May 072007
 

ಕನ್ನಡ ಸಾಹಿತ್ಯ ರಂಗ

ಸ್ವಾಗತ

ಪ್ರಿಯ ಕನ್ನಡ ಬಂಧುಗಳೇ,

 ನಮಸ್ಕಾರ. ಪ್ರಪಂಚದ ಮಹಾನಗರಗಳಲ್ಲಿ ಒಂದಾದ ಚಿಕಾಗೋನಲ್ಲಿ ನಡೆಯುತ್ತಿರುವ ಈ ವಸಂತ ಸಾಹಿತ್ಯೋತ್ಸವಕ್ಕೆ ಕನ್ನಡ ಸಾಹಿತ್ಯ ರಂಗದ ಪರವಾಗಿ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ! ಇಂದಿನ ಈ ಸಾಹಿತ್ಯೋತ್ಸವದಲ್ಲಿ ನಮಗೆ ಬೆಂಬಲವಾಗಿ ನಿಂತು  ವಿಶಿಷ್ಟ ರೀತಿಯಲ್ಲಿ ನೆರವು ನೀಡುತ್ತಿರುವ ವಿದ್ಯಾರಣ್ಯ ಕನ್ನಡ ಕೂಟಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಇಂದಿನ ಸಮಾರಂಭದಲ್ಲಿ ತೊಡಗುತ್ತಿದ್ದೇವೆ.

 ಚಿಕಾಗೋವನ್ನು Windy City ಎನ್ನುವುದು ಬಳಕೆ. ಈಗ ಅದು ತನ್ನ ಹೆಸರನ್ನು ಸಾರ್ಥಕಗೊಳಿಸಿಕೊಂಡಿದೆ. ಏಕೆಂದರೆ ಅಲ್ಲಿ ಈಗ ಕನ್ನಡದ ಗಾಳಿ  ಬೀಸುತ್ತಿದೆ! ಹಿಂದಿನ ಹಿರಿಯ ಸಾಹಿತಿ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ನೆನಪಿಗೆ ಬರುತ್ತದೆ. ವರಕವಿ ಬೇಂದ್ರೆ ಹಾಡಿದ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಎಂಬ ಸಾಲು ನೆನಪಿಗೆ ಬರುತ್ತದೆ. ಆ ಗಾಳಿ ಇಂದು ನಿನ್ನೆಯದಲ್ಲ.  ಕಳೆದ ಸುಮಾರು ಮೂವತ್ತು ವರ್ಷಗಳಿಂದ, ವಿದ್ಯಾರಣ್ಯ ಕನ್ನಡ ಕೂಟ ಇಲ್ಲಿ ಸ್ಥಾಪಿತವಾದಾಗಿನಿಂದ ಬೀಸುತ್ತಿದೆ. ಇಂದು ಅದರ ರಭಸ ಹೆಚ್ಚಿದೆ. ಅದರ ಶಕ್ತಿ ಹೆಚ್ಚಿದೆ. ಅದು ಹೊತ್ತುತರುತ್ತಿರುವ ಪರಿಮಳ ಹೆಚ್ಚು ದಟ್ಟವಾಗಿದೆ. ಅದರ ನಿರ್ಮಲ ಸಂಜೀವಿನೀ ಶಕ್ತಿ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ಇಂಥ ವಾತಾವರಣದಲ್ಲಿ ಚಿಕಾಗೋ ಸಹೃದಯರ ಜೊತೆಯಲ್ಲಿ ಈ ವಸಂತ ಸಾಹಿತ್ಯೋತ್ಸವ ನಡೆಸುವುದು ನಮಗೆ ಒಂದು ಅತ್ಯಂತ ಸಂತೋಷದ, ಹೆಮ್ಮೆಯ ವಿಚಾರ.

 ಕನ್ನಡ ಸಾಹಿತ್ಯ ರಂಗದ ಬಗ್ಗೆ ಒಂದೆರಡು ಮಾತು ಹೇಳಬಯಸುತ್ತೇವೆ. ಹೀಗೆ ಹೇಳಲು ಕಾರಣ ಈ ಸಂಸ್ಥೆ ಹೊಸದು ಎಂದಷ್ಟೇ ಅಲ್ಲ, ಅದೊಂದು ವಿಶಿಷ್ಟ ಸಂಸ್ಥೆಯೂ ಹೌದು ಎಂದೂ ಕೂಡ. ಉತ್ತರ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರ ಸಾಂಸ್ಕೃತಿಕ, ಸಾಮಾಜಿಕ ಅಸಕ್ತಿ ಅವಶ್ಯಕತೆಗಳನ್ನು ಪೂರೈಸಲು ಹಲವಾರು ಕನ್ನಡ ಸಂಸ್ಥೆಗಳು ಈ ಕಳೆದ ಮೂರು ನಾಲ್ಕು ದಶಕಗಳಲ್ಲಿ ಹುಟ್ಟಿವೆ, ಕೆಲಸ ಮಾಡುತ್ತಿವೆ. ಆದರೆ ಸಾಹಿತ್ಯಕ್ಕೇ ಮೀಸಲಾದ ಸಂಸ್ಥೆಗಳು ತೀರ ಕಡಿಮೆ. ಇದ್ದರೂ ಅವುಗಳ  ವ್ಯಾಪ್ತಿ ಕಡಿಮೆ.  ರಾಷ್ಟ್ರೀಯ ಸಂಸ್ಥೆಯಂತೂ ಯಾವುದೂ ಇರಲಿಲ್ಲ. ಆದ್ದರಿಂದ, ಕನ್ನಡ ಸಾಹಿತ್ಯದಲ್ಲಿ ಒಲವುಳ್ಳ, ಕನ್ನಡದಲ್ಲಿ ಓದಿ ಬರೆಯುವ, ಅದರಲ್ಲಿ ಒಂದು ಸಜೀವ ಅಸಕ್ತಿಯನ್ನು ಉಳಿಸಿಕೊಳ್ಳುವ ಹಂಬಲ ಇರುವ ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಒಂದು ಹೊಸ ಸಂಸ್ಥೆಯನ್ನು ಸ್ಥಾಪಿಸುವುದು ಅನಿವಾರ್ಯವೆಂಬುದು ನಮ್ಮಲ್ಲಿ ಬಹು ಮಂದಿಗೆ ಮನವರಿಕೆಯಾಯಿತು. ಅದರ ಫಲವಾಗಿ ೨೦೦೪ರಲ್ಲಿ ಮೈತಳೆದ ಸಂಸ್ಥೆಯೇ ಈ ಕನ್ನಡ ಸಾಹಿತ್ಯ ರಂಗ.

 ತನ್ನ ಮೂಲ ಉದ್ದೇಶಗಳಿಗನುಸಾರವಾಗಿ ರಂಗ ಈ ಕಳೆದ ಮೂರು ವರ್ಷಗಳಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಸಾಧಿಸಿದೆ. ಇದುವರೆಗೆ ಎರಡು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಎರಡು ಪುಸ್ತಕಗಳನ್ನು ಹೊರತಂದಿದೆ. ನಮ್ಮ ಸೋದರ ಸಂಸ್ಥೆಯೊಂದು ಹೊರತಂದ ಪುಸ್ತಕದ ಪ್ರಕಾಶನದಲ್ಲಿ  ಸಹಾಯಮಾಡಿದೆ. ದೇಶಾದ್ಯಂತ ೯ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಶಿಬಿರ ನಡೆಸಿದೆ. ಇವುಗಳ ವಿವರಗಳನ್ನು ಪ್ರತ್ಯೇಕವಾಗಿ ಕೊಟ್ಟಿದೆ (‘ಮೈಲಿಗಲ್ಲುಗಳು’ ನೋಡಿ).

 ಇದೀಗ ನಮ್ಮ ಮೂರನೆಯ ಸಮ್ಮೇಳನ ನಡೆಯುತ್ತಿದೆ. ಇದು ನಮ್ಮ ವಸಂತ ಸಾಹಿತ್ಯೋತ್ಸವ. ವಸಂತ ಜೀವಜಾತಕೆಲ್ಲಕ್ಕೂ ಒಂದು ಪುನರ್ಸೃಷ್ಟಿಯ ಕಾಲ.  ನಾವೂ ಸಹ ಹೊಸ ಸಾಹಿತ್ಯಾನುಭವದಿಂದ, ಹೊಸ ಕಲಾನುಭವದಿಂದ ಹೊಸ ಜೀವ ಪಡೆಯುತ್ತಿದ್ದೇವೆ.  ಇಂದಿನ ಕಾರ್ಯಕ್ರಮ ನೋಡಿ.  ಈ ಸಮ್ಮೇಳನದ ಮುಖ್ಯ ವಸ್ತು ಕನ್ನಡ ಸಾಹಿತ್ಯದಲ್ಲಿ ಹಾಸ್ಯ. ಕನ್ನಡ ನಾಡಿನ ಇಂದಿನ ವಿದ್ವಾಂಸರಲ್ಲಿ, ಉಪನ್ಯಾಸಕರಲ್ಲಿ, ಹಾಸ್ಯಲೇಖಕರಲ್ಲಿ ಅಗ್ರಗಣ್ಯರೆನಿಸಿದ ಪ್ರೊ. ಅ.ರಾ. ಮಿತ್ರ ಈ ಸಮ್ಮೆಳನದ ಮುಖ್ಯ ಅತಿಥಿ. ಅವರ ಭಾಷಣ ಕೇಳಿನೋಡಿ. ಕೇಳುಗರನ್ನು ನಗುನಗಿಸುತ್ತಲೇ ಅವರನ್ನು ಹೆಚ್ಚು ಸುಸಂಸ್ಕೃತರನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ.  ಅವರೊಡನೆ ಸಂವಾದ ನಡೆಸಿ. ಇಂದು ಬಿಡುಗಡೆಯಾಗುತ್ತಿರುವ ಗ್ರಂಥ “ನಗೆಗನ್ನಡಂ ಗೆಲ್ಗೆ!” ಅದನ್ನು ಓದಿ ನೋಡಿ. ಕನ್ನಡ ಜನತೆಯನ್ನು ನಕ್ಕು ನಲಿಸಿ ಅವರ ಜೀವನವನ್ನೂ ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದ ನಗೆನಾಡ ಸಿರಿವಂತರಿಗೆ ಸಮಗ್ರವಾಗಿ ಧನ್ಯವಾದವನ್ನರ್ಪಿಸುವ ಇಂಥ ಗ್ರಂಥ ಕನ್ನಡದಲ್ಲಿ ಹೊರಬರುತ್ತಿರುವುದು ಇದೇ ಮೊದಲು.

 ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬುದು ನಮ್ಮ ಮುಖ್ಯ ವಸ್ತುವಾದರೂ, ಈ ಸಮ್ಮೇಳನದಲ್ಲಿ ಗಂಭೀರ ಸಾಹಿತ್ಯ ಚರ್ಚೆಗೆ ಅನುವಾಗಿಸುವ ಅನೇಕ ಕಾರ್ಯಕ್ರಮಗಳಿವೆ. ನಮ್ಮ ಇಲ್ಲಿನ ಕನ್ನಡ ಬರಹಗಾರರನ್ನು ಉತ್ತೇಜಿಸುವುದು, ಎತ್ತಿಹಿಡಿಯುವುದು ನಮ್ಮ ಧ್ಯೇಯಗಳಲ್ಲೊಂದು. (ನಮ್ಮ ಪುಸ್ತಕಳಲ್ಲಿ ಬಹು ಪಾಲು ಲೇಖನಗಳು ಇಲ್ಲಿನ ಕನ್ನಡಿಗರದೇ ಆಗಿರುತ್ತದೆ.) ‘ನಮ್ಮ ಬರಹಗಾರರು’ ಕಾರ್ಯಕ್ರಮ ಇತ್ತೀಚೆಗೆ ಪ್ರಕಟವಾದ ಕೃತಿಗಳನ್ನೂ ಅವುಗಳ ಲೇಖಕರನ್ನೂ ಪರಿಚಯ ಮಾಡುತ್ತದೆ. ಸಾಹಿತ್ಯ ಗೋಷ್ಠಿಯಲ್ಲಿ ನಮ್ಮ ಇಲ್ಲಿನ ಲೇಖಕರ ಸ್ಫೂರ್ತಿಯುತ ರಚನೆಗಳನ್ನು ಕೇಳುತ್ತೀರಿ. ಅಮೆರಿಕದಲ್ಲಿ ಕನ್ನಡ ಕಲಿಕೆ ಬಗ್ಗೆ ವಿವರಗಳನ್ನು ಕೇಳುತ್ತೀರಿ. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಶುಭಾಶಯ ಸಲ್ಲಿಸುತ್ತೀರಿ. ಕನ್ನಡದ ಇನ್ನೊಬ್ಬ ವಿಖ್ಯಾತ ಚಿಂತಕ, ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರ ರಾವ್ ವಿದೇಶಿ ಕನ್ನಡಿಗರು ಅನುಭವಿಸುವ ಸಾಂಸ್ಕೃತಿಕ ಸಂಘರ್ಷ ಅವರ ಸಾಹಿತ್ಯ ಚಿಂತನೆಯಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬ ಬಗ್ಗೆ ತಮ್ಮ ವಿಚಾರಧಾರೆ ಹರಿಸುವುದನ್ನು ಕೇಳುತ್ತೀರಿ; ಇಲ್ಲಿನ ಕವಿಗಳ ಭಾವಗೀತೆಗಳನ್ನು ಸವಿಯುತ್ತೀರಿ; ಕಂಬಾರರ ನಾಟಕ ನೋಡಿ ನಲಿಯುತ್ತೀರಿ. ಈ ಎಲ್ಲವನ್ನೂ ನಿಮ್ಮ ಸಹೃದಯ ಗೆಳೆಯ ಗೆಳತಿಯರೊಂದಿಗೆ ಹಂಚಿಕೊಳ್ಳುತ್ತೀರಿ. ನಮ್ಮ ಬರಹಗಾರರು ಹೊರತಂದಿರುವ ಉತ್ತಮ ಪುಸ್ತಕಗಳನ್ನು ಕೊಳ್ಳಲು ಅನುವಾಗುವಂತೆ ಒಂದು ಪುಸ್ತಕಾಲಯ ನಿಮಗಾಗಿ ತೆರೆದಿದೆ. ನಮ್ಮವರ ಪುಸ್ತಕಗಳನ್ನು ನೀವು ಸುಮ್ಮನೆ ಕೊಂಡಾಡಿದರೆ ಸಾಲದು, ಜಿ.ಪಿ. ರಾಜರತ್ನಂ ಹೇಳುತ್ತಿದ್ದಂತೆ, ಅವನ್ನು ನೀವು ಕೊಂಡು ಅದರ ಬಗ್ಗೆ ಆಡಬೇಕು. 

 ನಮ್ಮ ಸಂಸ್ಥೆ ಇನ್ನೂ ಈಚೆಗೆ ಮೊದಲಾದದ್ದು.  ಅದಕ್ಕೆ ಸಹೃದಯರ ಬೆಂಬಲವೇ ಜೀವಾಧಾರ.  ಇಂಥ ಸಮ್ಮೇಳನಗಳು, ಪುಸ್ತಕ ಪ್ರಕಟನೆಗಳಿಗಾಗುವ ವೆಚ್ಚವೆಲ್ಲ  ನಮಗೆ ನಿಮ್ಮಂಥ ಅಭಿಮಾನಿಗಳ ನೋಂದಣಿ, ಮತ್ತು ನಿಮ್ಮ ಧನಸಹಾಯಗಳಿಂದಲೇ ತುಂಬಬೇಕು.  ಇದೊಂದು ಹೊಸ ಪ್ರಯೋಗ. ಇದೊಂದು ವಿಶಿಷ್ಟ ಧ್ಯೇಯಗಳನ್ನು, ಉನ್ನತ ಅದರ್ಶಗಳನ್ನು ಹೊತ್ತ ಸಂಸ್ಥೆ.  ಇಲ್ಲಿ ನಮಗೆ ಸಾಹಿತ್ಯ ಮಾತ್ರ ಮುಖ್ಯ, ಮಿಕ್ಕೆಲ್ಲವೂ ಗೌಣ. ಅದರಿಂದಲೇ ನಮ್ಮ ಸಮ್ಮೇಳನಗಳಲ್ಲಿ ಅದ್ಧೂರಿ, ಹಾರತುರಾಯಿಗಳ ಡೌಲಿಗಿಂತ ಸರಳತೆಗೆ ಹೆಚ್ಚು ಬೆಲೆ. ಕೇವಲ ಔಪಚಾರಿಕ ಮಾತುಕತೆಗಿಂತ ವೈಚಾರಿಕತೆಗೆ ಹೆಚ್ಚು ಬೆಲೆ. ಇದನ್ನು ಯಾರೂ ಅಗೌರವ ಎಂದು ಭಾವಿಸಬಾರದು. ಇದುವರೆಗೆ ನಾವು ಮಾಡಿರುವ ಕೆಲಸ ನಿಮಗೆ ಒಪ್ಪಿಗೆಯಾಗಿದೆ ಎಂದು ನಂಬಿದ್ದೇವೆ.  ಈ ಸಂಸ್ಥೆಯನ್ನು ಮತ್ತಷ್ಟು ಶಕ್ತಿಯುತವಾಗಿ ಬೆಳಸಿ, ಇಲ್ಲಿನ ಸಮಾಜದಲ್ಲಿ ಅದೊಂದು ಪ್ರಮುಖ ಅಂಗವಾಗುವಂತೆ ಮಾಡಬೇಕೆಂಬುದು ನಮ್ಮ ಆಶಯ.  ಅದಕ್ಕೆ ನಿಮ್ಮೆಲ್ಲರ ಬೆಂಬಲ, ಧನಸಹಾಯ ಕೋರುತ್ತೇವೆ.

 ಮತ್ತೊಮ್ಮೆ ನಿಮ್ಮೆಲ್ಲರಿಗೂ ರಂಗದ ಹೃತ್ಪೂರ್ವಕ ಸ್ವಾಗತ! ನಗೆಗನ್ನಡಂ ಗೆಲ್ಗೆ!

ಕನ್ನಡ ಸಾಹಿತ್ಯ ರಂಗದ ಪರವಾಗಿ,

ಎಚ್.ವೈ. ರಾಜಗೋಪಾಲ್ (ಕಾರ್ಯಕಾರೀ ಸಮಿತಿಯ ಅಧ್ಯಕ್ಷ)
ನಳಿನಿ ಮೈಯ (ಅಡಳಿತ ಮಂಡಲಿಯ ಅಧ್ಯಕ್ಷೆ)  

 

 

 Posted by at 8:23 PM