವಾಗಿತ್ತು. ಸಾಹಿತ್ಯೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ ಎನ್ನುವ ಸುಳಿವು ಶುಕ್ರವಾರ ಸಂಜೆ ನಡೆದ ಗೆಜ್ಜೆಪೂಜೆಯಲ್ಲೇ ಸಿಕ್ಕಿತ್ತು. ವಸಂತೋತ್ಸವಕ್ಕೆ ವೃಂದದ ನಡೆಸಿದ್ದ ತಾಲೀಮು ಇದನ್ನು ಸಾದರ ಪಡಿಸಿತ್ತು. ಭೋಜನದಿಂದ ಹಿಡಿದು ಉತ್ಸವಕ್ಕೆ ಬೇಕಾದ ಎಲ್ಲ ಕಾರ್ಯಗಳ ತಾಲೀಮನ್ನು ವೃಂದ ನಡೆಸಿತ್ತು. 200ಕ್ಕೂ ಹೆಚ್ಚು ನೋಂದಣಿಗಾರರನ್ನು ಸ್ವಾಗತಿಸಲು ಸಜ್ಜಾಗಿದ್ದರು ವೃಂದದ ಸ್ವಯಂ ಸೇವಕರು. ಹ್ಯೂಸ್ಟನ್ ಶೆಕೆಯಲ್ಲೂ ಬೆವರು ಸುರಿಸುತ್ತಾ ಬೆಳಗಿನಿಂದಲೂ ಕಷ್ಟ ಪಟ್ಟು ಕೆಲಸಮಾಡಿ ದುಡಿಯುತ್ತಿದ್ದುದು ಕಾಣ ಬರುತ್ತಿತ್ತು. ರಾತ್ರಿಯ ಊಟವೂ ಸೊಗಸಾಗಿತ್ತು..

 

KSR_WEB-289

 

ವಸಂತ ಸಾಹಿತ್ಯೋತ್ಸವದ ವಿಶೇಷವೆಂದರೆ ಪ್ರತಿ ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಪ್ರಾರಂಭವಾಗಿ ಪ್ರಕಟಿಸಿದ ಕಾಲದಲ್ಲೇ ಮುಗಿಯುವುದು. ಅದರ ಶುಭಾರಂಭವಾಗುವುದೇ ಸಮಾವೇಶದ ಮೊದಲ ದಿವಸ. ಪ್ರಾರಂಭ ಕರಾರುವಾಕ್ಕಾಗಿ ಆದರೆ ಮುಂದಿನ ಕಾರ್ಯಕ್ರಮಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ಅದರಂತೆ ಹ್ಯೂಸ್ಟನಿ‌ನಲ್ಲೂ ಸಹ ಆಯಿತು. ಭಾರತದ ರಾಯಭಾರಿಗಳ ಆಗಮನ ಸ್ವಲ್ಪ ತಡವಾದಾಗ ಕಾರ್ಯಕ್ರಮವೂ ತಡವಾಗುವ ಭಯವಾಗಿತ್ತು. ಆದರೆ ಅವರಿಲ್ಲದೇ ಮಿಕ್ಕ ಅತಿಥಿಗಳನ್ನು ಇನ್ನೇನು ವೇದಿಕೆಯ ಮೇಲೆ ಕರೆತರೆಬೇಕೆಂದು ಸಾದರಪಡಿಸುವಷ್ಟರಲ್ಲೇ ರಾಯಭಾರಿಗಳು ಹಾಜರಾಗಿ ಕಾರ್ಯಕ್ರಮವನ್ನು ಸರಿಯಾದ ವೇಳೆಗೆ ಪ್ರಾರಂಭವಾಗಿ ಶುಭಾರಂಭಕ್ಕೆ ನಾಂದಿಯಾಯಿತು.

KSR_WEB-302

 

ಕಾರ್ಯಕ್ರಮಗಳು ಒಂದಾದ ಮೇಲೊಂದು ಸರಿಯಾದ ವೇಳೆಗೆ ನಡೆಯುತ್ತಲೇ ಹೋದವು. ಊಟದ ವೇಳೆಗೆ ಊಟ, ಕಾಪಿ ವೇಳೆಯಲ್ಲಿ ಕಾಫಿ, ಬೇಕೆನಿಸಿದಾಗ ನೀರು. ಒಂದು ಮದುವೆ ಮನೆಯ ವಾತಾವರಣ. KSR ನವರೆಲ್ಲಾ ವರನ ಕಡೆಯವರಂತೆ ಕಂಡು ಬಂದರು. ಸಾಹಿತ್ಯರಂಗವೆಂಬ ವಧುವಿಗೆ ಟೆಕ್ಸಸ್ನ ಸಾಹಿತ್ಯಾಸಕ್ತರೆಂಬ ವಧುವಿನೊಡನೆ ವಿವಾಹೋತ್ಸವವಾದಂತೆ ಅನುಭವವಾಗಿತ್ತು. ಎಲ್ಲದಕ್ಕೂ ಕಾರಣ ಹ್ಯೂಸ್ಟನ್ ಕನ್ನಡ ಕಾರ್ಯಕರ್ತರು. ಎಲ್ಲರನ್ನೂ ಹೆಸರಿಸಲು ಪ್ರಯತ್ನಿಸಿದ್ದೇನೆ. ಬಿಟ್ಟಿದ್ದರೆ, ನನಗೂ ವಯಸ್ಸಾಗುತ್ತಿದೆ ಎಂದರ್ಥ. ಕ್ಷಮಿಸಿ. ನಾನಂತು ಯಾವುದೇ ಕಾರ್ಯಕರ್ತರನ್ನು ಬಿಡಲಿಲ್ಲ. ಎಲ್ಲರ ಬಳಿಯೂ ನೇರವಾಗಿ ಕೆಲಸ ಹೇಳುತ್ತಿದ್ದೆ. ಕ್ಷಮಿಸಿ ಅದೇ ನನ್ನ ಸ್ಟೈಲ್! ಫೋನಿನಲ್ಲೂ ಕಾಡಿಸಿ, ಸಮಾವೇಶದಲ್ಲೂ ಪ್ರತಿ ಹೆಜ್ಜೆಗೂ ಅವರೊಡನೆ ಸಂಪರ್ಕಿಸುತ್ತಿದ್ದವರೆಂದರೆ ಯಶವಂತ್ ಹಾಗೂ ಮಂಗಳ ಅವರು. ರಂಗದ ಹಿಂಬದಿಯಲ್ಲಿ ಮಹೇಶ್ ಹಾಗೂ ಧೀರಜ್ ಕೊಟ್ಟ ಭುಜ ಬಲ ವರ್ಣಿಸಲಸಾಧ್ಯ. ಮಯೂರ್ ಅವರ ಸಹಾಯವನ್ನೂ ಮರೆಯಲಾರೆ. ಇನ್ನು 2 ನಟ್ಟುಗಳು ಎಲ್ಲಾ ಕೆಲಸಕ್ಕೂ ಹಾಜರ್. ರವಿ ನಮ್ಮ ರಂಗ ಸಮಿತಿಯಲ್ಲಿ ಇಲ್ಲದಿದ್ದರೂ ಅವರನ್ನು ಬಿಡಲಿಲ್ಲ, ಅವರನ್ನೂ ಕೆಲಸಕ್ಕೆ ಎಳೆಯುತ್ತಿದ್ದೆ. ಎಲ್ಲರಿಗೂ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು. ಒಂದೇ ಹೇಳ ಬಲ್ಲೆ ನಿಮ್ಮ ಬಲವೊಂದಿದ್ದರೆ ಸಾಕು ನಾನು ವಿಶ್ವ ಸಮ್ಮೇಳನವನ್ನೂ ಮಾಡ ಬಲ್ಲೆ. ಮತ್ತೆ ಸಿಗೋಣ.

KSR_WEB-88

ಕೆ.ವಿ.ತಿರುಮಲೇಶ್, ಎಸ್.ಎಸ್, ಶ್ರೀಧರ್ ಮತ್ತು ಶ್ರೀಪತಿ ತಂತ್ರಿಯವರೊಂದಿಗಿನ ‘ಸಂವಾದ”

 

 

            ಇದು ಕಾರ್ಯಕ್ರಮ ನಡೆಸಿದ್ದಾಯಿತು. ಇನ್ನು ನನ್ನೊಂದಿಗೆ ಕಾರ್ಯಕ್ರಮ ಮಾಡಿದವರಿಗೂ ನಾನು ಚಿರ‌ಋಣಿ. ನನ್ನೊಂದಿಗೆ ನಾಟಕ ವಾಚನ ಮಾಡಿದ ಮೋಹನ್ ರಾಮ್, ಮೀರಾ ರಾಜಗೋಪಾಲ್ ಅವರಿಗೂ ಹಾಗೂ ಕಾರ್ಯಕ್ರಮದ ನಿರ್ವಾಹಕರಾದ ಹಾಗೂ ನಾಟಕದ ಕರ್ತೃ ಗುರುಪ್ರಸಾದ್ ಅವರಿಗೂ ವಂದನೆಗಳು. ಪ್ರತಿವಸಂತ ಸಾಹಿತ್ಯೋತ್ಸವದಲ್ಲಿ ಎರಡು ಕಾರ್ಯಕ್ರಮಗಳು ಬಹಳ ಕಷ್ಟವಾದ ಕಾರ್ಯಕ್ರಮಗಳು. ಅಂತಹ ಒಂದು ಸಾಹಿತ್ಯಗೋಷ್ಠಿ. ಅದರಲ್ಲಿ ನಾನು ಭಾಗಿಯಾಗಿದ್ದು ನನ್ನ ಅದೃಷ್ಟ. ಅದನ್ನು ಕರಾರುವಾಕ್ಕಾಗಿ ನಡೆಸಿಕೊಟ್ಟ ನಳಿನಿ ಮಯ್ಯ ಅವರಿಗೂ, ನಟರಾಜ್ ಅವರಿಗೂ ವಂದನೆಗಳು. ದಶಕದ ಪುಟಗಳನ್ನು ತಯಾರಿಸುವುದರಲ್ಲಿ ಸಹಾಯಮಾಡಿದ ರಾಜಗೋಪಾಲರಿಗೂ ವಂದನೆಗಳು. 

KSR_WEB-82

‘ಸಂವಾದ’ ನಡೆಸಿಕೊಡುತ್ತಿರುವ ವಲ್ಲೀಶ್

ಸಂವಾದ ಕಾರ್ಯಕ್ರಮ ನನಗೆ ಬಹಳ ಇಷ್ಟವಾದ ಕಾರ್ಯಕ್ರಮ. ನನ್ನ ಹುಚ್ಚು ಪ್ರಶ್ನೆಗಳಿಗೆ ನನ್ನೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅತಿಥಿಗಳಾದ ತಿರುಮಲೇಶ್, ತಂತ್ರಿ ಹಾಗೂ ಶ್ರೀಧರ್ ಅವರಿಗೂ ನನ್ನ ವಂದನೆಗಳು. ಮನರಂಜನೆ ಕಾರ್ಯಕ್ರಮಗಳು ಸೊಗಸಾಗಿದ್ದವು. ಇದರಲ್ಲಿ ಅದರ ಹಿಂದೆ ಪಟ್ಟ ಶ್ರಮ ವ್ಯಕ್ತವಾಗುತ್ತಿತ್ತು. ಮಕ್ಕಳ ನಾಟಕವಂತೂ ಅಮೆರಿಕೆಯಲ್ಲಿನ ಕನ್ನಡ ಕಲಿಕೆ ಕನ್ನಡಿಯಾಗಿತ್ತು. ಎಲ್ಲಾ ತಂಡಗಳಿಗೂ, ಗಾಯಕರಿಗೂ ವಂದನೆಗಳು.

ಒಟ್ಟಿನಲ್ಲಿ ಮದುವೆ ಮುಗಿಸಿಕೊಂಡು ಮನೆಗೆ ಬಂದ ನನಗೆ, ಎಲ್ಲಾ ನನ್ನ ಹೆಂಡತಿಗೆ ವಿವರಿಸಿದಾಗ ತಾನೂ ಮದುವೆಗೆ ಬರಬೇಕಿತ್ತೆಂದು ಈಗ ಹೇಳುತ್ತಿದ್ದಾಳೆ…
ನಮಸ್ಕಾರ,

ಇತಿ,

ವಲ್ಲೀಶ
(ಬೆಲ್ ಈಶ)

 Posted by at 10:17 AM
Mar 082013
 

ಆತ್ಮೀಯರೆ,

ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕದಲ್ಲಿ ನಡೆಯುವ ಅಪೂರ್ವ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ. ಕಸಾರ೦ ನಡೆಸುವ ವಸ೦ತ ಸಾಹಿತ್ಯೋತ್ಸವಗಳು ತಮ್ಮ ವೈಶಿಷ್ಟ್ಯಪೂರ್ಣ ಸಾಹಿತ್ಯ ಕಾರ್ಯಕ್ರಮಗಳಿಗೆ, ಗ೦ಭೀರ ಸಾಹಿತ್ಯ ಚರ್ಚೆ ಮತ್ತು ಆಸ್ವಾದನೆಗೆ ಹೆಸರಾಗಿವೆ. ಕನ್ನಡ ಸಾಹಿತ್ಯಾಸಕ್ತರಿಗೆ ಈ ಸಮ್ಮೇಳನಗಳು ಒ೦ದು ಮೌಲಿಕವಾದ ವೇದಿಕೆಯನ್ನು ನಿರ್ಮಿಸಿವೆ.ಕನ್ನಡ ಸಾಹಿತ್ಯ ರಂಗಕ್ಕೆ ಈಗ ೧೦ ವರ್ಷಗಳ ವಿಶೇಷ . ‘ಕಸಾರಂ’ನ ೬ನೇ ವಸ೦ತ ಸಾಹಿತ್ಯೋತ್ಸವ ಇದೇ ಮೇ ೧೮-೧೯, ೨೦೧೩ ರ೦ದು ಹ್ಯೂಸ್ಟನ್ ಕನ್ನಡ ವೃ೦ದದ ಸಹಯೋಗದಲ್ಲಿ ಮತ್ತು ಟೆಕ್ಸಸ್ ಕನ್ನಡಿಗರೆಲ್ಲರ ಆಶ್ರಯದಲ್ಲಿ ಹ್ಯೂಸ್ಟನ್ನಿನಲ್ಲಿ ನಡೆಯುತ್ತಿದೆ. ಕನ್ನಡದ ವಿಶಿಷ್ಟ ಲೇಖಕ, ಭಾಷಾವಿಜ್ಞಾನಿ ಪ್ರೊ. ಕೆ.ವಿ. ತಿರುಮಲೇಶ್ ಅವರು ಈ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ
www.kannadasahityaranga.org ಅಥವ KannadaVrinda.org/conference ತಾಣವನ್ನು ನೋಡಿ.

ರೈಸ್ ಯೂನಿವರ್ಸಿಟಿಯ ಹ್ಯಾಮನ್ ಹಾಲ್ ಸಭಾ೦ಗಣದಲ್ಲಿ ಶನಿವಾರ ಬೆಳಿಗ್ಗೆಯಿ೦ದ ಭಾನುವಾರ ಮಧ್ಯಾಹ್ನದವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಪ್ರತಿಬಾರಿಯಂತೆ ಈ ಸಲವೂ ಅಮೆರಿಕದ ಕನ್ನಡ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ‘ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರಿಯರಿಗೆ ಪರಿಚಯ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ. ಲೇಖಕರು ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವೂ ಉಂಟು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಹೀಗಿವೆ:

– ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಪುಸ್ತಕವು ಸಾಹಿತ್ಯ, ವಿಜ್ಞಾನ, ಪರಿಸರ, ಆರೋಗ್ಯ, ಅನುವಾದ, ಮಕ್ಕಳ ಸಾಹಿತ್ಯ.. ಹೀಗೆ ಯಾವುದೇ ಪ್ರಕಾರಕ್ಕೂ ಸೇರಿದ್ದಾಗಿರಬಹುದು.
– ಪುಸ್ತಕಗಳು 2011 ಏಪ್ರಿಲ್ ತಿಂಗಳ ನಂತರ ಪ್ರಕಟಗೊಂಡಿರಬೇಕು.
– ಪುಸ್ತಕಗಳ ಬಿಡುಗಡೆ, ವಿಮರ್ಶೆಗಳನ್ನು ಅಪೇಕ್ಷಿಸುವ ಲೇಖಕರು ಸಮ್ಮೇಳನದಲ್ಲಿ ಉಪಸ್ಥಿತರಾಗಿರಬೇಕು.
– ಪುಸ್ತಕ ಬಿಡುಗಡೆ/ವಿಮರ್ಶೆಗಳ ಆಯ್ಕೆಯಲ್ಲಿ ಕಸಾರಂ ತೀರ್ಮಾನ ಅಂತಿಮ.
– ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ಏಪ್ರಿಲ್ ೧೫ ರ ಒಳಗೆ ನಮ್ಮನ್ನು ಸಂಪರ್ಕಿಸಿ, ನಿಮ್ಮ ಕೃತಿಗಳನ್ನು ಕಳಿಸಬೇಕು.
– ನಮ್ಮ ಪುಸ್ತಕ ಮಳಿಗೆಯಲ್ಲಿ ನಿಮ್ಮ ಪುಸ್ತಕಗಳ ಮಾರಾಟ ಮಾಡಬಹುದು.

– ಸಂಪರ್ಕ ವಿಳಾಸ bhameera@gmail.com

ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಪಾಲ್ಗೊಂಡು ಸಮ್ಮೇಳನದ ಸಂಭ್ರಮ ಹೆಚ್ಚಿಸಬೇಕೆಂದು ಕೋರುತ್ತಿದ್ದೇವೆ.
ನಿಮಗೆ ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಿದ್ದರೆ ದಯವಿಟ್ಟು ನಮ್ಮನ್ನು ಸ೦ಪರ್ಕಿಸಿ.

ವಿಶ್ವಾಸಪೂರ್ವಕವಾಗಿ,
ಮೀರಾ ಪಿ. ಆರ್.

 Posted by at 7:39 PM