Nov 252012
 

ಮೈ.ಶ್ರೀ. ನಟರಾಜ

೨೦೧೩ ರ ಮೇ ಮಾಸದಲ್ಲಿ ಹ್ಯೂಸ್ಟನ್ ನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬರಲು ಶ್ರೀ. ಕೆ.ವಿ. ತಿರುಮಲೇಶ್ ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಾದಮೇಲೆ ಅವರ ಎರಡು ಕವಿತೆಗಳನ್ನು ನಾನು “ಕೆಂಡ ಸಂಪಿಗೆ” ಜಾಲತಾಣದಲ್ಲಿ ಓದಿದೆ. ಓದಿದೊಡನೆಯೇ ಅವು ನನಗೆ ಪ್ರಿಯವಾದವು, ಹಾಗಾಗಿ ಆ ಕವಿತೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಮೂಲ ಕವಿಯೊಂದಿಗೆ ಹಂಚಿಕೊಂಡೆ. ಅನುವಾದವನ್ನು ಅವರು ಮೆಚ್ಚಿಕೊಂಡರು, ಅಷ್ಟೇ ಅಲ್ಲ, ಮೂಲ ಕವಿತೆಗಳನ್ನೂ ಅನುವಾದಗಳನ್ನೂ ಕನ್ನಡ ಸಾಹಿತ್ಯ ರಂಗದ ಜಾಲತಾಣದಲ್ಲಿ ಪ್ರಕಟಿಸಲು ತಿರುಮಲೇಶರನ್ನು ನಾನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ನಮ್ಮ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ, ಇದೋ ಸ್ವೀಕರಿಸಿ.

 Posted by at 12:32 AM
Nov 252012
 

ಕೆ.ವಿ.ತಿರುಮಲೇಶ್

ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆ
ತತ್ವಜ್ಞಾನದ ಮೋಹದಲ್ಲಿ
ದೇಶ ತೊರೆದವರು ವಿಷ ಕುಡಿದವರು
ಅಮೃತದಂತೆ ಮದ್ಯವನ್ನೂ
ವ್ಯಸನವಾಗಿಸಿಕೊಂಡವರು ಹಾಗೂ
ತಬ್ಬಿಕೊಂಡವರು
ಅಪ್ಸರಸಿಯರಂತೆ ಸೂಳೆಯರನ್ನೂ

ಏನೀ ಆಕರ್ಷಣೆ ಎಂದು ನಾನೂ
ನಡೆದು ನೋಡುತ್ತೇನೆ
ಒಂದಷ್ಟು ದೂರ
ಹರಡಿದ ಮಬ್ಬಲ್ಲದೆ ಇನ್ನೇನೂ
ಕಾಣಿಸುವುದಿಲ್ಲ
ನನಗೋ ಸಮೀಪದೃಷ್ಟಿ
ಯಾರೂ ಬಿಟ್ಟ ದಾರಿಗುರುತುಗಳಿಲ್ಲ
ಇದ್ದರೂ ಅವನ್ನು ಬಳಸುವಂತಿಲ್ಲ
ಇಷ್ಟು ಮಾತ್ರ ತಿಳಿದಿದ್ದೇನೆ:
ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂ
ದೇಶಭ್ರಷ್ಟ!

ಕಾವ್ಯವೂ ಅರ್ಧ ಹಾಗೆಯೇ
ಇನ್ನರ್ಧ ಹೀಗೆ
ಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾ
ರಾಜನ ಹಾಗೆ
ಎಲ್ಲರನ್ನೂ ಕೂಡಿಕೊಂಡೇ
ಕಾಡುಮೇಡುಗಳಲ್ಲಿ ಮತ್ತು
ವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀ
ಒಬ್ಬನೂ ಅಲ್ಲ

ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆ
ಅಪ್ಸರಸಿ ಸರಸಿ ಯವನೀ ರಮಣಿ ಕೂಡ
ಅವನಿಗಿಷ್ಟ

ಇತ್ತ ಈ ಫ಼ಿಲಾಸಫ಼ಿಗಾದರೆ ಮೈಮನಸ್ಸಿಗೆ ಗಾಯ
ಆದರೂ ಅದೆಂಥ ಮೋಹ ಎಂದಿಗೂ
ಪರವಶತೆ ಬಿಡದ ಮನದ ಮಾಯ.

 Posted by at 12:30 AM
Sep 272012
 

(ಮೂಲ: ಆಂಗ್ಲ ಭಾಷೆಯ “ಕಂಟ್ರಿ ರೋಡ್ಸ್ — ಟೇಕ್ ಮಿ ಹೋಂ” ಎಂಬ ಜನಪ್ರಿಯ ಅಮೆರಿಕನ್ ಜನಪದ ಗೀತೆ. ಸಾಹಿತ್ಯ ಮತ್ತು ಸಂಗೀತ: ಬಿಲ್ ಡ್ಯಾನಾಫ್, ಟ್ಯಾಫಿ ನಿವರ್ಟ್ ಮತ್ತು ಜಾನ್ ಡೆನ್ವರ್.)

ಕನ್ನಡಕ್ಕೆ ಭಾವಾನುವಾದ: ಡಾ. ಮೈ.ಶ್ರೀ. ನಟರಾಜ

ಸಗ್ಗಕ್ಕೆ ಸಾಟೀ, ಆಗುಂಬೆ ಘಾಟೀ
ಸಹ್ಯಾದ್ರಿ ಗಿರಿಯೇ, ತುಂಗೆಯ ಸಿರಿಯೇ
ಪ್ರಾಚೀನ ಜೀವನ, ತರುಗಳ ಯೌವನ
ಸುಯ್‌ಗುಟ್ಟುವ ಗಾಳಿಗೆ, ಮುದಿ-ಬೆಟ್ಟದ ರಿಂಗಣ ||೧||

ಹಳ್ಳಿಯ ಹಾದಿಯೇ, ಕರೆದೊಯ್ಯಿ ಊರಿಗೆ
ಆ ನನ್ನ ಪ್ರೀತಿಯ ತೌರೀಗೆ
ಕರುನಾಡ ಬೆಡಗೀನ, ಮಲೆನಾಡ ಮಡಿಲೀಗೆ
ಕರೆದೊಯ್ಯಿ ಬೇಗ, ಎಲೆ ಹಾದೀ ||ಮೇಳ||

ನನ್ನೆಲ್ಲ ನೆನಪಿನಲಿ, ಅವಳ ಹಸುರಿನ ಸೀರೆ
ಘಮ್ಮನೆ ಶ್ರೀಗಂಧ, ಜೋಗದ ಧಾರೆ
ಗೋಧೂಳಿ ಮುಸುಕಿದ ನೀಲಿ ಆಗಸದಲ್ಲಿ
ತಾರೆಗಳ ಎಣಿಸಲು ನಾ ಬರುತಿರುವೆ
ಏಲಕ್ಕಿ ಹಾಕಿದ ಗಸಗಸೆ ಪಾಯಸ ಕುಡಿದು
ಮತ್ತೇರಿ ಕಣ್ಣೀರ ಹನಿಸೂವೆ ||೨||

ಹಳ್ಳಿಯ ಹಾದಿಯೇ, ಕರೆದೊಯ್ಯಿ ಊರಿಗೆ
ಆ ನನ್ನ ಪ್ರೀತಿಯ ತೌರೀಗೆ
ಕರುನಾಡ ಬೆಡಗೀನ, ಮಲೆನಾಡ ಮಡಿಲೀಗೆ
ಕರೆದೊಯ್ಯಿ ಬೇಗ, ಎಲೆ ಹಾದೀ ||ಮೇಳ||

ಬಾನುಲಿಯನು ಕೇಳಿ, ಮುಂಜಾನೆ ಎದ್ದಾಗ
ಅಮ್ಮನ ದನಿಯಾಗಿ ಕಾಡುವುದು ನೆನಪು
ಜೋಡೆತ್ತಿನ ಬಂಡಿ ಪಯಣವ ನೆನೆದಾಗ
ಅನಿಸುವುದು ಇಲ್ಲೇಕೆ ಬಂದೆ ನಾನೆಂದು
ನೆನ್ನೆಯೇ ನನ್ನೂರ ತಲುಪಬೇಕಿತ್ತಲ್ಲೋ
ಇನ್ನೂ ಇಲ್ಲೇಕೆ ಕುಳಿತಿರುವೆ ||೩||

ಹಳ್ಳಿಯ ಹಾದಿಯೇ, ಕರೆದೊಯ್ಯಿ ಊರಿಗೆ
ಆ ನನ್ನ ಪ್ರೀತಿಯ ತೌರೀಗೆ
ಕರುನಾಡ ಬೆಡಗೀನ, ಮಲೆನಾಡ ಮಡಿಲೀಗೆ
ಕರೆದೊಯ್ಯಿ ಬೇಗ, ಎಲೆ ಹಾದೀ ||ಮೇಳ||

ಹಳ್ಳಿಯ ಹಾದಿಯೇ, ಕರೆದೊಯ್ಯಿ ಊರಿಗೆ
ಆ ನನ್ನ ಪ್ರೀತಿಯ ತೌರೀಗೆ
ಕರುನಾಡ ಬೆಡಗೀನ, ಮಲೆನಾಡ ಮಡಿಲೀಗೆ
ಕರೆದೊಯ್ಯಿ ಬೇಗ, ಎಲೆ ಹಾದೀ
ಕರೆದೊಯ್ಯಿ ಈಗಲೆ ಹಳ್ಳಿಯ ಹಾದಿಯೆ
ಕರೆದೊಯ್ಯಿ ಈಗಲೆ ಹಳ್ಳಿಯ ಹಾದಿಯೆ…||೪||

ಈ ಹಾಡಿನ ಯೂಟ್ಯೂಬ್ ಲಿಂಕ್ ಇಲ್ಲಿದೆ:- http://www.youtube.com/watch?v=MWzeInQaUk4

John Denver’s Country Roads Take Me Home
(Words and Music by Bill Danoff, Taffy Nivert and John Denver)

Almost heaven, West Virginia
Blue Ridge Mountains
Shenandoah River –
Life is old there
Older than the trees
Younger than the mountains
Growin like a breeze

Country Roads, take me home
To the place I belong
West Virginia, mountain momma
Take me home, country roads

All my memories gathered round her
Miners lady, stranger to blue water
Dark and dusty, painted on the sky
Misty taste of moonshine
Teardrops in my eye

Country Roads, take me home
To the place I belong
West Virginia, mountain momma
Take me home, country roads

I hear her voice
In the mornin hour she calls me
The radio reminds me of my home far away
And drivin down the road I get a feelin
That I should have been home yesterday, yesterday

Country Roads, take me home
To the place I belong
West Virginia, mountain momma
Take me home, country roads

Country Roads, take me home
To the place I belong

West Virginia, mountain momma
Take me home, country roads
Take me home, now country roads
Take me home, now country roads

 Posted by at 11:26 AM