Jun 302013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಕವನಗಳು.)


 
ಯಂತ್ರ ನೀ ಬಂದ ನಂತರ…

 

 

 

 

ಹೃದಯದಾಳದಲ್ಲಿ ಉಳಿದೇಹೋದವು
ಅಮ್ಮನಿಗೆ ಅಕ್ಕ, ತಂಗಿಯರಿಗೆ ಸ್ನೇಹಿತೆಯರಿಗೆ
ಪತ್ರಗಳಲ್ಲಿ ಬರೆಯುತ್ತಿದ್ದ ಆಪ್ತ ಮಾತುಗಳು
ಫೋನಿನಲ್ಲಿ ಉಭಯ ಕುಶಲೋಪರಿಯಾದರೆ
ಆಯಿತು ಎಲ್ಲ ಮಾತು ಕಥೆ!

ಯಂತ್ರ ನೀ ಬಂದ ನಂತರ…
ಮಾಯವಾದವು ಬೀಸು ಕಲ್ಲ ಸುತ್ತ ಬೀಸುತ್ತ
ಹೆಂಗಳೆಯರು ಹಾಡುತ್ತಿದ್ದ ಹಾಡುಗಳು

ಭಾವಿ ಕಟ್ಟೆಯ ಸುತ್ತ ನೀರು ಸೇದುತ್ತಾ
ಹೆಣ್ಣುಗಳು ಹೇಳಿಕೊಂಡ ಗುಟ್ಟುಗಳು

ಹೊಳೆಯ ದಂಡೆಯ ಮೇಲೆ ಬಟ್ಟೆ ಒಗೆಯುತ್ತಾ
ಆರಾಮದಲ್ಲಿ ಆಡುತ್ತಿದ್ದ ಮಾತುಗಳು

ಹೌದು ಯಂತ್ರ, ನೀ ಬಂದ ನಂತರ..
ವಿಜೃಂಭಿಸಿತು ನಾಗರಿಕತೆ
ಕಳೆದೇ ಹೋಯಿತು ಸಂಸ್ಕೃತಿ!!!

 

 

KSR_WEB-508

 

ಪುರುಸೊತ್ತು ಬೇಸತ್ತಾಗ

ಯಂತ್ರ ನೀ ಬಂದ ನಂತರ
ಪುರುಸೊತ್ತೋ ಪುರುಸೊತ್ತು!

ಎಲ್ಲಿಗೂ ನಡೆದು ಹೋಗಬೇಕಾಗಿಲ್ಲ
(ನೆರೆಹೊರೆಯವರ ಮುಖ ನೋಡುವ ಹಾಗಿಲ್ಲ!)
ಕಾರಿನಲ್ಲೇ ಟ್ರಿಮ್ಮಾಗಿ ತಿರುಗಾಟ

ಟಿವಿ ಮುಂದೆಯೇ ನಮ್ಮೆಲ್ಲರ ಊಟ
(ಉಣ್ಣುವಾಗಿನ ಹರಟೆ ಎಲ್ಲಿ ಕಿತ್ತಿತೋ ಓಟ!)
ಮಾತೇಕೆ ಕಣ್ಮುಂದೆ ಇರಲು ಇಂಥ ನೋಟ

ಉದ್ದುದ್ದ ಕಾಗದ ಬರೆಯಬೇಕಾಗಿಲ್ಲ
(ಎದೆಯ ಮಾತುಗಳನ್ನು ತೋಡಿಕೊಳ್ಳುವ ಹಾಗಿಲ್ಲ!)
ಝುಮ್ಮಂತ ಫೋನಿನಲ್ಲೇ ಹಾಯ್, ಬೈ ಹೇಳುವ ಪರಿಪಾಠ!

ಬೀಸುವ ಕಲ್ಲು, ಒರಳು ಕಲ್ಲು ಕಾಣಬಹುದು ಮ್ಯೂಸಿಯಮ್ಮಲ್ಲಿ ಮಾತ್ರ
ಬೀಸುವ ಹಾಡು, ಒನಕೆ ಹಾಡು ಕೇಳಬಹುದು ಸಿಡಿಯಲ್ಲಿ ಮಾತ್ರ

ಬಟ್ಟೆ ಒಗೆಯಬೇಕಾಗಿಲ್ಲ!
ಪಾತ್ರೆ ತೊಳೆಯಬೇಕಾಗಿಲ್ಲ!

ಎಷ್ಟೆಲ್ಲ ಸೌಲಭ್ಯ!
ಆದರೂ ನಾವೇ ಕಟ್ಟಿದ ಈ ಭವ್ಯ ಕೋಟೆಯೊಳಗೆ ಏನೋ ಅಭಾವ
ನಾವು ಒಬ್ಬಂಟಿಯಾಗಿಬಿಟ್ಟೆವೆ ಎಂಬ ಅನಾಥ ಭಾವ! 

 Posted by at 9:21 PM