Oct 242011
 

ಮಥಿಸಿದಷ್ಟೂ ಮಾತು
ಸಂ: ತ್ರಿವೇಣಿ ಶ್ರೀನಿವಾಸರಾವ್, ಎಂ.ಆರ್.ದತ್ತಾತ್ರಿ
ಪು: 284; ಬೆ: ರೂ. 150
ಪ್ರ: ಕನ್ನಡ ಸಾಹಿತ್ಯ ರಂಗ, ಅಮೆರಿಕ; ಅಭಿನವ, ಬೆಂಗಳೂರು.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಸಾಹಿತ್ಯಾಸಕ್ತಿಗೆ ನೀರೆರೆಯುವ ಕೆಲಸ ಮಾಡುತ್ತಿರುವ `ಕನ್ನಡ ಸಾಹಿತ್ಯ ರಂಗ` ತನ್ನ ಸಾಹಿತ್ಯ ಚಟುವಟಿಕೆಗಳ ಮೂಲಕ ಗಮನಸೆಳೆದಿರುವ ಸಂಘಟನೆ. `ಸಾಹಿತ್ಯ ರಂಗ` ನಡೆಸುವ ಸಾಹಿತ್ಯೋತ್ಸವಗಳು ಗಂಭೀರ ಸಾಹಿತ್ಯ ಚರ್ಚೆಗೆ ಹಾಗೂ ಅಮೆರಿಕದಲ್ಲಿನ ಬರಹಗಾರರ ಸಮ್ಮಿಲನಕ್ಕೆ ವೇದಿಕೆಗಳಾಗಿವೆ. ಪುಸ್ತಕ ಪ್ರಕಟಣೆಯಲ್ಲಿಯೂ ಸಕ್ರಿಯವಾಗಿರುವ ಈ ಬಳಗ- `ಕುವೆಂಪು ಸಾಹಿತ್ಯ ಸಮೀಕ್ಷೆ`, `ಆಚೀಚೆಯ ಕಥೆಗಳು`, `ನಗೆಗನ್ನಡಂ ಗೆಲ್ಲೆ`, `ಕನ್ನಡ ಕಾದಂಬರಿ ಲೋಕದಲ್ಲಿ…` ರೀತಿಯ ಗಮನಾರ್ಹ ಕೃತಿಗಳನ್ನು ಪ್ರಕಟಿಸಿದೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಸೃಷ್ಟಿಶೀಲ ಪ್ರತಿಭೆಗೆ ಈ ಕೃತಿಗಳು ಸಾಕ್ಷಿಯಂತಿವೆ. ಸಾಹಿತ್ಯ ರಂಗದ ಹೊಸ ಪ್ರಕಟಣೆ, `ಮಥಿಸಿದಷ್ಟೂ ಮಾತು`. `ಮಥಿಸಿದಷ್ಟೂ ಮಾತು` – ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆಗಳ ಗುಚ್ಛ. ಇಪ್ಪತ್ತೇಳು ಬರಹಗಳ ಈ ಸಂಕಲನವನ್ನು  ತ್ರಿವೇಣಿ ಶ್ರೀನಿವಾಸರಾವ್ ಮತ್ತು ಎಂ.ಆರ್.ದತ್ತಾತ್ರಿ ಸಂಪಾದಿಸಿದ್ದಾರೆ.

ಇಲ್ಲಿನ ಬರಹಗಳು ಸಲ್ಲಾಪದಂಗಳ, ಹರಟೆ ಕಟ್ಟೆ ಮತ್ತು ಚಿಂತನೆ ಚಾವಡಿ ಎನ್ನುವ ಮೂರು ಭಾಗಗಳಲ್ಲಿ ಹರಡಿಕೊಂಡಿವೆ. ಆದರೆ, ಇಂಥ ವಿಂಗಡಣೆಯ ಹಂಗಿಲ್ಲದೆ ಓದಿಸಿಕೊಳ್ಳುವ ಹಾಗೂ ಪ್ರಬಂಧದ ಗುಣ ಹೊಂದಿರುವ ಇವುಗಳನ್ನು ಪ್ರಬಂಧಗಳೆಂದೇ ಕರೆಯಬಹುದು. ಪ್ರಾತಿನಿಧಿಕ ಸಂಕಲನಗಳು ಸಾಮಾನ್ಯವಾಗಿ ಹೊಂದಿರುವ ಸಮತೋಲನದ ಗುಣ ಈ ಸಂಕಲನದಲ್ಲೂ ಇದೆ. ಒಳ್ಳೆಯ ಪ್ರಬಂಧಗಳ ಜೊತೆಗೆ ಸರಳವಾದ ರಚನೆಗಳಿಗೆ ಹಾಗೂ ಅಹಿತಾನಲ, ಎಚ್.ವೈ.ರಾಜಗೋಪಾಲರಂಥ ಹಿರಿಯರ ಜೊತೆಗೆ ಹೊಸ ತಲೆಮಾರಿನ ಬರಹಗಾರರಿಗೆ  ಸಂಕಲನದಲ್ಲಿ ಸ್ಥಾನ ದೊರೆತಿದೆ. ಅಹಿತಾನಲ ಅವರ `ನಿವೃತ್ತನೊಬ್ಬದ ದಿನಚರಿಯಿಂದ` ಅವರ ಸ್ವಾನುಭವ ಬರಹ. ನಿವೃತ್ತಿಯ ನಂತರದ ತವಕತಲ್ಲಣಗಳನ್ನು ಹರಟೆಯ ರೂಪದಲ್ಲಿ ಅಹಿತಾನಲ ನಿರೂಪಿಸಿದ್ದಾರೆ. ಓದಿಸಿಕೊಳ್ಳುವ ಗುಣವಿದ್ದರೂ, ದೀರ್ಘವಾಯಿತು ಎನ್ನುವ ಭಾವವನ್ನು ಹುಟ್ಟಿಸುವ ಬರಹವಿದು.

ತ್ರಿವೇಣಿ ಶ್ರೀನಿವಾಸರಾವ್ ಅವರ `ಕಳೆದೂ ಉಳಿಯುವ ಮೋಡಿ` ಒಂದು ಸುಲಲಿತ ಪ್ರಬಂಧ. ಹಂ.ಕ.ಕೃಷ್ಣಪ್ರಿಯ ಅವರ `ಸೈಕಲ್ಲೇರಿ ಕೆಲಸಕೆ ಹೋಗುವ ಆನಂದ` ಬರಹ ಲೇಖಕರ ಸಹಜಭಾಷೆ ಹಾಗೂ ನಿರೂಪಣೆಯ ಕಾರಣದಿಂದಾಗಿ ಗಮನಸೆಳೆಯುವ ಪ್ರಬಂಧ. ಜ್ಯೋತಿ ಮಹಾದೇವ ಹೊರತುಪಡಿಸಿ, ಈ ಸಂಕಲನದ ಎಲ್ಲ ಬರಹಗಾರರೂ ಅಮೆರಿಕದಲ್ಲಿ ನೆಲೆಸಿದ್ದರೂ, ಅವರ ಬರಹಗಳಲ್ಲಿ ಅಮೆರಿಕದ ಛಾಯೆ ಕಾಣುವುದು ತೀರಾ ಕಡಿಮೆ. ಆದರೆ ಕೃಷ್ಣಪ್ರಿಯರ ಬರಹ ಪೂರ್ಣವಾಗಿ ಆತುಕೊಂಡಿರುವುದು ಅಮೆರಿಕದ ವರ್ತಮಾನದ ನೆಲೆಗೆ. ಎಂ.ಆರ್.ದತ್ತಾತ್ರಿ ಅವರ `ಹೇಳ್ಕೊಳ್ಳಕ್ ಒಂದೂರು` ಸೂಕ್ಷ್ಮ ಪ್ರಶ್ನೆಗಳನ್ನು ಓದುಗರಲ್ಲಿ ಉಂಟುಮಾಡಬಲ್ಲ ಶಕ್ತಿಯ ಪ್ರಬಂಧ. ಯುವಪೀಳಿಗೆಯ ಆತ್ಮಸಾಕ್ಷಿಯನ್ನು ಕಲಕಬಲ್ಲ ಈ ಪ್ರಬಂಧದೊಂದಿಗೆ ಗುರುಪ್ರಸಾದ್ ಕಾಗಿನೆಲೆ ಅವರ `ಸಾವೆಂಬ ಲಹರಿ`ಯನ್ನು ಒಟ್ಟಿಗೆ ನೋಡಬಹುದು. ದತ್ತಾತ್ರಿ ಅವರ ಬರಹ ಮಾನಸಿಕ ಅಸ್ತಿತ್ವಕ್ಕೆ ಸಂಬಂಧಿಸಿದ್ದರೆ, ಗುರುಪ್ರಸಾದ್‌ರ ಬರಹ ಭೌತಿಕ ಅಸ್ತಿತ್ವದ ವಿವರಗಳನ್ನು ಹೊಂದಿರುವಂತಹದ್ದು. ಪರಿಣಾಮಕಾರಿ ಭಾಷೆ, ನಿರೂಪಣೆಯಿಂದಾಗಿ ಎರಡೂ ರಚನೆಗಳು ಗಮನಸೆಳೆಯುತ್ತವೆ.

ಅಲಮೇಲು ಅಯ್ಯಂಗಾರ್ (ಗ್ಯಾಡ್ಜೆಟ್ಸ್ ಗಮ್ಮತ್ತು), ನಳಿನಿ ಮೈಯ (ಊಟೋಪನಿಷತ್ತು), ಎಚ್.ವೈ.ರಾಜಗೋಪಾಲ್ (ಸೋಲೂರು ಕ್ಲಬ್ಬಿನ ಗೆಳೆಯರು), ಮೈ.ಶ್ರೀ.ನಟರಾಜ (ವರ್ತುಳದಲ್ಲಿ ಸಿಕ್ಕ ಮನವೆಂಬ ಮರ್ಕಟ) ಹಾಗೂ ವೈಶಾಲಿ ಹೆಗಡೆ (ನಿನ್ನನೆಲ್ಲಿ ಹುಡುಕಲಯ್ಯ ಕಸಗುಡ್ಡದೊಳಗೆ) ಅವರ ಪ್ರಬಂಧಗಳು ತಮ್ಮ ವಸ್ತು ವೈವಿಧ್ಯದಿಂದಾಗಿ ಗಮನಸೆಳೆಯುತ್ತವೆ.

`ಮಥಿಸಿದಷ್ಟೂ ಮಾತು` ಸಂಕಲನದ ಬಹುತೇಕ ಬರಹಗಳು ಆಯಾ ಲೇಖಕರ ಬಾಲ್ಯ ಹಾಗೂ ತವರಿನ ದಿನಗಳ ನೆನಪುಗಳಿಗೆ ನಿಷ್ಠವಾಗಿವೆ. ತೌರ ಹಂಬಲದೊಳಗೆ ಗಂಡನ ಮನೆಯ ನಿರ್ಲಕ್ಷಿಸಿದ ಹೆಣ್ಣಿನಂತೆ ಅವರ ಬರಹಗಳಲ್ಲಿ ಅಮೆರಿಕ ನೆಲ ಗೈರುಹಾಜರಾಗಿದೆ. ಅಮೆರಿಕನ್ನಡಿಗರ ಬರಹಗಳ ಮೂಲಕ ಪಶ್ಚಿಮದ ಬಣ್ಣಗಳ, ತವಕತಲ್ಲಣಗಳ ಕಾಣಲು ಬಯಸಿದರೆ ನಿರಾಶೆ ಖಚಿತ. ಅಂತೆಯೇ, ಈಗಾಗಲೇ ಅಮೆರಿಕನ್ನಡಿಗರ ಸಾಹಿತ್ಯದ ರುಚಿ ಗೊತ್ತಿದ್ದವರಿಗೆ ಇಲ್ಲಿ `ಹೊಸ ರುಚಿ` ಸಿಗುವುದಿಲ್ಲ. ಸಂಕಲನದ ಬಹುತೇಕ ಬರಹಗಳ ಹಿಂದೆ ಭಾವುಕತೆ ಕೆಲಸ ಮಾಡಿರುವುದನ್ನು ವಿಮರ್ಶಕ ರಹಮತ್ ತರೀಕೆರೆ ಅವರು ಮುನ್ನುಡಿಯಲ್ಲಿ ಸರಿಯಾಗಿಯೇ ಗುರ್ತಿಸಿದ್ದಾರೆ.

`ಈ ಲೇಖನಗಳು ನಮ್ಮ ಮಾತುಗಳು. ಒಂದು ರೀತಿಯಲ್ಲಿ ನಮ್ಮಷ್ಟಕ್ಕೆ ನಾವೇ ಆಡಿಕೊಂಡಂತೆ ಕಾಣುವ ನಮ್ಮ ಅಂತರಂಗದ ಮಾತುಗಳು. ಸಾಹಿತ್ಯ ಸಾಧನೆಗಿಂತಲೂ ಹೆಚ್ಚಾಗಿ ನಮ್ಮ ಮನಸ್ಸಿನಲ್ಲಿರುವುದನ್ನು ನಿಮ್ಮೆದುರು ಬರಿದು ಮಾಡಿ ಹಗುರಾಗಲು ಆಡಿದ ಮಾತುಗಳು` ಎನ್ನುವ ಸಂಪಾದಕದ್ವಯರ ಮಾತುಗಳು ಈ ಸಂಕಲನದ ವಿಶೇಷ ಮತ್ತು ಚೌಕಟ್ಟು ಎರಡನ್ನೂ ಹೇಳುವಂತಿದೆ.

`ಮಥಿಸಿದಷ್ಟೂ ಮಾತು` ಸಂಕಲನದ ಮಹತ್ವ ಇರುವುದು ಆ ಬರಹಗಳಲ್ಲಿನ ಪ್ರಾಮಾಣಿಕ ಅಭಿವ್ಯಕ್ತಿಯಲ್ಲಿ. ಕಥೆಯಾಗದ ಗದ್ಯವೇ ಪ್ರಬಂಧ ಎನ್ನುವ ಮೂಢನಂಬಿಕೆ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಚಾಲ್ತಿಯಲ್ಲಿರುವ ಸಂದರ್ಭವಿದು. ಪ್ರಸ್ತುತ ಚಲಾವಣೆಯಲ್ಲಿರುವ ಪ್ರಬಂಧದ ಮಾದರಿಗಳು ಗಾಬರಿ ಹುಟ್ಟಿಸುವಂತಿವೆ. ಅಂತರ್ಜಾಲದಲ್ಲಿನ ಅನಾಮಧೇಯರ ಬರಹಗಳನ್ನು ಅನುವಾದಿಸಿ ಪ್ರಬಂಧಗಳ ಹೆಸರಿನಲ್ಲಿ ಚಾಲ್ತಿಗೆ ಬಿಡುವ ಹಾಗೂ ದಿನಚರಿಯ ತುಣುಕು ಛಾಯೆಗಳನ್ನು ಪೋಣಿಸುತ್ತ ಪ್ರಬಂಧಗಳೆಂದು ನಂಬಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ, ಇಂಥ ಬರಹಗಳಿಗೆ ಪ್ರಶಸ್ತಿಗಳ ಗೌರವವೂ ದೊರಕುತ್ತಿರುವ ಹೊತ್ತಿನಲ್ಲಿ- `ಮಥಿಸಿದಷ್ಟೂ ಮಾತು` ಸಂಕಲನದ ಕೆಲವು ಬರಹಗಳಾದರೂ `ನಿಜ ಪ್ರಬಂಧ`ದ ಸುಖ ಕೊಡಬಲ್ಲವು. ಇಂಥ ಸುಖದ ರುಚಿಯೇ ಒಂದು ಒಳ್ಳೆಯ ಸಂಕಲನದ ಸಾರ್ಥಕತೆ.

– ನಟರಾಜ

 Posted by at 7:17 PM