Nov 252012
 

ಕೆ.ವಿ.ತಿರುಮಲೇಶ್

If I am not for myself, who will be for me?
If I am not for myself only, what am I?
If not now, when?
Talmudic saying

ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆ
ಆಥವ ಹಾಗೆ ಯೋಚಿಸುವುದೂ ಕೂಡ ಪಾಪ
ಎಲ್ಲಿ ನಾನು ಕೊನೆಗೊಳ್ಳುತ್ತೇನೆ ಎಲ್ಲಿ ಇನ್ನೊಬ್ಬ
ಆರಂಭಗೊಳ್ಳುತ್ತಾನೆ ನನಗೆ ಗೊತ್ತಿಲ್ಲ
ಎಲ್ಲಿ ಸ್ವಾರ್ಥ ಮುಗಿಯುತ್ತದೆ ಎಲ್ಲಿ ನಿಸ್ವಾರ್ಥ
ಸುರುವಾಗುತ್ತದೆ ನನಗೆ ಗೊತ್ತಿಲ್ಲ
ಎಲ್ಲಿ ಮಾತು ತಡೆಯುತ್ತದೆ ಮೌನ
ಮೊದಲಾಗುತ್ತದೆ ಅದೂ ಗೊತ್ತಿಲ್ಲ
ಎಲ್ಲಿ ವೈರುಧ್ಯಗಳು ಪರಸ್ಪರ ಎದುರಾಗಿ
ಗುರುತಿಲ್ಲದಂತೆ ಸರಿದುಹೋಗುತ್ತವೆ

ಒಂದು ಹೂವಿಗೂ ಗೊತ್ತಿರುತ್ತದೆ
ಯಾವಾಗ ಅರಳಬೇಕು ಯಾವಾಗ ದಳ
ಉದುರಬೇಕು ನಾನೋ ತೀರ
ವ್ಯವಹಾರಶೂನ್ಯ ಜನ್ಮತಃ ಯಾವುದೋ ಕೊರತೆ
ಆದರೂ ಸ್ವಯಂ ಶೂನ್ಯನಾಗಲು ನಾನೂ
ಬಯಸಿದ್ದಿದೆ ಓ ದೈವವೇ
ಶೂನ್ಯಸ್ಥಲವೇ ಇಲ್ಲದ ಲೋಕವ ಮಾಡಿ
ಇರಿಸಿದೆ ನನ್ನನ್ನಿಲ್ಲಿ ಈ ಮಬ್ಬಿನಲ್ಲೇ
ದಿಕ್ಕೆಂದು ಹೊರಟು ದಿಗ್ಭ್ರಮೆಗೊಂಡೆ ನಾನು
ನೀರ ಮೇರೆಯ ಹುಡುಕುವ ಮೀನಿನಂತೆ
ಸಿಕ್ಕ ಸಿಕ್ಕಲ್ಲಿ ಸಿಗಹಾಕಿಕೊಂಡೆ

ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟು
ನನ್ನದು ನಾನೆಷ್ಟು ನಿನ್ನದು ಎಂದು ಕೇಳಲೇ
ಈ ದೈತ್ಯಾಕಾರವನ್ನೇ ನಾನೆಂದು
ಸಂಭ್ರಮಿಸಲೇ
ಸಣಕಲ ನಾನು ಆದರೂ ಎಲೆ ಅಸ್ತಮಯ
ಸೂರ್ಯನೇ
ಸಕಲ ವಸ್ತುಗಳ ಮೇಲೆ ಸುವರ್ಣವರ್ಣವ ಸುರಿದಿ
ನನ್ನ ಮುಖದ ಮೇಲೂ ಇದೀಗ
ನನ್ನ ಮುಖವಲ್ಲ ನಿನ್ನದೇ
ನಾಳೆ ಮುಂಜಾನೆ ಉದಿಸುವಿ ನೀನು
ನಿನಗೋಸ್ಕರ ಕಾಯುವ ಜೀವಕೋಟಿಗಳಿದ್ದಾವೆ
ನನಗೋಸ್ಕರ ಯಾರಿದ್ದಾರೆ
ಮುಂಜಾನೆ ನನಗೆ ಎಚ್ಚರವಾಗಬೇಕೆಂದೇ ಇಲ್ಲ
ನಿದ್ರಿಸದೇ ಅದೆಷ್ಟೊ ವರ್ಷಗಳಾಗಿವೆ
ರೆಪ್ಪೆಗಳು ಮೇಲೆ ಮಣಭಾರ ಕುಳಿತಂತೆ
ತೂಕಡಿಸುತ್ತಿವೆ ಲೋಕದ ಭಾರವ ತಾವೆ
ಹೊತ್ತುಕೊಂಡಂತೆ ಇನ್ನೂ ಭ್ರ್‍ಅಮಿಸುತ್ತವೆ ಇದು
ಭ್ರಮೆಯೆಂದು ತಿಳಿದೂ
ಆದರೂ ಮುಚ್ಚಲಾರವು ಅವು
ಕನಸುಗಳ ಭಯಕ್ಕೆ
ಒಂದು ಕ್ಷಣ ನಿಲ್ಲು ಸಂಜೆಯ ಬೆಳಕೇ
ನಿನ್ನ ತಾಟಸ್ಥ್ಯದಲಿ ನನ್ನ ಸ್ವೀಕರಿಸು.

 Posted by at 12:22 AM