Oct 252012
 

ಬುಕ್ ಕ್ಲಬ್ – ಕನ್ನಡ ಸಾಹಿತ್ಯ ರಂಗದ ವತಿಯಿಂದ ಹೊಸದಾಗಿ ಪ್ರಾರಂಭವಾಗಿರುವ ಸಾಹಿತ್ಯ ಚಟುವಟಿಕೆ. ಅಮೆರಿಕದಾದ್ಯಂತ ಹಂಚಿಹೋಗಿರುವ ಸದಸ್ಯರು ದೂರವಾಣಿಯಲ್ಲಿ ಏಕಕಾಲಕ್ಕೆ ಸೇರಿ, ತಮಗೆ ಇಷ್ಟವಾದ ಸಣ್ಣಕಥೆಯೊಂದರ ಕುರಿತು ಅಭಿಪ್ರಾಯ ವಿನಿಮಯ ನಡೆಸುವುದು ಇದರ ಹಿಂದಿರುವ ಉದ್ದೇಶ. ಈಗಾಗಲೇ ಈ ರೀತಿಯ ಹಲವಾರು ಗುಂಪುಗಳು ಸಮಾನ ಅಭಿರುಚಿ ಉಳ್ಳವರನ್ನು ಸೇರಿಸಿಕೊಂಡು ತಮ್ಮ ಸಾಹಿತ್ಯಾಸಕ್ತಿಯನ್ನು ಪೋಷಿಸಿಕೊಂಡು ಬರುತ್ತಿವೆ. ಕನ್ನಡ ಸಾಹಿತ್ಯ ರಂಗವೂ ಸಾಹಿತ್ಯ ಚರ್ಚೆಗಾಗಿ ಇಂತಹ ವೇದಿಕೆಯೊಂದನ್ನು ಪ್ರಾರಂಭಿಸಬೇಕೆಂದು ನಿರ್ದರಿಸಿ, ಅದಕ್ಕೆ ಸ್ಪಷ್ಟವಾದೊಂದು ರೂಪ ಕೊಟ್ಟವರು ಕಥೆಗಾರ, ಕಾದಂಬರಿಕಾರ, ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರೂ ಆಗಿರುವ ಗುರುಪ್ರಸಾದ್ ಕಾಗಿನೆಲೆಯವರು.

ಕನ್ನಡ ಸಾಹಿತ್ಯ ರಂಗದ ಸದಸ್ಯರಿಗೆ ಸೂಚಿಸಿದ ಸಣ್ಣಕಥೆಯೊಂದನ್ನು ಮುಂಚಿತವಾಗಿ ವಿ-ಅಂಚೆಯ ಮೂಲಕ ಕಳಿಸಿಕೊಡುವುದು, ಸದಸ್ಯರು ಅದನ್ನು ಮುಂಚಿತವಾಗಿ ಓದಿಕೊಂಡು ನಂತರ ಸಭೆಯಲ್ಲಿ ಭಾಗವಹಿಸಿ ಚರ್ಚಿಸುವುದು, ಇದರ ಸದ್ಯದ ರೂಪರೇಷೆ. ಅವಕಾಶವಾದಲ್ಲಿ, ಅಮೆರಿಕ ಪ್ರವಾಸಕ್ಕೆಂದು ಬರುವ, ಭಾರತದಲ್ಲೂ ಇರುವ, ಕವಿ-ಲೇಖಕ-ಸಾಹಿತಿಗಳನ್ನೂ ಸಂವಾದದಲ್ಲಿ ತೊಡಗಿಸಿಕೊಳ್ಳುವ, ಅವರ ವಿಚಾರಧಾರೆಯನ್ನು ಹಂಚಿಕೊಳ್ಳುವ ಯೋಜನಯೂ ಇದರಲ್ಲಿ ಸೇರಿಕೊಂಡಿದೆ.

ಕನ್ನಡ ಸಾಹಿತ್ಯ ರಂಗದ ಎಲ್ಲಾ ಸದಸ್ಯರೊಡನೆ ವಿಚಾರ ವಿನಿಮಯ ನಡೆಸಿದ ನಂತರ, ಅಕ್ಟೋಬರ್, ೨೧, ೨೦೧೨, ಶನಿವಾರದಂದು ಬುಕ್ ಕ್ಲಬ್‌ನ ಮೊದಲ ಸಭೆ ಸೇರುವುದೆಂದು ನಿರ್ಧಾರವಾಯಿತು. ಮೊದಲನೆಯ ಸಭೆಯಲ್ಲಿ ಸಂವಾದಕ್ಕೆಂದು ಆರಿಸಿಕೊಂಡಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕಥೆ “ಕಲ್ಮಾಡಿಯ ಕೋಣ”. ಅಕ್ಟೋಬರ್ ೨೧ ರ ಸಾಯಂಕಾಲ ಪೂರ್ವ ಕರಾವಳಿಯ ಸಮಯ ಐದು ಘಂಟೆಗೆ ಪ್ರಾರಂಭಗೊಂಡು ಆರು ಘಂಟೆಗೆ ಸಭೆ ಮುಕ್ತಾಯಗೊಂಡಿತು. ೨೨ ಜನ ಸಾಹಿತ್ಯ ಪ್ರೇಮಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಮಾಸ್ತಿಯವರ ಕಥೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಭೆಯಲ್ಲಿ ಚರ್ಚಿತಗೊಂಡ ಕಥೆ ‘ಕಲ್ಮಾಡಿಯ ಕೋಣ’ದ ಪಿಡಿ‌ಎಫ್ ರೂಪದಲ್ಲಿ ಇಲ್ಲಿ ಲಭ್ಯವಿದೆ. ಈ ಕಥೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸರ್ವರಿಗೂ ಸ್ವಾಗತವಿದೆ. ಕಾಮೆಂಟ್ ರೂಪದಲ್ಲಿ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಿ.

ಬನ್ನಿ, ಸಾಹಿತ್ಯ ಪಯಣದಲ್ಲಿ ಸಹಯಾತ್ರಿಕರಾಗೋಣ..

========================================================================================================

ಮಾಸ್ತಿಯವರ ಸಣ್ಣ ಕಥೆ – ಕಲ್ಮಾಡಿಯ ಕೋಣ

ಕಲ್ಮಾಡಿಯ ಕೋಣ – ಮಾಸ್ತಿ ವೆಂಕಟೇಶ ಅಯ್ಯಂಗಾರ್

ಈ ಕಥೆಯ ಕುರಿತು, ಕನ್ನಡ ಸಾಹಿತ್ಯ ರಂಗದ ಸದಸ್ಯರಾದ ಕೃಷ್ಣಪ್ರಿಯ ಅವರ ಆಸಕ್ತಿಕರ ಟಿಪ್ಪಣಿ ಇಲ್ಲಿದೆ. ಈ ಬಗ್ಗೆ ಮತ್ತಷ್ಟು ಹೊಸ ನೋಟಗಳು ಇಲ್ಲಿ ಸಾಧ್ಯವಾಗಲಿ.

* ಕತೆ, ಸಿನಿಮಾಗಳ ಸಾರವನ್ನು ಒಂದು ವಾಕ್ಯದಲ್ಲಿ ಹೇಳುವ ಪ್ರಯತ್ನ ಉಪಯುಕ್ತ ಎಂದು ಎಲ್ಲೋ ನೋಡಿದ್ದೇನೆ. ಅದು ಇಲ್ಲಿ ಮಾಡಿದರೆ, “ಕೋಣ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ ಮುಂದೆ ಎರಡು ಕೋಣ ಬಲಿಯಾಗುವಂತೆ ಮಾಡುತ್ತದೆ” ಎಂದು ಹೇಳಬಹುದೇ?

* ಭಾವ-೨ರಲ್ಲಿ ಚಿರತೆಯ ಬೇಟೆಯ ವಿಷಯಕ್ಕೆ(೧೨ನೆಯ ಪ್ರಕರಣ,ಚಿರತೆಯ ಬೇಟೆ), ಈ ಕತೆಗೆ ಹೋಲಿಕೆ ಇದೆ.

* ಕಲ್ಮಾಡಿ – ಇಂಟರ್ನೆಟ್ಟಿನಲ್ಲಿ ಹುಡುಕಿದರೆ ಮಹಾರಾಷ್ಟ್ರದಲ್ಲಿ ಸಿಕ್ಕುತ್ತದೆ. ಊರು, ಕತೆಯಲ್ಲಿ ಹೇಳುವಂತೆ ಮಂಗಳೂರಿನ ಹತ್ತಿರವೂ ಇದೆ, ಇಂಗ್ಲೀಷಿನಲ್ಲಿ ಕೆಲವು ಕಡೆ ಈ ಊರಿನ ಕಡೆಯ ಅಕ್ಷರ ವೈ. ರಾಜಕಾರಣಿ ‘ಸುರೇಶ್ ಕಲ್ಮಾಡಿ’ಯವರ ಹೆಸರು ಅದೇ ರೀತಿಯದು.

* ಇಲ್ಲಿ ಈ ಹೆಸರಿನ ಬಳಕೆ. ನಿರೂಪಕನ, ಕತೆಯ, ಜಾಗ ಸೂಚಿಸುವುದು (ಅದು ಮಂಗಳೂರಿನ ಕಡೆ ಅಲ್ಲ ಎಂದು ಹೇಳುವುದು ಮುಖ್ಯ)? ಕತೆಗೆ ದ್ರಾವಿಡ ಹೆಸರು, ಸಂಸ್ಕೃತದ ಹೆಸರಿನ ಊರಿಗಿಂತ ಸರಿಹೋಗುತ್ತದೆ? “ಕಲ್ಮಾಡಿ”, “ಕೋಣ”ಗಳ ಅಲಿಟಏಷನ್. ಹಲ್ಮಡಿ ಶಾಸನ ಪ್ರಸಿದ್ಧವಾಗಿರುವುದರಿಂದ, ಅದಕ್ಕೆ ಹತ್ತಿರದ ಸಾಮ್ಯ ಇರುವ ಹೆಸರು (ಕಕಾರ, ಹಕಾರ ಉಚ್ಚಾರಣೆಯಲ್ಲಿ ಹತ್ತಿರದವು).

* ಕಲ್ಮಾಡಿ ಎಂಬ ಊರು, ಮಂಗಳೂರಿನ ಕಡೆ ಅಲ್ಲದೆ ಬೇರೆ ಕಡೆ ಇಲ್ಲದೆ ಇರುವುದು, ಆ ಹೆಸರಿನ ಊರಿನವರಿಗೆ ಮುಜುಗರ ಆಗದೆ ಇರುವಂತೆ ಮಾಡುವ ತಂತ್ರ? ಈ ರೀತಿಯ ಪ್ರಯತ್ನವನ್ನು “ಬೀದಿಯಲ್ಲಿ ಹೋಗುವ ನಾರಿ”ಯಲ್ಲಿನ ಬೆಂಗಳೂರು, ಮೈಸೂರು ಅಲ್ಲದ “ಮಯಿಳೂರನ್ನು” ಹುಟ್ಟಿಸಿರುವುದರಲ್ಲಿ ನೋಡಬಹುದು.

* ನಿರೂಪಕನ ಪಾತ್ರ (ಉತ್ತಮ ಪುರುಷದಲ್ಲಿ ಕತೆ ಹೇಳಿದರೂ, ನಿರೂಪಕ ಮಾಸ್ತಿ ಅಲ್ಲದೆ ಇರುವ ಸಂಭವ ಹೆಚ್ಚು). ಯೂರೋಪಿನ ಬಗ್ಗೆ ಗೊತ್ತು. ಹೆಸರುಗಳ ವಿಷಯದಲ್ಲಿ ಆಸಕ್ತಿ ಇದೆ, ಆದರೆ ಪರಿಣತಿ ಇಲ್ಲ. ’ಪ್ರಮೋಷನ್’ ಪದ ಬಳಸುತ್ತಾನೆ.

ಹೊರಹಳ್ಳಿ – ಬೆಂಗಳೂರಿನ ಹತ್ತಿರದ (ಬೆಂಗಳೂರಿನ ಭಾಗವೇ ಆಗಿರುವ) ಊರು?
ಹಾಲಾರ – ?
ಮಜರೆ ? – ಕಂದಾಯದ ಲೆಕ್ಕಕ್ಕೆ ಸಂಬಂಧಪಟ್ಟ ಪದ? ಮುಜುರಾಯಿ?
ಗಾಡಿಯಲ್ಲಿ ಇಳಿದು ಹೋಗುವುದು, ಗುಡ್ಡ, ಬಯಲು ಸೀಮೆ ಸೂಚಿಸುತ್ತವೆ
ಮನಸರಿಗನ್ನ – ಮನುಷ್ಯರಿಗಿಂತ

ಐಗಳ ರಾಗಿ – ಅಳತೆಯೇ
ಕೊಳಗ – ನಾಕು ಬಳ್ಳ, ೧೬ ಸೇರು, ಕೊಳದಪ್ಪಲೆ ಎಂಬ ಪ್ರಯೋಗ ಇದೆ. ಇತರ ಅಳತೆಗಳು – ಸೇರು, ಪಾವು, ಚಟಾಕು,(ಮಣ, ತೂಕದ್ದು), ಪಲ್ಲ, ದಡಿಯ
ಮೋಸಾಗಿ – ಮೊಳೆತು, ಅಂಕುರವಾಗಿ
ಹಸಿಗೆಯಾಗಿ – ಬೇರೆಯಾಗಿ
ಕರಗಾಗಲಿ – ಹರಿವಾಗಲಿ (ಹಿಂದಿನ ಕರಗಿ ಹರಿಯಿತು ಎನ್ನುವುದರ ಮುಂದುವರಿಕೆ)
ದೇವರ ಗುಡ್ಡ – ಪೂಜಾರಿ
ಸಿಂಧೂರ – ಕುಂಕುಮ
ಕಸುಬಿನ ಕೊರೆ – ಎರಡು ಸಲ ಅಲ್ಲಿ ಹೋಗಿ ನೋಡಬೇಕು, ಅಲ್ಲಿ ಹೋಗಿ ಕೇಳಬೇಕು ಬಳಕೆ
ಸಾಂಗ್ಯ – ನಿಘಂಟುಗಳಲ್ಲಿ ಇರುವಂತಿಲ್ಲ (ಕಿಟ್ಟೆಲ್, ವೆಂಕಟಸುಬ್ಬಯ್ಯ), ಸಂದರ್ಭದಿಂದ ಅರ್ಥ ತಿಳಿಯುತ್ತದೆ.
ಸೇಸೆ ಹಾಕುವುದು – ಹಣೆಗೆ ಅಕ್ಷತೆ ಹಾಕುವುದು
ಸೋಬಾನೆ – ಮಂಗಳದ ಹಾಡು
ಬೆಗಡುಗೊಂಡಿತು – ಅಶ್ಚರ್ಯ, ಭಯ ಪಟ್ಟಿತು
ನಿಟ್ಟು – ನಿಯಮ (ಕಟ್ಟುನಿಟ್ಟು)
ಹಲಲೋ ಕುಲಲೋ- ಕೂಗಾಟದ ಶಬ್ದ
ದಾರಿಯ ನಿಟ್ಟು – ದಾರಿಯ ದಿಕ್ಕು, ಗುರಿ
ಮಂಚಿಗೆ – ಮಟ್ಟಸವಾದ, ಸುತ್ತಮುತ್ತಲ ಜಾಗಕ್ಕಿಂತ ಎತ್ತರವಾದ ಜಾಗ, ಹೊಲ ಕಾಯಲು ಬಳಸುವ ಅಟ್ಟ.
ಎಡೆ – ನೈವೇದ್ಯ
ಆರೋಗಣೆ – ಊಟ
ಮುಸಾಫರ್ – ಪ್ರವಾಸಿ (ಅರಬ್ಬೀ ಪದ, ಸಫ಼ರ್, ಇಂಗ್ಲೀಷಿನ ಸಫ಼ಾರಿಗಳಿಗೆ ಸಂಬಂಧಿಸಿದ್ದು)
ತೊಂಡು – ಉದ್ಧಟತನ, ಬೇಕಾದ್ದನ್ನು ಮೇಯುವುದು
“ಜೀವ ಉಳಿಯುವುದೆಂತು? ಎಂದಿದ್ದರೂ ಅದು ಸಾಯಬೇಕು. ಉಳಿಯುವುದು ಸಾವು….”!

========================================================================================================

 Posted by at 11:34 AM

  One Response to “ಸಾಹಿತ್ಯ ಸಂವಾದಕ್ಕೊಂದು ಹೊಸ ವೇದಿಕೆ – ಬುಕ್ ಕ್ಲಬ್!”

  1. ನಿರ್ವಾಣ -ವಿವೇಕ ಶಾನಭಾಗ
    ಆನಂದದಲ್ಲಿ ರಾಜೇಶ್ ಖನ್ನಾ ಪಾತ್ರ ದಾರಿಯಲ್ಲಿ ಹೋಗುವ ಅಪರಿಚತನಿಗೆ ಯಾವದೋ ಹೆಸರಲ್ಲಿ ಕುಶಲವೇ ಎಂದು ಕೇಳುತ್ತದೆ. ಆತ ಕುಶಲ ಹೇಳುತ್ತಾ ತಾನು ಆ ಹೆಸರಿನವನಲ್ಲ ಎನ್ನುತ್ತಾನೆ. ಸರಿ ಬಿಡು ನಾನು ನಿ ಅನಕೊಂಡವನಲ್ಲ ಎನ್ನುತ್ತಾನೆ. ಆ ಪಾತ್ರದ ಲವಲವಿಕೆಗೆ, ಜೀವನ ಪ್ರೀತಿಗೆ ಎರಕ ಹೊಯ್ದಂತೆ ಇತ್ತು ಇಂತಹದೆ ಅನೇಕ ಸಂಭಾಷಣೆಗಳು ಆನಂದದಲ್ಲಿ. ವಿವೇಕ ಶಾನಭಾಗರ ನಿರ್ವಾಣ ಕಥೆ ಓದಿದಾಗ ‘ಆನಂದ’ದ ಆ ಘಟನೆ ನೆನಪಾಯಿತು. ವಿವೇಕ ಶಾನಭಾಗ ಕಥೆಗಳೆಂದರೆ ಬೇರೇನೂ ಓದದವರು ಕುಳಿತು ಖುಷಿಯಿಂದ ಓದುವವವರು ನನಗೆ ಗೊತ್ತು. ವಿವೇಕ, ಸುಲಭವಾಗಿ ಚಿತ್ತಾಲ, ಕಾಯ್ಕಿಣಿ ಸಾಲಿನಲ್ಲಿ ನಿಲ್ಲಬಹುದಾದವರು(ನನ್ನ ಸ್ವಂತ ಅನಿಸಿಕೆ), ನಮ್ಮ ನಡುವಿನ ಅತ್ಯಂತ ಗಂಭೀರ ಚಿಂತಕರು. ಓದುಗರನ್ನು ಬಿಟ್ಟ ಜಾಗ ಕದಲದೆ ಓದಿ ಮುಗಿಸುವ ಕಾಯಕಕ್ಕೆ ಹಚ್ಚುವವರು. ‘ಘಾಚರ್-ಘೋಚರ’ ಎಂದರೆ ಏನೆಂದು ಇನ್ನೂ ಗೊತ್ತಿಲ್ಲದಿರುವವನು ನಾನು.

    ಅವರದೇ ಇನ್ನೊಂದು ಕಥೆ ಮತ್ತೊಬ್ಬನ ಸಂಸಾರ ಸ್ವಲ್ಪ ಮಟ್ಟಿಗೆ ಇದೆ ತರಹದ್ದು(?). ನಿರ್ವಾಣಕ್ಕೆ ಶೂನ್ಯ ದಿಂದ ಮುಕ್ತಿ (ನಂದುವುದು, ಬರಿದು,ಬತ್ತಲೆ, ದಿಗಂಬರತ್ವ) ವರೆಗೆ ಅನೇಕ ಅರ್ಥಗಳಿವೆಯಾದರೂ ನನಗೇಕೋ ಇಲ್ಲಿ ಮೊಕ್ಷಕ್ಕಿಂತ, ಶೂನ್ಯಕ್ಕೆ ಹೆಚ್ಚು ಒತ್ತು ಮೂಡಿದಂತಿದೆ. ಅದಕ್ಕೆಂದೇ ಮತ್ತೊಬ್ಬನ ಸಂಸಾರದ ಶೀರ್ಷಿಕೆ ಇದಕ್ಕಿಂತ ಹೆಚ್ಚು ಸೂಕ್ತ ಎನಿಸುತ್ತದೆ. ಒಬ್ಬ ಲೇಖಕನ ಎರಡು ಕಥೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಹುದೆ? ಹಾಗೊಂದು ವೇಳೆ ತೂಗಿದರೆ ನನಗೆ ‘ಮತ್ತೊಬ್ಬನ ಸಂಸಾರ’ ಹೆಚ್ಚು ಆಪ್ತವಾಗುವದು ಬರಿ ಅದರ ಅರ್ಥಪೂರ್ಣ ಶೀರ್ಷಿಕೆಯಿಂದ ಮಾತ್ರವಲ್ಲ ಎನಿಸುತ್ತದೆ. ಒಂದು ಕಥೆಗೆ ಅದರ ಶೀರ್ಷಿಕೆ ಎಷ್ಟೊಂದು ಅಂಕ ( weightage,value) ಗಳಿಸಿ ಕೊಡಬೇಕು ನನಗೆ ಗೊತ್ತಿಲ್ಲ -ಇದರ ಬಗ್ಗೆ ಯಾರದರೂ ಹೇಳಬಹುದೇ?. ‘ಹೂ ಆರ್ ಯೂ’ ಶೀರ್ಷಿಕೆ ಇನ್ನೂ ಕ್ಯಾಚಿ ಯಾಗಿರುತ್ತಿತ್ತೋ ಏನೋ – ಆಗ ಇದರ ಆಳ ಕಮ್ಮಿಯಾಗಿರುತಿತ್ತೆ? ಇ ಕಥೆ ಮುಂಚೆ ಓದಿದ್ದೆ , ಆಗಲೂ ಹೀಗೇ ಅನಿಸಿತ್ತೋ ಏನೋ? ಸ್ವಲ್ಪ ನಿರೀಕ್ಷಿತ ಅನ್ನುವದ ಬಿಟ್ಟರೆ ಕಥೆ ತುಂಬಾ ಚೆನ್ನಾಗಿದೆ. ಎಲ್ಲಾ ಇದ್ದು , ಏನೂ ಸಾಧಿಸಿಲ್ಲವೆಂಬ ಕೊರಗು ನಮ್ಮ ತಲೆಮಾರಿನ ಕೊಡುಗೆ ಏನೋ? ಇ virtual ಆಗಿ ಇರುವ ಸಾಧ್ಯತೆಗಳನ್ನು ನಮ್ಮ ಇಂದಿನ ವ್ಯವಸ್ತೆ ಸರಳವಾಗಿದೆ ಎನಿಸುತ್ತದೆ. ಅದಕ್ಕೆ ಪಕ್ಕದ ಮನೆ ಲಾನ್ ನಿಂದ ಹಿಡಿದು, ಮತ್ತೊಬ್ಬನ ಗಳಿಕೆ, ಅವನು ನಾನಾಗಿ , ನಾನು ಅವನಾಗಿ ಸ್ವಲ್ಪ ಹೊತ್ತು ನೋಡಲು ಸಾಧ್ಯವೇನೋ ಎನಿಸುತ್ತದೆ. ‘ಸಾಧನೆ ‘ಎಷ್ಟು ಸುಲಭವಾಗಿ ಬಿಟ್ಟಿದೆ ಎಂದರೆ ಅದರಲ್ಲಿದ್ದ ಹೊಳಪು, ಸವಾಲು ಕಡಿಮೆಯಾಗಿ ಅಚ್ಚರಿ ಹೊರಟು ಹೋದರೆ ನಾವೆಲ್ಲಾ ಆಗ ಬರಿ
    ಮಾರ್ಪಾಡಿಸಬಹುದಾದ ಸ್ಥಾನಿಗಳು (place holder, variables). ನಾಲ್ಕು ಗಾವುದ ಮೇಲೆ ಹೋಗಿ ನಮಗ್ಯಾವದು ಬೇಕೋ ಆ ವೇಷ ಹೊಕ್ಕು ಇದ್ದರೂ ಹೆಚ್ಚು ವ್ಯತ್ಯಾಸವಾಗಲಿಕ್ಕಿಲ್ಲ.

    ಇದಕ್ಕೆ ಇಂಬು ಕೊಟ್ಟಂತೆ ನಮ್ಮ ಬಾಳುಗಳು ಯಂತ್ರಿಕೃತವಾಗುತ್ತಿವೆ. ಮುಂಬೈಗೂ, ಬೆಂಗಳುರಿಗೂ -ನ್ಯುಯಾರ್ಕಿಗೂ,ಬೆಹೆರೆನಗೂ ಮುದ ನೀಡುವ, ದಿಕ್ಕೆಡಿಸುವ ದಮ್ಮು ಹೊರಟು ಹೋಗಿದೆ ಎನಿಸುತ್ತದೆ,
    ಹೊಟ್ಟೆ ತುಂಬಿದ ಕೆಲವರಿಗಾದರು. ಇನ್ನೂ ಸ್ವಲ್ಪ ಕಾಲ ಹೋದರೆ ಭಾರತಿಯರಿಗೂ, ಬಿಳಿಯರಿಗೂ, ಕರಿಯರಿಗೂ – ಅಸಲು ಮಾನವ ಮಾನವರಲ್ಲಿ ವಿಶಿಷ್ಟ ವಾದದ್ದು ಏನೂ ಉಳಿಯುವದಿಲ್ಲವೇನೋ? ಫೇಸ್ಬುಕನ ಪ್ರೊಫೈಲ್ ಲ್ಲಿ , ಅಲ್ಲಿರುವ ಲೈಕ ಗಳಲ್ಲಿ ಪ್ರಪಂಚ ಎಲ್ಲಾ ಒಂದೇ ಎನಿಸುವಂತೆ , ಎಲ್ಲರಿಗೂ ಅದೇ ಕನಸರ್ನು, ಅದೇ ಕನಸುಗಳಿರುವಂತೆ ಕಾಣುತ್ತವೆ. ಕೆಲವೊಂದು ಸ್ಥಾನಿಗಳು ಗಳು ತಟಸ್ತ , ಕೆಲವೊಂದು ಚೈತನ್ಯಯುತವಾಗಿರುತ್ತವೆ ಅಷ್ಟೇ. ಆಗ ಇಂತಹ ಕಥೆಗಳು ಹೆಚ್ಚು ಹೆಚ್ಚು ಆಪ್ತವಾಗುತ್ತವೆ. ಕೆಲವೊಂದು ಮಾತುಗಳು ಎಷ್ಟು ಸಾರ್ವತ್ರಿಕವಾಗಿವೆ ಎಂದರೆ ಸಟಕ್ಕನೆ ನಮಗೆ ಗೊತ್ತಿರುವ ಜೀವನವೇನೋ ಎನಿಸಿ ದಿಗ್ಬ್ರ್ಹಮೆಯಾದರೂ ಹೆಚ್ಚಲ್ಲ – ಅವೇ ಗುಣಗಳು ‘ನಿರ್ವಾಣ’ ವನ್ನು ಗಾಢ ವಾಗಿಸುತ್ತವೆ. ಉದಾ ‘ಅದೇ ಸಾಲುಗಳನ್ನು ಕಾಪಿ ಪೇಸ್ಟ್ ಮ್ ಮಾಡೋದು , ಹೆಸರು ಬಿಟ್ಟರೆ ಎಲ್ಲರಿಗೂ ಅದೇ ಸಾಲುಗಳು’, ಫೋನಿನ ಒಂದು ಕೊನೆಯಲ್ಲಿ ಒಬ್ಬನೇ ಗುನುಗಾಡುವದು , ಇಂಡಿಯನ ಜನ್ಮ ಜಾಲಾಡುವ ದೇಶೀ ದ್ವೇಷಿ ಮಿತ್ರರು, ಅದಕ್ಕೆ ತಕ್ಕಂತೆ ವರ್ತಿಸುವವರು, ಮೆರೆತು ಹೋಗುವ ಹೆಸರುಗಳು, ಮರೆತರೂ, ಐದು ಪೈಸೆ ನಷ್ಟವಿಲ್ಲದ ಬಾಬತ್ತಿನವರು, ಸೇಲ್ಸ್/ಮಾರ್ಕೆಟಿಂಗಲ್ಲಿದ್ದರೆ ನಾನು ಏನೋ ಆಗಬಹುದಿತ್ತೇನೋ ಎಂದು ಕರಬುವವರು. ‘ಪ್ರೊಫೆಷನಲ್ ಚಾರ್ಜಸ್ ಅಂತಾ ಕೊಟ್ಟರೆ ಆಯಿತು -ಅದರಲ್ಲೇ ಲಂಚಾನೂ ಅವರೇ ಕೊಟ್ಟುಕೊಂಡು’..’ ಎಲ್ಲದಕ್ಕೂ ಸುಲಭ ದಾರಿ ಕಂಡು ಕೊಳ್ಳುವವರು. ಅಬ್ಬಾ ಸರ್ವೇ ಜನಾ similar ಭವಂತು. ಹೆಂಡತಿಯೊಂದಿಗಿನ ಸಂಭಾಷಣೆ ಕೇಳಿದಾಗ ಅನಿಸಿದ್ದು. ‘ಐ ಯಾಮ ಹೋಂ, ಹನಿ ‘ ಅಂದ್ರೆ ‘ಆಯ್ತು ,ಬಂದೆಯಾ – ಶನಿ’ ಎಂಬತಹ ಒಳ ಉತ್ತರ -‘ತಲೆ ತುಂಬಾ ಆಫೀಸ ಕೆಲಸ …ಕಡಿದು ಗುಡ್ಡೆ ಹಾಕಿರೋದು ಅಷ್ಟರಲ್ಲೇ ಇದೆ’.

    ಕಥೆಗೆ ತಿರುವು ಕೊಡುತ್ತಾ ‘ರತ್ನ ಕಾವಲೇ’ ಜೊತೆಗೆ ನಮ್ಮನ್ನು ಕಾವಲಿಗೆ ಬೀಳಿಸುವದು. ಇಲ್ಲಿ ಇನ್ನೊಂದು ಪ್ರಶ್ನೆ – ‘ಫಣೀಶ’ ‘ಜೋತಿರ್ಮೊಯಿ’,’ರತನ ಕಾವಲೇ’ ಇ ಹೆಸರುಗಳನ್ನೇ ಉಪಯೋಗಿಸುವದಕ್ಕೆ ಏನೋ ಅರ್ಥವಿದೆ ಎನಿಸುತ್ತದೆ, ನಿಜವೇ? ಒಂದೇ ಒಂದು ಸ್ವಲ್ಪ ಕಮ್ಮಿ ಸಂಭವನೀಯತೆಯದ್ದು ನನಗನಿಸಿದಂತೆ ಲೇಖಕ -ಫಣೀಶ ತನ್ನ ಕಂಪನಿಯ ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್ ನಲ್ಲಿದ್ದ ಎಂದು ಕೊಳ್ಳುವದು , ಅದರ ಬದಲು ಎಲ್ಲೋ ಕಾಲೇಜಿನಲ್ಲೋ, ಮುಂಚಿನ ಪರಿಚಯದವನೋ (ಕಾಲದ ಪರಿವೆಯಿಂದ) ಎಂದುಕೊಂಡಿದ್ದರೆ ಇನ್ನೂ ನಂಬಲಾರ್ಹವಾಗಿರುತಿತ್ತೋ ಏನೋ?
    ಗುರು – ಇನ್ನೂ ‘ಹೋಂ ವರ್ಕ್’ ಪೂರ್ತಿಯಾಗಿಲ್ಲ , ಎಷ್ಟಾಗಿದೆಯೋ ಅಷ್ಟನ್ನು ಹಂಚಿಕೊಂಡಿದ್ದೇನೆ. ಎಂದಿನಂತೆ ಉತ್ತಮ ಕಥೆಯ ಆಯ್ಕೆಗೆ ತುಂಬಾ ತುಂಬಾ ಧನ್ಯವಾದಗಳು.

    –ಅನೀಲ ತಾಳಿಕೋಟಿ