Jun 272013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಹಾಸ್ಯಲೇಖನ.)

ನಾನು ರಿಟೈರ್ ಆದ ಮೇಲೆ ಕಡ್ಡಾಯವಾಗಿ ದಿನಾ ಒಂದೆರಡು ಗಂಟೆ ಹೆಲ್ತ್ ಕ್ಲಬ್ಬಿನಲ್ಲಿ ಕಳೀತೀನಿ. ವ್ಯಾಯಾಮ ಮಾಡೋಕೆ ಅಂತಾನೂ ಹೌದು. ಜೊತೆಗೆ ಒಂಥರ ಎಂಟರ್-ಟೈನ್‍ಮೆಂಟ್ ಕೂಡಾ ಸಿಕ್ಕುತ್ತೆ! ಅಲ್ಲಿ ಹೋದರೆ ನಿಮಗೆ ಯಾವ ಯಾವ ಥರದ ಗಂಡಸರು ಹೆಂಗಸರು, ವೃದ್ಧರು, ಯುವಕ-ಯುವತಿಯರು ಕಾಣಸಿಕ್ಕುತ್ತಾರೆ. ಗೊತ್ತಾ? ಟ್ರೆಡ್ ಮಿಲ್, ಬೈಕು, ಎಲಿಪ್ಟಿಕಲ್ ಅಂತ ಏನೇನೋ ಸರ್ಕಸ್ ಮಾಡ್ತಾ ಇರ್ತಾರೆ. ಅವರನ್ನೆಲ್ಲ ಗಮನವಿಟ್ಟು ನೋಡೋದೇ ಮಜ. ಅದರಲ್ಲೂ ಅವರುಗಳ ಹೊಟ್ಟೆಯ ವಿಧವಿಧವಾದ ಆಕಾರ ವಿಕಾರಗಳನ್ನು ಗಮನಿಸುವುದು ಇನ್ನೂ ಮಜ! ಅಲ್ಲ, ಈ ಹೊಟ್ಟೆಯಲ್ಲಿ ಎಷ್ಟೊಂದು ವಿವಿಧ ಬಗೆಗಳು ಇರ್ತಾವೆ, ಗೊತ್ತಾ? ಲಂಬೋದರ, ಗುಂಡೋದರ, ಬಕಾಸುರ ಉದರ, ಚಪ್ಪಟೋದರ ಅಂತ…ಹೀಗೇ. ಕೆಲವು ಒಳ್ಳೇ ಟು ಡಿಮೆನ್ಶನ್ ಹೊಟ್ಟೇ ಥರ ಇದ್ದರೆ ಹೆಚ್ಚಿನವು ತ್ರೀ ಡಿಮೆನ್ಶನ್ ಹೊಟ್ಟೆಗಳು! ಟ್ರಿಮ್ ಹೊಟ್ಟೆಯವರ ಸಂಖ್ಯೆ ಬೆರಳಲ್ಲಿ ಎಣಿಸಬಹುದಾದಷ್ಟು. ಆದರೆ ಈ ಭರ್ಜರಿ ಹೊಟ್ಟೆಯವರ ಸಂಖ್ಯೆ ಲೆಕ್ಕವಿಲ್ಲದಷ್ಟು.

ಎಷ್ಟೋ ತರುಣಿಯರು ತಮ್ಮ ತೆಳು ಹೊಟ್ಟೆಯ ಬಗ್ಗೆ ಹೆಮ್ಮೆ ತಾಳಿದವರು ಹೊಕ್ಕುಳು ಕಾಣಿಸುವಂತೆ ಶಾರ್ಟ್ಸ್ ಹಾಕ್ಕೊಂಡು ಓಡುತ್ತಾರೆ. ಇನ್ನೂ ಕೆಲವರು ಹೊಕ್ಕುಳ ಕೆಳಗೆ ಹಾಕಿಸಿಕೊಂಡ ಟ್ಯಾಟೂನಿಂದ ನಮ್ಮ ಗಮನ ಸೆಳೆಯುತ್ತಾರೆ. ಆ ವಿಷಯದಲ್ಲಿ ನಮ್ಮ ಭಾರತೀಯ ನಾರಿಯರೇನೂ ಕಡಿಮೆ ಇಲ್ಲ, ಬಿಡಿ. ಸೀರೆಯನ್ನು ಹೊಕ್ಕುಳ ಕೆಳಗೆ ಉಟ್ಟು ತಮಗೆ ದೊಡ್ಡ ಹೊಟ್ಟೆ ಇಲ್ಲ ಎಂಬ ಬಗ್ಗೆ ಪಬ್ಲಿಸಿಟಿ ಮಾಡಿಸ್ತಾರೆ. (ದೊಡ್ಡ ಹೊಟ್ಟೆ ಇರುವವರೂ ಹಾಗೆ ಸೀರೆ ಉಡುತ್ತಾರೆ! ಯಾಕೆ ಅನ್ನುವ ಒಗಟನ್ನು ಇದುವರೆಗೂ ನನಗೆ ಬಿಡಿಸೋಕೆ ಆಗಿಲ್ಲ. ಸ್ವಾಮಿ!) ಅಷ್ಟೆಲ್ಲ ಉದ್ದ ಅಗಲ ಇರುವ ಸೀರೆಯಾದರೂ ತಮ್ಮ ಸೌಂದರ್ಯವನ್ನು ಯಾವ ರೀತಿಯಲ್ಲೂ ಮುಚ್ಚಿ ಹಾಕದಂತೆ ಕಲಾತ್ಮಕವಾಗಿ ಸೀರೆ ಉಡುತ್ತಾರೆ.

ನಾನು ಏನೋ ಹೀಗೆ ಹೇಳಿದೆ ಅಂತ ನನಗೆ ದೊಡ್ಡ ಹೊಟ್ಟೆ ಕಂಡರೆ ಇಷ್ಟ ಅಥವಾ ತಮಾಷೆ ಅಂತ ತಪ್ಪು ತಿಳಿಯಬೇಡಿ! ದೊಡ್ಡ ಹೊಟ್ಟೆ ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ನನಗೂ ಗೊತ್ತು, ನಿಮಗೂ ಗೊತ್ತು. ಈಗಿನ ಕಾಲದಲ್ಲಿ ಆ ಬಗ್ಗೆ ಟೀವಿ, ಪತ್ರಿಕೆ ಎಲ್ಲ ಕಡೆ ಬಹಳಷ್ಟು ಪ್ರಚಾರ ಇರುವುದರಿಂದ ಸಾಮಾನ್ಯ ಎಲ್ಲರಿಗೂ ಹೊಟ್ಟೆ ಬೆಳೆಸೋದು ಒಳ್ಳೆಯದಲ್ಲ ಅನ್ನೋ ವಿಷಯ ಗೊತ್ತಿದೆ. ಆದರೆ ನಮ್ಮ ಕನಕ ದಾಸರಿಗೆ ಆ ಕಾಲದಲ್ಲೇ ಇದೆಲ್ಲ ಗೊತ್ತಿತ್ತು, ನೋಡಿ! ಅದಕ್ಕೆ ತಾನೆ ಅವರು ಹೇಳಿದ್ದು “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಅಂತ. ಏನಂದಿರಿ? ಅವರು ‘ಹೊಟ್ಟೆ ಹೊರೆಯುವುದಕ್ಕಾಗಿ ಮತ್ತೆ ಮೈ ಮುಚ್ಚುವುದಕ್ಕಾಗಿ’ ಅಂತ ಅರ್ಥ ಬರುವ ರೀತಿಯಲ್ಲಿ ಹಾಗೆ ಹೇಳಿದ್ದು ಅಂದ್ರಾ? ಅಯ್ಯೋ ಪಾಪ. ನಿಮಗೆ ದಾಸರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ. ಅವರು ತ್ರಿಕಾಲ ಜ್~ಝಾನಿಗಳು. ಅವರ ಹಾಡುಗಳನ್ನು ಆಯಾ ಕಾಲಕ್ಕೆ ತಕ್ಕ ಹಾಗೆ ಹೊಸ ಹೊಸ ರೀತಿಯಲ್ಲಿ ಅರ್ಥೈಸಬಹುದು. ಈ ವಿಷಯ ನನಗೆ ಜ್~ಝಾನೋದಯ ಆಗಿದ್ದು ಹೆಲ್ತ್ ಕ್ಲಬ್ಬಿನಲ್ಲೇ.

ಈ “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಅನ್ನೊ ಹಾಡನ್ನು ತೆಗೆದುಕೊಳ್ಳಿ. ಈಗಿನ ಕಾಲದಲ್ಲಿ ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಬೇಕಾಗುತ್ತೆ. ಮೊದಲು “ಗೇಣು ಬಟ್ಟೆಗಾಗಿ” ಅನ್ನೋ ಮಾತನ್ನು ನೋಡಿ. ಹೆಣ್ಣು ಮಕ್ಕಳು ಬಿಕಿನಿ ಹಾಕ್ಕೊಂಡು ಓಡಾಡುತ್ತಾರೆ ಅಂತ ಹೇಳೋಕೆ ಅವರು “ಗೇಣು ಬಟ್ಟೆ” ಅಂತ ಸೂಚ್ಯವಾಗಿ ಹಾಡಿದ್ದು. ಆಮೇಲೆ “ಹೊಟ್ಟೆಗಾಗಿ” ಅನ್ನೋ ಮಾತು ತೆಗೆದುಕೊಳ್ಳಿ. ಅಂಥ ಗೇಣು ಬಟ್ಟೆಯನ್ನು ಹಾಕ್ಕೋಬೇಕಾದರೆ ಹೊಟ್ಟೆ ತೆಳ್ಳಗಿರಬೇಕು. ಅದಕ್ಕಾಗಿ ಬಹಳ ಕಷ್ಟ ಪಡಬೇಕು. ಅಂದರೆ ಹೆಲ್ತ್ ಕ್ಲಬ್ಬಿಗೆ ಹೋಗಿ ಬೆವರು ಸುರಿಸಬೇಕು. ಇದನ್ನೆಲ್ಲ ಎರಡೇ ಮಾತಿನಲ್ಲಿ “ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಅಂತ ಎಷ್ಟು ಚೆನ್ನಾಗಿ ಹೇಳಿಬಿಟ್ಟಿದ್ದಾರೆ ಕನಕ ದಾಸರು! ಆದರೂ ‘ಗೇಣು ಬಟ್ಟೆ’ ಅನ್ನುವಾಗ ದಾಸರು ಲೆಕ್ಕಾಚಾರಾದಲ್ಲಿ ಸ್ವಲ್ಪ ತಪ್ಪಿಬಿದ್ದಿದ್ದಾರೆ ಅಂತ ಅನ್ನಿಸುತ್ತೆ.

ಕನಕ ದಾಸರಿಗೆ ಮಾತ್ರ ಮನುಷ್ಯರ ಆರೋಗ್ಯದ ಬಗ್ಗೆ ಕಾಳಜಿ ಇತ್ತು ಅಂತ ಅಂದುಕೊಂಡಿದ್ದೀರಾ. ಇಲ್ಲ. ಕನಕ ದಾಸರ ಸಮಕಾಲೀನಾರದ ಪುರಂದರ ದಾಸರಿಗೂ ಮನುಷ್ಯರ ಆರೊಗ್ಯದ ಬಗ್ಗೆ ಕಾಳಜಿ ಇದ್ದುದಲ್ಲದೆ, ದೇವರ ಆರೊಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ಇತ್ತು ನೋಡಿ. ಅದಕ್ಕೆ ತಾನೆ ಅವರು ಹಾಡಿದ್ದು ” ಓಡಿ ಬಾರಯ್ಯಾ ವೈಕುಂಠ ಪತಿ” ಅಂತ. ಅವರು ಏನು ನಿಧಾನಕ್ಕೆ ನಡೆದುಕೊಂಡು ಬಾ ಅಂದ್ರಾ? ಇಲ್ಲ. ಯಾಕೆ? ಯಾಕಂದ್ರೆ ದೇವರಿಗೂ ತನ್ನ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕಾಗುತ್ತೆ. ಅದಕ್ಕೇ. ಅದೂ ಅಲ್ದೆ ದೇವರು ಜಾಗ್ ಮಾಡ್ತಾ ಇದ್ದಾನೆ ಅಂದ್ರೆ ಮನುಷ್ಯರೂ ಅದನ್ನು ನೋಡಿ ತಾವು ಹಾಗೇ ಮಾಡ್ತಾರೆ. ಇದರಿಂದ ಒಂದೇ ಕಲ್ಲಿನ ಏಟಿಗೆ ಎರಡು ಹಣ್ಣು ಉದುರುತ್ತೆ ಅಂತ ದಾಸರ ಲೆಕ್ಕಾಚಾರ. ಅದಕ್ಕೇ ಈಗೀಗ ಪಾರ್ಕಿನಲ್ಲಿ, ಸೈಡ್ ವಾಕಿನಲ್ಲಿ, ಅಂಗಡಿ ತೆರೆಯುವ ಮುನ್ನ ಶಾಪಿಂಗ್ ಕಾಂಪ್ಲೆಕ್ಸಿನಲ್ಲೂ ಜನ ಓಡುತ್ತಾರೆ. ಅದು ಸಾಲದು ಅಂತ ತಮ್ಮ ನಾಯಿಯನ್ನೂ ಓಡಿಸುತ್ತಾರೆ!

ದಾಸರ ಇನ್ನೊಂದು ಗೀತೆ “ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ”. ಈ ಹಾಡನ್ನಂತೂ ನಮ್ಮ ಇಲಿನಾಯ್ ರಾಜ್ಯವೆಂಬ ಪುಣ್ಯ ಭೂಮಿಯಲ್ಲಿ ಒಬ್ಬರಾದ ಮೇಲೆ ಒಬ್ಬರು ಗವರ್ನರುಗಳು ಹಾಡುತ್ತಲೇ ಬಂದಿದ್ದಾರೆ. ಅನೇಕ ವರ್ಷಗಳ ಹಿಂದೆ ವಾಕರ್ ಅನ್ನೊ ಇಲಿನಾಯ್ ಗವರ್ನರ್ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದ. ಹೋಗ್ತಾ ದಾರಿಯುದ್ದಕ್ಕೂ “ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ” ಅಂತ ಹಾಡ್ತಾನೇ ಹೋದ. ಇತ್ತೀಚೆಗೆ ಜಿಮ್ ರಯನ್, ರಾಡ್ ಬ್ಲಗೋಯೆವಿಚ್ ಎಲ್ಲರೂ ಈ ಹಾಡನ್ನು ತಮ್ಮ ತಮ್ಮ ಕೈಲಾದಷ್ಟು ಹಾಡುತ್ತಲೇ ಇದ್ದಾರೆ. ಭಾಷೆ ಇಂಗ್ಲಿಷ್ ಆದರೇನು? ಭಾವ ಒಂದೇ ತಾನೆ?
ನಮ್ಮ ಜೆಸಿ ಜ್ಯಾಕ್ಸನ್ ಜೂನಿಯರಿಗೆ ಕ್ರೆಡಿಟ್ ಕೊಡಬೇಕು. ಗವರ್ನರುಗಳೇ ಈ ಹಾಡು ಹಾಡಬೇಕೆ? ನಾನೂ ಶಕ್ತ್ಯಾನುಸಾರ ಹಾಡುತ್ತೀನಿ ಅಂತ “ಅಪರಾಧಿ ನಾನಲ್ಲ” ನನ್ನ ಮ್ಯಾನಿಕ್ ಡಿಪ್ರೆಶನ್ ಅಂತ ಈಗಲೂ ರಾಗವಾಗಿ ಹಾಡ್ತಾ ಇದ್ದಾನೆ.

ಪುರಂದರ ದಾಸರು ಶತಮಾನಗಳ ಹಿಂದೆ ಬಾಳಿ ಬದುಕಿದವರಾದರೂ ನಮ್ಮಂತಹ ವಲಸೆ ಬಂದ ಪರದೇಶಿಗಳಿಗಾಗಿ ಒಂದು ಹಾಡು ಬರೆದಿದ್ದಾರೆ ಅಂದರೆ ನಂಬುತ್ತೀರಾ? ಖಂಡಿತ ಬರೆದಿದ್ದಾರೆ. ಆ ಹಾಡೇ “ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಈಗ ಸುಮ್ಮನೆ” ನಾನು ಆಗಲೇ ಹೇಳಲಿಲ್ಲವೆ ದಾಸರು ತ್ರಿಕಾಲ ಜ್~ಝಾನಿಗಳು ಅಂತ.

ನಾನು ಇತ್ತೀಚೆಗೆ ಕನ್ನಡ ಕೂಟದ ಫಂಕ್ಷನ್ನಿಗೆ ಹೋದಾಗ ಅಲ್ಲಿ ಒಬ್ಬಾಕೆ ಜರಿ ಸೀರೆ ಉಟ್ಟು ಸರ್ವಾಲಂಕಾರ ಶೋಭಿತಳಾಗಿ ವೇದಿಕೆಯ ಮೇಲೆ ನಿಂತು ಹಾಡುತ್ತಿದ್ದರು. ದಾಸರ ಪದ ಅಂತ ಗೊತ್ತಾಯಿತು. “ಇದು ಯಾವ ರಾಗ?” ಅಂತ ಪಕ್ಕದಲ್ಲಿ ಇದ್ದ ಒಬ್ಬರನ್ನು ಕೇಳಿದೆ. “ಯಮನ್ ರಾಗ” ಅಂದರು. ಅದು ‘ಯಮ ಧರ್ಮ ರಾಯ’ನ ರಾಗ ಅನ್ನೋದರಲ್ಲಿ ಸಂಶಯವೇ ಇಲ್ಲ. ಅಷ್ಟು ಕೆಟ್ಟದಾಗಿ ಹಾಡುತ್ತಿದ್ದರು. ಆದರೆ ಆಕೆ ನೋಡೋಕೆ ಮಾತ್ರ ತುಂಬ ಚೆನ್ನಾಗಿದ್ದರು. ಅದಕ್ಕೇ ನಾನು “ಹಾಡು ಹಳೆಯದಾದರೇನು, ಅಲ್ಲ ಕೆಟ್ಟದಾದರೇನು? ಭಾವ ನವನವೀನ, ಅಲ್ಲ, ಭಾಮಿನಿ ನೋಡೋಕೆ ಚೆನ್ನ” ಅಂತ ನನ್ನೊಳಗೆ ಗುಣುಗುಟ್ಟಿಕೊಂಡು ಅವರನ್ನು ಕ್ಷಮಿಸಿಬಿಟ್ಟೆ.

ನಾನು ದಾಸರ ಬಗ್ಗೆ ಇಷ್ಟೆಲ್ಲ ಮಾತಾಡುವುದು ನೋಡಿ “ಇವರಿಗೆ ಯಾಕೆ ದಾಸರ ಮೇಲೆ ಇಷ್ಟೊಂದು ಅಭಿಮಾನ!” ಅಂತ ಯೋಚಿಸ್ತಾ ಇದ್ದೀರಾ? ಅದಕ್ಕೂ ಕಾರಣ ಇದೆ. ಪುರಂದರ ದಾಸರು ಮತ್ತು ನಾನು ಒಂದೇ ಸ್ವಭಾವದವರು. ತಾಳಿ, ತಾಳಿ, ಅಷ್ಟು ಬೇಗ ‘ಹೇಗಪ್ಪಾ’ ಅಂತ ಹುಬ್ಬು ಏರಿಸಬೇಡಿ! ನಾನು ಹೇಳಿದ್ದು ಪುರಂದರ ದಾಸರು ಪೂರ್ವಾಶ್ರಮದಲ್ಲಿ ಶ್ರೀನಿವಾಸ ನಾಯಕರಾಗಿದ್ದರಲ್ಲ, ಆ ಸ್ವಭಾವ. ನನಗೂ ಅದೇ ಥರ ಜಿಪುಣತನ, ಮುಂಗೋಪ ಎಲ್ಲ ಇದೆ! ಬೇಕಾದರೆ ನನ್ನ ಹೆಂಡ್ತಿಯನ್ನು ಕೇಳಿ. ಆದರೆ ನನ್ನ ಹೆಂಡತಿ ಮಾತ್ರ ಅವರ ಹೆಂಡತಿಯ ಥರ ಮೂಗುಬೊಟ್ಟು ಹಾಕ್ಕೊಳ್ಳಲ್ಲ ಅಷ್ಟೆ.. ನೋಡುತ್ತಾ ಇರಿ. ಇಷ್ಟರಲ್ಲೇ ಒಂದು ದಿನ ನಾನೂ ಕಾಲಿಗೆ ಗೆಜ್ಜೆ ಕಟ್ಟಿ ತಂಬೂರಿ ಮೀಟುತ್ತಾ ನಿಮ್ಮ ಮನೆಗೆ ಬಂದರೂ ಬಂದೆ.

 Posted by at 9:14 PM

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)