Aug 022010
 

ಕಣ್ಮರೆಯಾದ ಒಬ್ಬ ಅಚ್ಚ ಕನ್ನಡಿಗ ಎಸ್.ಕೆ. ಹರಿಹರೇಶ್ವರ

ನಮ್ಮ ಮಾನ್ಯ ಗೆಳೆಯರಾದ ಶ್ರೀ ಎಸ್.ಕೆ. ಹರಿಹರೇಶ್ವರರು ಕಳೆದ ಜುಲೈ ೨೩ರಂದು ಮೈಸೂರಿನಲ್ಲಿ  ತೀರಿಹೋದ ಸುದ್ದಿ ಅವರ ‘ಅಮೆರಿಕನ್ನಡ’ ಬಂಧುಗಳೆಲ್ಲರಿಗೂ ಅಪಾರವಾದ ವ್ಯಥೆ ಉಂಟುಮಾಡಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿಯೇ  ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ರಂಗದ ಸದಸ್ಯರೆಲ್ಲರ ಪರವಾಗಿ ಶ್ರೀ ಹರಿಹರೇಶ್ವರರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರಿಗೂ, ಅವರ ಮಕ್ಕಳಿಗೂ, ಆಪ್ತ ಬಂಧುಗಳಿಗೂ ನಮ್ಮ ಸಂತಾಪವನ್ನು ಈ ಮೂಲಕ ತಿಳಿಸಬಯಸುತ್ತೇನೆ.೧೯೭೦, ೮೦ರ ದಶಕಗಳಲ್ಲಿ ಇಲ್ಲಿ ಬಂದು ನೆಲಸಿದ ಬಹು ಮಂದಿ ಕನ್ನಡಿಗರಿಗೆ ಹರಿಹರೇಶ್ವರರ ಪರಿಚಯ ಇದ್ದೇ ಇರುತ್ತದೆ. ಹರಿಹರೇಶ್ವರರು ಈ ನೆಲದಲ್ಲಿ ಕನ್ನಡಕ್ಕಾಗಿ ಮಾಡಿದ ಕೆಲಸಗಳು ಹಲವಾರು. ಅವರು ಮೊದಲು ಈ ದೇಶಕ್ಕೆ ಬಂದು ನೆಲಸಿದಾಗ ಪೆನ್ಸಿಲ್ವೇನಿಯ ಮತ್ತು ನ್ಯೂ ಜೆರ್ಸಿ ಪ್ರದೇಶದಲ್ಲಿದ್ದರು. ಆ ಸಮಯದಲ್ಲಿ ಇಲ್ಲಿನ ತ್ರಿವೇಣಿ ಕನ್ನಡ ಸಂಘದ ಅಧ್ಯಕ್ಷರಾಗಿದ್ದು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದ್ದರು. ಒಂದು ಕನ್ನಡ ಸಮ್ಮೇಳನವನ್ನೂ ನಡೆಸಿದ್ದರು. ಆದರೆ ಇವೆಲ್ಲಕ್ಕಿಂತ ಬಹುಶಃ ಜನ ಅವರನ್ನು ನೆನೆಯುವುದು ಅವರು ಸ್ಥಾಪಿಸಿದ ‘ಅಮೆರಿಕನ್ನಡ’ ಪತ್ರಿಕೆಗಾಗಿ. ಅಮೆರಿಕದ ಕನ್ನಡ ಸಮಾಜದ ಬೆಳವಣಿಗೆಯಲ್ಲಿ ಇದೊಂದು ಮುಖ್ಯವಾದ ಮೈಲಿಗಲ್ಲು.

ಅಮೆರಿಕನ್ನಡ ಒಂದು ವಿಶಿಷ್ಟವಾದ ಕೊಡುಗೆ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಅದು ಮೊದಲು ಹೊರಬಂದಾಗ ಅದಕ್ಕೆ ಸಿಕ್ಕ ಸ್ವಾಗತ ಅಭೂತಪೂರ್ವವಾಗಿತ್ತು. ದೇಶಾದ್ಯಂತ ನಾನಾ ಕನ್ನಡ ಸಂಘಗಳಲ್ಲಿ ಅದರ ಲೋಕಾರ್ಪಣೆಯಾಯಿತು. ಹರಿಹರೇಶ್ವರ ದಂಪತಿಗಳು ಹತ್ತಾರು ಕಡೆ ಹೋಗಿ ಆ ಸಮಾರಂಭಗಳಲ್ಲಿ ಭಾಗವಹಿಸಿದರು.

ಈ ಪತ್ರಿಕೆಗೆ ಮುಂಚೆ ಇಲ್ಲಿ ಕನ್ನಡ ಪತ್ರಿಕೆಗಳು ಇರಲೇ ಇಲ್ಲ ಎನ್ನಲಾಗದು. ಅನೇಕ ಕನ್ನಡ ಸಂಘಗಳು ಪತ್ರಿಕೆಗಳನ್ನು ಹೊರತರುತ್ತಿದ್ದರು. ಇದು ಸ್ತುತ್ಯವಾದ ಕೆಲಸವೇ ಆದರೂ ಅವು ಆಯಾ ಸಂಘಗಳ ಸದಸ್ಯವರ್ಗಕ್ಕೆ ಮಾತ್ರ ಸೀಮಿತವಾಗಿದ್ದುದರಿಂದಲೂ, ಅವು  ಹೆಚ್ಚಾಗಿ ಕೈಬರಹದ ಪತ್ರಿಕೆಗಳಾಗಿರುತ್ತಿದ್ದುದರಿಂದಲೂ ಅವುಗಳ ವ್ಯಾಪ್ತಿ ತೀರ ಸಂಕುಚಿತವಾಗಿತ್ತಿತ್ತು.  ಅದಕ್ಕಿಂತ ಮುಖ್ಯವಾಗಿ ಅವು ಮುಖ್ಯವಾಗಿ ವಾರ್ತಾವಾಹಿನಿಗಳಾಗಿರುತ್ತಿದ್ದವು. ಅವಕ್ಕೆ ಯಾವ ಸಾಹಿತ್ಯಕ ಉದ್ದೇಶಗಳೂ ಇರುತ್ತಿರಲಿಲ್ಲ. ಅದರಿಂದಾಗಿ ಅವಕ್ಕೆ ಇಲ್ಲಿನ ಕನ್ನಡ ಜನತೆಯನ್ನು ಸಂಘಟಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅಮೆರಿಕನ್ನಡದ ದೃಷ್ಟಿ ಮೊದಲಿಂದಲೂ ಇಡೀ ಅಮೆರಿಕವನ್ನು ಒಳಗೊಂಡಿತ್ತು. ಅದರ ದೃಷ್ಟಿ ಸಾಂಸ್ಕೃತಿಕವೂ. ಸಾಹಿತ್ಯಾತ್ಮಕವೂ ಆಗಿತ್ತು. ಅದೊಂದು ಧೀರ ನಿಲುವು. ಸಣ್ಣಸಣ್ಣ ಕಕೂನುಗಳಿಂದ ಹೊರಬಂದು ಕನ್ನಡ ಇಡೀ ದೇಶವನ್ನು ನೋಡತೊಡಗಿತ್ತು. ಇದೊಂದು ಗಮನಾರ್ಹ ಸಂಗತಿ.

ಅಮೆರಿಕನ್ನಡ ಇಲ್ಲಿನ ನಮ್ಮ ಕನ್ನಡಿಗರನೇಕರಲ್ಲಿ ಹುದುಗಿದ್ದ ಸಾಹಿತ್ಯ ಸಾಮರ್ಥ್ಯವನ್ನು ಹೊರಗೆಳೆಯಿತು. ಅವರ ಬರವಣಿಗೆಗೆ ಒಂದು ಒಳ್ಳೆಯ ವೇದಿಕೆಯನ್ನು  ಕಲ್ಪಿಸಿತು. ದೇಶದ ನಾನಾಕಡೆಗಳಿಂದ ಸಾಹಿತ್ಯಾಸಕ್ತರು ಅದರಲ್ಲಿ ಬರೆಯತೊಡಗಿದರು. ಅಂದು ಅದರಲ್ಲಿ ಬರೆಯತೊಡಗಿದ ಅನೇಕರು ಇಂದು ಇಲ್ಲಿನ ಪ್ರಮುಖ ಲೇಖಕರಾಗಿದ್ದಾರೆ. ಈ ರೀತಿ ಲೇಖಕರನ್ನು ಬೆಳಸುವ ಕಾರ್ಯ ಸಾಮಾನ್ಯವಲ್ಲ.

ಅಮೆರಿಕನ್ನಡದ ಇನ್ನೊಂದು ವೈಶಿಷ್ಟ್ಯ ಅದು ಮೊದಲಿಂದಲೂ ಕಂಪ್ಯೂಟರ್ ಬಳಕೆಯ ಬಗ್ಗೆ ಗಮನವಿತ್ತದ್ದು.  ಅಂದರೆ ಎಲ್ಲ ಕೆಲಸವೂ ಗಣಕಯಂತ್ರದ ಸಹಾಯದಿಂದಲೇ ನಡೆಯುತ್ತಿತ್ತೆಂದಲ್ಲ. ಹಲವು ಪುಟಗಳನ್ನಾದರೂ ಕಂಪ್ಯೂಟರ್ ಸಹಾಯದಿಂದ ತಯಾರಿಸುತ್ತಿದ್ದರು.  ಆಗಿನ್ನೂ ಬರಹ, ನುಡಿ ಇತ್ಯಾದಿ ಸಾಫ಼್ಟ್‌ವೇರ್ ಸಿದ್ಧವಾಗಿರಲಿಲ್ಲ. ಕೆಲವು ಪುಟಗಳನ್ನು ಕರ್ನಾಟಕದಲ್ಲಿ ಮುದ್ರಿಸಿ ತರಿಸುತ್ತಿದ್ದರು. ಹೀಗೆ ಪುಟಗಳಲ್ಲಿ ಏಕರೂಪತೆ (uniformity)  ಇಲ್ಲದಿದ್ದರೂ, ಒಟ್ಟಿನಲ್ಲಿ ಪತ್ರಿಕೆ ಆಕರ್ಷಕವಾಗಿಯೇ ಇರುತ್ತಿತ್ತು.

ಅಮೆರಿಕನ್ನಡದಲ್ಲಿ ವಿಷಯವೈವಿಧ್ಯತೆಯಿತ್ತು. ಸಂಪಾದಕೀಯ, ಸಾಹಿತ್ಯಕ, ವೈಚಾರಿಕ, ಹಾಸ್ಯ ಲೇಖನಗಳು, ಕವಿತೆಗಳು, ಪುಸ್ತಕ ವಿಮರ್ಶೆಗಳಿಂದ ಹಿಡಿದು ನಾಗಲಕ್ಷ್ಮಿಯವರು ಮಕ್ಕಳಿಗಾಗಿ ತಯಾರಿಸುತ್ತಿದ್ದ ಕನ್ನಡ ಪಾಠಗಳವರೆಗೂ ವಿಷಯದ ಹರವಿತ್ತು,  ಸಮೃದ್ಧಿಯಿತ್ತು. ಸಂಪಾದಕರ ಸಾಮರ್ಥ್ಯಕ್ಕೆ, ಅವರ ಸೃಜನಶೀಲತೆಗೆ, ಕಲ್ಪನಾಸಾಮರ್ಥ್ಯಕ್ಕೆ ಅಲ್ಲಿ ಏನೂ ಕೊರತೆಯಿರಲಿಲ್ಲ. ಅವರಿಗಿದ್ದ ಕೊರತೆ ಮುಖ್ಯವಾಗಿ ಆರ್ಥಿಕವಾದದ್ದು. ಪತ್ರಿಕೆ ಬೆಳೆಯುತ್ತಿದ್ದಂತೆ ಸಾಕಷ್ಟು ದ್ರವ್ಯಸಹಾಯ ಇಲ್ಲದೇಹೋದದ್ದು. ಆ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸದೇಹೋದದ್ದು ವಿಷಾದಕರ. ಮೊದಮೊದಲು ಲೇಖಕರಿಗೆ ಒಂದು ಸಣ್ಣ ಗೌರವಧನವನ್ನು ಸಹ ಕೊಡುತ್ತಿದ್ದರು. (ಇದು ತುಂಬ professional  ಆದ ಪದ್ಧತಿ. ಕರ್ನಾಟಕದಲ್ಲೇ ಎಷ್ಟೋ ಘನ ಪತ್ರಿಕೆಗಳು ಇದನ್ನು ಆಚರಿಸುವುದಿಲ್ಲ.) ಅಥವ ಅದಕ್ಕೆ ಬದಲು ಕರ್ನಾಟಕದಿಂದ ತರಿಸಿದ ಪುಸ್ತಕಗಳನ್ನು ಕಳಿಸುತ್ತಿದ್ದರು. (ಇಂಥ ಒಂದು ಸಂದರ್ಭದಲ್ಲಿ ಅವರು ನನಗೆ ಕಳಿಸಿದ ಕನ್ನಡ ರತ್ನಕೋಶ (ಹಾ.ಮಾ. ನಾಯಕರು ಸಂಪಾದಿಸಿದ ಕನ್ನಡ-ಕನ್ನಡ ನಿಘಂಟು) ಈಗಲೂ ನನ್ನ ಬಳಿ ಇದೆ. ಅದನ್ನು ತೆರೆದಾಗೆಲ್ಲ ಹರಿಹರೇಶ್ವರರನ್ನು ನೆನೆಯುತ್ತೇನೆ.) ಅಮೆರಿಕನ್ನಡದ ನಿಲುಗಡೆಗೆ ಬಹುಶಃ ಜನಸಹಾಯವೂ ಅವರಿಗೆ ಸಾಹಷ್ಟು ಸಿಕ್ಕದೇಹೋಯಿತು ಎನ್ನಿಸುತ್ತದೆ. ಅವರು ಕೈಗೆತ್ತಿಕೊಂಡಿದ್ದ ಕೆಲಸಕ್ಕೆ  ತುಂಬಾ ಶ್ರದ್ಧೆ ಬೇಕು, ಸಹನೆ, ನಿಷ್ಠೆ, ಪರಿಶ್ರಮ ಬೇಕು. ಅವು ಸುಲಭವಾಗಿ ಸಿಕ್ಕುವ ವಸ್ತುಗಳಲ್ಲ. ಸುಮಾರು ಐದಾರು ವರ್ಷ ನಡೆದ ಆ ಪತ್ರಿಕೆಯನ್ನು ಅವರು ಈ ಎಲ್ಲ ಕಾರಣಗಳಿಂದಾಗಿ ನಿಲ್ಲಿಸಬೇಕಾಯಿತು. ಪತ್ರಿಕೆ ಇಂದು ನಮ್ಮ ಕಣ್ಣೆದುರಿಗಿಲ್ಲ, ನಿಜ, ಆದರೆ ಅದರ ನೆನಪು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವುದು ಖಂಡಿತ.

ಈ ಎಲ್ಲ ಕೆಲಸದಲ್ಲೂ ಅವರಿಗೆ ಸಹವರ್ತಿನಿಯಾಗಿ ಅಷ್ಟೇ ಶ್ರದ್ಧೆಯಿಂದ ದುಡಿದವರು ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರು. ಅವರಿಬ್ಬರನ್ನೂ ಕಂಡಾಗ ಅವರ ಮದುವೆಯಲ್ಲಿ ಸಪ್ತಪದಿ ನಡೆದಾಗ ‘ಈ ಮುಂದಿನ ಹೆಜ್ಜೆಯನ್ನು ನಾವು ಕನ್ನಡಕ್ಕಾಗಿ ಇಡೋಣ’ ಎಂದು ಹೇಳಿದ್ದರೇನೋ ಅನ್ನಿಸುತ್ತದೆ! ಡಾಕ್ಟರು, ಇಂಜಿನಿಯರು, ಅಥವಾ ಬ್ಯಾಂಕಿನ (ಈಗ ಈಟಿ/ಬೀಟಿ) ಕೆಲಸ ಇರುವವಳನ್ನೇ ಮದುವೆಯಾಗಬೇಕು ಎನ್ನುವ ಧೋರಣೆಯಿರುವ ಸಮಾಜದಲ್ಲಿ ಹರಿಹರೇಶ್ವರ ಕನ್ನಡ ಎಂ.ಎ. ಮಾಡಿದವಳನ್ನೇ ಮದುವೆಯಾಗುವ ಮನಸ್ಸುಮಾಡಿದ್ದರಂತೆ! ಅವರ ಮನಸ್ಸಿಗೆ, ಮನೋಧರ್ಮಕ್ಕೆ ತಕ್ಕವರೇ ದೊರಕಿದರು. ಅದು ಅವರ ಸುಕೃತ. ಇಲ್ಲಿ ನಾನೊಂದು ಸ್ವಂತ ವಿಷಯ ಹೇಳಿಕೊಳ್ಳೋಣವೆನಿಸುತ್ತದೆ, ತಪ್ಪು ತಿಳಿಯಬಾರದು. ನಾನೊಂದು ಲೇಖನ ಬರೆದು ಅಮೆರಿಕನ್ನಡಕ್ಕೆ ಕಳಿಸಿದ್ದೆ. ಅದನ್ನು ಓದಿ ಆ ದಂಪತಿಗಳಿಗೆ ಎಷ್ಟು ಸಂತೋಷವಾಗಿತ್ತೆಂದರೆ ಆ ದಿನ ಅವರು ಪಾಯಸದ ಅಡಿಗೆ ಮಾಡಿ ಉಂಡರಂತೆ. ಇದನ್ನು ನಾಗಲಕ್ಷ್ಮಿಯವರೇ ನನಗೆ ಹೇಳಿದ್ದು. ಜೊತೆಯ ಲೇಖಕನೊಬ್ಬನಿಗೆ ಮತ್ತೊಬ್ಬ ಕೊಡಬಹುದಾದ ಒಂದು ದೊಡ್ಡ ಸಂಭ್ರಮದ ಉಡುಗೊರೆ ಅದು. ಅದನ್ನು ಎಂದಿಗೂ ವಿಶ್ವಾಸದಿಂದ ನೆನೆಯುತ್ತೇನೆ.

ಹರಿಹರೇಶ್ವರ ಇಲ್ಲಿ ಬರುವವರೆಗೂ ಇಲ್ಲಿ ಕನ್ನಡ ಕೆಲಸ ಏನೂ ನಡೆಯುತ್ತಿರಲಿಲ್ಲ ಅಂದುಕೊಳ್ಳಬಾರದು ಎಂದು ಈ ಮೊದಲೇ ಸೂಚಿಸಿದ್ದೆ. ಅವರು ಬಂದಮೇಲೂ ಸಹ ಅನೇಕರು ಆ ಕೆಲಸ ಮಾಡುತ್ತಿದ್ದರು. ಆದರೆ ಹರಿಹರೇಶ್ವರರ ವೈಶಿಷ್ಟ್ಯವೆಂದರೆ ಅವರ ಕೆಲಸದಲ್ಲಿ ಕಾಣುತ್ತಿದ್ದ ಅಪರಿಮಿತ ಉತ್ಸಾಹ, ಅದಕ್ಕಿಂತ ಹೆಚ್ಚಾಗಿ ತೀವ್ರತೆ, ‘ಇದಕ್ಕೆ ಯಾಕಿನ್ನು ತಡ’ ಎನ್ನುವ ಆತುರ; ಜನರನ್ನು ಆಹ್ವಾನಿಸಿ, ಬೇಡಿ, ಕಾಡಿ, ಹುರಿದುಂಬಿಸಿ, ತಳ್ಳಿ – ಎಲ್ಲ ರೀತಿಯಲ್ಲೂ ಅವರ ಮನಸ್ಸನ್ನು ಕನ್ನಡದ ಕಡೆಗೆ ತಿರುಗಿಸುತ್ತಿದ್ದ ರೀತಿ. ಇಗೋ,  ಕನ್ನಡ ನಮ್ಮ ಕಣ್ಣೆದುರಿಗಿದೆ, ಅದನ್ನು ನೋಡೋಣ ಬನ್ನಿ ಎನ್ನುವ ಅವರ ಧಾಟಿ. ಅವರು ವೃತ್ತಿಯಲ್ಲಿ ಇಂಜಿನಿಯರು. ದಿನದಲ್ಲಿ ಸುಮಾರು ಹತ್ತು-ಹನ್ನೊಂದು ಗಂಟೆ ಕಡ್ಡಾಯವಾಗಿ ಆ ವೃತ್ತಿಗೆ ಮೀಸಲಾಗಿಡಬೇಕಿತ್ತು. ಇನ್ನು ಉಳಿದ ಸಮಯದಲ್ಲಿ, ವಾರಾಂತ್ಯದಲ್ಲಿ (ಆಗಲೂ ಎಷ್ಟೋ ಸಲ ಆಫ಼ೀಸಿನ ಕರೆ ಬರುವುದುಂಟು) ಮಾತ್ರ ಮಾಡಲಾಗುತ್ತಿದ್ದ ಕೆಲಸ ಇದು. ಅಂಥ ಪರಿಸ್ಥಿತಿಯಲ್ಲಿ ಇಷ್ಟು ಕೆಲಸ ಅವರು ಸಾಧಿಸಿದ್ದು ಗಮನಾರ್ಹ. ಅವರ ತೀವ್ರತೆಗೆ ತಕ್ಕ ಆಸರೆ, ಪ್ರತಿಸ್ಪಂದನ ದೊರೆಯದಿದ್ದಾಗ ಅಥವಾ ನಿಧಾನವಾದಾಗ, ಅವರಿಗೆ ತಾಳ್ಮೆಗೆಡುತ್ತಿದ್ದುದೂ ಉಂಟು.

ಹರಿಹರೇಶ್ವರರು ತಮ್ಮ ವೃತ್ತಿಯನ್ನರಸಿ ಅಮೆರಿಕದ ಪೂರ್ವ, ಮಧ್ಯಮ, ಮತ್ತು ಪಶ್ಚಿಮ ಭಾಗಗಳಲ್ಲಿದ್ದವರು. ಹೋದೆಲ್ಲ ಕಡೆಯೂ ಅನೇಕ ಗೆಳೆಯರ ಸಂಪರ್ಕ, ಸ್ನೇಹ ಪ್ರೀತಿಗಳನ್ನು ಗಳಿಸಿಕೊಂಡವರು.   ಪತ್ನಿ ನಾಗಲಕ್ಷ್ಮಿಯವರ ಸೂಚನೆಯಂತೆ ಭಾರತಕ್ಕೆ – ಮೈಸೂರಿಗೆ – ತೆರಳಿದ ಹರಿಹರೇಶ್ವರ ಅಲ್ಲಿಯೂ ತಮ್ಮ ಕೆಲಸಗಳನ್ನು ಮುಂದುವರೆಸುತ್ತಲೇ ಇದ್ದರು. ಅನೇಕ ಯುವಜನರು ಅವರ ಮಾರ್ಗದರ್ಶನದಿಂದ ಲಾಭ ಪಡೆದಿದ್ದಾರೆ. ಹೊಸ ಲೇಖಕರ ಪುಸ್ತಕಗಳನ್ನು ಒಂದಲ್ಲ ಹತ್ತು ಪ್ರತಿ ಕೊಂಡು, ಅವನ್ನು ತಮಗೆ ಬೇಕಾದವರಿಗೆಲ್ಲ ಹಂಚಿ ಆ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಇಲ್ಲಿ ನಡೆಯುವ ಅಕ್ಕ ಸಮ್ಮೇಳನ ಮುಂತಾದ ವಿಶೇಷ ಕಾರ್ಯಕ್ರಮಗಳಲ್ಲಿ  ಕೆಲವು ವೇಳೆ ಪ್ರತ್ಯಕ್ಷವಾಗಿ, ಬಹು ವೇಳೆ ಪರೋಕ್ಷವಾಗಿ ಭಾಗವಹಿಸಿದ್ದಾರೆ.

ನಮ್ಮಲ್ಲಿ ಕನ್ನಡ ಪ್ರೇಮ, ಉತ್ಸಾಹ, ಪಾಂಡಿತ್ಯ, ಕೈಂಕರ್ಯ ಇವುಗಳ ಮಾತು ಬಂದಾಗ ಸಾಮಾನ್ಯವಾಗಿ ನೆನಪಿಗೆ ಬರುವವರು ಜಿ. ಪಿ. ರಾಜರತ್ನಂ. ಹರಿಹರೇಶ್ವರರೂ ಅದೇ ಅಚ್ಚಿನವರು. ಜನ ಅವರಿಗೆ ಸಲ್ಲಿಸುತ್ತಿರುವ ಗೌರವವನ್ನು  ಸಂಪೂರ್ಣವಾಗಿ ಅವರೇ ಗಳಿಸಿಕೊಂಡದ್ದು.   ಹರಿಹರೇಶ್ವರ ಇನ್ನೂ ಬಹು ಕಾಲ ನಮ್ಮೊಂದಿಗಿರಬಹುದಿತ್ತು.  ಆದರೆ ಮತ್ತೆ ಕನ್ನಡ ತಾಯ ಮಡಿಲಲ್ಲಿ ಮುಖವಿಟ್ಟು ಚಿರಶಾಂತಿ ಪಡೆಯುವ ಸೌಭಾಗ್ಯ ಅವರದಾಗಿತ್ತು. ಅದು ಅವರು ಪಡೆದುಕೊಂಡ ಧನ್ಯತೆಯೆಂದೇ ಅನ್ನಿಸುತ್ತದೆ.

ಎಚ್. ವೈ. ರಾಜಗೋಪಾಲ್
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ

 Posted by at 11:20 PM
Jul 302010
 

 ಶಿಕಾರಿಪುರ ಹರಿಹರೇಶ್ವರ

ಇಂದು ಮಧ್ಯಾಹ್ನ ಕಛೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದಾಗ ಗೆಳೆಯ ಜೋಶಿ ಕರೆದು ಕೆಟ್ಟ ಸುದ್ದಿಯನ್ನು ಮುಟ್ಟಿಸಿದರು. ಅದುವೆಕನ್ನಡದ ಶಾಮಸುಂದರ್ ಸಹ ಮಿಂಚೋಲೆ ಕಳಿಸಿದರು. ನಂಬಲು ಬಾರದ ಆದರೆ ಕಟು ಸತ್ಯವಾದ ಸುದ್ದಿ ಹೀಗಿತ್ತು: ಗುರುವಾರದ ರಾತ್ರಿ ಭೋಜನವನ್ನು ಮಡದಿಯೊಂದಿಗೆ ಮಾಡಿ ಕೈತೊಳೆದು ಒಂದೇ ಘಳಿಗೆ ಅಗಾಧವಾದ ಹೃದಯಾಘಾತಕ್ಕೆ ತುತ್ತಾಗಿ ಇದ್ದಕ್ಕಿದ್ದಹಾಗಿ ತಮ್ಮ ಇಹಜೀವನದ ಹಂಗನ್ನೆಲ್ಲ ತೊರೆದು ಮಡದಿ ಮಕ್ಕಳನ್ನೂ ಅಪಾರ ಬಂಧುಮಿತ್ರರನ್ನೂ ತೊರೆದು ನಡೆದೇ ಬಿಟ್ಟರು ನಮ್ಮ ಶಿಕಾರಿಪುರ ಹರಿಹರೇಶ್ವರ. ಅವರು ಇಷ್ಟು ಬೇಗ ನಮ್ಮನ್ನು ತ್ಯಜಿಸುತ್ತಾರೆಂದು ನಮಲ್ಲಿ ಯಾರಿಗೂ ಅನಿಸಿರಲಿಲ್ಲ. ಹರಿಯ ಬಗ್ಗೆ ಅಮೆರಿಕದಲ್ಲಿ ನೆಲಸಿರುವ ಕನ್ನಡಿಗರಿಗೆಲ್ಲ ತಿಳಿದೇ ಇದೆ, ಆದರೂ ಅವರನ್ನು ನೆನೆದು ಎರಡು ಸ್ನೇಹದ ಮಾತುಗಳನ್ನಾಡಿ ಶ್ರದ್ಧಾಂಜಲಿ ಅರ್ಪಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಕುಳಿತಿದ್ದೇನೆ. ಎಲ್ಲಿಂದ ಪ್ರಾರಂಭಿಸಬೇಕೋ ತಿಳಿಯುತ್ತಿಲ್ಲ.
ಮೊಟ್ಟ ಮೊದಲು ನಾನವರನ್ನು ಕಂಡಿದ್ದು ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ. (ಆಗ ಅವರು ಎಮ್. ಎಸ್. ರಾಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.) ತಮ್ಮ ಕೆಲವು ಶಿವಮೊಗ್ಗದ ಮಿತ್ರರನ್ನು ಭೇಟಿಯಾಗಲು ಆಗಾಗ್ಗೆ ಅವರು ನಮ್ಮ ವಿದ್ಯಾರ್ಥಿನಿಲಯಕ್ಕೆ ಭೇಟಿಕೊಡುತ್ತಿದ್ದುದುಂಟು. ಆದರೆ, ಆಗ ಅವರ ಪರಿಚಯ ನನಗಾಗಲಿಲ್ಲ. ನಂತರ ನಾನವರನ್ನು ಕಂಡಿದ್ದು ಮೊದಲನೆಯ ಮತ್ತು ಎರಡನೆಯ ಈಶಾನ್ಯ ಅಮೆರಿಕ ಕನ್ನಡ ಸಮ್ಮೇಳನದಲ್ಲಿ (ನ್ಯೂಯಾರ್ಕ್ ಕನ್ನಡ ಕೂಟ ಮತ್ತು ತ್ರಿವೇಣಿ) ಕಾರ್ಯಕ್ರಮಗಳಲ್ಲಿ. ಆ ಗಲಾಟೆಯಲ್ಲಿ ಹೆಚ್ಚು ಮಾತಾಡುವುದಕ್ಕಾಗಲಿಲ್ಲವಾದರೂ ಈತನೊಬ್ಬ ಕನ್ನಡದ ‘ಹುಚ್ಚ’ ಎಂಬುದಂತೂ ಖಾತರಿಯಾಯಿತು.
ಅದಾದಮೇಲೆ ನಾನು ಕಾವೇರಿ ಅಧ್ಯಕ್ಷನಾದೆ, ನಾನಾ ಕಾರಣಗಳಿಂದ ಅವರ ಪರಿಚಯ ಬೆಳೆಯಿತು, ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿಯಿದ್ದ ದಂಪತಿ –ನಾಗಲಕ್ಷ್ಮಿ-ಹರಿ ಇವರೊಂದಿಗೆ ಹರಟುವುದು ಸಂತಸದ ಚಟವಾಯಿತು.  ವೇಳೆಗೆ ನಾನು ಹಲವು ಕವನಗಳನ್ನೂ ನಾಟಕಗಳನ್ನೂ ಬರೆದಿದ್ದೆ ಮತ್ತು ಅವುಗಳನ್ನು ಇವರಿಬ್ಬರೊಂದಿಗೆ ಹಂಚಿಕೊಂಡಿದ್ದೆ. ಅವರು ಅವುಗಳನ್ನೋದಿ ಟೀಕಿಸಿ ವಿಮರ್ಶಿಸಿ ಫೋನಿನಲ್ಲಿ ತಮ್ಮ ಅನಿಸಿಕೆಗಳನ್ನು ಯಾವ ಮುಚ್ಚುಮರೆಯಿಲ್ಲದೇ ಹಂಚಿಕೊಳ್ಲಲು ಘಂಟೆಗಟ್ಟಲೆ ಮಾತಾಡುತ್ತಿದ್ದ ಆ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ರೀತಿಯ ಬೆಚ್ಚನೆಯ ಖುಷಿಗೆ ಕಾರಣವಾಗುತ್ತದೆ.<br>ನನ್ನ ಒಂದು ನಾಟಕ -”ಮೀನಿನ ಹೆಜ್ಜೆ”ಯನ್ನು ಅವರು ಎಷ್ಟು ಹಚ್ಚಿಕೊಂಡಿದ್ದರೆಂದರೆ, ಅದು ಪ್ರದರ್ಶನಗೊಂಡಾಗಲೆಲ್ಲ ಅವರಿಬ್ಬರೂ ಬಂದು ಮೊದಲ ಸಾಲಿನಲ್ಲಿ ಕುಳಿತು ನಮ್ಮ ನಟನೆ ನಿರ್ದೇಶನಗಳಬಗ್ಗೆ `ಪೋಸ್ಟ್-ಮಾರ್ಟಮ್’ ಮಾಡುತ್ತಿದ್ದರು. ಆ ನಾಟಕವನ್ನು ಮುಂದೆ “ಅಭಿವ್ಯಕ್ತಿ” ಪ್ರಕಾಶನದಲ್ಲಿ ಮುದ್ರಿಸಿ ಪ್ರಕಟಿಸಲು ಕಾರಣರಾದವರೂ ಅವರೇ. ಅಂತೂ ನನಗೇ ತಿಳಿಯದಂತೆ, ನಾನು ಅವರ ಸಾಹಿತ್ಯದ ಗುಂಪಿನ ಒಳವೃತ್ತದ ಸದಸ್ಯನಾಗಿಬಿಟ್ಟಿದ್ದೆ.
ಹೀಗಿರುತ್ತ, ಹಿಂದೆ ಯಾರೂ ಮಾಡಿರದಿದ್ದ ಒಂದು ಕೆಲಸಕ್ಕೆ ಅವರು ಕೈಹಾಕಿದರು. ವಿಶ್ವದ ಅತಿ ಶ್ರೀಮಂತದೇಶವಾದ ಅಮೆರಿಕಕ್ಕೂ ಬಡ ಭಾರತದ ಒಂದು ಪ್ರಾಂತ್ಯವಾದ ಕನ್ನಡನಾಡಿಗೂ ಎಂದೆಂದೂ ಬಿಡಿಸಲಾಗದ ಅಕ್ಷರ-ಬೆಸುಗೆಯ ಕೊಂಡಿಯೊಂದನ್ನು ತಯಾರಿಸಲು ಕುಲುಮೆಯನ್ನು ನಿರ್ಮಿಸಿ ಅದರಲ್ಲಿ ಎರಕಹುಯ್ಯುವ ಸಾಹಸದಲ್ಲಿ ತೊಡಗಿದರು.   ನ್ಯೂಯಾರ್ಕ್ ಕನ್ನಡ ಕೂಟದ ಕೈಬರಹದ ಪತ್ರಿಕೆಯಲ್ಲಿ ನಾನು ಬರೆದ “ಅಮೆರಿಕನ್ನಡ ಗಾದೆಗಳು” ಎಂಬ ಲೇಖನವನ್ನು ಬರೆದಾಗ ಯಾವೊಂದು ದೂರಾಲೋಚನೆಯೂ ಇಲ್ಲದೇ ನಾನು ಹೊಸೆದಿದ್ದ `ಅಮೆರಿಕನ್ನಡ’ ಎಂಬ ಪದಗುಚ್ಚವನ್ನು ಮೆಚ್ಚಿ ತಮ್ಮ ಕೈಕೂಸಾಗಿ ಎತ್ತಿಕೊಂಡು ಸಲಹಿದರು.
‘ಅಮೆರಿಕನ್ನಡ’ ಎಂಬ ಹೆಸರಿನಲ್ಲಿ ಒಂದು ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ನಾನು ಆವರೆಗೆ ಬರೆದಿದ್ದ ಕವನಗಳನ್ನೆಲ್ಲಾ ಸೇರಿಸಿ ಒಂದು ಕವನ ಸಂಗ್ರಹವನ್ನು (“ನಾನೂ ಅಮೆರಿಕನ್ ಆಗಿಬಿಟ್ಟೆ”) ಪ್ರಕಟಿಸುವುದರ ಮೂಲಕ ನನ್ನಂಥ ಸಾಹಿತ್ಯೇತರ ವಿದ್ಯಾರ್ಥಿಯನ್ನು ಕನ್ನಡ ಸಾಹಿತ್ಯದೆಡೆಗೆ `ತಳ್ಳಿ’ದರು! ಅದೇ ಸಮಯದಲ್ಲಿ “ಅಮೆರಿಕನ್ನಡ” ದ್ವೈಮಾಸಿಕ ಪತ್ರಿಕೆಯ ಜನನವೂ ಆಯಿತು.  ಮುಂದೆ ನಡೆದದ್ದು ಅಮೆರಿಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಅಧ್ಯಾಯ. ನನ್ನಂಥ ಅನೇಕರು, ಬರೆಯುವ ಆಸೆಯಿದ್ದವರು, ಶಕ್ತಿಯಿದ್ದವರು -ಇಲ್ಲದವರು, ಎಲ್ಲರ ಕೈಯಲ್ಲೂ ಹೇಳಿ ಬರೆಸಿ ಪ್ರಕಟಿಸಿದರು. ಅಮೆರಿಕದಲ್ಲಿ ಚದುರಿಹೋಗಿರುವ ಸಹಸ್ರಾರು ಕನ್ನಡ ಕುಟುಂಬಗಳಲ್ಲಿ ಕನ್ನಡದ ಓದು ಬರಹ ನಿಜವಾಗಿ ಪ್ರಾರಂಭವಾದದ್ದು ಆವಾಗಲೇ!
ಅವರಿಬ್ಬರ ಶ್ರಮ, ತ್ಯಾಗ ಮತ್ತು ನಿಸ್ವಾರ್ಥ ದುಡಿಮೆಯ ಫಲದಿಂದ ಇಂದು ಅಮೆರಿಕದಲ್ಲಿ ಹಲವಾರು ಕನ್ನಡ ಬರಹಗಾರು ಇದ್ದಾರೆ, ಆದರೆ, ಅವರು ಪ್ರಾಂಭಿಸಿದ ಕನ್ನಡ ಪತ್ರಿಕೆಯನ್ನು ಇಲ್ಲಿನ ಕನ್ನಡಿಗರು ಉಳಿಸಿಕೊಳ್ಳಲಿಲ್ಲ. ಪ್ರಾಯಶಃ, ಮಹಾಭಾರತದ ಅಭಿಮನ್ಯು, ಘಟೋತ್ಕಚ ಮುಂತಾದ ಪಾತ್ರಗಳಂತೆ ಆ ಪತ್ರಿಕೆ ತನ್ನ ಪಾತ್ರವನ್ನು ವಹಿಸಿ ಅಲ್ಪಾಯುವಾಗಿ ಕಣ್ಮರೆಯಾಯಿತು. ಹರಿ ಇತರರಿಗೆ ಪ್ರೋತ್ಸಾಹ ಕೊಡುವ ಗಲಾಟೆಯಲ್ಲಿ ತಮ್ಮ ಸಾಹಿತ್ಯಕೃಷಿಯನ್ನು ಮರೆತಿದ್ದರು, ಆದರೆ, ನಿವೃತ್ತರಾದಮೇಲೆ ತಮ್ಮ ವಿಶ್ರಾಂತಿ(?)ಜೀವನದಲ್ಲಿ ಮೈಸೂರಿನಲ್ಲಿ ಕುಳಿತು ಹಲವಾರು, ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ತಮಗೆ ಅತ್ಯಂತ ಸಮಾಧಾನ ಕೊಡುವ ಕನ್ನಡದ ಕೆಲಸ, ಬಡಬಗ್ಗರಿಗೆ ಸಹಾಯಕವಾಗುವ ಅನೇಕ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಡದಿಯೊಂದಿಗೆ ಒಂದಿಷ್ಟು ಖುಷಿಪಡುತ್ತಿರುವಾಗಲೇ ಜವರಾಯ ಅವರನ್ನು ಕಸಿದುಕೊಂಡಿದ್ದು ನಮ್ಮೆಲ್ಲರ ದುರ್ಭಾಗ್ಯ.
“ಸ್ನೇಹದಲ್ಲಿ ನಿಮ್ಮ” ಎಂದೇ ಕೊನೆಗೊಳ್ಳುವ ಮಿಂಚೋಲೆಗಳನ್ನು ಆಗಾಗ್ಗೆ ಕಳುಹಿಸುತ್ತಿದ್ದ ಆ ಸ್ನೇಹಮಯಿ ಇನ್ನಿಲ್ಲ. ಅವರ ಪ್ರತಿಯೊಂದು ಕೆಲಸದಲ್ಲೂ ಅವರಿಗೆ ಸಹಧರ್ಮಿಣಿ ಎಂಬ ಹೆಸರಿಗೆ ಅನ್ವರ್ಥನಾಮವಾಗಿರುವ ನಾಗಲಕ್ಷ್ಮಿ ಅವರಿಗೆ ಮತ್ತು ಅವರ ಪ್ರೀತಿಯ ಮಕ್ಕಳಾದ ನಂದಿನಿ ಮತ್ತು ಸುಮನರಿಗೆ ನಾವು ಏನು ತಾನೇ ಸಮಾಧಾನ ಹೇಳಲು ಸಾದ್ಯ? ದೇವರು ಶಕ್ತಿ ಮತ್ತು ಸ್ಥೈರ್ಯಗಳನ್ನು ಕೊಟ್ಟು ಕಾಪಾಡಲಿ ಎಂದು ನನ್ನ ಪರವಾಗಿ ಮತ್ತು ಸಮಸ್ತ ಅಮೆರಿಕನ್ನಡಿಗರ ಪರವಾಗಿ ಬೇಡಿಕೊಳ್ಳುತ್ತಾ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ಸ್ನೇಹದಲ್ಲಿ ನಿಮ್ಮ,
ಮೈ.ಶ್ರೀ. ನಟರಾಜ. ಮೇರಿಲ್ಯಾಂಡ್, ಅಮೆರಿಕ
ಕೃಪೆ : ದಟ್ಸ್ ಕನ್ನಡ.ಕಾಂ

ಚಿತ್ರ ಕೃಪೆ : www.ourkarnataka.com

 Posted by at 9:29 PM