Mar 092009
 

ಲೇಖಕಿ ವೈದೇಹಿಯವರ ಪರಿಚಯ

 

 Active Image

 

ವೈದೇಹಿ (೧೨-೦೨-೧೯೪೫) ಕಾವ್ಯನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಜಾನಕಿ ಶ್ರೀನಿವಾಸಮೂರ್ತಿ. ಇವರು ಕುಂದಾಪುರದಲ್ಲಿ ೧೨, ಫೆಬ್ರವರಿ ೧೯೪೫ರಲ್ಲಿ ಜನಿಸಿದರು. ಮದುವೆಯ ನಂತರ ಶಿವಮೊಗ್ಗ ಸೇರಿದ ವೈದೇಹಿಯವರು ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿದ್ದಾರೆ. ವೈದೇಹಿಯವರು ಕಥೆ, ಕವನ, ಕಾದಂಬರಿಗಳಲ್ಲದೆ ಮಕ್ಕಳ ಸಾಹಿತ್ಯಕ್ಕೂ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ವೈದೇಹಿಯವರು ಮರ ಗಿಡ ಬಳ್ಳಿ (೧೯೭೯), ಅಂತರಂಗದ ಪುಟಗಳು (೧೯೮೪), ಗೋಲ (೧೯೮೬), ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು (೧೯೯೧) ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಿಂದು ಬಿಂದಿಗೆ (೧೯೯೦), ಪಾರಿಜಾತ (೧೯೯೯) ಇವು ಕವನ ಸಂಕಲನಗಳು. ‘ ಮಲ್ಲಿನಾಥನ ಧ್ಯಾನ’ (೧೯೯೬) ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಂಕಣ ಬರಹಗಳ ಸಂಗ್ರಹ. ‘ಅಸ್ಪೃಶ್ಯರು’ ವೈದೇಹಿಯವರ ಕಾದಂಬರಿ. ಧಾಂ ಧೂಂ ಸುಂಟರಗಾಳಿ (೧೯೯೨), ಮೂಕನ ಮಕ್ಕಳು (೧೯೯೨), ಗೊಂಬೆ ಮ್ಯಾಕ್ಬೆತ್ (೧೯೯೨), ಢಾಣಾ ಢಂಗುರ (೧೯೯೨), ನಾಯಿಮರಿ ನಾಟಕ (೧೯೯೨), ಸೂರ್ಯ ಬಂದ (೧೯೯೭), ಝುಂ ಝಾಂ ಆನೆ ಮತ್ತು ಪುಟ್ಟ (೧೯೯೭, ಕೋಟು ಗುಮ್ಮ (೧೯೯೭), ಹಕ್ಕಿ ಹಾಡು (೨೦೦೨), ಅರ್ಧಚಂದ್ರ ಮಿಠಾಯಿ (೨೦೦೨), ಸೋಮಾರಿ ಓಲ್ಯಾ (೨೦೦೪) ಎಂಬ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಭಾರತೀಯ ಮಹಿಳೆಯರ ಸ್ವಾತಂತ್ರ್ಯದ ಕುರಿತು ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ‘Indian Women’s Struggle for Freedom’ ಎಂಬ ಕೃತಿಯನ್ನು ಮತ್ತು ಭಾರತೀಯ ಮಹಿಳೆಯರ ಸ್ಥಿತಿಗತಿಯ ಕುರಿತು ಶ್ರೀಮತಿ ಮೈತ್ರೇಯಿ ಮುಖ್ಯೋಪಾಧ್ಯಾಯ ಅವರು ರಚಿಸಿರುವ Silver Shackles ಕೃತಿಯನ್ನು ‘ಬೆಳ್ಳಿಯ ಸಂಕೋಲೆಗಳು’ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. ಸೇಡಿಯಾಪು ಕೃಷ್ಣಭಟ್ಟ, ಸರಸ್ವತೀಬಾಯಿ ರಾಜವಾಡೆ, ಕೋ. ಲ. ಕಾರಂತರ ಜೀವನಚಿತ್ರಗಳನ್ನು ರಚಿಸಿದ್ದಾರೆ. ಬಿ. ವಿ. ಕಾರಂತ ಬದುಕಿನ ನೆನಪು, ಅನುಭವಗಳನ್ನು ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ‘ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು’ ಕಥೆ ಆಧರಿಸಿ ಗಿರೀಶ್ ಕಾಸರವಳ್ಳಿಯವರು ‘ಗುಲಾಬಿ ಟಾಕೀಸು’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಬೆಂಗಳೂರು ದೂರದರ್ಶನ ಕೇಂದ್ರದಿಂದ ‘ಅಕ್ಕು’ ಕತೆ ಆಧರಿಸಿದ ಟೆಲಿಚಿತ್ರ ನಿರ್ಮಾಣವಾಗಿದೆ. ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಕಥೆಯನ್ನು ಆಧರಿಸಿ, ಅಸ್ಸಾಮಿನಲ್ಲಿ ಈಗ ನೆಲೆಸಿರುವ ಕನ್ನಡಿತಿ ನಟಿ ಭಾಗೀರಥೀ ಬಾಯಿ ಕದಂ ಅವರು ನೀಡುತ್ತಿರುವ ಏಕವ್ಯಕ್ತಿ ಪ್ರದರ್ಶನಗಳು ಹಿಂದೀ, ಕನ್ನಡ ಮತ್ತು ಅಸ್ಸಾಮೀ ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ವೈದೇಹಿ ಅವರ ಹಲವಾರು ಕಥೆಗಳು ಪಠ್ಯವಾಗಿರುವುದಲ್ಲದೆ ಮರಾಠಿ, ಮಲೆಯಾಳಿ, ತಮಿಳು, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ ಕೆ ಇಂದಿರಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಕರ್ನಾಟಕ ರಾಜ್ಯದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ದಕ್ಷಿಣ ಕನ್ನಡಿಗರ ವೇದಿಕೆ ನೀಡುವ ಭಾರ್ಗವ ಪ್ರಶಸ್ತಿಯೂ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು  ವೈದೇಹಿಯವರಿಗೆ ಸಂದಿರುವುದು ಅವರ ಪ್ರತಿಭೆಗೆ ಸಂದಿರುವ ಮನ್ನಣೆಯಾಗಿದೆ.

 Posted by at 12:26 PM