Feb 272017
 
ಭಾಷಾಬಾಂಧವರಿಗೆ ವಂದನೆ.
ಮತ್ತೊಮ್ಮೆ ನಿಮ್ಮನ್ನೆಲ್ಲ ಎದುರುಗೊಳ್ಳುವ ಸಂದರ್ಭ ಕೂಡಿಬಂದಿದೆ.
ಮತ್ತೊಂದು ವಸಂತ ಸಾಹಿತ್ಯೋತ್ಸವಕ್ಕೆ ನಮ್ಮ ಕನ್ನಡ ಸಾಹಿತ್ಯ ರಂಗ ಅಣಿಯಾಗಿದೆ. ಕನ್ನಡ ಸಾಹಿತ್ಯಕ್ಕೆಂದೇ ಮೀಸಲಾಗಿ ಅದನ್ನೇ ಗುರಿಯಾಗಿರಿಸಿಕೊಂಡು ತುಡಿಯುತ್ತಿರುವ ಸಮಾನಾಸಕ್ತರ ರಾಷ್ಟ್ರೀಯ ಒಕ್ಕೂಟ, ಅಮೆರಿಕದ ಉದ್ದಗಲದಲ್ಲಿ ಕನ್ನಡ ಸಾಹಿತ್ಯದ ಅಚ್ಚರುಚಿಯನ್ನು ಹರಡುವಲ್ಲಿ ಸಕ್ರಿಯವಾಗಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ರಂಗ. ತಮಗೆಲ್ಲರಿಗೂ ತಿಳಿದೇ ಇದೆ.
ಈಗ ನಮ್ಮ ಎಂಟನೇ ವಸಂತ ಸಾಹಿತ್ಯೋತ್ಸವ.
ಎಂದಿನಂತೆಯೇ ಈ ಬಾರಿಯೂ, ನಮ್ಮೆಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು, ಒಟ್ಟು ಸಾಹಿತ್ಯೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಸಹಭಾಗಿಯಾಗಲು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ.
ಈ ಬಾರಿ, ಮತ್ತೊಮ್ಮೆ ನಾವು ಗೆಳತಿಯರಿಬ್ಬರೂ ಕೂಡಿಕೊಂಡು ‘ಸಾಹಿತ್ಯ ಸಲ್ಲಾಪ’ವನ್ನು ನಡೆಸಿಕೊಡಲು ನಿಯೋಜಿತರಾಗಿದ್ದೇವೆ, ಅದನ್ನು ಅತ್ಯಂತ ಪ್ರೀತ್ಯಾಸಕ್ತಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆ ಈ ಕಾರ್ಯಕ್ರಮವನ್ನು ಸುಲಲಿತ ಸಲ್ಲಾಪವಾಗಿಸಲು ನಿಮ್ಮೆಲ್ಲರ ಒಳಗೊಳ್ಳುವಿಕೆಯನ್ನು ವಿನಮ್ರವಾಗಿ ಆಶಿಸುತ್ತಿದ್ದೇವೆ.
೧- ಅಮೆರಿಕನ್ನಡ ಬರಹಗಾರರು ಇದರಲ್ಲಿ ಭಾಗವಹಿಸಬಹುದು.
೨- ಗದ್ಯ ಅಥವಾ ಪದ್ಯ ರೂಪದ ತಮ್ಮ ಸ್ವಂತ ಕೃತಿಯನ್ನು ಇದರಲ್ಲಿ ತಾವು ಸ್ವತಹ ಹಾಜರಿದ್ದು ಪ್ರಸ್ತುತಪಡಿಸುವ ಅವಕಾಶವಿದು.
೩- ಗದ್ಯವಾದರೆ ಏಳು ನಿಮಿಷಗಳ ಪ್ರಸ್ತುತಿ ಹಾಗೂ ಪದ್ಯವಾದರೆ ಐದು ನಿಮಿಷಗಳ ಪ್ರಸ್ತುತಿ. ಈ ಸಮಯ ಮಿತಿಯೊಳಗೆ ತಮ್ಮ ಪ್ರಸ್ತುತಿಯನ್ನು ಕ್ಲಪ್ತವಾಗಿ ಮುಗಿಸಿಕೊಡಿ.
೪- ಒಬ್ಬರಿಗೆ ಒಂದೇ ಅವಕಾಶ.
೫- ತಮ್ಮ ಕೃತಿ ಮಾರ್ಚ್ ಕೊನೆಯಲ್ಲಿ, ತಾ. ಮೂವತ್ತೊಂದರೊಳಗಾಗಿ, ನಮಗೆ- ತ್ರಿವೇಣಿ ರಾವ್ (sritri@gmail.com) ಅಥವಾ ಜ್ಯೋತಿ ಮಹಾದೇವ್ (jyothimahadev@gmail.com) -ತಲುಪಿಸಿರಿ. ನಿರ್ವಹಣೆಗೆ ಅನುಕೂಲವಾಗುವುದು.
೬- ತಮ್ಮ ಪ್ರಸ್ತುತಿಯನ್ನು ಕಳುಹಿಸುವ ಮೊದಲೊಮ್ಮೆ ತಾವೇ ಓದಿಕೊಂಡು ನಿಗದಿತ ಸಮಯದ ಮಿತಿಯೊಳಗೆ ಇದೆಯೆಂದು ಖಚಿತಪಡಿಸಿಕೊಂಡರೆ ಒಳಿತು. ಸಮಯಾನುಸಂಧಾನ ಮೀರುವಂತಿದ್ದರೆ ನಿರಾಕರಣೆಯ ಸಾಧ್ಯತೆಯಿದೆ.
೭- ಕೃತಿ ಕನ್ನಡದಲ್ಲೇ ಇರಬೇಕು. ‘ಭಕ್ತಿ ಸಾಹಿತ್ಯ’ವೆನ್ನುವ ಈ ಬಾರಿಯ ಆಶಯ-ಚಿಂತನೆಗೆ ಹೊಂದುವಂತಿದ್ದರೆ ಉತ್ತಮ. ಆದರೆ ಅದು ಕಡ್ಡಾಯವಲ್ಲ. ವೈವಿಧ್ಯಮಯ ಬರಹಗಳಿಗೂ ಸ್ವಾಗತವಿದೆ.
ನಿಮ್ಮನ್ನು ಬಾಸ್ಟನ್ನಿನಲ್ಲಿ, ವಸಂತ ಸಾಹಿತ್ಯೋತ್ಸವದ ವೇದಿಕೆಯಲ್ಲಿ ಭೇಟಿಯಾಗುವ ಉತ್ಸಾಹದಲ್ಲಿ,
ಇಂತಿ,
ತ್ರಿವೇಣಿ, ಜ್ಯೋತಿ.
ಸಮ್ಮೇಳನದ ಸುದ್ದಿಗಳಿಗಾಗಿ ನಮ್ಮ ತಾಣಕ್ಕೆ ಭೇಟಿಕೊಡುತ್ತಿರಿ:
 Posted by at 3:58 PM
Feb 152017
 

ಆತ್ಮೀಯರೆ,

ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರಿಗೆಲ್ಲ ಚಿರಪರಿಚಿತ. ಕಸಾರಂ ಈಗಾಗಲೇ ಏಳು ಸಾಹಿತ್ಯ ಸಮ್ಮೇಳನಗಳನ್ನು ಅಮೆರಿಕಾದ ವಿವಿದೆಡೆಗಳಲ್ಲಿ ಯಶಸ್ವಿಯಾಗಿ ನಡೆಸಿ ಈ ವರ್ಷ ಎಂಟನೆಯ ಸಮ್ಮೇಳನವನ್ನು ನಡೆಸಲು ಸಿದ್ಧವಾಗಿದೆ..ಇದೇ ಏಪ್ರಿಲ್ ೨೯ ಮತ್ತು ೩೦, ೨೦೧೭ ರ೦ದು ನ್ಯೂ ಇಂಗ್ಲೆಂಡ್ ಕನ್ನಡ ಕೂಟ ‘ಮಂದಾರ‘ದ ಸಹಯೋಗ ಮತ್ತು ಆಶ್ರಯದಲ್ಲಿ ಬಾಸ್ಟನ್ ನಗರದ ಬಳಿ ಇರುವ ಫ್ರೇಮಿಂಘ್ಯಾಮ್ನಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡದ ವಿಶಿಷ್ಟ ಲೇಖಕ, ಚಿಂತಕ, ವಾಗ್ಮಿ, ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ಈ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ www.kannadasahityaranga.org ತಾಣವನ್ನು ನೋಡಿ.

ಈ ಸಮ್ಮೇಳನದಲ್ಲಿ ಪ್ರತಿಬಾರಿಯಂತೆ ಈ ಸಲವೂ ಅಮೆರಿಕದ ಕನ್ನಡ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ‘ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರಿಯರಿಗೆ ಪರಿಚಯ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ. ಲೇಖಕರು ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವೂ ಉಂಟು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಹೀಗಿವೆ:

– ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳೂ ಆಗಬಹುದು. ಪುಸ್ತಕವು ಸಾಹಿತ್ಯ, ವಿಜ್ಞಾನ, ಪರಿಸರ, ಆರೋಗ್ಯ, ಅನುವಾದ, ಮಕ್ಕಳ ಸಾಹಿತ್ಯ.. ಹೀಗೆ ಯಾವುದೇ ಪ್ರಕಾರಕ್ಕೂ ಸೇರಿದ್ದಾಗಿರಬಹುದು.
– ಪುಸ್ತಕಗಳು ೨೦೧೫ರ ಮೇ ತಿಂಗಳ ನಂತರ ಪ್ರಕಟಗೊಂಡಿದ್ದಾಗಿರಬೇಕು.
– ಈ ಮೊದಲು ಅಮೆರಿಕದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಪುಸ್ತಕಗಳನ್ನು ಮಾತ್ರ ಸಮ್ಮೇಳನದಲ್ಲಿ ಬಿಡುಗಡೆಗೆ ಮಾಡುವ ಅವಕಾಶ ಒದಗಿಸಲಾಗುವುದು.

– ಪುಸ್ತಕಗಳ ಬಿಡುಗಡೆ ಮತ್ತು ಪರಿಚಯವನ್ನು ಅಪೇಕ್ಷಿಸುವ ಲೇಖಕರು ಸಮ್ಮೇಳನದಲ್ಲಿ ಉಪಸ್ಥಿತರಾಗಿರಬೇಕು.
– ಪುಸ್ತಕ ಬಿಡುಗಡೆ/ಪರಿಚಯದ ಆಯ್ಕೆಯಲ್ಲಿ ಕಸಾರಂ ತೀರ್ಮಾನ ಅಂತಿಮ.
– ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ಮಾರ್ಚ್ 10 ರ ಒಳಗೆ ನಮ್ಮನ್ನು ಸಂಪರ್ಕಿಸಿ, ನಿಮ್ಮ ಕೃತಿಗಳನ್ನು ಕಳಿಸಬೇಕು.
– ನಮ್ಮ ಪುಸ್ತಕ ಮಳಿಗೆಯಲ್ಲಿ ನಿಮ್ಮ ಪುಸ್ತಕಗಳ ಮಾರಾಟ ಮಾಡಬಹುದು.
– ಸಂಪರ್ಕ ವಿಳಾಸ bhameera@gmail.com
vaishalimadhu@gmail.com

ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಪಾಲ್ಗೊಂಡು ಸಮ್ಮೇಳನದ ಸಂಭ್ರಮ ಹೆಚ್ಚಿಸಬೇಕೆಂದು ಕೋರುತ್ತಿದ್ದೇವೆ.
ಈ ಕುರಿತಂತೆ ಹೆಚ್ಚಿನ ವಿವರಗಳು ಬೇಕಿದ್ದರೆ ದಯವಿಟ್ಟು ನಮ್ಮನ್ನು ಸ೦ಪರ್ಕಿಸಿ.

ವಿಶ್ವಾಸಪೂರ್ವಕವಾಗಿ,
ಮೀರಾ ಪಿ. ಆರ್. ಮತ್ತು ವೈಶಾಲಿ ಹೆಗಡೆ Meera Rajagopal Vaishali Hegde

ಕನ್ನಡ ಸಾಹಿತ್ಯ ರಂಗ – ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡಕೂಟ ಬಾಸ್ಟನ್ ಸಹಯೋಗದೊಂದಿಗೆ
KANNADASAHITYARANGA.ORG
 Posted by at 3:54 PM