Jul 012013
 

 

 

 

 

 

 

ಪುತ್ಥಳಿ

ಎದ್ದೇಳು ಮಗಳೆ, ಸವಿಕಿತ್ತಳೆಯ ತಿರುಳೆ
ಕನಸ ಲೋಕವ ನೀ ಮರೆತು ಎದ್ದೇಳು
ಮುಂಜಾನೆಯ ರಂಗು ಅಂಗಳವ ಬೆಳಗಿಹುದು
ನಸುನಗುತ ಮೆಲ್ಲನೆ ಎದ್ದೇಳು|

ಬಿಸಿನೀರು ಕಾದಿಹುದು, ನೊರೆಹಾಲಲಿ ಜೇನಿಹುದು
ಮೆತ್ತನೆಯ ನೀ ಅಗಲಿ ಎದ್ದೇಳು
ಭುವಿಗಿಳಿದ ಪರಶಿವನ ಚಂದುಳ್ಳಿ ಸಿರಿಗೌರಿ
ಏಳಮ್ಮ ನೀ ಬೇಗ ಎದ್ದೇಳು|

ಬಿಂದಿಗೆ ತಾರಮ್ಮ, ಮೈಗೆಣ್ಣೆ ಸವರಮ್ಮ
ಹೆರಳಿಗೆ ಬಿಸಿನೀರ ಮೆಲ್ಲನೆ ಎರೆಯಮ್ಮ
ಹೊಸ ಗೀತೆ ಹಾಡುತ್ತ, ಹಸುಗೂಸ ಹರಸುತ್ತ
ಒಳಮನೆಗೆ ಮೈವರಸಿ ತಾರಮ್ಮ|

ಮೃದುಚರ್ಮದ ಮೈಯಿಗೆ, ಸಿರಿಗಂಧದ ಸೇವೆಯು
ಹೊಳೆಯೊ ಕಣ್ಣಿಗೆ ಸೆಳೆಯೊ ಕಾಡಿಗೆಯು
ಕೆಣಕೊ ಮುಂಗುರುಳೊಡನೆ ಸೆಣಸೊ ಕುಂಕುಮವು
ಸಡಗರದೆ ನಾನಿತ್ತೆ ಕೆಂದುಟಿಗೆ ಚುಂಬನವು|

ಕೊರಳಿಗೆ ಅಡ್ಡಿಗೆಯು, ಹೆರಳಿಗೆ ಮಲ್ಲಿಗೆಯು
ಕಾಲ್ಗೆಜ್ಜೆ ನಾದಕ್ಕೆ ಕುಣಿಯೊ ಹೊನ್ನ ಜುಮುಕಿಯು
ಪಚ್ಚೆ ರಂಗಿನ ಲಂಗಕ್ಕೆ ಒಪ್ಪೊ ಕೆಂಪಂಚಿನ ರೇಷ್ಮೆ ಜರಿಯು
ನಿನ್ಮೆಚ್ಚುತ್ತ ಮರೆತನಲ್ಲೆ ಮುಂದಾಡುವ ನುಡಿಯು|

ಕುಳಿ ಕೆನ್ನೆ ಚೆಲುವೆಗೆ ತುಪ್ಪದ ಆರತಿಯು
ಗುರುಹಿರಿಯರ ಹಾರೈಕೆ ಇರಲಿ ನಿತ್ಯ ಸಾರಥಿಯು
ಚಿಗುರೊ ಬುದ್ಧಿಗಿರಲವ್ವ ಶಾರದೆಯ ಆಶ್ರಯವು
ಬೆಳೆಯೊ ಮೈಯಿಗೆ ಆಯುರಾರೋಗ್ಯದ ಸುಖವು|

ನೀನಿಂದಾಡಿದ ಆಟ ನವಿಲ ನರ್ತನದಂತೆ
ನುಡಿದ ಮಾತುಗಳು ಅರಗಿಣಿಯ ಹರ್ಷದ ಸ್ವರವು
ನಿನ್ನಗಲಿರಲಾರದೆ ನಿಂತಲ್ಲಿಯೆ ನಾ ನಿಂತೆ
ನಿನ್ನೆದುರಲ್ಲಿ ಮರೆತೆ ನಾ ಚಿಂತೆಯ ಹೊರೆಯು|

ದೇವರ ವರದಿಂದ ಕಂಡೆ ನಾ ಈ ಸುದಿನ
ನೀನಿರುವ ಮನೆಯೆಂದೆಂದು ಆನಂದ ಸದನ
ಇರುಳ ಬೆಳಗೊ ನಿನ್ನ ಮುಖಕಾಂತಿಯ ಪ್ರಭೆಯಲ್ಲಿ
ಕಂಡೆನಾ ಮುಗ್ಧತೆಯ ಸವಿಪ್ರೇಮ ಕಿರಣ
ಆ ಪರಮಾತ್ಮನ ಚಿರಪುಣ್ಯ ವದನ
ಪ್ರಿಯ ಕನ್ನಡತಿಯ ಅಕ್ಕರೆಯ ಕವನ|

 Posted by at 2:30 PM

  One Response to “ಪುತ್ಥಳಿ – ಶ್ರೀವತ್ಸ ಕುಂದಲ್ಗುರ್ಕಿ”

  1. nice. NIMMA BLOG NOODI TUMBA SANTOOSHAVAYTU.