Sep 192011
 

Chandrashekahara Kambaraಡಾ.ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ. ಇದು ಕನ್ನಡಕ್ಕೆ ಸಿಕ್ಕಿರುವ 8ನೇ ಜ್ಞಾನಪೀಠ ಕಿರೀಟಜ್ಞಾನಪೀಠವೆಂಬುದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಬೆಳಗಾವಿಯ ಘೋಡಗಿರಿಯಲ್ಲಿ ಜನಿಸಿದ ಡಾ. ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರರಾಗಿ ಅವರು ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ಜಾನಪದ ಸೊಗಡನ್ನು ಕನ್ನಡ ಸಾಹಿತ್ಯಕ್ಕೆ ತಂದವರು.

ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಕಾಡುಕುದುರೆ, ನಾಯಿಕಥೆ, ಜೋಕುಮಾರಸ್ವಾಮಿ, ಮಹಾಮಾಯಿ, ಹರಕೆಯ ಕುರಿ, ಋಷ್ಯಶೃಂಗ, ಬೆಪ್ಪುತಕ್ಕಡಿ ಭೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಕಂಬಾರರ ಪ್ರಮುಖ ಕೃತಿಗಳು. ಶಿಖರ ಸೂರ್ಯ ೨೬ ವರ್ಷಗಳ ನಂತರ ಇತ್ತೀಚೆಗೆ ಹೊರಬಂದ ಕಾದಂಬರಿ. ಈ ಕೃತಿಗೆ ಠ್ಯಾಗೋರ್ ಪ್ರಶಸ್ತಿ ದೊರೆತಿದೆ. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಅವರ ‘ಸಿರಿಸಂಪಿಗೆ’ ನಾಟಕಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಚಂದ್ರಶೇಖರ ಕಂಬಾರರಿಗೆ ಕನ್ನಡ ಸಾಹಿತ್ಯ ರಂಗದ ಹಾರ್ದಿಕ ಅಭಿನಂದನೆಗಳು!

 Posted by at 2:32 PM