Apr 182017
 

ಬಾಸ್ಟನ್ನಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯರಂಗದ ಎಂಟನೆಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷೀಶ ತೋಳ್ಪಾಡಿಯವರು ಆಗಮಿಸುತ್ತಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ:-


ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಕನ್ನಡದ ಪ್ರತಿಭಾವಂತ ಲೇಖಕರು ಮತ್ತು ಚಿಂತಕರಾಗಿ ಹೆಸರಾದವರು. ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಉತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಲಕ್ಷ್ಮೀಶ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಡುಪಿ ಮತ್ತು ಪುತ್ತೂರಿನಲ್ಲಿ ಆರಂಭಿಸಿ, ಉನ್ನತ ವ್ಯಾಸಂಗವನ್ನು ಮಂಗಳೂರು ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.  ತಾಯಿ ರತ್ನಾವತಿ ಮತ್ತು ತಂದೆಯವರಾದ ವಿಷ್ಣುಮೂರ್ತಿ ತೋಳ್ಪಾಡಿಯವರ ಅಕ್ಕರೆ, ಆಶೀರ್ವಾದದೊಂದಿಗೆ ಬೆಳೆದು ವೃತ್ತಿ ಸಾಧನೆಯಲ್ಲಿ ತೊಡಗಿ, ಬಾಳ ಸಂಗಾತಿ ವಿಜಯಲಕ್ಷ್ಮಿಯವರ ಜೊತೆಯಲ್ಲಿ ಜೀವನದ ಗುರಿಯತ್ತ ಪ್ರಯಾಣ ಮುಂದುವರಿಸಿದ್ದಾರೆ.
ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ "ಮಹಾಯುದ್ಧಕ್ಕೆ ಮುನ್ನ", "ಬೆಟ್ಟ ಮೊಹಮದನ ಬಳಿಗೆ ಬಾರದಿದ್ದರೆ", "ಸಂಪಿಗೆ ಭಾಗವತ", "ಭವತಲ್ಲಣ" ಮತ್ತು "ಆನಂದಲಹರಿ" ಯಂತಹ ಉತ್ತಮ ಕೃತಿಗಳು ಸಫಲವಾಗಿ ಪ್ರಕಟಣೆಗೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಖ್ಯಾತಿಯನ್ನು ಒದಗಿಸಿ ಕೊಟ್ಟಿವೆ. ತೋಳ್ಪಾಡಿಯವರು ತಮ್ಮ ಪಾಂಡಿತ್ಯಪೂರ್ಣ ಬರಹಗಳ ಮೂಲಕ ಸಾಹಿತ್ಯ ಸೇವೆ ಸಲ್ಲಿಸುತ್ತಾ  ಹಲವು ಗೌರವ, ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ತೋಳ್ಪಾಡಿಯವರಿಗೆ ಸಂದಿರುವ ಗೌರವಾನ್ವಿತ ಪ್ರಶಸ್ತಿ ಸನ್ಮಾನಗಳ ಸಾಲಿನಲ್ಲಿ, ೨೦೧೨ರ "ಪೊಳಲಿ ಶಾಸ್ತ್ರಿ ಪ್ರಶಸ್ತಿ", ೨೦೧೩ರಲ್ಲಿ ಬಂದ "ಕಡವ ಶಂಭುಕರ್ಮ ಪ್ರಶಸ್ತಿ", "ಕಾಂತಾವರ ಸಾಹಿತ್ಯ" ಪುರಸ್ಕಾರ, "ರಾಮವಿಠಲ ಪ್ರಶಸ್ತಿ" ಮತ್ತು ೨೦೧೬ರಲ್ಲಿ ಕೈಗೂಡಿದ"ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" ಗಳೂ ಸೇರಿವೆ.

ಮುಂದೆ ಇದೇ ರೀತಿಯಲ್ಲಿ, ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ ಲೇಖನಿಯಿಂದ ಮತ್ತಷ್ಟು ವಿದ್ವತ್ಪೂರ್ಣ ಸಾಹಿತ್ಯ ಕೃತಿಗಳು ಹೊರಬಂದು, ಅದನ್ನು ಓದುವ ಭಾಗ್ಯ ತಮಗೆ ಸಿಗುತ್ತಿರಲಿ ಎನ್ನುವುದು ಅವರ ಸಾಹಿತ್ಯಾಭಿಮಾನಿಗಳೆಲ್ಲರ ತುಂಬು ಹೃದಯದ ಹಾರೈಕೆಯಾಗಿದೆ.

 Posted by at 11:04 PM
Feb 272017
 
ಭಾಷಾಬಾಂಧವರಿಗೆ ವಂದನೆ.
ಮತ್ತೊಮ್ಮೆ ನಿಮ್ಮನ್ನೆಲ್ಲ ಎದುರುಗೊಳ್ಳುವ ಸಂದರ್ಭ ಕೂಡಿಬಂದಿದೆ.
ಮತ್ತೊಂದು ವಸಂತ ಸಾಹಿತ್ಯೋತ್ಸವಕ್ಕೆ ನಮ್ಮ ಕನ್ನಡ ಸಾಹಿತ್ಯ ರಂಗ ಅಣಿಯಾಗಿದೆ. ಕನ್ನಡ ಸಾಹಿತ್ಯಕ್ಕೆಂದೇ ಮೀಸಲಾಗಿ ಅದನ್ನೇ ಗುರಿಯಾಗಿರಿಸಿಕೊಂಡು ತುಡಿಯುತ್ತಿರುವ ಸಮಾನಾಸಕ್ತರ ರಾಷ್ಟ್ರೀಯ ಒಕ್ಕೂಟ, ಅಮೆರಿಕದ ಉದ್ದಗಲದಲ್ಲಿ ಕನ್ನಡ ಸಾಹಿತ್ಯದ ಅಚ್ಚರುಚಿಯನ್ನು ಹರಡುವಲ್ಲಿ ಸಕ್ರಿಯವಾಗಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ರಂಗ. ತಮಗೆಲ್ಲರಿಗೂ ತಿಳಿದೇ ಇದೆ.
ಈಗ ನಮ್ಮ ಎಂಟನೇ ವಸಂತ ಸಾಹಿತ್ಯೋತ್ಸವ.
ಎಂದಿನಂತೆಯೇ ಈ ಬಾರಿಯೂ, ನಮ್ಮೆಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು, ಒಟ್ಟು ಸಾಹಿತ್ಯೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಸಹಭಾಗಿಯಾಗಲು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ.
ಈ ಬಾರಿ, ಮತ್ತೊಮ್ಮೆ ನಾವು ಗೆಳತಿಯರಿಬ್ಬರೂ ಕೂಡಿಕೊಂಡು ‘ಸಾಹಿತ್ಯ ಸಲ್ಲಾಪ’ವನ್ನು ನಡೆಸಿಕೊಡಲು ನಿಯೋಜಿತರಾಗಿದ್ದೇವೆ, ಅದನ್ನು ಅತ್ಯಂತ ಪ್ರೀತ್ಯಾಸಕ್ತಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆ ಈ ಕಾರ್ಯಕ್ರಮವನ್ನು ಸುಲಲಿತ ಸಲ್ಲಾಪವಾಗಿಸಲು ನಿಮ್ಮೆಲ್ಲರ ಒಳಗೊಳ್ಳುವಿಕೆಯನ್ನು ವಿನಮ್ರವಾಗಿ ಆಶಿಸುತ್ತಿದ್ದೇವೆ.
೧- ಅಮೆರಿಕನ್ನಡ ಬರಹಗಾರರು ಇದರಲ್ಲಿ ಭಾಗವಹಿಸಬಹುದು.
೨- ಗದ್ಯ ಅಥವಾ ಪದ್ಯ ರೂಪದ ತಮ್ಮ ಸ್ವಂತ ಕೃತಿಯನ್ನು ಇದರಲ್ಲಿ ತಾವು ಸ್ವತಹ ಹಾಜರಿದ್ದು ಪ್ರಸ್ತುತಪಡಿಸುವ ಅವಕಾಶವಿದು.
೩- ಗದ್ಯವಾದರೆ ಏಳು ನಿಮಿಷಗಳ ಪ್ರಸ್ತುತಿ ಹಾಗೂ ಪದ್ಯವಾದರೆ ಐದು ನಿಮಿಷಗಳ ಪ್ರಸ್ತುತಿ. ಈ ಸಮಯ ಮಿತಿಯೊಳಗೆ ತಮ್ಮ ಪ್ರಸ್ತುತಿಯನ್ನು ಕ್ಲಪ್ತವಾಗಿ ಮುಗಿಸಿಕೊಡಿ.
೪- ಒಬ್ಬರಿಗೆ ಒಂದೇ ಅವಕಾಶ.
೫- ತಮ್ಮ ಕೃತಿ ಮಾರ್ಚ್ ಕೊನೆಯಲ್ಲಿ, ತಾ. ಮೂವತ್ತೊಂದರೊಳಗಾಗಿ, ನಮಗೆ- ತ್ರಿವೇಣಿ ರಾವ್ (sritri@gmail.com) ಅಥವಾ ಜ್ಯೋತಿ ಮಹಾದೇವ್ (jyothimahadev@gmail.com) -ತಲುಪಿಸಿರಿ. ನಿರ್ವಹಣೆಗೆ ಅನುಕೂಲವಾಗುವುದು.
೬- ತಮ್ಮ ಪ್ರಸ್ತುತಿಯನ್ನು ಕಳುಹಿಸುವ ಮೊದಲೊಮ್ಮೆ ತಾವೇ ಓದಿಕೊಂಡು ನಿಗದಿತ ಸಮಯದ ಮಿತಿಯೊಳಗೆ ಇದೆಯೆಂದು ಖಚಿತಪಡಿಸಿಕೊಂಡರೆ ಒಳಿತು. ಸಮಯಾನುಸಂಧಾನ ಮೀರುವಂತಿದ್ದರೆ ನಿರಾಕರಣೆಯ ಸಾಧ್ಯತೆಯಿದೆ.
೭- ಕೃತಿ ಕನ್ನಡದಲ್ಲೇ ಇರಬೇಕು. ‘ಭಕ್ತಿ ಸಾಹಿತ್ಯ’ವೆನ್ನುವ ಈ ಬಾರಿಯ ಆಶಯ-ಚಿಂತನೆಗೆ ಹೊಂದುವಂತಿದ್ದರೆ ಉತ್ತಮ. ಆದರೆ ಅದು ಕಡ್ಡಾಯವಲ್ಲ. ವೈವಿಧ್ಯಮಯ ಬರಹಗಳಿಗೂ ಸ್ವಾಗತವಿದೆ.
ನಿಮ್ಮನ್ನು ಬಾಸ್ಟನ್ನಿನಲ್ಲಿ, ವಸಂತ ಸಾಹಿತ್ಯೋತ್ಸವದ ವೇದಿಕೆಯಲ್ಲಿ ಭೇಟಿಯಾಗುವ ಉತ್ಸಾಹದಲ್ಲಿ,
ಇಂತಿ,
ತ್ರಿವೇಣಿ, ಜ್ಯೋತಿ.
ಸಮ್ಮೇಳನದ ಸುದ್ದಿಗಳಿಗಾಗಿ ನಮ್ಮ ತಾಣಕ್ಕೆ ಭೇಟಿಕೊಡುತ್ತಿರಿ:
 Posted by at 3:58 PM
Feb 152017
 

ಆತ್ಮೀಯರೆ,

ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರಿಗೆಲ್ಲ ಚಿರಪರಿಚಿತ. ಕಸಾರಂ ಈಗಾಗಲೇ ಏಳು ಸಾಹಿತ್ಯ ಸಮ್ಮೇಳನಗಳನ್ನು ಅಮೆರಿಕಾದ ವಿವಿದೆಡೆಗಳಲ್ಲಿ ಯಶಸ್ವಿಯಾಗಿ ನಡೆಸಿ ಈ ವರ್ಷ ಎಂಟನೆಯ ಸಮ್ಮೇಳನವನ್ನು ನಡೆಸಲು ಸಿದ್ಧವಾಗಿದೆ..ಇದೇ ಏಪ್ರಿಲ್ ೨೯ ಮತ್ತು ೩೦, ೨೦೧೭ ರ೦ದು ನ್ಯೂ ಇಂಗ್ಲೆಂಡ್ ಕನ್ನಡ ಕೂಟ ‘ಮಂದಾರ‘ದ ಸಹಯೋಗ ಮತ್ತು ಆಶ್ರಯದಲ್ಲಿ ಬಾಸ್ಟನ್ ನಗರದ ಬಳಿ ಇರುವ ಫ್ರೇಮಿಂಘ್ಯಾಮ್ನಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡದ ವಿಶಿಷ್ಟ ಲೇಖಕ, ಚಿಂತಕ, ವಾಗ್ಮಿ, ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ಈ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ www.kannadasahityaranga.org ತಾಣವನ್ನು ನೋಡಿ.

ಈ ಸಮ್ಮೇಳನದಲ್ಲಿ ಪ್ರತಿಬಾರಿಯಂತೆ ಈ ಸಲವೂ ಅಮೆರಿಕದ ಕನ್ನಡ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ‘ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರಿಯರಿಗೆ ಪರಿಚಯ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ. ಲೇಖಕರು ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವೂ ಉಂಟು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಹೀಗಿವೆ:

- ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳೂ ಆಗಬಹುದು. ಪುಸ್ತಕವು ಸಾಹಿತ್ಯ, ವಿಜ್ಞಾನ, ಪರಿಸರ, ಆರೋಗ್ಯ, ಅನುವಾದ, ಮಕ್ಕಳ ಸಾಹಿತ್ಯ.. ಹೀಗೆ ಯಾವುದೇ ಪ್ರಕಾರಕ್ಕೂ ಸೇರಿದ್ದಾಗಿರಬಹುದು.
- ಪುಸ್ತಕಗಳು ೨೦೧೫ರ ಮೇ ತಿಂಗಳ ನಂತರ ಪ್ರಕಟಗೊಂಡಿದ್ದಾಗಿರಬೇಕು.
- ಈ ಮೊದಲು ಅಮೆರಿಕದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಪುಸ್ತಕಗಳನ್ನು ಮಾತ್ರ ಸಮ್ಮೇಳನದಲ್ಲಿ ಬಿಡುಗಡೆಗೆ ಮಾಡುವ ಅವಕಾಶ ಒದಗಿಸಲಾಗುವುದು.

- ಪುಸ್ತಕಗಳ ಬಿಡುಗಡೆ ಮತ್ತು ಪರಿಚಯವನ್ನು ಅಪೇಕ್ಷಿಸುವ ಲೇಖಕರು ಸಮ್ಮೇಳನದಲ್ಲಿ ಉಪಸ್ಥಿತರಾಗಿರಬೇಕು.
- ಪುಸ್ತಕ ಬಿಡುಗಡೆ/ಪರಿಚಯದ ಆಯ್ಕೆಯಲ್ಲಿ ಕಸಾರಂ ತೀರ್ಮಾನ ಅಂತಿಮ.
- ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ಮಾರ್ಚ್ 10 ರ ಒಳಗೆ ನಮ್ಮನ್ನು ಸಂಪರ್ಕಿಸಿ, ನಿಮ್ಮ ಕೃತಿಗಳನ್ನು ಕಳಿಸಬೇಕು.
- ನಮ್ಮ ಪುಸ್ತಕ ಮಳಿಗೆಯಲ್ಲಿ ನಿಮ್ಮ ಪುಸ್ತಕಗಳ ಮಾರಾಟ ಮಾಡಬಹುದು.
- ಸಂಪರ್ಕ ವಿಳಾಸ bhameera@gmail.com
vaishalimadhu@gmail.com

ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಪಾಲ್ಗೊಂಡು ಸಮ್ಮೇಳನದ ಸಂಭ್ರಮ ಹೆಚ್ಚಿಸಬೇಕೆಂದು ಕೋರುತ್ತಿದ್ದೇವೆ.
ಈ ಕುರಿತಂತೆ ಹೆಚ್ಚಿನ ವಿವರಗಳು ಬೇಕಿದ್ದರೆ ದಯವಿಟ್ಟು ನಮ್ಮನ್ನು ಸ೦ಪರ್ಕಿಸಿ.

ವಿಶ್ವಾಸಪೂರ್ವಕವಾಗಿ,
ಮೀರಾ ಪಿ. ಆರ್. ಮತ್ತು ವೈಶಾಲಿ ಹೆಗಡೆ Meera Rajagopal Vaishali Hegde

ಕನ್ನಡ ಸಾಹಿತ್ಯ ರಂಗ - ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡಕೂಟ ಬಾಸ್ಟನ್ ಸಹಯೋಗದೊಂದಿಗೆ
KANNADASAHITYARANGA.ORG
 Posted by at 3:54 PM
Jan 292017
 

ಕನ್ನಡ ಸಾಹಿತ್ಯ ರಂಗ - ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡಕೂಟ ಬಾಸ್ಟನ್ ಸಹಯೋಗದೊಂದಿಗೆ ಸಮ್ಮೇಳನ ನಡೆಯುವ ಸ್ಥಳ: ಬಾಸ್ಟನ್ ನಗರದ ಬಳಿ, ಫ಼್ರೇಮಿಂಗ್‍ಹ್ಯಾಮ್

Venue Address: Keef Tech, 750 Winter Street, Framingham, MA

ದಿನಾಕ: ಏಪ್ರಿಲ್ ೨೯/೩೦, ೨೦೧೭

ಸಾಹಿತ್ಯೋತ್ಸವದ ಮೂಲ ವಸ್ತು: “ಕನ್ನಡದಲ್ಲಿ ಭಕ್ತಿ ಸಾಹಿತ್ಯ”

ಮುಖ್ಯ ಅತಿಥಿ: ಖ್ಯಾತ ವಿದ್ವಾಂಸರಾದ ಶ್ರೀ. ಲಕ್ಷ್ಮೀಶ ತೋಳ್ಪಾಡಿ

ಭಕ್ತಿಸಾಹಿತ್ಯವನ್ನು ಚರ್ಚಿಸುವ ಅಮೆರಿಕದ ಬರಹಗಾರರ ಅನೇಕ ಉತ್ತಮ

ಲೇಖನಗಳನ್ನೊಳಗೊಂಡ “ಅವರವರ ಭಕುತಿಗೆ” ಪುಸ್ತಕದ ಲೋಕಾರ್ಪಣೆ, ಮುಖ್ಯ

ಅತಿಥಿಗಳೊಂದಿಗೆ ಸಂವಾದ, ಕವಿಗೋಷ್ಠಿ, ಬರಹಗಾರರೊಂದಿಗೆ ವಿಚಾರ ಸಂಕಿರಣ,

ಮತ್ತು ಮನರಂಜನಾ ಕಾರ್ಯಕ್ರಮಗಳು, ಇವು ಸಾಹಿತ್ಯೋತ್ಸವದ ಆಕರ್ಷಣೆಗಳು.

ಸಾಹಿತ್ಯೋತ್ಸಾಹಿಗಳಿಗೆಲ್ಲ ಸುಸ್ವಾಗತ!!

ಹೆಚ್ಚಿನ ವಿವರಗಳು ಲಭ್ಯವಾದಂತೆಲ್ಲ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವುದು

www.kannadasahityaranga.org

MA2

 

 Posted by at 5:52 PM