Jun 072009
 

ಅಮೇರಿಕಾದಂಬರಿ  

ಅಮೇರಿಕನ್ನಡಿಗರ ಸಾಹಿತ್ಯಪ್ರೇಮ ಬ್ಲಾಗ್‌ಗಳ ಮೂಲಕ ವೆಬ್‌ ಸೈಟ್‌ಗಳ ಮೂಲಕ ಇತ್ತೀಚೆಗೆ ಹೆಚ್ಚು ವ್ಯಕ್ತವಾಗುತ್ತಿದ್ದರೂ ಪ್ರಾರಂಭದಿಂದಲೂ ಕೃತಿಗಳ ಮೂಲಕವೂ ವ್ಯಕ್ತವಾಗುತ್ತಿದೆ. ಅಂಥ ಬರಹಗಾರರ ಮೆಚ್ಚತಕ್ಕ ಎರಡು ಪ್ರಮುಖ ವಿಷಯಗಳೆಂದರೆ ತಮ್ಮ ಮಾತೃಭಾಷೆ ಬರೆವಣಿಗೆಯನ್ನು ಉಳಿಸಿಕೊಳ್ಳುವ ತಹತಹ ಮತ್ತು ಅಕ್ಷರ ಅವರಿಗೆ ಅನಿವಾರ್ಯವಲ್ಲದಿದ್ದರೂ ಅನಿವಾರ್ಯ ಮಾಡಿಕೊಂಡು ಬರೆಯುವ ಅಕ್ಷರ ಶ್ರದ್ಧೆ. ಇದೀಗ ಅಂಥ ಶ್ರದ್ಧೆಗೆ ಇನ್ನೊಂದು ಉದಾಹರಣೆ ಸಿಗುತ್ತಿದೆ. ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ವಸಂತ ಸಾಹಿತ್ಯೋತ್ಸವದಲ್ಲಿ ಭಾನುವಾರ (ಮೇ ೩೧) ‘ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು’ ಎಂಬ ವಿಮರ್ಶಾ ಕೃತಿ ಬಿಡುಗಡೆಯಾಗುತ್ತಿದೆ. ಇದೊಂದು ಆಸಕ್ತಿಯ ಸಂಕಲನ. ಕನ್ನಡದ ಬಹುಚರ್ಚೆಯ ಅನೇಕ ಕಾದಂಬರಿಗಳನ್ನು ಇಲ್ಲಿ ಅಮೇರಿಕನ್ನಡಿಗ ಅಕ್ಷರ ಪ್ರೇಮಿಗಳು ವಿಮರ್ಶಿಸಿದ್ದಾರೆ. ಎಸ್‌. ಎಲ್‌. ಬೈರಪ್ಪ ಅವರ ‘ಮಂದ್ರ’ದಿಂದ ಹಿಡಿದು ಇತ್ತೀಚಿನ ಜೋಗಿ ಅವರ ‘ಯಾಮಿನಿ’ವರೆಗೆ ಬೇರೆ ಬೇರೆ ತಲೆಮಾರಿನ ಲೇಖಕರನ್ನು ಅವರ ನಿರ್ದಿಷ್ಟ ಕೃತಿಯ ಜಾಡಲ್ಲಿ ವಿಮರ್ಶೆ ಮಾಡಲಾಗಿದೆ. ಕುಂವೀ ಅವರ ‘ಅರಮನೆ’, ಚಂದ್ರಶೇಖರ ಕಂಬಾರರ ‘ಶಿಖರಸೂರ್ಯ’, ವೈದ್ಯರ ‘ಹಳ್ಳ ಬಂತು ಹಳ್ಳ’, ದೇವನೂರರ ‘ಕುಸುಮಬಾಲೆ’ ಮೊದಲಾದ ಕೃತಿಗಳನ್ನು ಸ್ವಲ್ಪ ಅಧ್ಯಯನದೊಂದಿಗೆ ವಿಮರ್ಶಿಸಿರುವುದು ಕಾಣುತ್ತದೆ. ವಿಮರ್ಶಾ ಕೃತಿಗಳ ಮಾಮೂಲಿ ಸೂತ್ರಗಳನ್ನೂ ಮೀರಿದ ಪ್ರಾಮಾಣಿಕ ಅನಿಸಿಕೆ, ಅಭಿಪ್ರಾಯ ಹಂಚಿಕೆ ಇಲ್ಲಿನ ಲೇಖನಗಳಿಗಿರುಮದು ಗಮನಾರ್ಹ.

(ಕನ್ನಡ ಕಾದಂಬರಿ ಲೋಕದಲ್ಲಿ… ಹೀಗೆ ಹಲವು ; ಸಂ: ಮೈ.ಶ್ರೀ. ನಟರಾಜ ; ಕನ್ನಡ ಸಾಹಿತ್ಯ ರಂಗ ಮತ್ತು ಅಭಿನವ ; ಪು.: ೪೨೮ ; ಬೆ.:೨೫೦ ರು.)

(ಮೇ, ೩೧, ೨೦೦೯, ಭಾನುವಾರದ ಸಂಚಿಕೆ)

 

 Posted by at 9:00 PM