Jun 292009
 

Nag Aital 

ಆಹಿತಾನಲ (ನಾಗ ಐತಾಳ)ರ ಎರಡು ಹೊತ್ತಗೆಗಳು:
“ಕಾದೇ ಇರುವಳು ರಾಧೆ”- ಕಾದಂಬರಿ
“ಒಂದಾನೊಂದು ಕಾಲದಲ್ಲಿ”- ಕಟ್ಟು ಕಥೆಗಳ ಸಂಗ್ರಹ
ವಿಮರ್ಶೆ – ಜ್ಯೋತಿ ಮಹಾದೇವ

 

ಆಹಿತಾನಲ ಎನ್ನುವ ಕಾವ್ಯನಾಮದ ನಾಗ ಐತಾಳರದು ಬಹಳಷ್ಟು ಜೀವನಾನುಭವವುಳ್ಳ ಸಮೃದ್ಧ ಬರವಣಿಗೆ. ಉಡುಪಿ ಸಮೀಪದ ಕೋಟದಿಂದ ಆರಂಭವಾದ ಇವರ ಜೀವನ ಪಯಣ, ಬೆಂಗಳೂರು, ಲಾಸ್ ಏಂಜಲಿಸ್, ಶಿಕಾಗೋ, ನ್ಯೂ ಜೆರ್ಸಿ ಮುಂತಾದ ಕಡೆಗಳಲ್ಲೆಲ್ಲ ಸುತ್ತಾಡಿ ಸಾಗುತ್ತಿದೆ. ಜೀವರಸಾಯನ ಶಾಸ್ತ್ರದಲ್ಲಿ ಅಧ್ಯಯನ, ಸಂಶೋಧನ ವೃತ್ತಿಯಾಗಿದ್ದು, ಈಗ ನಿವೃತ್ತರಾದ ಮೇಲೆ ಪ್ರವೃತ್ತಿಯಾಗಿದ್ದ ಬರವಣಿಗೆಯನ್ನೇ ಪೂರ್ಣಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದಾರೆ. ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ, ಕಾದೇ ಇರುವಳು ರಾಧೆ, ಒಂದಾನೊಂದು ಕಾಲದಲ್ಲಿ- ಕಟ್ಟುಕಥೆಗಳ ಸಂಗ್ರಹ; ಪ್ರಬಂಧ ಸಂಕಲನ- ಕಲಬೆರಕೆ – ಇವರ ಸ್ವಂತ ಪ್ರಕಟಿತ ಕೃತಿಗಳು. ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು (ಪು.ತಿ.ನ. ಅವರ ಜೀವನ, ಸಾಹಿತ್ಯದ ಬಗ್ಗೆ), ಕನ್ನಡದಮರ ಚೇತನ (ಮಾಸ್ತಿಯವರ ಜೀವನ, ಸಾಹಿತ್ಯದ ಬಗ್ಗೆ), ಗೆಲುವಿನ ಚಿಲುಮೆ ರಾಜರತ್ನಂ- ಇವರ ಸಂಪಾದಿತ ಕೃತಿಗಳು. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಆಚೀಚೆಯ ಕತೆಗಳು ಮತ್ತು ನಗೆಗನ್ನಡಂ ಗೆಲ್ಗೆ- ಇವುಗಳಿಗೂ ಸಹಸಂಪಾದಕರಾಗಿದ್ದರು.

ಈಗ ಇಲ್ಲಿ ನಾನು ಒಳನೋಟ ಹರಿಸುತ್ತಿರುವ ಎರಡು ಕೃತಿಗಳು ವಿಶಿಷ್ಟವಾದವು. ಮೊದಲನೆಯದು ಐತಾಳರ ಚೊಚ್ಚಲ ಕಾದಂಬರಿ- ಕಾದೇ ಇರುವಳು ರಾಧೆ.

ಕೃಷ್ಣ-ರಾಧೆಯರ ಪ್ರೇಮಗಾಥೆ ನಮಗ್ಯಾರಿಗೂ ಹೊಸದಲ್ಲ. ಅದು ಪ್ರೇಮಿಗಳಿಗೆ ಸ್ಫೂರ್ತಿ ನೀಡುವ ಸ್ಥೈರ್ಯ ಕೊಡುವ ಶಕ್ತಿಯುಳ್ಳದ್ದು. ಭೌತಿಕ ಪ್ರೇಮಕಥೆಗಳಾದ ರೋಮಿಯೋ ಜೂಲಿಯೆಟ್, ಲೈಲಾ ಮಜನೂ, ಸಲೀಂ ಅನಾರ್ಕಲಿ, ಅಥವಾ ಪುರಾತನ ಗ್ರೀಕ್ ಕಥಾನಕದ ಪೈರಮಿಸ್ ಮತ್ತು ಥೆಸ್ಬಿ, ಮುಂತಾದವರುಗಳಂತೆ ಅಲ್ಲದೆ, ಈ ಜೋಡಿ ಸದಾ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುವಂಥದ್ದು. ರಾಧೆಯ ಪ್ರೀತಿಯಿಂದಲೇ ಪವಾಡಪುರುಷ ಕೃಷ್ಣನೂ ರಾಧಾಕೃಷ್ಣನಾಗಿಬಿಟ್ಟ. ಇಂಥ ಗಾಥೆಯನ್ನು ಐತಾಳರು ರಾಧೆಯೆಡೆಗೆ ಮೃದುನೋಟವಿಟ್ಟುಕೊಂಡು ಹೊಸದೊಂದು ಕೋನದಿಂದ ಬರೆದಿದ್ದಾರೆ. ತಮ್ಮ ಅರಿಕೆಯಲ್ಲಿ, ಸಾಮಾನ್ಯವಾಗಿ ಪ್ರಚಲಿತವಿರುವ ಕಥೆಗಳಿಗಿಂತ ಈ ಕಥನ ಹೇಗೆ ಭಿನ್ನವೆಂಬುದನ್ನು ಹೇಳಿಕೊಂಡಿದ್ದಾರೆ. ಕೃಷ್ಣಕಥೆಯಾದ ಭಾಗವತದಲ್ಲಿಯೇ ಇಲ್ಲದ ರಾಧೆ ಬಹುಶಃ ಜಯದೇವ ಕವಿಯ ಕಲ್ಪನೆಯಿರಬೇಕು ಎನ್ನುವುದು ಅಭಿಮತ. ಅಂಥ ಬಹುಪ್ರತೀತ ಕಲ್ಪನೆಯನ್ನು ಇನ್ನಷ್ಟು ಕಲ್ಪನೆಯ ಚಿತ್ತಾರಗಳಿಂದ ಐತಾಳರು ಅಂದಗೊಳಿಸಿದ್ದಾರೆ. ಗೋವಳ ಜನಾಂಗದ ಜನಜೀವನದ ಚಿತ್ರಣ ಕಟ್ಟಿಕೊಡುತ್ತಾ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತಾರೆ.

ಗೋಕುಲದ ತುಂಟ ಕೃಷ್ಣ ಇವರ ಕಥೆಯಲ್ಲಿ ರಾಸಲೀಲೆಯಾಡುವ ಎಳೆಯ ಹದಿ ವಯಸ್ಸಿನ ಪೋರನೇ. ಹಾಲು ಬೆಣ್ಣೆ ಕದಿಯುವ, ಚಿಣ್ಣಿ-ದಾಂಡು ಆಡುವ ಕೊಳಲೂದಿ ದನಗಳನ್ನು ಕರೆಯುವ ಈ ಬಾಲಕೃಷ್ಣ ಹದಿಮೂರು ಹದಿನಾಲ್ಕು ವಯಸ್ಸಿನ ತರುಣ. ಅಂತೆಯೇ ಇಲ್ಲಿಯ ರಾಧೆಯೂ. ಅಂದಿನ ಕಾಲಕ್ಕೆ ತಕ್ಕಂತೆ, ಹೆತ್ತವರ ಕಣ್ಣಲ್ಲಿ ಮದುವೆಯ ವಯಸ್ಸಿಗೆ ಬಂದಿದ್ದ, ಮನೆಗೆಲಸ ಎಲ್ಲವನ್ನೂ ಚುರುಕಾಗಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಹನ್ನೊಂದು-ಹನ್ನೆರಡರ ತರುಣಿ. ಇವರಲ್ಲಿ ಸಹಜವಾಗಿಯೇ ಅನುರಾಗ ಮೂಡುವಂತೆ ಸನ್ನಿವೇಶಗಳು ಹೆಣೆದುಕೊಳ್ಳುತ್ತವೆ. “ನಾನೇನೂ ನನ್ನಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಲಿಲ್ಲ; ನಾ ತಿಂದಿದ್ದ ಮಣ್ಣಿನ ಮುದ್ದೆ ದೊಡ್ಡದಾಗಿಯೇ ಇತ್ತು, ಅದು ಅವಳಿಗೆ ವಿಶ್ವದಂತೆ ತೋರಿತ್ತು. ಮಣ್ಣಿನಿಂದಲೇ ಬ್ರಹ್ಮಾಂಡವಲ್ಲವೆ?” ಅನ್ನುವ ತರುಣನ ಸಹಜ ಮಾತುಗಾರಿಕೆಗೆ ರಾಧೆಯಂತೆಯೇ ನಾವೂ ಬೆರಗಾಗಬಹುದು. “ಮೃಣ್ಮಯವೀ ಜಗತ್- ಅನ್ನುವ ಸತ್ಯವನ್ನು ಎಷ್ಟು ಸರಳವಾಗಿಯೇ ತೋರಿಸಿದ್ದಾರೆ” ಎಂದು ತಲೆದೂಗಬಹುದು. ಭೈರಪ್ಪನವರ ಪರ್ವದ ಕೃಷ್ಣನಂತೆಯೇ ಈತನ ಮಾನವೀಯ ಗುಣಗಳನ್ನು ಸುಲಭವಾಗಿ ಗುರುತಿಸಿ ಕಂಡುಕೊಳ್ಳಬಹುದು.

ಕೊನೆಯಲ್ಲಿ ಗೋಕುಲ ತೊರೆಯುವ ಕೃಷ್ಣನ ತುಮುಲ, ತದನಂತರ ರಾಧೆಯ ಅಳಲು ಓದುಗರ ಮನ ಕರಗಿಸುತ್ತವೆ. ಇದೇ ಹಿನ್ನೆಲೆಯಾಗಿರಿಸಿಕೊಂಡು ಹಲವಾರು ಕವಿತೆಗಳು ಬೇರೆ ಬೇರೆ ಕವಿಗಳಿಂದ ಬಂದಿದ್ದರೂ, ಗದ್ಯರೂಪದಲ್ಲಿ ರಾಧೆಯ ಕಡೆಗೊಂದು ನೋಟವಿಟ್ಟ ಈ ಕಾದಂಬರಿ, ಪುಟ್ಟ ಊರೊಂದರ ಯಾವುದೇ ರಾಧೆಯ, ಯಾವುದೇ ಕೃಷ್ಣನ ಕಥೆಯೂ ಆಗಬಹುದು ಎನ್ನುವಷ್ಟು ಆಪ್ತವಾಗುತ್ತದೆ.

ಕಾದಂಬರಿಯಲ್ಲಿ ದೋಷಗಳೇ ಇಲ್ಲವೆಂದಲ್ಲ. ಒಂದೆರಡು ಕಡೆ ಕಥನ ಬರಹಗಾರನ ಲೇಖನಿಯಿಂದ ಹಾರಿ ಆತನ ವೈಚಾರಿಕತೆಯ ಹಳಿಗೆ ಸಿಕ್ಕುತ್ತದೆ. ಸರಳವಾದ ನಿರೂಪಣೆಯಲ್ಲಿ ಲೇಖಕನ ಒಗ್ಗರಣೆಯೂ ಒಮ್ಮೊಮ್ಮೆ ಬೆರೆತಿದೆ. ಅಂತಹ ಒಂದು ಪ್ರಸಂಗ ಎರಡನೆಯ ಅಧ್ಯಾಯದ ಕೊನೆಯ ವಾಕ್ಯಗಳಲ್ಲಿ ಬರುತ್ತದೆ. ಸರಾಗವಾಗಿ ಸಾಗುತ್ತಿದ್ದ ನಿರೂಪಣೆಯಲ್ಲಿ ಲೇಖಕನ ವೈಚಾರಿಕತೆಯ ವಿವರಣೆ ನುಸುಳಿದೆ. ಅದು ಓದುಗನನ್ನು ಕಥನದಿಂದ ವಿಶ್ಲೇಷಣೆಯ ನೆಲೆಗೆ ಒಯ್ಯುತ್ತದೆ. ಸಹಜ-ಸರಳ ಕಥಾನಕದಲ್ಲಿ ಲೇಖಕನ ಮುಖ ಕಾಣುವುದು ನನಗೆ ಸರಿಕಾಣಲಿಲ್ಲ. ಹಾಗೇನೇ ಹನ್ನೊಂದರ ಬಾಲೆಯನ್ನು ಮೈ ತುಂಬಿಕೊಂಡ ಪ್ರೌಢ ತರುಣಿಯಂತೆ ಚಿತ್ರಿಸಿದ್ದೂ ಸಮಂಜಸವೆಂದು ನನಗನಿಸಲಿಲ್ಲ.

ಐತಾಳರ ಇನ್ನೊಂದು ಪುಸ್ತಕ- ಒಂದಾನೊಂದು ಕಾಲದಲ್ಲಿ- ಕಟ್ಟು ಕಥೆಗಳ ಸಂಗ್ರಹ. ಇದರ ಬಗ್ಗೆ ಹೆಚ್ಚು ಹೇಳುವುದೇ ಬೇಕಾಗಿಲ್ಲ. ಶ್ರೀಯುತ ರಾಜಗೋಪಾಲರ ತಾಯಿಯವರಿಗೆ ಡಿ.ವಿ.ಜಿ.ಯವರು ಹೇಳಿದ್ದಂತೆ, ಮಕ್ಕಳಿಗೆ ಕಥೆ ಹೇಳುವಂಥ ದೇವರು ಮೆಚ್ಚುವ ದೊಡ್ಡ ಕೆಲಸವನ್ನು ಐತಾಳರು ಮಾಡಿದ್ದಾರೆ. ಈ ಕಥೆಗಳನ್ನು ಓದುತ್ತಿದ್ದಂತೆ ನಮ್ಮನ್ನು ನಮ್ಮ ಅಜ್ಜಿ-ಅಜ್ಜನ ಮನೆಯ ಪಡಸಾಲೆಗೋ ಜಗಲಿಗೋ ಕೊಂಡೊಯ್ಯುವ ಕಾಲಮಾಂತ್ರಿಕ ಶಕ್ತಿ ಇಲ್ಲಿನ ಕಥೆಗಳಿಗಿವೆ. ಇಂದಿಲ್ಲಿ ಸೇರಿರುವ ನಾವೆಲ್ಲರೂ ಮನೆಯಲ್ಲಿ ಚಿಕ್ಕ ಮಕ್ಕಳು ಅಥವಾ ಮೊಮ್ಮಕ್ಕಳನ್ನು ಹೊಂದಿರುವವರೇ. ನಾವೆಲ್ಲರೂ ನಮ್ಮ ಮನೆಯ ಪುಟಾಣಿಗಳಿಗೆ ಹೇಳಬೇಕಾದ ಕಥೆಗಳ ಅಮೂಲ್ಯ ಸಂಗ್ರಹ ಇದೆಂದು ನನ್ನ ಅಭಿಮತ. ಮಕ್ಕಳ ಕೋಣೆಯ ಪುಸ್ತಕ ಕವಾಟಿನಲ್ಲಿ ಇದರದೊಂದು ಪ್ರತಿಯಿರಲಿ. ಮಲಗುವ ಮುನ್ನ ಮಕ್ಕಳಿಗೆ ಒಂದಾದರೂ ಕಥೆಯನ್ನು ಈ ಪುಸ್ತಕದಿಂದ ಓದಿ ಹೇಳಿ. ಆಗಲೇ ಇದಕ್ಕೆ ಸಂಪೂರ್ಣ ಅರ್ಥ ದೊರಕುತ್ತದೆ.

ಹಿರಿಯರಾದ ಐತಾಳರ ಎರಡು ಕೃತಿಗಳನ್ನು ಓದಿ ನಿಮ್ಮೊಡನೆ ನನ್ನ ಅಭಿಪ್ರಾಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ರಂಗದ ಪದಾಧಿಕಾರಿಗಳಿಗೆ ನಮನಗಳು. ತನ್ನ ಕಾರ್ಯಕ್ರಮದಲ್ಲಿ ನಾನು ಇರಲೇಬೇಕೆಂದು ಪಟ್ಟು ಹಿಡಿದು ನನ್ನನ್ನು ಒಪ್ಪಿಸಿ ಈ ಕೆಲಸ ನನಗೆ ಅಂಟಿಸಿದ ಗೆಳತಿ ತ್ರಿವೇಣಿಗೂ ನನ್ನ ಅನಂತ ವಂದನೆಗಳು. ಕೇಳಿದ ನಿಮಗೆಲ್ಲ ಧನ್ಯವಾದಗಳು.

 

 Posted by at 6:24 PM