Mar 012011
 

ಕನ್ನಡ ಸಾಹಿತ್ಯ ರಂಗದ ಐದನೆಯ ವಸಂತ ಸಾಹಿತ್ಯೋತ್ಸವು ಕ್ಯಾಲಿಫ಼ೋರ್ನಿಯಾದ ಸ್ಯಾನ್ ಫ಼್ರಾನ್ಸಿಸ್ಕೋ ನಗರದ ಸಮೀಪದ ವುಡ್‌ಸೈಡ್ ಎಂಬ ಊರಿನಲ್ಲಿ ಏಪ್ರಿಲ್ ೩೦ ಮತ್ತು ಮೇ ೧ ರಂದು ನಡೆಯಲಿರುವ ಸಂಗತಿ, ಸಾಹಿತ್ಯಾಸಕ್ತಿಗಳಾದ ತಮ್ಮ ಗಮನಕ್ಕೆ ಬಂದಿದೆಯೆಂದು ನಾವು ಭಾವಿಸಿದ್ದೇವೆ. ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಸಹಯೋಗ ಮತ್ತು ಅಲ್ಲಿನ ಸಾಹಿತ್ಯ ಗೋಷ್ಠಿಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀವು ಇದೇ ಅಂತರ್ಜಾಲ ತಾಣದಲ್ಲಿ ಪಡೆಯಬಹುದು.ಈ ಸಾಹಿತ್ಯೋತ್ಸವದ ಅಂಗವಾಗಿ ಆಯೋಜಿಸಲಿರುವ ಒಂದು ಪ್ರಮುಖ ಕಾರ್ಯಕ್ರಮ ‘ಸಾಹಿತ್ಯ ಸಂಕಿರಣ’; ಇದನ್ನು ಆಯೋಜಿಸಿ, ಪ್ರಸ್ತುತ ಪಡಿಸುವ ಜವಾಬುದಾರಿ ಸಾಹಿತ್ಯ ಗೋಷ್ಠಿಯ ಮೇಲಿದೆ. ಅಮೇರಿಕಾದ ಕನ್ನಡದ ಬರಹಗಾರರನ್ನು – ಉದಯೋನ್ಮುಖ ಮತ್ತು ನೆಲೆಯೂರಿದ – ಉತ್ತೇಜಿಸಿ, ಗೌರವಿಸಿವುದು ಇದರ ಉದ್ದೇಶ. ಪ್ರತಿಯೊಬ್ಬ ಲೇಖಕನಿಗೂ ತಾನು ರಚಿಸಿದ ಕೃತಿಯನ್ನು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ವಾಚಿಸುವ ಅಪೇಕ್ಷೆ ಇರುವುದು ಸಹಜ. ಇಂತಹ ಒಂದು ಸುವರ್ಣಾವಕಾಶವನ್ನು ಈ ‘ಸಾಹಿತ್ಯ ಸಂಕಿರಣ’ ನಿಮಗೆ ನೀಡುತ್ತಿದೆ.ಈ ‘ಸಾಹಿತ್ಯ ಸಂಕಿರಣ’ ದಲ್ಲಿ ನೀವು ಬರೆದ ಕವನ, ಸಣ್ಣಕಥೆ, ಪ್ರಬಂಧ, ಕಿರು ವಿಮರ್ಶೆ, ಅನುವಾದಿತ ರಚನೆ, ಹಾಸ್ಯ ಚಟಾಕಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರದ ಕ್ರೃತಿಯನ್ನು ಮಂಡಿಸಬಹುದಾಗಿದೆ. (ಇದರಲ್ಲಿ ಅನ್ಯರು ರಚಿಸಿದ ಕೃತಿಯನ್ನು ನೀವು ವಾಚನ ಮಾಡುವ ಹಾಗಿಲ್ಲ!) ಈ ಕಾರ್ಯಕ್ರಮದಲ್ಲಿ ನಾವು ಆದಷ್ಟು ಹೆಚ್ಚಿನ ಲೇಖಕರಿಗೆ ವೇದಿಕೆಯನ್ನು ನೀಡಲು ಉತ್ಸುಕರಾಗಿದ್ದೇವೆ. ವಸ್ತು ವಿಷಯದ ಆಯ್ಕೆ ಮತ್ತು ಅದನ್ನು ಅಭಿವ್ಯಕ್ತಪಡಿಸುವ ತಂತ್ರದ ಬಳಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನಿಮಗೆ ಬಿಡಲಾಗಿದೆ. ಗದ್ಯದ ಮಂಡನೆಗೆ ಕವನದ ವಾಚನಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದೆಂಬುದನ್ನು ಮನಗೊಂಡು, ಗದ್ಯಕ್ಕೆ ಸುಮಾರು ೮ ನಿಮಿಷ ಮತ್ತು ಪದ್ಯಕ್ಕೆ ೫ ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿಮ್ಮ ಸಾಹಿತ್ಯಿಕ ರಚನೆಯ ಮಂಡನೆಗೆ ನೀಡಿದ ಕಾಲಾವಧಿಯನ್ನು ದಯವಿಟ್ಟು ಮೀರಬಾರದೆಂದು ಕೋರುತ್ತೇವೆ.ಇನ್ನು ತಡವೇತಕೆ? ನಿಮ್ಮ ಬರವಣಿಗೆಯನ್ನು ಆರಂಭಿಸಿ! ನಿಮ್ಮ ಮನಸ್ಸಿನ ತುಡಿತಕ್ಕೊಂದು ಸೃಜನಶೀಲ ಅಭಿವ್ಯಕ್ತಿ ನೀಡಿ! ಸಾವಧಾನದಿಂದ ಅದನ್ನು ಪರಿಷ್ಕರಿಸಿ, ನಂತರ ನಮಗೆ ಕಳುಹಿಸಿಕೊಡಿ! ಉತ್ಸುಕ ಆಭಿಮಾನಿಗಳ ವೃಂದವನ್ನು ನಿಮಗೆ ಒದಗಿಸುವ ಭರವಸೆಯನ್ನು ನಾವು ನೀಡುತ್ತೇವೆ!  ನಿಮ್ಮ ರಚನೆ (ಇಲ್ಲಿಯವರೆಗೆ ಬೇರೆಲ್ಲಿಯೂ ಪ್ರಕಟವಾಗಿರದ ಹೊಚ್ಚ ಹೊಸ ಲೇಖನಗಳಿಗೆ ಆದ್ಯತೆ ಉಂಟು) ಮತ್ತು ನಿಮ್ಮ ಕಿರು ಪರಿಚಯವನ್ನು (೮೦ ಪದಗಳಿಗೆ ಮೀರದಂತೆ), ನಮಗೆ ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ ೩೧, ೨೦೧೧.  ಸಂಪರ್ಕ: ವಿಶ್ವನಾಥ್ ಹುಲಿಕಲ್ (vhulikal@yahoo.com ; 408-343-3900) ‘ಸಾಹಿತ್ಯ ಸಂಕಿರಣ’ದಲ್ಲಿ ನಿಮ್ಮ ಕೃತಿಯ ಮಂಡನೆಗೆ ಅವಕಾಶ ಮಾಡಿಕೊಡುವ ನಿರ್ಧಾರ ಮಂಡಳಿಯದು. ಸ್ವೀಕೃತ ಕೃತಿಗಳ ಪಟ್ಟಿ ಏಪ್ರಿಲ್ ೧೫ ರ ವೇಳೆಗೆ ಸಿದ್ಧವಾಗಿ, ನಿಮಗೆ ತಿಳಿಸಲಾಗುತ್ತದೆ.ಈ ಕಾರ್ಯಕ್ರಮದಲ್ಲಿ ನೀವು ಉತ್ಸಾಹದಿಂದ ಪಾಲುಗೊಳ್ಳುವುದನ್ನು ಎದುರುನೋಡುತ್ತೇವೆ.

 Posted by at 9:01 PM