May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಎಸ್.ಎನ್ ಶ್ರೀಧರ್ ಅವರ ಕಿರುಪರಿಚಯ ಇಲ್ಲಿದೆ:-

S.N.Sridhar

ಪ್ರೊಫೆಸರ್ ಎಸ್.ಎನ್ ಶ್ರೀಧರ್ ಅವರು ೧೯೫೦ರಲ್ಲಿ ಶಿವಮೊಗ್ಗದಲ್ಲಿ ಜನಿಸಿ, ಬೆಂಗಳೂರು, ಕೋಲಾರ, ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ನಡೆಸಿದರು. ೧೯೮೦ರಲ್ಲಿ, ಇಲಿನಾಯ್ ರಾಜ್ಯದ ‘ಯೂನಿವರ್ಸಿಟಿ ಆಫ್ ಇಲಿನಾಯ್’ನಿಂದ ಭಾಷಾಶಾಸ್ತ್ರದ ಪದವಿ ಪಡೆದು, ಸದ್ಯ ನ್ಯೂಯಾರ್ಕಿನ ‘ಸ್ಟೋನಿಬ್ರೂಕ್’ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ೧೯೯೭ರಲ್ಲಿ, ಭಾರತೀಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದಾರೆ. 2001-2008ರವರೆಗೆ ಸ್ಟೋನಿಬ್ರೂಕ್‍ನ ಏಷ್ಯಾ ಹಾಗೂ ಏಷ್ಯನ್ ಅಮೆರಿಕನ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ೨೦೧೧ರಲ್ಲಿ, ‘ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್’ ಪ್ರೊ ಶ್ರೀಧರ್ ಅವರನ್ನು ಆ ಸಂಸ್ಥೆಯ ಅತ್ಯುಚ್ಚ ಪದವಿಯಾದ ಗೌರವಾನ್ವಿತ ಪ್ರಾಧ್ಯಾಪಕ ಶ್ರೇಣಿಗೆ ನೇಮಕ ಮಾಡಿ ಗೌರವಿಸಿತು.

ಶ್ರೀಧರ್ ಅವರು ಕನ್ನಡ ಭಾಷೆ ಹಾಗೂ ಕರ್ನಾಟಕ ಭಾಷಾ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ವಿಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅವರ ‘ಕನ್ನಡ: ಡಿಸ್ಕ್ರಿಪ್ಟಿವ್ ಗ್ರಾಮರ್’ ಆಧುನಿಕ ಕನ್ನಡದ ಅತ್ಯಂತ ವಿಸ್ತಾರವಾದ ವ್ಯಾಕರಣ. ‘ಇಂದಿನ ಕನ್ನಡ: ರಚನೆ ಮತ್ತು ಬಳಕೆ’ ಕನ್ನಡ ಭಾಷೆಯ ಪದ ರಚನೆ, ವಾಕ್ಯ ರಚನೆ, ಇತರ ಭಾಷೆಗಳ ಮೇಲಿನ ಪ್ರಭಾವ, ಇತ್ಯಾದಿಗಳ ವಿಶ್ಲೇಷಣೆ. ಹತ್ತು ಭಾಷೆಗಳ ತುಲನಾತ್ಮಕ ಮನೋವೈಜ್ಞಾನಿಕ ಅಧ್ಯಯನ ಅವರ ‘ಕಾಗ್ನಿಷೆನ್ಸ್ ಎಂಡ್ ಸೆಂಟೆನ್ಸ್ ಪ್ರೊಡಕ್ಷನ್’ ಗ್ರಂಥದ ವಿಷಯ. ಭಾರತೀಯ ನಾಗರೀಕತೆಯ ಅನೇಕ ಮುಖಗಳ ಪ್ರೌಢ ಪರಿಚಯ ಅವರು ಸಹ ಸಂಪಾದಕರಾಗಿರುವ ಉದ್ಗ್ರಂಥ ‘ಅನನ್ಯ: ಎ ಪೊರ್ಟ್ರೈಟ್ ಆಫ್ ಇಂಡಿಯ’ ಎನ್ನುವುದರ ಅಶಯ. ‘ಲಾಂಗ್ವೇಜ್ ಇನ್ ಸೌಥ್ ಏಷಿಯ’ ಶ್ರೀಧರ್ ಅವರು ಸಹಸಂಪಾದಕರಾಗಿ ಹೊರತಂದಿರುವ ಇನ್ನೊಂದು ಕೃತಿ. ಇದರಲ್ಲಿ ದಕ್ಷಿಣ ಏಷ್ಯಾದ ಭಾಷೆಗಳ ಅಧ್ಯಯನವಿದೆ.

ಶ್ರೀಧರ್ ಅವರು, ಶಂಕರ್ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ಯನ್ನೂ, ಕುಮಾರವ್ಯಾಸ ಭಾರತವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

 Posted by at 5:00 PM