Jun 152015
 

ಅನುವಾದ ಸಂಪುಟ- ಪುಸ್ತಕ ಬಿಡುಗಡೆ ಕಾರ್ಯಕ್ರಮ ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವದ ಸಂಪೂರ್ಣ ವರದಿ ಇಲ್ಲಿದೆ:-

ಸೈಂಟ್ ಲೂಯಿಸ್ ನಗರದ ಕನ್ನಡ ಸಂಸ್ಥೆ “ಸಂಗಮ”ದ ಆಶ್ರಯದಲ್ಲಿ ಹಾಗು ಮಧ್ಯಪಶ್ಚಿಮ ವಲಯದ ಇತರ ಕನ್ನಡ ಸಂಘಗಳ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ ಮೇ ೩೦, ೩೧, ೨೦೧೫ ರಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. ಈ ಬಾರಿ ರಂಗ “ಅನುವಾದ ಸಾಹಿತ್ಯ” ವನ್ನು ಚರ್ಚೆಯ ಮುಖ್ಯ ವಿಷಯವಾಗಿ ಆಯ್ದುಕೊಂಡು, ಕರ್ನಾಟಕದ ಪ್ರಸಿದ್ಧ ಭಾಷಾಂತರಕಾರರಲ್ಲೊಬ್ಬರಾದ ಪ್ರೊ. ಪ್ರಧಾನ್ ಗುರುದತ್ತರನ್ನು ಮುಖ್ಯ ಅತಿಥಿಗಳಾಗಿ ಬರಮಾಡಿಕೊಂಡಿತ್ತು. ಅವರೊಡನೆ, ಅಮೆರಿಕದವರೇ ಆದ ಪ್ರೊ.ಎಸ್.ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಬಂದಿದ್ದರು. ಕಾರ್ಯಕ್ರಮದ ಆರಂಭದ ವೇಳೆಗೆ ಸಭಾಂಗಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಬೇರೆ ಬೇರೆ ಊರುಗಳಿಂದ ಬಂದು ಸೇರಿದ್ದ ಸಾಹಿತ್ಯಾಸಕ್ತರು ಒಂದು ಕಡೆ ನೋಂದಣಿ ಮಾಡಿಕೊಳ್ಳುತ್ತ ಪರಸ್ಪರ ಕುಶಲವನ್ನು ವಿಚಾರಿಸುತ್ತಿದ್ದರೆ, ಮತ್ತೆ ಬೇರೆಡೆಯಲ್ಲಿ ಸುಂದರವಾದ ಸೀರೆಗಳನ್ನುಟ್ಟು ನಗುಮೊಗದೊಂದಿಗೆ ಓಡಾಡುತ್ತಿದ್ದ ಸಂಗಮದ ಕಾರ್ಯಕರ್ತೆಯರು ಇಡೀ ಒಳಾಂಗಣಕ್ಕೆ ಹಬ್ಬದ ವಾತಾವರಣವನ್ನುಂಟುಮಾಡಿದ್ದರು! ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಅತಿಥಿಗಳು ದೀಪ ಬೆಳಗುವ ಮೂಲಕ ಸಮ್ಮೇಳನದ ಉಧ್ಘಾಟನೆ ಮಾಡಿದರು. `ಸಂಗಮ’ ತಂಡದ ಗಾಯಕರ ಸುಶ್ರಾವ್ಯ ಸ್ವಾಗತ ಗೀತೆಯೊಂದಿಗೆ ಎರಡು ದಿನಗಳ ಸಾಹಿತ್ಯೋತ್ಸವ ಆರಂಭವಾಯಿತು. ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷರಾದ ನಾಗ ಐತಾಳ ಮತ್ತು ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಮೈ.ಶ್ರೀ. ನಟರಾಜ ಅವರು ಎಲ್ಲರನ್ನೂ ಸ್ವಾಗತಿಸಿ ಸಮ್ಮೇಳನಕ್ಕೆ ಚಾಲನೆ ಕೊಟ್ಟರು. ನಂತರ ಕಾವ್ಯಾ ಕಡಮೆ, ಮಾನಸಾ ವೆಂಕಟ ಸುಬ್ಬಯ್ಯ ಮತ್ತು ಸುಮತಿ ಮುದ್ದೇನಹಳ್ಳಿ ಅವರುಗಳು ಅತಿಥಿಗಳನ್ನು ಕ್ರಮವಾಗಿ, ಚಿಕ್ಕದಾಗಿ ಚೊಕ್ಕವಾಗಿ ಸಭೆಗೆ ಪರಿಚಯಿಸಿದರು.

ಪುಸ್ತಕಗ ಮತ್ತು ಧ್ವನಿ ಸಂಪುಟದ ಲೋಕಾರ್ಪಣೆ

ಪ್ರಧಾನ ಸಂಪಾದಕ ಶ್ರೀಕಾಂತಬಾಬು ಅವರು ಸಂಪಾದಕ ಮಂಡಲಿಯನ್ನು ಪರಿಚಯಸಿ ಈ ಸಮ್ಮೇಳನದ ಪ್ರಮುಖ ವಿಷಯವಾದ ’ಅನುವಾದ ಸಾಹಿತ್ಯ’ ವನ್ನು ಕುರಿತು ಪ್ರಕಟಿಸಲಾದ ಎರಡು ಪುಸ್ತಕಗಳನ್ನು ಸಭೆಗೆ ಪರಿಚಯಿಸಿ ಅತಿಥಿಗಳಿಗೆ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಕೇಳಿಕೊಂಡರು. ವಿವಿಧ ಭಾಷೆಗಳಿಂದ ಆಯ್ದ ಲೇಖನಗಳ ಕನ್ನಡ ಅನುವಾದದ ಪುಸ್ತಕ ‘ಅನುವಾದ ಸಂವಾದ’ ವನ್ನು ಮೊದಲಿಗೆ ಪ್ರೊ. ಪ್ರಧಾನ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ನಂತರ ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಪುಸ್ತಕ ಸಂಕಲನ ‘A Little Taste of Kannada – in English’ ನ್ನು ಪ್ರೊ. ನಾರಾಯಣ ಹೆಗ್ಡೆ ಅವರು ಲೋಕಾರ್ಪಣೆ ಮಾಡಿದರು. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿ ಕನ್ನಡ ಸಾಹಿತ್ಯ ರಂಗ ಮತ್ತು ಸಾಹಿತ್ಯಾಂಜಲಿ ಅಭಿನವ ಪ್ರಕಾಶನದ ಸಹಯೋಗದೊಂದಿಗೆ ಪ್ರಕಟಿಸಿದ ಪುಸ್ತಕ ‘ಅಮೆರಿಕನ್ನಡ ಬರಹಗಾರರು (ಸಂಕ್ಷಿಪ್ತ ಮಾಹಿತಿ ಕೋಶ)’ ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು. ಸವಿತಾ ರವಿಶಂಕರ್ ಅವರು ಮಕ್ಕಳಿಗಾಗಿ ತಯಾರಿಸಿದ ‘ಚಿಲಿ ಪಿಲಿ ಕನ್ನಡ ಕಲಿ’ ಧ್ವನಿ ಸಂಪುಟವನ್ನು ಪ್ರೊ. ಪ್ರಧಾನ್ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ಕೊನೆಯದಾಗಿ ಸಂಗಮದ ಶಂಕರ ಶಾಸ್ತ್ರಿಯವರು ಸಂಪಾದಿಸಿದ ಸಮ್ಮೇಳನದ ಸ್ಮರಣ ಸಂಚಿಕೆ ‘ಸೊಬಗು’ ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು.

ಸುಮಾರು ಒಂದು ಗಂಟೆಗೂ ಮೀರಿದ “ಅನುವಾದದ ಆಗು-ಹೋಗುಗಳು” ಎಂಬ ವಿಷಯವನ್ನು ಕುರಿತು ಪ್ರಧಾನ್ ಗುರುದತ್ತರು ವಿದ್ವತ್ಪೂರ್ಣವಾದ ಪ್ರಾಸ್ತಾವಿಕ ಭಾಷಣವನ್ನು ಮಾಡಿ ಸಭಾಸದರಿಗೆ ಅನುವಾದದ ಒಳನೋಟವನ್ನು ಕಾಣಿಸಿ, ರಸದೌತಣವನ್ನೇ ಬಡಿಸಿದರು. ಅಷ್ಟೇ ಅಲ್ಲ, ರಂಗ ಈ ವರೆಗೆ ಪ್ರಕಟಿಸಿದ ಮತ್ತು ಅಮೆರಿಕದಲ್ಲಿರುವ ಹಲವಾರು ಲೇಖಕರು ಪ್ರಕಟಿಸುತ್ತಾ ಬಂದಿರುವ ಅನೇಕ ಪುಸ್ತಕಗಳ ಬಗ್ಗೆ ಸಹ ಮೆಚ್ಚುಗೆಯ ಮಾತುಗಳನ್ನಾಡಿದರು. ಭಾಷಣ ವಿದ್ವತ್ಪೂರ್ಣವಾಗಿರುವುದರ ಜೊತೆಗೆ ವಿನೋದಪೂರ್ಣವೂ ಅಗಿದ್ದುದರಿಂದ ಸಭಾಸದರೆಲ್ಲರೂ ಏಕರೀತಿಯಲ್ಲಿ ಆಸ್ವಾದಿಸಿ ಸಂತಸಪಟ್ಟರು. ಮುಖ್ಯ ಅತಿಥಿಗಳ ಹುಟ್ಟು ಹಬ್ಬ ಅಂದೇ ಎಂದು ತಿಳಿದು ಪ್ರಾಸ್ತಾವಿಕ ಭಾಷಣ ಮುಗಿದ ಕೂಡಲೇ ಅವರಿಗೆ “ಹ್ಯಾಪ್ಪಿ ಬರ್ತ್ ಡೇ” ಹಾಡುವುದರ ಜೊತೆ ಅವರಿಗೂ ಮತ್ತು ರಂಗದ ಆಡಳಿತ ಮಂಡಲಿ ಅಧ್ಯಕ್ಷ ನಾಗ ಐತಾಳರ ೫೫ನೇ ಮದುವೆಯ ವಾರ್ಷಿಕೋತ್ಸವದ ಸಲುವಾಗಿಯೂ ಎರಡು ವಿಭಿನ್ನ ರುಚಿಕರವಾದ ಕೇಕ್ ಗಳನ್ನು ಕತ್ತರಿಸಿದ್ದು ಅಂದಿನ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಕೊಟ್ಟಿತು.

ಸಾಹಿತ್ಯ ಗೋಷ್ಠಿ: ಮಧ್ಯಾಹ್ನ ನಡೆದ ಸಾಹಿತ್ಯ ಗೋಷ್ಠಿ ಸುಮಾರು ಒಂದೂವರೆ ಗಂಟೆಗಳ ಕಾಲ ನೆರೆದವರಿಗೆಲ್ಲ ರಸದೌತಣವನ್ನು ಉಣಬಡಿಸಿತು. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳ ಪಟ್ಟಿ ಬೆಳೆದಿದ್ದರಿಂದ ಹಲವಾರು ಪದಾಧಿಕಾರಿಗಳು ಮತ್ತು ಇತರರು ತಾವು ಮಾಡಬೇಕೆಂದಿದ್ದ ಪ್ರಸ್ತುತಿಯನ್ನು ಹಿಂದೆಗೆದುಕೊಂಡರು- ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ.  ಒಟ್ಟು ಹದಿನಾಲ್ಕು ಜನರು ಭಾಗವಹಿಸಿದ್ದರು.  ಅನಿಲ್ ದೇಶಪಾಂಡೆ, ಲತಾ, ವಿಶ್ವನಾಥ್, ಕಾವ್ಯಾ ಕಡಮೆ ನಾಗರಕಟ್ಟೆ, ಶ್ರೀನಿವಾಸ ರಾವ್ ಮತ್ತು ಮೈ ಶ್ರೀ ನಟರಾಜ ಅವರು ಮೂಲ ಕೃತಿ ಮತ್ತು ಅದರ ಅನುವಾದವನ್ನು ಪ್ರಸ್ತುತ ಪಡಿಸಿದರು.  ಶಂಕರ ಶಾಸ್ತ್ರಿ ಮತ್ತು ತ್ರಿವೇಣಿ ಶ್ರೀನಿವಾಸ ರಾವ್ ತಮ್ಮ ತಿಳಿ ಹಾಸ್ಯಭರಿತ ಪ್ರಬಂಧವನ್ನು ಓದಿದರು.  ನಾಗಭೂಷಣ ಮೂಲ್ಕಿ, ಪಿ ಎಸ್ ಮೈಯ, ಸವಿತಾ ರವಿಶಂಕರ್ ಮತ್ತು ಶಂಕರ ಹೆಗ್ಡೆ ಅವರು ಕವನಗಳನ್ನು ವಾಚಿಸಿದರು.  ಸಾಹಿತ್ಯ ಗೋಷ್ಠಿಯನ್ನು ನಿರ್ವಹಿಸಿದ ನಳಿನಿ ಮೈಯ ಮತ್ತು ವೈಶಾಲಿ ಹೆಗಡೆ ಅವರನ್ನು ಹಲವಾರು ಜನರು ನಂತರ ಭೇಟಿಯಾಗಿ ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಿದರು.

ಶ್ರದ್ಧಾಂಜಲಿ ಮತ್ತು ಕವಿ ನಮನ: ಕನ್ನಡ ಸಾಹಿತ್ಯ ರಂಗದ ಸದಸ್ಯರಾಗಿದ್ದು ನಮ್ಮನ್ನಗಲಿದ ಅಶ್ವತ್ಥನಾರಾಯಣ ರಾವ್, ವೈ. ಆರ್. ಮೋಹನ್, ಎಚ್.ಕೆ. ನಂಜುಂಡ ಸ್ವಾಮಿ ಮತ್ತು ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಣ್ಮರೆಯಾದ ಕನ್ನಡ ಕವಿ/ಬರಹಗಾರರಾದ ಜಿಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ ಮತ್ತು ಯಶವಂತ ಚಿತ್ತಾಲ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಳಿನಿ ಕುಕ್ಕೆ, ಮಾನಸಾ, ಸುಮತಿ ಮತ್ತು ಕಾವ್ಯಾ ಅವರ ಸಹಾಯದಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಕಾರ್ಯಕ್ರಮದ ಕಿರೀಟವಾಗಿ ಸಂಗಮದ ಅರ್ಚನ ಮೂಡ್ ಅವರ ನಿರ್ದೇಶನದಲ್ಲಿ ನರ್ತಕಿಯರು ಹಲವು ಪ್ರಸಿದ್ಧ ಕವಿಗಳಿಗೆ ನಮನ ಸಲ್ಲಿಸಿದ್ದು ಮಧ್ಯಾಹ್ನದ ಇತರ ಕಾರ್ಯಕ್ರಮಕ್ಕೆ ಪೂರಕವಾಗಿತ್ತು.

ಮನರಂಜನಾ ಕಾರ್ಯಕ್ರಮ:  ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಸಂಗಮದ ಪ್ರತಿಭೆಗಳು ತಮ್ಮ ಕೈಚಳಕವನ್ನು ತೋರಿಸಿಯೇ ತೋರಿಸಿದರು! ಸುಮಧುರ ಗಾಯನ, ಸುಂದರ ನರ್ತನ ಮತ್ತು ಮನೋಜ್ಞ ನಾಟಕಗಳಿಂದ ಕೂಡಿದ ರಸದೌತಣವನ್ನೇ ನೀಡಿದರು. ಸಾಹಿತ್ಯದ ಕಾರ್ಯಕ್ರಮಕ್ಕೆ ಅನುಗುಣವಾಗಿ ಡಿವಿಜಿ ಅವರ ಅಂತಃಪುರ ಗೀತೆಗಳಿಗೆ ಅಳವಡಿಸಿದ ನಾಟ್ಯ ಮತ್ತು ಮಧ್ಯ-ಪಶ್ಚಿಮ ವಲಯದ ಪ್ರಸಿದ್ಧ ನಾಟ್ಯಾಚಾರ್ಯ ಪ್ರಸನ್ನ ಕಸ್ತೂರಿ ಅವರು ಮಾಸ್ತಿಯವರ ಸಣ್ಣ ಕಥೆಗಳನ್ನಾಧರಿಸಿ ಬರೆದು ನಿರ್ದೇಶಿದ “ಚಿತ್ತಾರ” ಎಲ್ಲರ ಮನಸ್ಸನ್ನೂ ಸೂರೆಗೊಂಡಿತು. ಸಂಜೆಯ ಕಾರ್ಯಕ್ರಮದಲ್ಲಿ ಪರ ಊರುಗಳಿಂದ ಬಂದವರೂ ಸೇರಿ ಒಟ್ಟು ನಲವತ್ತಕ್ಕೂ ಹೆಚ್ಚು ಕಲಾವಿದರು, ಪುರುಷರು, ಸ್ತ್ರೀಯರು ಮತ್ತು ಮಕ್ಕಳೂ ಸೇರಿದಂತೆ, ಅತ್ಯಂತ ಸ್ಫೂರ್ತಿಯಿಂದ ಭಾಗವಹಿಸಿದರು. ದೀಪ, ಧ್ವನಿ ಮತ್ತು ರಂಗಸಜ್ಜಿಕೆ ಸಹ ಮೆಚ್ಚುವ ಮಟ್ಟದಲ್ಲಿತ್ತು.  ಕಣ್ಣು ಕಿವಿಗಳಿಗೆ ಹಬ್ಬವಾದಮೇಲೆ ಹೊಟ್ಟೆಗೂ ಒಳ್ಳೆಯ ಹಬ್ಬ ಕಾದಿತ್ತು, ಉತ್ತಮ ಭೋಜನದೊಂದಿಗೆ ಮೊದಲ ದಿನದ ಕಾರ್ಯಕ್ರಮ ಕೊನೆಗೊಂಡಿತು.

ಸಮ್ಮೇಳನದ ಎರಡನೆಯ ದಿನ

ಅನುವಾದ ಕಮ್ಮಟ:  ಈ ಬಾರಿಯ ಸಮ್ಮೇಳನದಲ್ಲಿ ಮೂಡಿಬಂದ  ಒಂದು ವಿಶಿಷ್ಟ ಕಾರ್ಯಕ್ರಮ ಅನುವಾದ ಕಮ್ಮಟ. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ. ಈ ಬಾರಿಯ ಕಾರ್ಯಕ್ರಮದ ಆಶಯವೇ ಅನುವಾದ ಸಾಹಿತ್ಯವಾದ್ದರಿಂದ ಈ ಕಮ್ಮಟ ಸಂದರ್ಭೋಚಿತವಾಗಿತ್ತು. ಮೊದಲಿಗೆ `ನನ್ನ ಮೆಚ್ಚಿನ ಅನುವಾದಿತ ಕಥೆ ‘ಎಂಬ ವಿಷಯವನ್ನು ಆಯ್ದುಕೊಂಡು ಟಿ. ಎನ್. ಕೃಷ್ಣರಾಜುರವರು ತೇಜಸ್ವಿಯವರ ’ಮಾಯಾಮೃಗ’ದ ಇಂಗ್ಲಿಷ್ ಅವತರಣಿಕೆ ( ಅನು: ರಾಘವೇಂದ್ರರಾವ್) ಬಗ್ಗೆ ಮಾತನಾಡಿದರು. ನಂತರ ನಾಗ ಐತಾಳರು ವರ್ಡ್ಸ್ವರ್ತ್‍ನ ’ಸಾಲಿಟರಿ ರೀಪರ್’ ನ ಕನ್ನಡಾನುವಾದ ’ಹೊಲದ ಹುಡುಗಿ’ (ಅನುವಾದ: ಕುವೆಂಪು) ಯ ಬಗ್ಗೆ ಮಾತನಾಡಿದರು. ತ್ರಿವೇಣಿ ಶ್ರೀನಿವಾಸರಾವ್ ಅವರು ಸಿಂಗರನ ಕಥೆ ’ಗಿಂಪೆಲ್ ದ ಫೂಲ್’ ಕನ್ನಡದ ಎರಡು ಅನುವಾದಗಳನ್ನು ಉದಾಹರಿಸಿ ಎರಡೂ ಅನುವಾದಗಳ ವಿಶಿಷ್ಟತೆಯನ್ನು ಗುರುತಿಸಿದರು. ನಂತರ ಮಾತಾಡಿದ ಶ್ರೀವತ್ಸ ಜೋಶಿಯವರ ವಿಷಯ ’ಅನುವಾದದ ಅಧ್ವಾನಗಳು’. ಮೂಲ ಕೃತಿಯ ಅರ್ಥ, ಆಶಯಗಳನ್ನು ಅರಿತುಕೊಳ್ಳದೇ ಇರುವುದು, ಉಚಿತ ಪದಗಳ ಆಯ್ಕೆ ಮಾಡದೇ ಇರುವುದು, ಎರಡೂ ಭಾಷೆಗಳ ವ್ಯಾಕರಣದ ಬಗ್ಗೆ ಮೂಲಭೂತ ಅರಿವಿಲ್ಲದಿರುವುದು ಇನ್ನೂ ಇತರೇ ಕಾರಣಗಳು ಎಂತೆಂತಹ ಅಧ್ವಾನಗಳಿಗೆ ಕಾರಣವಾಗಬಹುದು ಎಂದು ಶ್ರೀವತ್ಸ ಜೋಶಿಯವರು ಸೋದಾಹರಣವಾಗಿ ವಿವರಿಸಿದರು.

ಕಾರ್ಯಕ್ರಮದ ಮುಂದಿನ ಭಾಗದಲ್ಲಿ ಕವಿ ವಾಲ್ಟರ್ ಡಿಲಮೇರ್ ನ ಪದ್ಯ ’ಇಫ್ ಐ ವರ್ ದ ಲಾರ್ಡ್ ಆಫ್ ಟಾರ್ಟರಿ’ ವನ್ನು ಐದು ಜನ ಕವಿಗಳು ಕನ್ನಡಕ್ಕೆ ಅನುವಾದ ಮಾಡಿ ವಾಚಿಸಿದರು. ಎಮ್ ಎಸ್ ನಟರಾಜರ ಅನುವಾದದಲ್ಲಿ ಟಾರ್ಟರಿ ಎಂಬ ಪ್ರಾಂತ್ಯ ’ನನ್ನ ಕನಸಿನ ರಾಜ್ಯ’ ವಾದರೆ, ಪ್ರಕಾಶ ನಾಯಕರಿಗೆ ’ಅಖಂಡ ಭೂಮಂಡಲ’ವಾಯಿತು. ನಳಿನಿಯವರಿಗೆ ಅದನ್ನು  ’ಟಾರ್ಟರಿ’ಯಾಗಿಯೇ ಉಳಿಸಿಕೊಳ್ಳುವ ಆಸೆ. . ವೈಶಾಲಿ ಹೆಗಡೆಗೆ ಟಾರ್ಟರಿ ಸ್ವರ್ಗಪುರಿಯಾಯಿತು. ಮೀರಾ ರಾಜಗೋಪಾಲರವರಿಗೆ ’ಟಾರ್ಟರಿಯ ಲಾರ್ಡ್’ ಹತ್ತೂರ ಒಡೆಯನಾಗಿ ರೂಪಾಂತರಗೊಂಡಿದ್ದ. ನಟರಾಜರವರು  ರಾಗವಾಗಿ ಮಕ್ಕಳಿಗೆ ಕವನ ಕಲಿಸುವ ರೀತಿಯಲ್ಲಿ ತಮ್ಮ ಕವನವನ್ನು ಹಾಡಿದ್ದು, ಪ್ರಕಾಶ ನಾಯಕರ ಅನುವಾದದಲ್ಲಿ ಟಾರ್ಟರಿ ಎಂಬ ಇದ್ದಿರಬಹುದಾದ ಒಂದು ಸಣ್ಣ ಪ್ರಾಂತ್ಯದ ಪಾಳಯಗಾರನಂತ ನಾಯಕ ಅಖಂಡ ಭೂಮಂಡಲಕ್ಕೆ ಒಡೆಯನಾದುದು, ನಳಿನಿ ಮಯ್ಯರವರು ’ಕುಣಿದಾವು ನವಿಲುಗಳು, ಸುಳಿದಾವು ಹುಲಿಗಳು’ ಎಂದು ಭಾವಗೀತೆಯ ಆಪ್ತತೆಯನ್ನು ತಂದದ್ದು, ವೈಶಾಲಿಯವರು ’ಜಾಂಬಳಿ ಕಣಿವೆಯ ಜಂಬದ ಸಾಮ್ರಾಜ್ಯ’  ಎಂಬ ಸಾಲನ್ನು ಓದಿದ್ದು, ಮೀರಾರವರು ’ಎಲ್ಲಾನು ನಂದೇಯ, ಎಲ್ಲಾವೂ ನಮ್ದೇಯ’ ಎಂದು ಕವನವನ್ನು ಕನ್ನಡದ ಜನಪದ ಗೀತೆಯನ್ನಾಗಿ ರೂಪಾಂತರಗೊಳಿಸಿದ್ದು- ಅನುವಾದಕ್ಕಿರುವ ವಿವಿಧ ಆಯಾಮಗಳು ಮತ್ತು ಐದೂ ಬಗೆಯ ಅನುವಾದದ ಸಾಧ್ಯತೆಗಳನ್ನು ಸಾಕಾರಗೊಳಿಸುವ ನಮ್ಮ ಭಾಷೆಯ ಕಸುವು ಇಲ್ಲಿ ಪರಿಚಯವಾಯಿತು.

ಮುಂದಿನ ಭಾಗದಲ್ಲಿ ಎಸ್ ಎನ್ ಶ್ರೀಧರ್ ಮತ್ತು ನಾರಾಯಣ ಹೆಗಡೆಯವರು ಅನುವಾದದ ಸೂಕ್ಷ್ಮಗಳನ್ನು ತಮ್ಮದೇ ಅನುವಾದಗಳ ಪರಿಚಯ ಮಾಡಿಕೊಡುತ್ತಾ ವಿವರಿಸಿದರು. ನಾರಾಯಣ ಹೆಗಡೆಯವರು ಅನಂತಮೂರ್ತಿಯವರ ’ಸೂರ್ಯನ ಕುದುರೆ’ ಕಥಾ ಸಂಕಲನವನ್ನು ’ಸ್ಟ್ಯಾಲಿಯನ್ ಆಫ್ ದ ಸನ್’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರಲ್ಲದೆ ಲಂಕೇಶ್, ತೇಜಸ್ವಿ, ಎ. ಕೆ, ರಾಮಾನುಜನ್ ಇನ್ನೂ ಇತರ ಕನ್ನಡದ ಸಾಹಿತಿಗಳ ಕತೆಗಳನ್ನು ಅಂಗ್ಲಭಾಷೆಗೆ ಮಾಡಿರುವ ಅನುವಾದಗಳು ಬಹಳ ಮಹತ್ವದ್ದಾಗಿವೆ.

ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುಮಾರವ್ಯಾಸನ ’ಕರ್ನಾಟಕ ಕಥಾ ಮಂಜರಿ’ಯ ಇಂಗ್ಲಿಷ್ ಅನುವಾದಬಗ್ಗೆ ಮಾತನಾಡಿದರು. ಇದೊಂದು ಭಾರತ, ಅಮೆರಿಕ ಮತ್ತು ಜರ್ಮನಿ ದೇಶಗಳ ವಿದ್ವಾಂಸರ ಹಾಗೂ ಅನುವಾದಗಳನ್ನೊಳಗೊಂಡ ಜಾಗತಿಕ ಯೋಜನೆ. ಕುಮಾರವ್ಯಾಸನ ಭಾರತವು ಹೋಮರನ ’ಒಡಿಸ್ಸಿ’ ಯಂತೆ ಜಗತ್ತಿನ ಎಲ್ಲ ಓದುಗರಿಗೂ ಅದರ ಎಲ್ಲ ಕನ್ನಡ ಸೊಗಡಿನೊಂದಿಗೆ ಓದಲು ಸಿಗಬೇಕು ಎನ್ನುವುದು ಈ ತಂಡದ ಉದ್ದೇಶ. ಆ ಯೋಜನೆಯೆ ಬಗೆ ಸ್ಥೂಲವಾಗಿ ಮಾತಾಡಿದ ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ಭಾಷಾಂತರಮಾಡಿದ ಐದೂ ಜನರ ಕವಿತೆಗಳ ವೈಶಿಷ್ಟ್ಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಕೊಟ್ಟರು.

ಒಟ್ಟಾರೆ ಒಂದೂವರೆಗಂಟೆ ನೆರೆದ ಸಭಿಕರ ಗಮನ, ಲಕ್ಷ್ಯವನ್ನು ಸೆಳೆಯಿತಲ್ಲದೇ ಮನರಂಜನೀಯವಾಗಿಯೂ ಇದ್ದದ್ದು ಈ ಕಾರ್ಯಕ್ರಮದ ಹೆಚ್ಚಳ.

ನಮ್ಮ ಬರಹಗಾರರು

‘ನಮ್ಮ ಬರಹಗಾರರು’  – ಇದು ಕನ್ನಡ ಸಾಹಿತ್ಯ ರಂಗವು ಪ್ರತಿವರ್ಷವೂ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ಸಮ್ಮೇಳನದ ಒಂದು ಮುಖ್ಯ ಕಾರ್ಯಕ್ರಮ. ಅಮೆರಿಕದಲ್ಲಿ ಸಾಹಿತ್ಯವನ್ನು ಪಸರಿಸಬೇಕೆನ್ನುವ ಕನ್ನಡ ಸಾಹಿತ್ಯ ರಂಗದ ಉದ್ದೇಶಕ್ಕೆ ಪೂರಕವಾದ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ ಮತ್ತು ಅದರ ಲೇಖಕರನ್ನು ಕಿರಿದಾಗಿ ಪರಿಚಯಿಸಲಾಗುತ್ತದೆ.

ಈ ಬಾರಿಯೂ 2014-2015ರಲ್ಲಿ ಪ್ರಕಟವಾದ ಒಟ್ಟು ಹತ್ತು ಕೃತಿಗಳನ್ನು ಪರಿಚಯಿಸಲಾಯಿತು. ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’ (ಕಾವ್ಯಾ ಕಡಮೆ), ಸಿರಿಗನ್ನಡ ರಾಮಾಯಣ (ಎಂ.ಎಸ್.ನಟರಾಜ), ದೇವರ ರಜ (ಗುರುಪ್ರಸಾದ್ ಕಾಗಿನೆಲೆ), ಅಮೆರಿಕನ್ನಡಿಗ ಬರಹಗಾರರು-ಸಂಕ್ಷಿಪ್ರ ಮಾಹಿತಿಕೋಶ (ಸಂ: ನಾಗ ಐತಾಳ, ಜ್ಯೋತಿ ಮಹಾದೇವ), ಅಮೂರ್ತ ಚಿತ್ತ (ಪ್ರಕಾಶ್ ನಾಯಕ್), ಭಾವ ಸಿಂಚನ (ನಾಗಭೂಷಣ ಮೂಲ್ಕಿ), ಬೇಂದ್ರೆ ಅಂದ್ರೆ (ಸಂ: ನಾಗ ಐತಾಳ, ನಳಿನಿ ಮೈಯ),  My Gift and Other Stories  (ದಿ|ಅಶ್ವತ್ಥ ರಾವ್),  ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಜೀವನ ಚರಿತ್ರೆ (ಸಂ: ನಳಿನಿ ಮತ್ತು ಗೋಪಾಲ್ ಕುಕ್ಕೆ), ಸೃಷ್ಠಿ (ಎಚ್.ವೈ.ರಾಜಗೋಪಾಲ್)- ಇವು ಈ ಬಾರಿ ಪರಿಚಯಗೊಂಡ ಕೃತಿಗಳು.

ಲೇಖಕರ ಪುಸ್ತಕ ಪರಿಚಯ ನಡೆಯುತ್ತಿರುವಾಗ ಹಿಂದಿದ್ದ ತೆರೆಯ ಮೇಲೆ ಲೇಖಕರ ಚಿತ್ರದೊಂದಿಗೆ ಅವರ ಕಿರು ಪರಿಚಯವೂ ಪ್ರದರ್ಶನಗೊಳ್ಳುತ್ತಿದ್ದು ಸಭಿಕರಿಗೆ ಬರಹಗಾರರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲು ಸಹಾಯಕವಾಗಿತ್ತು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ತ್ರಿವೇಣಿ ಶ್ರೀನಿವಾಸರಾವ್ ಮತ್ತು ಮೀರಾ. ಪಿ.ಆರ್. ಈ ಕಾರ್ಯಕ್ರಮದ ನಂತರ ಸಭಾಂಗಣದ ಹೊರಗಿದ್ದ ಪುಸ್ತಕ ಮಳಿಗೆಯಲ್ಲಿ, ಪರಿಚಯಗೊಂಡ ಪುಸ್ತಕಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದುದು ಈ ಕಾರ್ಯಕ್ರಮದ ಸಾರ್ಥಕ್ಯವನ್ನು ಸೂಚಿಸುವಂತಿತ್ತು!

ಅತಿಥಿಗಳೊಂದಿಗೆ ಸಂವಾದ: 

ಕನ್ನಡ ಸಾಹಿತ್ಯರಂಗದ ಏಳನೆಯ ವಸಂತೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪ್ರಧಾನ ಗುರುದತ್ತ, ನಾರಾಯಣ ಹೆಗಡೆ ಮತ್ತು ಎಸ್.ಎನ್. ಶ್ರೀಧರ್ ಅವರೊಂದಿಗೆ ’ಸಂವಾದ’ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೆವು. ಈ ಸಂವಾದವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ ಮತ್ತು ಸುಮತಿ ಮುದ್ದೇನಹಳ್ಳಿ ಅವರು. ಅನುವಾದದ ಮೂಲಕೃತಿಯ ಆಯ್ಕೆ ಹೇಗೆ? ಅನುವಾದದಲ್ಲಿ ಮೂಲದ ಸೊಗಡನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯ? ಕವನದ ಅನುವಾದ ಸಾಧ್ಯವೇ? ಕವನದಲ್ಲಿ ಚಿಹ್ನೆಗಳನ್ನು ಉಳಿಸಿಕೊಳ್ಳಬೇಕೆ? ಸಾಂಸ್ಕೃತಿಕ ಅನುವಾದದ ಸಾಧ್ಯತೆಗಳು-ಇತರೆ ಸೂಕ್ಷ್ಮಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಸೇರಿದ್ದ ಸಭಿಕರೆಲ್ಲರೂ ಬಹಳ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಟ್ಟರು

ಮಕ್ಕಳ ಕಾರ್ಯಕ್ರಮ:  ರಂಗ ಆಚರಿಸುವ ಪ್ರತಿ ಸಮ್ಮೇಳನದಲ್ಲೂ ಕೊನೆಯ ಕಾರ್ಯಕ್ರಮ ಮಕ್ಕಳದ್ದೇ ಆಗಿರಬೇಕೆಂಬ ಒಂದು ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ಅಮೆರಿಕದಲ್ಲಿ ಈಗ ಕನ್ನಡ ಕಲಿಯುತ್ತಿರುವವರ ಮಕ್ಕಳ ಸಂಖ್ಯೆ ವರ್ಷೇವರ್ಷೇ ಏರುತ್ತಿದೆ. ಮಧ್ಯಪಶ್ಚಿಮ ವಲಯದ ಹಲವು ಕನ್ನಡಕೂಟದ ಮಕ್ಕಳು ಉತ್ಸಾಹದಿಂದ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ತಂದೆತಾಯಿಗಳಿಗೇ ಅಲ್ಲದೇ ಎಲ್ಲ ಸಭಾಸದರಿಗೂ ಸಂತಸತರುವಂತಿತ್ತು.  ಅದರಲ್ಲೂ ಚಿಕಾಗೋ ನಗರದ ಪೋರನೊಬ್ಬ ಏಕಲವ್ಯನಾಗಿ ಮಾಡಿದ ಏಕಪಾತ್ರಾಭಿನಯ, ಅವನ ನಿರರ್ಗಳ ಶುದ್ಧ ಕನ್ನಡವನ್ನು ಕೇಳಿದವರಿಗೆ ಮೈನವಿರೇಳಿದ್ದರಲ್ಲಿ ಅಚ್ಚರಿಯೆನಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಣ್ಣರಿಗೆಲ್ಲ ಸೂಕ್ತ ಬಹುಮಾನಗಳು ಮತ್ತು ಅದೇ ತಾನೆ ಲೋಕಾರ್ಪಣೆಯಾದ “ಚಿಲಿ-ಪಿಲಿ, ಕನ್ನಡ ಕಲಿ” ಧ್ವನಿ ಸಂಪುಟ ಸಹ ವಿತರಣೆಯಾಯಿತು.

ಸಮ್ಮೇಳನದ ಯಶಸ್ಸಿಗೆ ಕಾರಣವಾದ ಸ್ವಯಂ ಸೇವಕ ತಂಡ

ಕೊನೆಯದಾಗಿ ಆದರೆ ಅತಿ ಮುಖ್ಯವಾಗಿ, ಸುಮಾರು ಒಂದು ವರ್ಷದಿಂದಲೂ ರೂಪುಗೊಳ್ಳುತ್ತಲಿದ್ದ ಈ ಸಾಹಿತ್ಯೋತ್ಸವವನ್ನು ಎರಡು ದಿನಗಳ ಕಾಲ ಕಾರ್ಯರೂಪಕ್ಕಿಳಿಸಲು ದುಡಿದ ಸಂಗಮದ ಹಾಗು ಕನ್ನಡ ಸಾಹಿತ್ಯ ರಂಗದ ಸ್ವಯಂಸೇವಕರನ್ನು ಸಭೆಗೆ ಪರಿಚಯಿಸಲಾಯಿತು. ಇಂಥ ಒಂದು ಸಮ್ಮೇಳನವನ್ನು ನಡೆಸುವುದು ಸುಲಭದ ಮಾತಲ್ಲ, ಇದಕ್ಕೆ ಹಣ ಅದನ್ನು ಕೊಡುವ ಉದಾರ ದಾನಿಗಳು, ತೆರೆಯ ಹಿಂದಿದ್ದು ಮುಂದೆ ಬರುವ ಪ್ರತಿಯೊಂದು ಹೆಜ್ಜೆಯ ವಿವರಗಳನ್ನೂ ಮುಂದಾಲೋಚಿಸಿ ಕಾರ್ಯಕ್ರಮಗಳನ್ನು ಯೋಜಿಸುವ ಸಂಚಾಲಕರಿರಬೇಕು. ಸಾಹಿತ್ಯ ರಂಗದ ಸದಸ್ಯರು ದೇಶದ ವಿವಿಧ ಮೂಲೆಗಳಲ್ಲಿ ಹಂಚಿಹೋಗಿರುವುದರಿಂದ ಅವರ ಆಶಯಗಳನ್ನು ಕಾರ್ಯರೂಪಕ್ಕಿಳಿಸುವ ರೂವಾರಿಗಳಿರಬೇಕು. ಸಂಗಮದ ೨೦೧೪ ರ ಅಧ್ಯಕ್ಷೆ ಜ್ಯೋತಿ ಅನಂತ್ ಮತ್ತು ೨೦೧೫ರ ಅಧ್ಯಕ್ಷೆ ಶುಭಾ ಭಾಸ್ಕರ್ ಮತ್ತು ಅವರ ಕುಟುಂಬದವರಿಗೆ ಸಾಹಿತ್ಯ ರಂಗದ ಮನಃಪೂರ್ವಕ ನಮನಗಳು. ಅವರ ಹಿಂದೆ ನಿಂತು ಸಹಕರಿಸಿದವರ ಹೆಸರುಗಳನ್ನು ಪಟ್ಟಿಮಾಡಿದರೆ ತುಂಬಾ ಉದ್ದವಾಗುತ್ತದೆ, ಆದರೆ ಅವರೆಲ್ಲರೂ ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ ಮತ್ತು ನಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಸಾರಂ ನಡೆಸುವ ಕಾರ್ಯಕ್ರಮಗಳು ಕಾಲಕ್ಕೆ ಸರಿಯಾಗಿ ಪ್ರಾರಂಭವಾಗಿ ಶಿಸ್ತಿನಿಂದ ನಡೆಯುತ್ತವೆ.  ಈ ಬಾರಿ ಸಮಯಪಾಲನೆಯ ನಿರ್ವಹಣೆ ಶ್ರೀವತ್ಸ ಜೋಶಿ ಮತ್ತು ಭಾಸ್ಕರ ಸುಬ್ಬರಾವ್ ಅವರ ನೇತೃತ್ವದಲ್ಲಿ ಅತ್ಯಂತ ಸಮರ್ಪಕವಾಗಿ ನಡೆಯಿತು.

ಸಭಾಸದರೆಲ್ಲರೂ ಚಿಕಾಗೋ ಕನ್ನಡ ಕೂಟದ ಹಾಡುಗಾರರ ನಾಯಕತ್ವದಲ್ಲಿ ನಾಡಗೀತೆಯನ್ನು ಹಾಡುವುದರ ಮೂಲಕ ಏಳನೆಯ ಕನ್ನಡ ಸಾಹಿತ್ಯೋತ್ಸವಕ್ಕೆ ಮಂಗಳ ಹಾಡಲಾಯಿತು. ಎಂಟನೆಯ ಉತ್ಸವಕ್ಕೆ ಇನ್ನೂ ಎರಡು ವರ್ಷ ಕಾಯಬೇಕು!

 

__________________________________

 Posted by at 10:19 PM

  One Response to “ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ”

  1. ನಮಸ್ಕಾರ,

    ತಮ್ಮ ಇಮೇಲ್ ತಾವು ನಮ್ಮೊಡನೆ ಹಂಚಿಕೊಳ್ಳಬಹುದೆ?

    ಇಂತಿ ನಿಮ್ಮ
    ಪ್ರಮೋದ್
    ವಿವಿಡ್ಲಿಪಿ ತಂಡ