Jul 012013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧ.)

 

ನನ್ನ ಪಾಲಿಗೆ ಅದೊಂದು ಕರಾಳ ದಿನವೆನ್ನಬೇಕು. ಹತ್ತು ವರ್ಷವಿದ್ದ ಮನೆಯಿಂದ ನನ್ನನ್ನು ಹೊರಹಾಕಿದ್ದರು. ನನ್ನ ಸೃಷ್ಟಿಯಿಂದ ಇಲ್ಲಿಯವರೆಗೆ ಇದ್ದಿದ್ದು ಇದೊಂದೆ ಮನೆ. ಹತ್ತು ವರ್ಷಕ್ಕೇ ಹಳಸಿ ಹೋದನೆ ನಾನು? ನನ್ನನ್ನೇಕೆ ಹೊರದಬ್ಬಿದರು? ಎಂದಾದರೂ ತೊಂದರೆ ಕೊಟ್ಟಿದ್ದನೇನು? ಎಂದಾರದರೂ ನನ್ನ ರಿಪೇರಿಗಾಗಿ ಹಣದ ಖರ್ಚನ್ನು ಮಾಡಿಸಿದ್ದೆನೇನು?. ಒಪ್ಪಿಕೊಳ್ಳೋಣ ಹತ್ತು ವರ್ಷಕ್ಕೆ ನನ್ನ ಬಣ್ಣ ಸ್ವಲ್ಪ ಮಾಸಿದ್ದಿರಬಹುದು. ಮತ್ತೆ ನನ್ನ ರೂಪವನ್ನು ತರಲು ನನ್ನನ್ನೇನು ಬ್ಯೂಟಿ ಪಾರ್ಲರ್ಗೆ ಕರೆದುಕೊಂಡು ಹೋಗ ಬೇಕಾಗಿತ್ತೇ?. ಮನೆಯಲ್ಲೇ ಯಾವುದೋ ರಾಸಾಯನಿಕ ವಸ್ತುಗಳನ್ನು ಹಾಕಿ ಸ್ನಾನ ಮಾಡಿಸಿದ್ದರೂ ನನಗೇನು ಅನ್ನಿಸುತ್ತಿರಲಿಲ್ಲ. ಅದೂ ಬೇಡ ಅಂದರೆ ನನಗೆ ಹೊಸ ಬಟ್ಟೆಯನ್ನೇ ಹೊಲಿಸಬಹುದಾಗಿತ್ತು. ಅದೆಲ್ಲವನ್ನೂ ಬಿಟ್ಟು ನನ್ನನ್ನು ಮನೆಯಿಂದ ಹೊರಗೇ ನೂಕಿದ್ದಾರಲ್ಲ, ಯಾರ ಹತ್ತಿರ ಹೇಳಿಕೊಳ್ಳಲಿ ನನ್ನ ಈ ದುರಂತ ಕಥೆಯನ್ನು.

ನನ್ನ ಸೃಷ್ಟಿ ಆಗಿದ್ದು 1998ರಲ್ಲಿ. ನ್ಯೂಜೆರ್ಸಿಯ ಒಂದು ಬಡಾವಣೆಯಲ್ಲಿ. ಅದೂ ಒಂದು ಕಾರ್ ಗ್ಯಾರಾಜಿನಲ್ಲಿ. ಸೃಷ್ಟಿಗೊಂಡ ಸಮಯದಿಂದಲೇ ಬಿಳಿ ಬಣ್ಣದನು ನಾನು. ಸೃಷ್ಟಿಗೊಂಡ ಕೆಲವೇ ವಾರಗಳಲ್ಲಿ ಇವರ ಮನೆ ಸೇರಿದವನು ನಾನು. ಹೊಸದಾಗಿ ಬಂದಾಗ ಇದ್ದ ಹೊಸ ಬಟ್ಟೆಯ ಸುವಾಸನೆ ಬರಬರುತ್ತಾ ಮಸಾಲೆಗಳ ಗಾಟುಗಳಿಂದ ಮಾಸುತ್ತಾ ಬಂತು. ಹಾಗೆಯೇ 13 ವರ್ಷಗಳು ಕಳೆದಿದ್ದವು. ಈ ಹದಿಮೂರು ವರ್ಷಗಳಲ್ಲಿ ನನ್ನೊಂದಿಗೆ ಕಾಲ ಕಳೆದವರ ಪಟ್ಟಿ ಮಾಡಲು ಪುಟಗಳೇ ಹಿಡಿಯುತ್ತದೆ. ಮೊದ ಮೊದಲು ನ್ಯೂಜೆರ್ಸಿಯಲ್ಲಿದ್ದಾಗ ನನ್ನ ಮಾಲೀಕರ ತಂದೆ ತಾಯಂದಿರೇ ನನ್ನ ಜೊತೆ ಕಾಲಕಳೆದವರು. ನನ್ನ ಮಾಲೀಕರ ತಂದೆಯಂತೂ ನನ್ನ ಮೇಲೆ ಕೂತು ಹೇಳುತ್ತಿದ್ದ ಸಂಗೀತ, ಕಿವಿಗೆ ಇಂಪಾಗಿರುತ್ತಿತ್ತು. ಮಾಲೀಕರ ಮಾವನವರು ಪ್ರತಿ ದಿನ ಅವರ ಮಧ್ಯಾಹ್ನದ ಭೋಜನದ ನಂತರ ನನ್ನೊಂದಿಗೆ ವಿಶ್ರಮಿಸಿಕೊಳ್ಳುತ್ತಿದ್ದಿದ್ದು ನನಗೆ ವಾಡಿಕೆಯಾಗಿತ್ತು. ಈ ಮನೆಯಲ್ಲಿ ಎರಡು ವಾರಕ್ಕೊಂದಾದರೂ ಒಂದು ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ಎಂದರೆ ನನಗೆ ನಡುಕವೇ ಬರುತ್ತಿತ್ತು. ಏಕೆಂದರೆ ದೊಡ್ಡವರು ನನ್ನ ಮೇಲೆ ಬೀರುಗಳನ್ನು ಸುರಿಸುತ್ತಾ, ಮಕ್ಕಳಂತೂ ನನಗೇ ಊಟವನ್ನೇ ಮಾಡಿಸುತ್ತಾ, ಆಗಾಗ್ಗೆ ನೀರೂ ಸಹ ಕುಡಿಸುತ್ತಿದ್ದಿದ್ದನ್ನು ಮರೆಯಲು ಸಾಧ್ಯವಿಲ್ಲ. ಮಾಲೀಕರು ತಿಂಗಳಿಗೊಮ್ಮೆಯಾದರೂ ನನ್ನ ಸ್ಥಳವನ್ನು ಬದಲಾಯಿಸುತ್ತಿದ್ದರು. ಒಮ್ಮೊಮ್ಮೆ ಮನೆಯ ನೆಲಮಾಳಿಗೆಯಲ್ಲಿ ಪಾರ್ಟಿ ನಡೆಯುತ್ತದೆ ಎಂದಾಗ ನಾನು ನಿಟ್ಟುಸಿರು ಬಿಡುತ್ತಿದ್ದೆ. ಏಕೆಂದರೆ ಬಂದ ಜನ ನೆಲಮಾಳಿಗೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ನನಗೆ ಆಗ ಸ್ವಲ್ಪ ವಿರಾಮವಿರುತ್ತಿತ್ತು. ಮೂರು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಒಂದು ದಿವಸ ನಾಲ್ಕಾರು ಜನ ಬಂದು ಎತ್ತುಕೊಂಡು ಒಂದು ಟ್ರಕ್ನೊಳಗೆ ಹಾಕಿ ಬಾಗಿಲು ಮುಚ್ಚಿದ್ದರು. ಕತ್ತಲೆ ತುಂಬಿತ್ತು.

KSR_WEB-500
ಬಾಗಿಲು ತೆರೆದಾಗ ಬೆಳಕು ಹರಿದಿತ್ತು. ನನಗೆ ಜೀವ ಬಂದ ಹಾಗೆ ಆಗಿತ್ತು. ಟ್ರಕ್ಕಿನ ಕತ್ತಲ ರೂಮಿನಲ್ಲಿ ಎನಿಲ್ಲವಾದರೂ ಒಂದು ವಾರ ಕೂಡಿ ಹಾಕಿದ್ದರೋ ಏನೋ? ಮತ್ತೆ ನನ್ನನ್ನು ಎತ್ತಿಕೊಂಡು ಮನೆಯ ಒಳಗೆ ಕರೆದು ತಂದಿದ್ದರು. ಹೊಸ ಮನೆ. ಹೊಸ ಜಾಗ. ಮನೆಯವರ ಮಾತನ್ನು ಕೇಳಿಸಿಕೊಂಡಾಗಲೇ ಗೊತ್ತಾಗಿದ್ದು, ನನ್ನ ಮಾಲೀಕರು ನ್ಯೂಜೆರ್ಸಿಯಿಂದ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆಗಿದ್ದಾರೆ ಎಂದು, ಇಲ್ಲಿಯ ನನ್ನ 10 ವರ್ಷದ ವಾಸ ನನ್ನ ಜೀವನದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನಗಳು ಎಂದೇ ಹೇಳಬೇಕು. ಕನ್ನಡದ ಬಹುತೇಕ ಪ್ರಸಿದ್ಧ ಸಿನಿಮಾ ನಟರು, ಕಿರುತೆರೆಯ ನಟರೂ, ಸಾಹಿತಿಗಳು ಹಾಗೂ ಹಾಡುಗಾರರೊಡನೆ ಕಳೆದ ದಿನಗಳು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿದೆ. ಒಮ್ಮೆ ಸಂಗೀತಗಾರರ ದಂಡೇ ಬಂದಿದ್ದು ಜ್ಞಾಪಕ. ದಿನವೆಲ್ಲಾ ಮನೆಯಲ್ಲಿ ಸಂಗೀತ ಗುಂಯಾಡಿಸುತ್ತಿತ್ತು. ನನ್ನ ಮೇಲೆ ಕುಳಿತು ಹಾಡಿದವರೆಷ್ಡು. ರತ್ನಮಾಲಾ ಪ್ರಕಾಶ್, ಎಂ ಡಿ ಪಲ್ಲವಿ, ಬಿ ಕೆ ಸುಮಿತ್ರಾ, ರಾಜೇಶ್ ಕೃಷ್ಣನ್, ಅರ್ಚನಾ ಉಡುಪ, ನಾಗರಾಜ್ ಹವಲ್ದಾರ್, ಶ್ರೀನಿವಾಸ ಉಡುಪ, ಅಪ್ಪಗೆರೆ ತಿಮ್ಮರಾಜು, ಬಿ ಆರ್ ಛಾಯಾ, ಮುದ್ದು ಕೃಷ್ಣ, ಬಿ ಜಯಶ್ರೀ, ಮಾಲತಿ ಶರ್ಮಾ, ಶಮಿತ ಮಲ್ನಾಡ್, ಎಲ್ ಎನ್ ಶಾಸ್ತ್ರಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಸ್ಯಗಾರರಿಗೇನು ಕಮ್ಮಿ ಇರಲಿಲ್ಲ. ಒಮ್ಮೆ ಪ್ರೊ. ಕೃಷ್ಣೇಗೌಡ ಹಾಗೂ ಪ್ರೊ. ಅ ರಾ ಮಿತ್ರ ಅವರ ಹಾಸ್ಯ ಜುಗಲ ಬಂದಿ ವಾರಗಟ್ಟಲೆ ಹಗಲು ರಾತ್ರಿ ಎನ್ನದೇ ಎಲ್ಲರನ್ನು ನಗೆಗಡಲಲ್ಲಿ ಮುಳಗಿಸಿತ್ತು. ರಿಚರ್ಡ್ ಲೂಯಿಸ್ ಬಂದಾಗಲಂತೂ ಗುಂಡಿನ ಪಾರ್ಟಿಯ ಜೊತೆಗೆ ಹಾಸ್ಯದ ಹೊನಲೇ ಹರಿದಿತ್ತು. ಮೈಸೂರು ಆನಂದ್ ಅಂತೂ ನನ್ನ ಮೇಲೆ ಬಲ ಬಾಗದ ಮೂಲೆಯಲ್ಲಿ ಕುಳಿತು ಕೊಂಡು ಜೋಕುಗಳನ್ನು ಹೇಳುವುದೆಂದರೆ ಅವರಿಗೂ ಇಷ್ಟ, ನನಗೂ ಇಷ್ಟ. ಒಮ್ಮೆ ಮನೆಯಲ್ಲಿ ಎಷ್ಟು ಕಲಾವಿದರಿಂದ ತುಂಬಿತ್ತೆಂದರೆ ನನ್ನ ಮೇಲೆಲ್ಲಾ ಕುಳಿತು ಮಾತನಾಡುತ್ತಿದ್ದರು. ಒಮ್ಮ ಕನ್ನಡದ ಕುಳ್ಳ ದ್ವಾರಕೀಶ್ ನನ್ನ ಮೇಲೆ ಕೂತು ಚಿತ್ರರಂಗದ ತಮ್ಮ ಅನುಭವಗಳನ್ನು ನಮ್ಮ ಮಾಲೀಕರೊಡನೆ ಹಂಚಿಗೊಂಡಿದ್ದು ಭಾವಪೂರ್ಣವಾಗಿತ್ತು. ಮುಖ್ಯಮಂತ್ರಿ ಚಂದ್ರು ಅವರ ಪ್ರತಿ ಸಂಭಾಷಣೆಯಲ್ಲೂ ಹುಟ್ಟಿಸುತ್ತಿದ್ದ ಹಾಸ್ಯ ಮನೆಯಲ್ಲಿನ ಗಾಳಿಯಲ್ಲೂ ಹರಿಯುತ್ತಿತ್ತು. ಬಹು ಮುಖ್ಯ ದಿನಗಳು ಎಂದರೆ ಟಿ ಎನ್ ಸೀತಾರಾಂ, ಕಪ್ಪಣ್ಣ, ಮುದ್ದುಕೃಷ್ಣ ಹಾಗೂ ಅಪ್ಪಗೆರೆ ತಿಮ್ಮರಾಜು ಅವರು ಮನೆಯಲ್ಲಿ ಇದ್ದಾಗ. ನನ್ನ ಮೇಲೆ ಕೂತು ನಡೆದ ಗುಂಡಿನ ಪಾರ್ಟಿಗಳೇನು! ಜಾನಪದ ಹಾಡುಗಳ ಸಂಭ್ರಮವೇನು! ಹೇಳತೀರದು. ಅದೇ ಸಂದರ್ಭದಲ್ಲಿ ಒಂದು ದಿನ ನನ್ನ ಮೇಲೆ ಕೂತು ಮುದ್ದುಕೃಷ್ಣ ಹಾಗೂ ಅಪ್ಪಿಗೆರೆ ತಿಮ್ಮರಾಜು ಅವರ ಬಿಸಿ ಬಿಸಿ ಮಾತುಗಳು ನನ್ನನ್ನೂ ಬಿಸಿ ಮಾಡಿದಂತಿತ್ತು. ಅವರಿಗೆ ಸಮಾದಾನ ಮಾಡಲು ನನ್ನ ಮೇಲೆ ಕೂತಿದ್ದ ಕಪ್ಪಣ್ಣ ಹಾಗೂ ಟಿ ಎನ್ ಎಸ್ ರವರು ಹರ ಸಾಹಸ ಮಾಡುತ್ತಿದ್ದ ದೃಶ್ಯ ಕಣ್ಮುಂದೆ ಈಗಲೂ ಇದೆ. ಕಪ್ಪಣ್ಣರವರು ಅಂದು ರಾತ್ರಿ ನನ್ನ ಮೇಲೆ ಮಲಗಿದ್ದಲ್ಲದೇ ಜೋರು ಗೊರಕೆ ಹೊಡದಿದ್ದು ನಾನಂತೂ ಮರೆಯಲಾರೆ. ಅಪ್ಪಿಗೆ ತಿಮ್ಮರಾಜುವರಂತೂ ಅವರು ಇರುವಷ್ಟು ದಿವಸವೂ ನನ್ನ ಮೇಲೆ ಕೂತೆ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತು ಕೊಳ್ಳುತ್ತಿದ್ದರು. ನಮ್ಮ ಮಾಲೀಕರ ನಾಟಕದ ಗುರು ಸ್ನೇಹಿತ ನಾಗಾಭರಣ, ರಾಣಿ ಭರಣ ಹಾಗೂ ಕಲ್ಪನಾ ಅವರುಗಳು ಬಂದಾಗಲಂತೂ ಮನೆ ರಂಗ ಗೀತೆಗಳಿಂದ ಪ್ರತಿಧ್ವನಿಸುತ್ತಿದ್ದವು. ಸಿಹಿಕಹಿ ಚಂದ್ರು ತಮ್ಮ ಬೊಂಭಾಟ್ ಭೋಜನದ ನಂತರ ನನ್ನ ಮೇಲೆ ಆರಾಮವಾಗಿ ಕೂತು ವಿಶ್ರಮಿಸುತ್ತಿದ್ದರು. ಕನ್ನಡದ ಸಾಹಿತ್ಯ ದಿಗ್ಗಜರುಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರು ಬಂದಾಗ ಮನೆಯಲ್ಲಿದ್ದ ಸಾಹಿತ್ಯಾತ್ಮಕ ವಾತಾವರಣ ಪಡೆಯಲು ನಮ್ಮ ಮಾಲೀಕರ ಮನೆ ಸೇರಿದ್ದು ನನ್ನ ಪುಣ್ಯ ಎನ್ನಬೇಕು.
ಈ ಮನೆಯಲ್ಲೂ ಬಹಳಷ್ಟು ಪಾರ್ಟಿಗಳು ನಡೆಯುತ್ತಿದ್ದವು. ಹಳೆ ಮನೆಯಲ್ಲಿ ನೆಳಮಾಳಿಗೆಯಾದರೂ ಇತ್ತು, ಕೆಲ ಪಾರ್ಟಿಗಳಲ್ಲಿ ನನಗೆ ವಿಶ್ರಮಿಸಲು ಸ್ವಲ್ಪ ಕಾಲವಕಾಶವಾದರೂ ಇತ್ತು. ಈ ಹೊಸ ಮನೆಯಲ್ಲೂ ನನ್ನ ಮೇಲೆ ಎಲ್ಲ ತರಹದ ಪಾನೀಯಗಳು, ತಿಂಡಿ ತಿನಿಸಿಗಳನ್ನು ಮನೆಗೆ ಬಂದ ಅತಿಥಿಗಳು ತಿನ್ನಿಸಿದ್ದಾರೆ. ಆಧರೆ ಕ್ಯಾಲಿಫೋರ್ನಯಾದ ಈ ಮನೆಯಲ್ಲಿ ಆಗಿಂದಾಗ್ಗೆ ನನ್ನನ್ನು ಯಾರೋ ಅಲ್ಲಾಡಿಸಿದಂತಾಗುತ್ತಿತ್ತು. ಅದು ಭೂಕಂಪ ಎಂದು ಗೊತ್ತಾಗಿದ್ದು ಬಹಳ ದಿವಸದ ಮೇಲೆಯೇ. ನನ್ನ ಈ 13 ವರ್ಷಗಳ ಆತ್ಮ ಕತೆಯನ್ನು ನಿಮ್ಮಲ್ಲಿ ಹೇಳಿಕೊಳ್ಳೋಣವೆಂದೆನಿಸಿತ್ತು. ಆದ್ದರಿಂದ ಈ ಪತ್ರದ ಬರೆದಿದ್ದೇನೆ. ನನ್ನನ್ನು ಮನೆಯಿಂದ ಹೊರ ತಳ್ಳಿದಾಗ ಮಾಲೀಕರ ಕಣ್ಣಲ್ಲೂ ಹನಿಗಳು ಹರಿದಿದ್ದು ಕಾಣಿಸಿತು. ಅಮ್ಮನವರಂತೂ ಅತ್ತೇಬಿಟ್ಟಿದ್ದರು. ಮಾಲೀಕರು ನನ್ನನ್ನು ಎತ್ತಿ ಟ್ರಕ್ಕಿನ ಒಳಗೆ ತಳ್ಳುತ್ತಿದ್ದಾಗ ತೆಗೆದ ಫೋಟೋ ಅವರ ಬಳಿಯೇ ಇರಬೇಕು ಅಂದು ಕೊಂಡಿದ್ದೇನೆ. ಅವರ ಮನೆಯಿಂದ ನನ್ನನ್ನು ಕರೆದು ತಂದು ಯಾವುದೋ ಒಂದು ಉಗ್ರಾಣದಲ್ಲಿ ತುರುಕಿದ್ದಾರೆ. ಧೂಳು ಹೊಡೆಯುವವರೂ ಯಾರೂ ಇಲ್ಲ. ಖಾಯಿಲೆ ಬಂದವರಂತೆ ಕಾಣುತ್ತಿದ್ದೇನೆ. ನಮ್ಮ ಹಳೆಯ ಮಾಲೀಕರಿಗೆ ಮನೆಗೆ ವಾಪಸ್ ಕರೆದುಕೊಂಡು ಹೋಗಿ ಎಂದು ಹೇಳಲಿಕ್ಕೆ ಅವರ ಸಂಬಂಧ ಹದಿಮೂರು ವರ್ಷಗಳ ಸಂಬಂಧ. ಈ ಹದಿಮೂರು ವರ್ಷಗಳಲ್ಲಿ ನನ್ನ ವಂಶಜರಿಗೆ ಸಿಗದ ಅವಕಾಶವನ್ನು ಅವರು ನನಗೆ ಒದಗಿಸಿದ್ದಾರೆ. ಅವರಿಗೆ ನಾನು ಚಿರ ಋಣಿ.
ಇತಿ,
ವಲ್ಲೀಶ ಶಾಸ್ತ್ರಿಯವರ ಮನೆಯ ಹಳೆ ಬಿಳಿ ಸೋಫಾ

 

 Posted by at 2:10 PM