Jul 042018
 

ಇದು ಕತೆಯಲ್ಲ, ಕವಿತೆಯೂ ಅಲ್ಲ,
ಪ್ರಬಂಧವೂ ಅಲ್ಲ, ಇದು ಕಗ್ಗ
ಸಗ್ಗವ ಹುಡುಕುತ ನುಗ್ಗುತ ಬರುವ
ಬಡವರ ಬಗ್ಗರ ಬವಣೆಯ ಕಗ್ಗ

ಉತ್ತರ ಅಮೆರಿಕ ಗಡ್ಡದ ಜೊತೆಗೆ
ದಕ್ಷಿಣ ಅಮೆರಿಕ ಜುಟ್ಟಿನ ಕೊಂಡಿ
ಇವೆರಡನು ಜಗ್ಗಿ ಕಟ್ಟುವ ಹಗ್ಗ
ಮಧ್ಯ ಅಮೆರಿಕದಿ ಜೀವವು ಅಗ್ಗ

ಬಡತನ ಸುರಿಯುವ ಗ್ವಾಟೆಮಾಲ
ಹಂಡರಬಂಡರ ಹಾಂಡೂರಸ್
ಎಲ್ಲಿಯು ಸಲ್ಲದ ಸಾಲ್ವಡೋರ್
ಕಂಡರೆ ಕರಗುವ ನಿಕರಾಗುವ!

ತಿನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ
ಮಾಡುವೆನೆಂದರೆ ಕೆಲಸವಿಲ್ಲ,
ಓದುವೆನೆಂದರೆ ಶಾಲೆಗಳಿಲ್ಲ
ಜೀವಕೆ ಇಲ್ಲಿ ಬೆಲೆಯೇ ಇಲ್ಲ

ಕೊಲುವರ ಭಯವು ಹಿರಿಯರಿಗಾದರೆ
ಕೆಡಿಪರ ಭಯವು ಮಕ್ಕಳಿಗೆ
ಆಗಲೆ ಗಂಡನ ಕೊಂದಿಹರಲ್ಲ
ಮಗಳನು ಪುಂಡರು ಕೆಡಿಸಿಹರಲ್ಲ

ದೀನರ ದಲಿತರ ರಕ್ಷಿಪರಿಲ್ಲ
ನಿರಾಶ್ರಿತರಿಗೆ ನಿದ್ರೆಯು ಇಲ್ಲ
ಅಸಹಾಯಕರಿಗೆ ಶಾಂತಿಯೆ ಇಲ್ಲ
ಬಿಟ್ಟೋಡದೆ ಬೇರೆ ಗತಿಯೇ ಇಲ್ಲ

ಕಾಲ್ನಡಿಗೆಯಲೋ ಬಸ್ ಪಯಣದಲೋ
ಸರಕನು ಸಾಗಿಪ ರೈಲುಗಳಲ್ಲೋ
ಹೊರಟಿರುವರು ದೂರದ ಪಯಣಕ್ಕೆ
ನೂರಾರು ಗಾವುದ ಯಾತನೆಗೆ

ಪುಂಡರ ಕಾಟವ ತಡೆಯಲಾರದೆ
ಆಶ್ರಯ ಬಯಸುತ ಹೊರಟಿಹರು
ಗಡಿಗಳ ದಾಟುತ ನಡೆದಿಹರು
ನಾರುವ ನದಿಗಳ ಈಜಿಹರು

ಕಳ್ಳರು ಕಾಕರು ಕುಡುಕರು ಕೊರಮರು
ಹೆಣ್ಗಳ ಕೆಣಕುವ ಕೆಟ್ಟ ಖದೀಮರು
ಎಲ್ಲರು ಜೊತೆಯಲೆ ಬಂದಿಹರು
ಸಗ್ಗದ ಗಡಿಯನು ತಲುಪಿಹರು

ಹೊಟ್ಟೆಯಲಿರುವ ಕಂದನ ಭಾರ
ಸೊಂಟವ ತಬ್ಬಿಹ ಹಸಿದ ಕಿಶೋರ
ತಪ್ಪಿಸಿ ಓಡುವ ಹರೆಯದ ಬಾಲೆ
ಮೋಸದಿ ಎರಗುವ ಕಾಮಿಯ ಶೂಲೆ

ಗಡಿಯಲಿ ಕಾದಿದೆ ತುರುಫ಼ನ ತಂಡ
ಜೊತೆಯಲ್ಲಿವು ನನ್ನಯ ಗಂಡ
ಮಕ್ಕಳ ಆಚೆಗೆ ಸಾಗಿಸಲೋಸುಗ
ತೆರಬೇಕೇನು ತಲೆಗಳ ದಂಡ?

ನೋಡದೊ ಕಂಡಿತು ಸಗ್ಗದ ಬಾಗಿಲು
ಬೇಲಿಯ ದಾಟಲು ಹರ್ಷದ ಹೊನಲು
ಸ್ವಾತಂತ್ರ್ಯ ದೇವತೆ ಇರುವಳು ಅಲ್ಲೇ
ಸಲಹುವಳೆಮ್ಮನು ನಾನದ ಬಲ್ಲೆ

ಆಕೆಯ ಕೈಯಲಿ ಉರಿಯುವ ಪಂಜು
ಮತ್ತೊಂದು ಕೈಯಲಿ ತಬ್ಬಿದ ಫಲಕ
ಫಲಕದಲೇನೋ ಸಂದೇಶವಂತೆ
ಓದಿನೋಡಿದರೆ ತಿಳಿಯುವುದಂತೆ

"ನಿಮ್ಮಲ್ಲಾರೋ ದಣಿದವರಿದ್ದರೆ
ಅವರನು ನಮಗೆ ತಂದು ಕೊಡಿ
ನಿಮ್ಮ ಬಡವರನು ನಮಗೆ ಬಿಡಿ
ಕಟ್ಟಿದ ಶ್ವಾಸವ ತೆರೆದು ಬಿಡಿ

ಮುದುಡಿ ಕುಳಿತವರ ಸೆಟೆದು ನಿಲ್ಲಿಸಿ
ಸ್ವತಂತ್ರ ಉಸಿರಿಗೆ ಗಾಳಿಯಾಡಿಸಿ
ಸಮೃದ್ಧ ಜೀವನ ಸಾರ್ಥಕ ಬದುಕಿಗೆ
ಕಾದಿಹರೆಲ್ಲರ ನಮಗೆ ಕೊಡಿ

ನಿಮ್ಮ ತೀರದಲಿ ಕೊಚ್ಚಿಹೋಗುತಿಹ
ಪರಿತ್ಯಕ್ತರನು ನಮಗೆ ಕೊಡಿ
ವಸತಿ ಕಾಣದೆ ವಿಲಗುಟ್ಟುತಿಹ
ಹುಟ್ಟು ತಿರುಕರನು ನಮಗೆ ಕೊಡಿ

ಚಕ್ರವಾತವು ತಿರುಚಿ ಎಸೆದಿಹ
ದಿಕ್ಕುಗಾಣದ ದೀನರ ದಲಿತರ
ದೇಶವಿಹೀನರ ಶೋಷಿತ ಜನಗಳ
ತಪ್ಪದೆ ಕೂಡಲೇ ಕಳಿಸಿ ಬಿಡಿ

ಇದೋ ತೆರೆಯುವೆನು ಚಿನ್ನದ ದ್ವಾರ
ಪಂಜಿನ ಬೆಳಕಿದೆ ಇಲ್ಲಿ ಅಪಾರ
ಬನ್ನಿರಿ ಬನ್ನಿರಿ ಪ್ರಿಯ ಬಾಂಧವರೆ
ನನ್ನೀ ಅಮೆರಿಕದಂಗಳಕೆ"

ಬನ್ನಿರಿ ಮಕ್ಕಳೆ ಬನ್ನಿರಿ ಬೇಗ
ಸ್ವಾತಂತ್ರ್ಯ ದೇವತೆ ಕರೆದಿಹಳು
ಸದ್ದು ಮಾಡದೆ ನಡೆಯಿರಿ ಈಗ
ಗಡಿಯನು ದಾಟುವ ಸಮಯವಿದು

ರಾತ್ರಿಯ ಕತ್ತಲು ಕಳೆಯುವ ಮುನ್ನ
ಬೇಲಿಯ ಮುಳ್ಳನು ಬದಿಗೊತ್ತರಿಸಿ
ಸುತ್ತಿದ ತಂತಿಯ ತುದಿ ಕತ್ತರಿಸಿ
ಉಪಾಯದಿಂದಲಿ ನುಸಿಯುವೆವು

ಬೇಗನೆ ನುಸಿಯಿರಿ ಎನ್ನುತ ದೂಡಲು
ಮಗಳು ನುಗ್ಗಿದಳು ತಮ್ಮನ ಎಳೆದಳು
ತಾಯಿಯು ತಲೆಯನು ತೂರುತ ತೆವಳುತ
ಆಯ ತಪ್ಪಿದಳು ಕುಸಿಯುತಲಿ

ತುಂಬು ಬಸುರಿಯು ಸೋತು ಬಳಲಿದಳು
ಏರುಸಿರಿನಲಿ ಹೆಣಗುತ ಅತ್ತಳು
ಅಯ್ಯೋ ಬಾಯಾರಿಕೆ ನೀರು ಕೊಡಿ
ಎನ್ನುತ ಮಕ್ಕಳ ಬೇಡಿದಳು

ಬಾಟಲಿಯಲ್ಲಿ ಹನಿಗಳು ಮಾತ್ರ
ತೆವಳಲು ಬಿಡದು ಹೊಟ್ಟೆಯ ಗಾತ್ರ
ನಡುಗುತ ನಡುಗುತ ನಲುಗಿದಳು
ಹೊಟ್ಟೆಯ ಮೇಲಕೆ ಮಾಡಿದಳು

ಈಗಲೆ ಬಂದಿತೆ ಹೆರಿಗೆಯ ನೋವು
ದಾಟುವ ಮೊದಲೇ ಬರುವುದೇ ಸಾವು
ಮಗುವಿದು ಹುಟ್ಟಲಿ ಅಮೆರಿಕದಲ್ಲಿ
ಬೆಳೆಯಲಿ ಸುಖದಲಿ ಪ್ರಜೆಯಾಗಲ್ಲಿ

ಬೆನ್ನಿನ ಬೇನೆಯ ತಾಳೆನೆ ಅಮ್ಮ
ಚೀತ್ಕಾರ ಮಾಡದೆ ಹೇಗಿರಲಮ್ಮ
ಕಾವಲುಗಾರಗೆ ಕೇಳಿಸಿಬಿಟ್ಟರೆ
ನಮ್ಮನು ಹಿಂದಕೆ ದೂಡುವನಮ್ಮ

ಮಕ್ಕಳಿಬ್ಬರು ಗಡಿಯ ದಾಟಿಹರು
ತಾಯಿಯ ಎಳೆಯಲು ಯತ್ನಿಸುತಿಹರು
ತಲೆಯು ಅಮೆರಿಕದಿ ದೇಹ ಮೆಕ್ಸಿಕೋ
ಸ್ವಾತಂತ್ರ್ಯ ದೇವಿಯೆ ಬೇಗ ಎತ್ತಿಕೋ

ಆಕೆ ಇರುವುದು ಸಾವಿರ ಮೈಲಿ
ಕೂಗಲಾದೀತೆ ಇವಳ ಕೈಯಲಿ
ಕೇಳೀತೆ ಕೂಗು ಅವಳ ಕಿವಿಗಳಿಗೆ
ತಾಳೀತೆ ಮಗು ಗರ್ಭದ ಒಳಗೆ?

ಅಗೋ ಬಂದನು ಕಾವಲುಗಾರ
ಗದರಿಸಿ ಬೈಯ್ದನು ಯಥಾಪ್ರಕಾರ
ಭುಜವನು ಹಿಡಿದು ಧರಧರ ಎಳೆದು
ನಲುಗಾಡಿಸಿದನು ದೇಹವ ಹಿಡಿದು

ಬಸುರಿಯ ಯಾತನೆ ನೋಡಿದನು
ಸುರಿಯುವ ರಕ್ತಕೆ ಬೆದರಿದನು
ನಡುಗುತ ತುಟಿಯನು ಕಚ್ಚಿದನು
ಆದ ಅನರ್ಥಕೆ ಬೆಚ್ಚಿದನು

ಅಯ್ಯೋ ಏತಕೆ ಎಳೆದೆನು ರಟ್ಟೆ
ತಂತಿಯ ಮುಳ್ಳದು ಸೀಳಿತು ಹೊಟ್ಟೆ
ಚಿತ್ರಹಿಂಸೆಯನು ಬಸುರಿಗೆ ಕೊಟ್ಟೆ
ಗರ್ಭದ ಚೀಲವು ಒಡೆಯಿತು ಕಟ್ಟೆ

ವೈದ್ಯನು ಇಲ್ಲದೆ ದಾದಿಯು ಇಲ್ಲದೆ
ಭೂಮಿಯ ಮಡಿಲಲಿ ಶಿಶು ಜನನ
ಗಡಿಯನು ಬಿಡಿಸುವ ರೇಖೆಯನಳಿಸಿತು
ಹರಿಯುವ ರಕ್ತದ ಸಂಚಲನ

ಕಲ್ಪನೆಗೆಟುಕದ ಶಸ್ತ್ರದ ಸೀಳಿಗೆ
ಚಿಮ್ಮುತ ಹುಟ್ಟಿದ ಹೊಸ ಜೀವ
ಅಮೆರಿಕ ದೇಶದ ಪ್ರಜೆಗಳ ಗುಂಪಿಗೆ
ಸೇರಲಿ ಹರಸೋ ಎಲೆ ದೇವ!

ರಕ್ತದಿ ತೊಯ್ಯುತ ಮಲಗಿರೆ ಮಾನಿನಿ
ಬೆವರುತ ಬೆದರುತ ನೋಡಿದನು
ಬೆತ್ತಲೆ ಶಿಶುವನು ಎತ್ತಿಕೊಂಡವನು
ಮೂವರ ಜೊತೆಯಲಿ ಓಡಿದನು

ನಿಗದಿಯಾಗಿರುವ ತಂಗುದಾಣದಲಿ
ನಡೆದನು ಮಕ್ಕಳ ಪಂಜರಕೆ
ತಂದೆತಾಯಿಗಳ ಬಿಡಿಸಿ ತಂದಿರುವ
ಮಕ್ಕಳ ಜೊತೆಯಲಿ ತಂಗಲಿಕೆ

ಸಾವಿರ ಸಾವಿರ ಮಕ್ಕಳ ನಡುವೆ
ಪುಟ್ಟ ಕಂದನನು ಮಲಗಿಸಿದ
ಕಾನೂನಿನಂತೆ ವರ್ತಿಸಿ ಅವನು
ಕೈಗಳ ತೊಳೆಯಲು ಧಾವಿಸಿದ

ಅತ್ತ ಬೇನೆಯಲು ನಕ್ಕಳು ತಾಯಿ
ಸ್ವಾತಂತ್ರ್ಯ ದೇವಿಯೆ ನೀನೇ ಕಾಯಿ
ಕನಸ ಕಾಣುತ್ತ ಕಣ್ಣ ಮುಚ್ಚಿದಳು
ಬೇರಾದ ಮಕ್ಕಳ ಕಾಣಲು ಆಯಿ

ನರಳುತ ಒರಳುತ ಕನಸಿನ ನಿದ್ದೆ
ಕಾಪ್ಟರ್ ಇಳಿಯಿತು ಪಟ ಪಟ ಸದ್ದೆ
ಹಾರುತ ಬಂದಿತು ರಕ್ಕಸ ಹದ್ದು
ಎಲ್ಲಿದೆ ನನ್ನಯ ನೋವಿಗೆ ಮದ್ದು?

ತೆಳ್ಳನೆ ಸುಂದರಿ ಇಳಿದು ಬಂದಳು
ಸ್ವಲ್ಪ ದೂರದಲಿ ಮುಂದೆ ನಿಂದಳು
ಇವಳೇ ಏನು ಸ್ವಾತಂತ್ರ್ಯ ದೇವತೆ?
ಸಾಂತ್ವನ ಹೇಳಲು ಬಂದಿಹಳೆ?

ಕೈಲಿ ಪಂಜಿಲ್ಲ, ಮುಖದಿ ಕಳೆಯಿಲ್ಲ
ಫಲಕವು ಇಲ್ಲ ಸಂದೇಶವು ಇಲ್ಲ
ಆಕೆ ನಗಲಿಲ್ಲ, ಕುಶಲ ಕೇಳಲಿಲ್ಲ
ಯೋಗಕ್ಷೇಮವನು ವಿಚಾರಿಸಲಿಲ್ಲ

ಬೆನ್ನ ತೋರುತ್ತ ಕ್ಷಣಕಾಲ ನಿಂದು
ರಾಜನ ಆಜ್ಞೆಯ ಸಾರಲು ಎಂದು
ಸಗ್ಗದ ರಾಣಿಯೆ ಇರಬಹುದೀಕೆ
ಸಂದೇಶ ಬೆನ್ನಲಿ ಬರೆದಿಹುದೇಕೆ?

ಮಗಳೇ ಓದಮ್ಮ ಓದು ಮಗಳೇ
ಇಲ್ಲದ ಮಗಳನು ಬೇಡಿದಳು
ಮಗಳ ದನಿಯಿಲ್ಲ, ಅವಳೆಲ್ಲೋ?
ಮಗನ ದನಿಯಿಲ್ಲ ಅವನೆಲ್ಲೋ?

ಅಯ್ಯೋ ಕೂಸು, ಹಾಲೂಡಿಸಬೇಕು
ಯಾರು ರಕ್ಷಿಸುವವರು ಎಳೆಗೂಸ?
ದೈತ್ಯನು ಬಂದನು ಕೂಗುತ ಹತ್ತಿರ
ಕರ್ಕಶ ಸ್ವರದಲಿ ಕೊಟ್ಟನು ಉತ್ತರ

ಓದಿ ಹೇಳಿದನು ಸಂದೇಶವನು
ವಿವರಣೆ ಕೊಡುತ್ತ ಟ್ವೀಟಿನಲಿ
"ಐ ರಿಯಲಿ ಡೋಂಟ್ ಕೇರ್, ಡು ಯು?
ಹಹ್ಹಹ್ಹ! ಐ ರಿಯಲಿ ಡೋಂಟ್”

ಅತ್ತ ನವಜಾತ ಶಿಶು ಅತ್ತೇ ಅತ್ತಿತು
ಉಸಿರುಗಟ್ಟಿತ್ತು, ನೀಲಿಗಟ್ಟಿತ್ತು
ಅಕ್ಕ ಆ ಪಕ್ಕ ತಮ್ಮ ಈ ಪಕ್ಕ
ಕೂಸು ಅಳುವನ್ನು ನಿಲ್ಲಿಸಿತು!

(ಮೈ.ಶ್ರೀ. ನಟರಾಜ ಅವರು ಬರೆದಿರುವ ನೀಳ್ಗವನ- ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ ಇದು ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವಂತಿದೆ. ಮಧ್ಯ ಅಮೆರಿಕದಿಂದ ಹೊರಟು ಗಡಿ ದಾಟಲು ಯತ್ನಿಸುವ ಒಂದು ಬಡ ಸಂಸಾರದ ಗರ್ಭಿಣಿ ಹೆಣ್ಣು ತನ್ನ ಎರಡು ಮಕ್ಕಳೊಡನೆ ಪಡುವ ಬವಣೆಯೇ ಇದರ ವಸ್ತು. )

 Posted by at 8:07 AM
Apr 032018
 

ಕನ್ನಡ ಸಾಹಿತ್ಯರಂಗದ ಸಂಸ್ಥಾಪಕರಲ್ಲೊಬ್ಬರಾದ ಮತ್ತು ಕಸಾರಂ ನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ ಡಾ. ಎಚ್. ವೈ. ರಾಜಗೋಪಾಲ್ ಅವರು ಈ ದಿನ ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿ ದಿವಂಗತರಾದರೆಂದು ತಿಳಿಸಲು ತೀವ್ರ ವಿಷಾದವಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ ಪ್ರೇರಕ ಶಕ್ತಿಯಾಗಿದ್ದ ರಾಜಗೋಪಾಲ್ ಅವರನ್ನು ಕಳೆದುಕೊಂಡ ನೋವು ನಮ್ಮದು. ಕನ್ನಡ ಸಾಹಿತ್ಯ ರಂಗವು ಈ ಮೂಲಕ ಎಚ್.ವೈ .ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

ಏಪ್ರಿಲ್ 2 ರ ಬೆಳಿಗ್ಗೆ University of Pennsylvania Main Hospital ನಲ್ಲಿ ನಿಧನರಾದ ರಾಜಗೋಪಾಲ್ ಅವರು ಪತ್ನಿ ವಿಮಲಾ ರಾಜಗೋಪಾಲ್, ಮಕ್ಕಳಾದ ಮಾಧವಿ ರಿಜ್ಜೊ, ರಾಮ್ ರಾಜಗೋಪಾಲ್, ಚೇತನಾ ಜೋಯ್ಸ್ ಮತ್ತು ಅಪಾರ ಕನ್ನಡ ಬಳಗವನ್ನು ಅಗಲಿದ್ದಾರೆ. ರಾಜಗೋಪಾಲ್ ಅವರ ಕುಟುಂಬಕ್ಕೆ ಸಾಂತ್ವನ, ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇವೆ! 🙏

 

 Posted by at 5:55 PM
Sep 222016
 

14424199_10209146043261119_838326681_o ಕನ್ನಡ ಸಾಹಿತ್ಯ ರಂಗದ ಎಂಟನೆಯ ವಸಂತ ಸಾಹಿತ್ಯೋತ್ಸವ

ಕೇಳಿ! ಕೇಳಿ!! ಅಮೆರಿಕದ ಕನ್ನಡ ಸಾಹಿತ್ಯೋತ್ಸಾಹಿಗಳಿಗೆ ಸಂತಸದ ಸುದ್ದಿ!!! ೨೦೦೩ ನೆಯ ಇಸವಿಯಿಂದ ಈವರೆಗೆ ಏಳು ವಸಂತ ಸಾಹಿತ್ಯೋತ್ಸವಗಳನ್ನು ಕ್ರಮಬದ್ಧವಾಗಿ ನಡೆಸಿ ಫಿಲಡೆಲ್ಫಿಯ, ಲಾಸ್ ಏಂಜಲೀಸ್, ಶಿಕಾಗೋ, ವಾಷಿಂಗ್‌ಟನ್ ಡಿ.ಸಿ. ಸ್ಯಾನ್ ಹೋಸೆ, ಹ್ಯೂಸ್ಟನ್ ಮತ್ತು ಸೇಂಟ್ ಲೂಯಿಸ್ ನಗರಗಳ ಸುತ್ತಮುತ್ತಲ ಕನ್ನಡಿಗರಿಗೆ ಶ್ರೀಮಂತ ಕನ್ನಡ ಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಮಾಡಿಕೊಟ್ಟು, ವಿವಿಧ ಮೂಲವಸ್ತುಗಳನ್ನೊಳಗೊಂಡ ಹಲವು ಹತ್ತು ಪುಸ್ತಕಗಳನ್ನು ಪ್ರಕಟಿಸಿ, ಕರ್ನಾಟಕದ ಹತ್ತಾರು ಹೆಸರಾಂತ ಲೇಖಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಅಮೆರಿಕದ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ರಂಗದ (ಕಸಾರಂ) ಎಂಟನೆಯ ವಸಂತ ಸಾಹಿತ್ಯೋತ್ಸವದ ಸ್ಥಳ ಮತ್ತು ದಿನಾಂಕಗಳು ಇದೀಗ ನಿಶ್ಚಯಗೊಂಡಿವೆ.

14446494_10209146047421223_1894579420_o

ನ್ಯೂ ಇಂಗ್ಲೆಂಡ್ ಕನ್ನಡ ಕೂಟ--"ಮಂದಾರ"ದ ಆಶ್ರಯದಲ್ಲಿ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಯಲಿದೆ. ಸೆಪ್ಟೆಂಬರ್ ೧೭ರಂದು ಮಂದಾರದ ಸದಸ್ಯರು ಆಚರಿಸಿದ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾದ ಡಾ. ಮೈ. ಶ್ರೀ. ನಟರಾಜರು ಭಾಗವಹಿಸಿ ತಮ್ಮ ಸಂಸ್ಥೆಯ ಮೂಲೋದ್ದೇಶಗಳು ಮತ್ತು ಅದರ ಹದಿಮೂರು ವರ್ಷಗಳ ಇತಿಹಾಸವನ್ನು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ನಂತರ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಸುವ ಬಗ್ಗೆ ಕಸಾರಂ ಮತ್ತು ಮಂದಾರ ಸಂಸ್ಥೆಗಳು ಪರಸ್ಪರ ಮಾಡಿಕೊಂಡ ಒಪ್ಪಂದಕ್ಕೆ ಮೈ.ಶ್ರೀ. ನಟರಾಜ ಮತ್ತು ಮಂದಾರದ ಅಧ್ಯಕ್ಷ ಡಾ. ಸುಧಾಕರ ರಾವ್ ಅವರುಗಳು ಸಭಿಕರ ಸಮ್ಮುಖದಲ್ಲಿ ಸಹಿ ಹಾಕುವುದರ ಮೂಲಕ ಎಂಟನೆಯ ಸಮ್ಮೇಳನದ ತಯಾರಿಗೆ ಔಪಚಾರಿಕ ಪ್ರಾರಂಭವನ್ನು ಮಾಡಿದ್ದಾರೆಂದು ತಿಳಿಸಲು ಕಸಾರಂ ಆಡಳಿತ ಮಂಡಲಿಗೆ ಅತ್ಯಂತ ಆನಂದವಾಗುತ್ತಿದೆ. ಬಾಸ್ಟನ್ ಪ್ರದೇಶದಲ್ಲಿ ೨೦೧೭ರ ಏಪ್ರಿಲ್ ಕೊನೆಯ ವಾರಾಂತ್ಯದಲ್ಲಿ (೨೯ ಮತ್ತು ೩೦ ನೆಯ ತಾರೀಖು) ನಡೆಯಲಿರುವ ಈ ಬಾರಿಯ ಸಮ್ಮೇಳನದ ಮೂಲ ವಸ್ತು (ಥೀಮ್) "ಭಕ್ತಿ ಸಾಹಿತ್ಯ." ಇದೇ ವಿಷಯವನ್ನು ಕುರಿತು ಪ್ರಮುಖ ಭಾಷಣ ಮಾಡಲು ಕರ್ನಾಟಕದಿಂದ ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಮುಖ್ಯ ಅತಿಥಿಗಳಗಿ ಬರಲು ದಯಮಾಡಿ ಒಪ್ಪಿರುವರೆಂದು ತಿಳಿಸಲು ಆಡಳಿತ ಮಂಡಲಿಗೆ ಹರ್ಷವಾಗುತ್ತಿದೆ.

ಅಮೆರಿಕದ ಕನ್ನಡ ಸಾಹಿತ್ಯಪ್ರಿಯರೇ, ದಯವಿಟ್ಟು ದಿನಾಂಕ ಮತ್ತು ಸಾಹಿತ್ಯದ ಹಬ್ಬ ನಡೆಯುವ ಊರು ಇವೆರಡನ್ನೂ ಗುರುತು ಹಾಕಿಕೊಳ್ಳಿ. ಈಗಾಗಲೇ. ಭಕ್ತಿಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಿಸುವ ಅಮೆರಿಕದ ಬರಹಗಾರರೇ ಬರೆದ ಲೇಖನಗಳ ಸಂಗ್ರಹದ ಪುಸ್ತಕವನ್ನು ಸಿದ್ಧಗೊಳಿಸಲು ಕಸಾರಂ ಸಂಪಾದಕ ಮಂಡಲಿ ಭರದಿಂದ ಕಾರ್ಯ ಪ್ರಾರಂಭಿಸಿದೆ. ಎಂದಿನಂತೆ, ಕವಿಗೋಷ್ಠಿ, ಪ್ರಬಂಧಗಳ ಮಂಡನೆ, ಪುಸ್ತಕಗಳ ಲೋಕಾರ್ಪಣೆ ಮತ್ತು ಲೇಖಕರ ಪರಿಚಯ, ಪುಸ್ತಕಗಳ ಮಳಿಗೆ, ಅತಿಥಿಗಳೊಂದಿಗೆ ಪ್ರಶ್ನೋತ್ತರಗಳು, ಮಂದಾರ ಕಲಾವಿದರ ಉತ್ತಮ ಮಟ್ಟದ ಮನರಂಜನೆ, ಜೊತೆಗೆ ರಸದೌತಣ, ಇವನ್ನೆಲ್ಲ ತಪ್ಪಿಸಿಕೊಳ್ಳಬೇಡಿ, ೨೦೧೭, ಏಪ್ರಿಲ್ ತಿಂಗಳಿನ ೨೯ ಮತ್ತು ೩೦ರ ದಿನಗಳನ್ನು ಕಾದಿರಿಸಿಕೊಳ್ಳಿ.

ಹ್ಞಾ! ಮತ್ತೊಂದು ಬಹುಮುಖ್ಯ ವಿಷಯ. ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ಮತ್ತಿತರ ತಾತ್ವಿಕ ವಿಷಯಗಳ ಬಗ್ಗೆ ನಿರರ್ಗಳವಾಗಿ ಅಧಿಕಾರವಾಣಿಯಿಂದ ಮಾತಾಡಬಲ್ಲ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರನ್ನು ನಿಮ್ಮೂರಿಗೆ ಕರೆಸಿಕೊಳ್ಳಬೇಕಾ? ಆಸಕ್ತಿಯಿದ್ದವರು ನಮ್ಮೊಡನೆ ತಕ್ಷಣ ಪ್ರಸ್ತಾಪಿಸಿದರೆ ಉಪಕಾರವಾದೀತು.

ಕಸಾರಂ ಆಡಳಿತ ಮಂಡಲಿ.

May 122015
 

ಕನ್ನಡ ಸಾಹಿತ್ಯ ರಂಗ ಭಾಷಣ ಮಾಲೆ

೧. ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ
- ಡಾ. ಪ್ರಭುಶಂಕರ (೨೦೦೪)

೨. ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ
- ಪ್ರೊ. ಬರಗೂರು ರಾಮಚಂದ್ರಪ್ಪ (೨೦೦೫)

೩. ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ
- ಪ್ರೊ. ಅ.ರಾ. ಮಿತ್ರ (೨೦೦೭)

೪. ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ
- ಡಾ. ವೀಣಾ ಶಾಂತೇಶ್ವರ (೨೦೦೯)

೫. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ
- ಡಾ. ಸುಮತೀಂದ್ರ ನಾಡಿಗ (೨೦೧೧)

೬. ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು
- ಪ್ರೊ. ಕೆ.ವಿ. ತಿರುಮಲೇಶ್ (೨೦೧೩)

೭. ಅನುವಾದ/ಆಗುಹೋಗುಗಳು
- ಪ್ರಧಾನ್ ಗುರುದತ್ತ(೨೦೧೫)

 Posted by at 10:53 AM