Jul 262009
 

ದತ್ತಾತ್ರಿ ಎಂ.ಆರ್. ವೈರಸ್ ಉಡುಗೊರೆ

 

 

ಲಾಸ್ ಏಂಜಲಿಸ್ ನಗರದಿಂದ ದಕ್ಷಿಣಕ್ಕೆ ಸ್ಯಾನ್ ಡಿಯಾಗೋ ಎನ್ನುವ ಊರಿನ ಹಾದಿಯಲ್ಲೇ ನಾನಿರುವ ಊರಿರುವುದು. ಇದು ಮೆಕ್ಸಿಕೋ ದೇಶಕ್ಕೆ ಗಡಿ ಪ್ರದೇಶ. ಫ್ರೀವೇ ೫ರಲ್ಲಿ ಹೊರಟು ದಕ್ಷಿಣದ ಕಡೆ ಸಾಗುತ್ತಾ ಸಾನ್ ಈಸಿಡ್ರೊ ಎನ್ನುವ ಊರಿನ ಬಳಿ ಕೊನೆಯ ಎಕ್ಸಿಟ್ ತೆಗೆದುಕೊಳ್ಳುವುದ ಮರೆತಿರೋ ಗಡಿರೇಖೆಯಲ್ಲಿ ಇಮ್ಮಿಗ್ರೇಷನ್ ಆಫೀಸರನ ಮುಂದೆಯೇ ಇರುತ್ತೀರಿ. ಆ ಇಮ್ಮಿಗ್ರೇಷನ್ ಆಫೀಸರನ ಆಚೆಯ ಬದಿಯಲ್ಲೇ ಸ್ಪಾನಿಷ್ ಭಾಷೆ ಧಾರೆಯಾಗಿ ಉಕ್ಕಿ ಹರಿಯುವ ಮತ್ತು ಥೇಟ್ ನಮ್ಮ ಗಾಂಧೀಬಜಾರ್ ಮಾರ್ಕೆಟ್‍ನಂತೆಯೇ ಕಾಣುವ ಟಿಹುಆನ ಎನ್ನುವ ಮೆಕ್ಸಿಕನ್ ಊರು. ನಿಮಗೇನಾದರೂ ವೀಸಾ ಸಮಸ್ಯೆಯಿದ್ದರೆ ಈ ಕೊನೆಯ ಅಮೆರಿಕನ್ ಎಕ್ಸಿಟ್‍ನ್ನು ನೀವು ಮರೆಯದಿರುವುದು ಒಳ್ಳೆಯದು. ಏಕೆಂದರೆ ಮೆಕ್ಸಿಕೋ ಹೊಕ್ಕ ನಂತರ ಅಮೆರಿಕಾಕ್ಕೆ ಮರುಪ್ರವೇಶ ನಿಮಗೆ ನಿಷಿದ್ಧವಾಗಿ ಅಲ್ಲೇ ಉಳಿದುಕೊಂಡು ಮೈದಾ ಚಪಾತಿಗೆ ಈರುಳ್ಳಿ ಅವಕೆಡೋ ಕಂದುಬಣ್ಣದ ಬೀನ್ಸ್ ಮತ್ತು ಕೆಂಪನ್ನವನ್ನು ಸುತ್ತಿದ ಬರಿಟೋ ತಿನ್ನುತ್ತಾ ಫುಟ್‌ಪಾತ್‌ನಲ್ಲಿ ಜಾಗ ಹಿಡಿದು ಒಬಾಮನ ಮುಖಚಿತ್ರ ಹೊತ್ತ ಟೀಶರ್ಟುಗಳು ಮತ್ತು ಅಮೆರಿಕನ್ ಟೂರಿಸ್ಟರು ಜಾಸ್ತಿ ಕೊಳ್ಳುವ ಮಾಯನ್ನರ ಬಣ್ಣ ಬಣ್ಣದ ಮುಖವಾಡಗಳನ್ನು ಮಾರುತ್ತಾ ಜೀವನ ಸಾಗಿಸಬೇಕಾದೀತು! ಅಥವಾ, ಗಡಿಯುದ್ದಕ್ಕೂ ಪೋಲೀಸರಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಮತ್ತು ಪೋಲೀಸರಿಗಿಂತಲೂ ಹೆಚ್ಚು ಸಂಬಳ ಕೊಡುವ ಡ್ರಗ್ ಮಾಫಿಯಾದ ಜೊತೆಗೂ ಕೆಲಸ ಮಾಡಬಹುದು!

ಮೆಕ್ಸಿಕನ್ನರಿಗೆ ಮಾತ್ರ ಈ ದೇಶಕ್ಕೆ ಬರುವುದು ಎಂದರೆ ಬಾಲನ್ನು ಅರೆಸುತ್ತಾ ಪಕ್ಕದ ಮನೆಯ ಕಾಂಪೌಂಡನ್ನು ಹಾರುತ್ತಿದ್ದೆವೆಲ್ಲ ನಾವು ಚಿಕ್ಕವಯಸ್ಸಿನಲ್ಲಿ, ಅಷ್ಟೇ ಸುಲಭ. ಹಣದ ಅಗತ್ಯಬಿದ್ದಾಗ ಅಥವ ಕೆಲಸ ಮಾಡದೆ ಮೈ ಜಡ್ಡು ಹಿಡಿಯಿತು ಎನ್ನಿಸಿದಾಗಲೆಲ್ಲಾ ಹಕ್ಕಿಗಳಂತೆ ಯಾವ ಬಂಧವೂ ಇಲ್ಲದೆ ಗಡಿರೇಖೆ ಹಾರಿಬಂದು ಬ್ಯಾಂಕ್ ಆಫ್ ಅಮೆರಿಕಾದ ನಲ್ವತ್ತೇಳನೇ ಅಂತಸ್ತನ್ನು ಗುಡಿಸಿ ಮೆಟ್‍ಲೈಫ್ ಕಾನ್‍ಫರೆನ್ಸ್ ರೂಮುಗಳನ್ನು ಒರೆಸಿ, ನೂರೈವತ್ತು ಡಾಲರಿಗೆ ಮೂವತ್ತೈದು ವರ್ಷ ಹಳೆಯ ಪಿಕಪ್ ಟ್ರಕ್‍ ಒಂದನ್ನು ಕೊಂಡು ಇನ್ಸುರೆನ್ಸ್‍ನ ಗೋಜೇ ಇಲ್ಲದೆ ಲಾಸ್ ಏಂಜಲಿಸ್‍ನ ತುಂಬೆಲ್ಲಾ ಗುಡುಗುಡು ಶಬ್ದ ಮಾಡುತ್ತಾ ಓಡಾಡಿ, ಮೆಕ್‍ಆರ್ಥರ್ ಪಾರ್ಕಿನಲ್ಲಿ ಚೀಪಾದ ಬಿಯರ್ ಕುಡಿದು ಸ್ಟಾಪಲ್ಸ್ ಸೆಂಟರಿನ ಮುಂದೆ ಕ್ಯಾಮೆಲ್ ಬ್ರಾಂಡಿನ ಸಿಗರೇಟು ಎಳೆದು ಹಾಗೆಯೇ ಡೌನ್‍ಟೌನಿನ ರಸ್ತೆಗಳಲ್ಲಿ ಓಡಾಡಿಕೊಂಡಿರುವಾಗಲೇ ಅಮ್ಮನ ಆರೋಗ್ಯ ಚಿಂತಾಜನಕ ಎಂದು ಸುದ್ದಿ ಬಂದೊಡನೆಯೇ ಬಂದ ರೀತಿಯಲ್ಲೇ ಹಕ್ಕಿಯಂತೆ ಗಡಿಯ ಗೋಡೆಯನ್ನು ಹಾರಿ ಮೆಕ್ಸಿಕೋದೊಳಗೆ ಕಣ್ಮರೆಯಾಗುತ್ತಾನೆ. ಆಲೆಮನೆಯ ಗಾಣದೆತ್ತಿನಂತೆ ಬರೀ ಆಫೀಸು ಮನೆಯ ವೃತ್ತದಲ್ಲಿ ಸುತ್ತುವ ನನ್ನಂತವರಿಗೆ ಅವನು ಬಂದದ್ದೂ ತಿಳಿಯುವುದಿಲ್ಲ ಹಾಗೆಯೇ ಹೋದದ್ದೂ ಕೂಡ.

ಇಂತಹ ಮೆಕ್ಸಿಕನ್ನರಿಂದ ಪ್ರಪಂಚಕ್ಕೊಂದು ಫ್ಲೂ ಬಂದಿದೆ. ಅದು ಕೊಂದದ್ದು ಬರೀ ಹತ್ತಿಪ್ಪತ್ತು ಜನರನ್ನಾದರೂ, ಒಂದು ರೀತಿಯ ವಿನಾಶದ ಭಯ, “ನಾವು ಉಸಿರಾಡುತ್ತಿರುವ ಗಾಳಿಯಲ್ಲೇ ದೆವ್ವ ಒಂದು ಓಡಾಡುತ್ತಿದೆ” ಎನ್ನುವಂತಹ ವಿನಾಶದ ಅಂಜಿಕೆಯನ್ನು ನಮ್ಮಲ್ಲಿ, ವಿಶೇಷವಾಗಿ ಮೆಕ್ಸಿಕೋದ ನೆರೆರಾಜ್ಯ ಅಮೆರಿಕಾದಲ್ಲಿ, ಅದರಲ್ಲೂ ವಿಶೇಷವಾಗಿ ಮೆಕ್ಸಿಕೋಕ್ಕೆ ಹೊಂದಿಕೊಂಡ ಗಡಿಪ್ರದೇಶದ ಊರುಗಳಲ್ಲಿ ಆಳವಾಗಿ ಊರಿಸಿಬಿಟ್ಟಿದೆ. “ನಾವು ಮೊದಲಿಂದಲೂ ಹೇಳುತ್ತಿರಲಿಲ್ಲವೇ ನಮ್ಮನ್ನು ವಿನಾಶ ಮಾಡುವಂತಹ ಸಾಂಕ್ರಾಮಿಕವೊಂದು ಹರಡುತ್ತದೆಯೊಂದು, ಇದೇ ಇದೇ ಅದು ನೋಡಿ” ಎಂದು ಯೂನಿವರ್ಸಿಟಿಯ ವಿಜ್ಞಾನಿಗಳು ಮತ್ತು ಹೆಲ್ತ್ ಡಿಪಾರ್ಟಮೆಂಟುಗಳು ತಮ್ಮ ವಾದದ ಗಟ್ಟಿತನವನ್ನು ತೋರಿಸುವ ಬರದಲ್ಲಿ ಹೆದರಿದವರನ್ನು ಮತ್ತೂ ಹೆದರಿಸುತ್ತಿವೆ.

ಈ ನಡುವೆ, ಎಲ್ಲವನ್ನೂ ಅತೀ ಮಾಡುವ ಅಮೆರಿಕನ್ ಮಾದ್ಯಮಗಳು ಜನರು ಮರೆಯದಂತೆ “ಸಾಂಕ್ರಾಮಿಕ ಭಯವನ್ನು” ಜಾಗೃತಿಯಲ್ಲಿಟ್ಟು ರೋಗದ ಟ್ವೆಂಟಿಫೋರ್ ಬೈ ಸೆವೆನ್ ಕವರೇಜ್ ನೀಡುತ್ತಿವೆ. ಮೆಕ್ಸಿಕೋ ನಗರದ ಸರಕಾರಿ ಆಸ್ಪತ್ರೆಗೆ ದಾಖಲಾದ ಆರುವರ್ಷದ ಹುಡುಗನ ಹರಿದ ಚಡ್ಡಿಯಿಂದ ಹಿಡಿದು ಗೋಡೆಯ ಮೇಲೆ ಧ್ಯಾನಸ್ಥವಾದ ಕಂದು ಬಣ್ಣದ ಠೊಣಪ ಹಲ್ಲಿಯ ತನಕ ಎಲ್ಲವನ್ನೂ ನೇರ ಪ್ರಸಾರ ಮಾಡಲಾಗುತ್ತಿದೆ. ಇದ್ದಕ್ಕಿದ್ದಂತಲೇ ಪ್ರಪಂಚದ ದೃಷ್ಟಿ ಮೆಕ್ಸಿಕೋನತ್ತ ಹರಿದಿದೆ.

ಇತಿಹಾಸಬಲ್ಲವರಿಗೆ ವೈರಸ್ ಜೊತೆಗಿನ ಮೆಕ್ಸಿಕೋದ ನಂಟು ಇವತ್ತಿನದಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ಐದುನೂರು ವರ್ಷಗಳ ಹಿಂದೆ ಭಾರತವನ್ನು ಹುಡುಕುತ್ತೇನೆ ಎಂದು ಅಮೆರಿಕಾಕ್ಕೆ ಬಂದಿಳಿದ ಕೊಲಂಬಸ್ ಅಲ್ಲಿದ್ದ ಮೂಲನಿವಾಸಿಗಳಿಗೆ ಮೊದಲು ಕೊಟ್ಟ ಉಡುಗೊರೆ ಎಂದರೆ ಸಿಡುಬಿನ ವೈರಸ್. ಹಡಗುಗಳಲ್ಲಿ ಬಂದಿಳಿದ ಉಕ್ಕಿನ ಕವಚದ ಸ್ಪಾನಿಯಾರ್ಡರು ಮತ್ತು ಬರೀ ಲಂಗೋಟಿಯಲ್ಲಿ ನಿಂತಿದ್ದ ಮೆಕ್ಸಿಕೋದ ಮೂಲ ನಿವಾಸಿಗಳು ಒಬ್ಬರನ್ನೊಬ್ಬರು ನೋಡಿದೊಡನೆಯೇ ಹಸ್ತಲಾಘವ ಕೊಡಲಿಲ್ಲ, ಒಬ್ಬರನ್ನೊಬ್ಬರು ತಬ್ಬಿಕೊಳ್ಳಲಿಲ್ಲ. ಯುರೋಪಿಗಿಂತಲೂ ಹಳೆಯದಾದ ನಾಗರೀಕತೆಯನ್ನು ಹೊಂದಿದ್ದರೂ ಪೂರ್ತೀ ಮೈ ಮುಚ್ಚುವಂತೆ ಬಟ್ಟೆ ಹಾಕಿಕೊಳ್ಳದ ಮತ್ತು ಲೋಹವನ್ನೇ ಕಾಣದೆ ಬರೀ ಬೆತ್ತದ ಕೋಲು ಹಿಡಿದು ಯುದ್ಧಕ್ಕೆ ಬರುವ ಈ ಮೂಲನಿವಾಸಿಗಳನ್ನು ಕೊಲಂಬಸ್ “ಅರೆ ಮಾನವರು” ಎಂದು ಕರೆದ. ಈ ಅರೆ ಮಾನವರನ್ನು ಪೂರ್ತೀ ಮಾನವರನ್ನಾಗಿಸಲು ಕೊಲಂಬಸ್‍ನ ದೇಹದ ವೈರಸ್‍ಗಳು ಆ ತನಕ ಈ ತರಹದ ವೈರಸ್‍ನ್ನೇ ಕಾಣದ ಮೂಲ ನಿವಾಸಿಗಳ ದೇಹವನ್ನು ಹೊಕ್ಕವು. ಅಂದು ಯುದ್ಧದಿಂದ ಸತ್ತದ್ದು ಹತ್ತು ಸಾವಿರವಾದರೆ ಯುರೋಪಿಯನ್ನರು ಕೊಟ್ಟ ರೋಗದಿಂದ ಸತ್ತದ್ದು ಹತ್ತು ಲಕ್ಷ. ಉಕ್ಕಿನ ಎದೆ ಕವಚ, ಉಕ್ಕಿನ ಶಿರಸ್ತ್ರಾಣವನ್ನು ತೊಟ್ಟು ಆಳೆತ್ತರದ ಉಕ್ಕಿನ ಕತ್ತಿಯನ್ನು ಹಿಡಿದು ಕುದುರೆಯೇರಿ ಬಂದ ಸ್ಪಾನಿಯಾರ್ಡರನ್ನು ಮೂಲನಿವಾಸಿಗಳು ಇವರು ದೇವರಿರಬಹುದು ಎಂದು ತಿಳಿದರಂತೆ. ದೇವರೋ ಅಲ್ಲವೋ ಎಂದು ಪರೀಕ್ಷಿಸಲು ತಮ್ಮ ಪಂಡಿತರನ್ನು ಕಳುಹಿಸಿದಾಗ ಆ ಪಂಡಿತರು ಒಂದು ತಟ್ಟೆಯಲ್ಲಿ ಮನುಷ್ಯರ ಆಹಾರವಾದ ಜೋಳದ ಟಾರ್ಟಿಯಾಗಳು, ಈರುಳ್ಳಿ, ಮೆಣಸು, ಸೀಬೇಹಣ್ಣು, ಕೋಳಿಯ ಮಾಂಸವನ್ನು ಮತ್ತು ಇನ್ನೊಂದು ತಟ್ಟೆಯಲ್ಲಿ ದೇವರಿಗೆ ಪ್ರಿಯವಾದ ಬಲಿಕೊಟ್ಟ ಪ್ರಾಣಿಯ ಹಸಿಮಾಂಸ ಮತ್ತು ಹಸಿ ರಕ್ತವನ್ನು ಹಾಕಿ ಸ್ಪಾನಿಯಾರ್ಡರ ಮುಂದೆ ಇಟ್ಟರು. ಅವರ ಪ್ರಕಾರ ಈ ಉಕ್ಕಿನ ಜೀವಿಗಳು ಮಾನವನ ಆಹಾರವನ್ನು ಸ್ವೀಕರಿಸಿದರೆ ಆಗ ಇವರ ಮಾನವರೆಂದೂ ಇವರ ಮೇಲೆ ಯುದ್ಧ ಮಾಡಬಹುದೆಂದೂ, ಅವರೇನಾದರೂ ಭಗವಂತನ ಆಹಾರವನ್ನು ಸ್ವೀಕರಿಸಿದರೆ ಆಗ ಅವರು ದೇವರೆಂದು ಮತ್ತು ಅವರಿಗೆ ಶರಣಾಗುವುದೆಂದು ಪಂಡಿತರ ಯೋಜನೆ. ಹಡಗಿನಲ್ಲಿನ ದೂರದ ಪಯಣದಿಂದ ಹಸಿದುಬಂದಿದ್ದ ಸ್ಪಾನಿಯಾರ್ಡರು ಎರಡೂ ತಟ್ಟೆಯ ಆಹಾರವನ್ನು ತಿಂದರು. ಹಾಗೆಯೇ ಮಾನವರಾಗಿ ಯುದ್ಧಮಾಡಿ ಕೊನೆಗೆ ತಮ್ಮ ಕತ್ತಿಯ ಬಲದಿಂದ ದೇವರಾಗಿ ಈ ಮೂಲನಿವಾಸಿಗಳನ್ನು ಶರಣಾಗತರನ್ನಾಗಿಸಿಕೊಂಡರು. ಆ ದೇವರುಗಳೇ ವೈರಸ್ಸನ್ನು ವರವಾಗಿ ನೀಡಿ ಅರೆ ಮಾನವರನ್ನು ಪೂರ್ಣವಾಗಿಸುವಾಗ ಇಲ್ಲವೆನ್ನಲಾಗುತ್ತದೆಯೇ?

ಐನೂರು ವರ್ಷಗಳ ಹಿಂದೆ ತಾವು ಪಡೆದ ಬಳುವಳಿಯನ್ನು ಇವತ್ತು ಪ್ರಪಂಚಕ್ಕೆ ವಾಪಸ್ಸು ನೀಡಿ ಮೆಕ್ಸಿಕನ್ನರು ಋಣಮುಕ್ತರಾಗುತ್ತಿದ್ದಾರೆ. ಐನೂರು ವರ್ಷಗಳಿಂದ ತಾವು ಜತನವಾಗಿ ಕಾಪಾಡಿದ ಬಳುವಳಿಯನ್ನು ಚೆಂದವಾಗಿ ಗಿಫ್ಟ್ ಪ್ಯಾಕ್ ಮಾಡಿ ಅಂದಕ್ಕಾಗಿ ಹಂದಿಯ ಮುಖವಿಟ್ಟು ತಾವು ಪಡೆದ ರೀತಿಯಲ್ಲೇ ಹಡಗು ವಿಮಾನ ಬಸ್ಸು ಕುದುರೆಗಳಲ್ಲಿ ವೈರಸ್ಸನ್ನು ವಾಪಸ್ಸು ಕಳಿಸುತ್ತಾ ಮೆಕ್ಸಿಕನ್ನರು ವಿನೀತರಾಗಿ ಪ್ರಪಂಚಕ್ಕೆ ಬದಲು ಉಡುಗೊರೆ ನೀಡುತ್ತಿದ್ದಾರೆ. ಇದೋ, ಸ್ವೀಕರಿಸಿ!

 Posted by at 9:54 PM