May 232013
 

 

“ಪ್ರಪಂಚದ ಸುಮಾರು 6000 ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು ಅವನತಿಯ ಅಂಚಿನಲ್ಲಿದೆ. ಇನ್ನೂ ಶೇ.40 ರಷ್ಟು ಭಾಷೆಗಳು ಸಧ್ಯದಲ್ಲೇ ಸ್ಥಿತಿಗೆ ಜಾರುವ ಸ್ಥಿತಿಯಲ್ಲಿದೆ. ಏಕೆಂದರೆ ಇವುಗಳನ್ನು ಬಳೆಸುವವರು ವಯಸ್ಕರು ಮಾತ್ರ ಆಗಿದ್ದು, ಅವುಗಳನ್ನಾಡುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ.” ಹೀಗೆ ಹೇಳಿದವರು ಪ್ರೊ. ತಿರುಮಲೇಶ್. ಸಂದರ್ಭ: ಹ್ಯೂಸ್ಟನ್ ಕನ್ನಡ ವೃಂದ ಹಾಗೂ ಇತರ ಟೆಕ್ಸಸ್ ಕನ್ನಡ ಕೂಟಗಳ ಸಹಾಯದೊಂದಿಗೆ ಕನ್ನಡ ಸಾಹಿತ್ಯ ರಂಗ (ಯು.ಎಸ್.ಎ) ಪ್ರಸ್ತುತ ಪಡಿಸಿದ “6ನೇ ವಸಂತ ಸಾಹಿತ್ಯೋತ್ಸವ”. ಮೇ 18, 19 ರಂದು ಹ್ಯೂಸ್ಟನ್ ನಗರದ ರೈಸ್ ವಿಶ್ವ ವಿದ್ಯಾಲಯದ ಹಮ್ಮನ್ ಹಾಲ್ನಲ್ಲಿ ನಡೆಯಿತು. ಇದು ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವವೂ ಆಗಿತ್ತು. ಹ್ಯೂಸ್ಟನ್ ನಗರದಲ್ಲಿರುವ ಭಾರತ ರಾಯಭಾರ ಕಚೇರಿಯ ದೂತವಾಸರಾದ ಶ್ರೀ. ಹರೀಶ್ ಪರ್ವತನೇನಿ ಅವರಿಂದ ಉದ್ಘಾಟಿಸಲ್ಪಟ್ಟ ಸಮಾವೇಶ ಸರಿಯಾದ ವೇಳೆಗೆ ಪ್ರಾರಂಭವಾಗಿ ಅಮೆರಿಕೆಯ ಕನ್ನಡ ಸಾಹಿತ್ಯಾಸಕ್ತರ ಉಲ್ಲಾಸಕ್ಕೆ ಮುದ ಕೊಟ್ಟಿತ್ತು. ಸಮಾವೇಶದ ಮುಖ್ಯ ಅತಿಥಿಯಾಗಿ ಹೈದರಾಬಾದಿನಿಂದ ಹೊರನಾಡ ಕನ್ನಡಿಗರಾಗಿ ಪ್ರೊ.ತಿರುಮಲೇಶ್, ಆಹ್ವಾನಿತ ಅತಿಥಿಗಳಾಗಿ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್ ನಲ್ಲಿ ಭಾಷಾ ವಿಭಾಗದ ಪ್ರೊಫೆಸರ್ ಆದ ಎಸ್ ಎನ್ ಶ್ರೀಧರ್ ಹಾಗೂ ಕರ್ನಾಟಕದಿಂದ ವಿಶೇಷ ಅತಿಥಿಗಳಾಗಿ ಪ್ರೊ. ತಂತ್ರಿ ಅವರು ಆಗಮಿಸಿದ್ದರು.

ಪ್ರಾರಂಭದಲ್ಲಿ ಅಮೆರಿಕ ಕನ್ನಡಿಗರು ತಮ್ಮ ಅಮೆರಿಕದಲ್ಲಿನ ಬದುಕಿನ ಬಗೆಗಿನ ಲೇಖನ ಸಂಗ್ರಹ ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಹಾಗೂ ಜ್ಯೋತಿ ಮಹದೇವ್ ಅವರ ಸಂಪಾದಕತ್ವದಲ್ಲಿ ಮೂಡಿಬಂದ “ಬೇರು ಸೂರು” ಎಂಬ ಗ್ರಂಥದ ಲೋಕಾರ್ಪಣೆಯ ನಂತರ ಮುಖ್ಯ ಅತಿಥಿಗಳ ಭಾಷಣದಲ್ಲಿ “ನಮ್ಮ ಭಾಷೆಯನ್ನು ನಾವು ಎತ್ತದೇ ಹೋದರೆ, ಎತ್ತುವರು ಯಾರು? ಎತ್ತುವುದಕ್ಕೆ ನಿಂತರೆ ತಡೆಯುವವರು ಯಾರು?” ಎಂಬ ಬಿ. ಎಂ. ಶ್ರೀಯವರ ನುಡಿಗಳೊಂದಿಗೆ ಪ್ರಾರಂಭಿಸಿ “ಕನ್ನಡದ ಮುನ್ನಡೆ: ಸವಾಲುಗಳು ಹಾಗೂ ಅವಕಾಶಗಳು” ಎಂಬ ವಷಯವಾಗಿ ಮಾತನಾಡಿದರು. “ಪ್ರಪಂಚದ ಅವನತಿಯ ಹಂತಕ್ಕೆ ತಳ್ಳುತ್ತಿರುವ ಬಾಷೆಗಳಲ್ಲಿ ಕನ್ನಡ ಒಂದಾಗದಿರಲಿ” ಎಂದು ಹರಸಿದರು. ಇದೇ ಸಂದರ್ಭದಲ್ಲಿ ದಿ. ರಾಜಾರಾವ್ ಅವರ ಅಪ್ರಕಟಿತ ಇಂಗ್ಲೀಷ್ ಕಾದಂಬರಿ ’Song of Woman” ಇದರ ಅನುವಾದ (ಅನುವಾದಕರು: ಡಾ|| ಶ್ರೀನಾಥ್) “ನಾರೀಗಿತ” ಸಹ ಲೋಕಾರ್ಪಣೆಯಾಯಿತು.

 

KSR_WEB-537

ಜ್ಯೋತಿ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಸಂದೇಶ ನೀಡುತ್ತಿರುವ ಕಾನ್ಸಲ್ ಜನರಲ್ ಶ್ರೀ ಪರ್ವತನೇನಿ ಹರೀಶ್

ಅಮೆರಿಕನ್ನಡ ಲೇಖಕರಿಂದ ಪ್ರಸ್ತುತವಾದ ಕಾರ್ಯಕ್ರಮ “ಸಾಹಿತ್ಯಗೋಷ್ಠಿ”. ಇದರಲ್ಲಿ ಕವಿತೆ, ಲೇಖನಗಳ ಪಠಣವಾಯಿತು. ವಿವಿಧ ಕವನಗಳು, ಹಾಸ್ಯ ಲೇಖನಗಳು ಸಭಿಕರನ್ನು ರಂಜಿಸಿತ್ತು. ಪ್ರಥಮ ಬಾರಿಗೆ ವಿವೇಕ್ ಶ್ಯಾನಭೋಗ್ ರವರ ’ನಿರ್ವಾಣ’ ಕಥೆಯನ್ನು ನಾಟಕ ರೂಪಾಂತರಿಸಿ ವಾಚನವನ್ನು ನಿರ್ದೇಶಿಸಿದವರು ಡಾ|| ಗುರುಪ್ರಸಾದ್ ಕಾಗಿನೆಲೆ ಅವರು. ವಲ್ಲೀಶ ಶಾಸ್ತ್ರಿ, ಮೋಹನ್ ರಾಂ ಹಾಗೂ ಮೀರಾ ರಾಜಗೋಪಾಲ್ ಅವರ ವಾಚನದೊಂದಿಗೆ ಮೂಡಿ ಬಂದ ಕಾರ್ಯಕ್ರಮ ಎಲ್ಲರಿಂದಲೂ ಪ್ರಶಂಸೆ ಪಡೆದಿತ್ತು. ದಶಮಾನೋತ್ವದ ಸಂದರ್ಭದಲ್ಲಿ ಸಾಹಿತ್ಯರಂಗದ ಹತ್ತುವರ್ಷಗಳ ಬೆಳವಣಿಗೆಯನ್ನು ವಲ್ಲೀಶ ಶಾಸ್ತ್ರಿಯವರು ರಾಜಗೋಪಾಲ್ ಅವರ ಸಹಕಾರದೊಂದಿಗೆ ನಿರ್ಮಿಸಿದ “ದಶಕದ ಪುಟಗಳು” ಎಂಬ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಸಂಜೆ ನಡೆದ ಮನರಂಜನೆ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. “Black Swan” ಇಂಗ್ಲೀಷ್ ಕಥೆಯನ್ನಾದರಿಸಿ ಮೋಹನ್ ರಾಂ ಭಾಷಾಂತರಿಸಿ ಡಾ|| ರಾಜಂ ರಾಮಮೂರ್ತಿಯವರ ನಿರ್ದೇಶನದಲ್ಲಿ ಮೂಡಿಬಂದ ನೃತ್ಯರೂಪಕ “ಕಾಳ ಹಂಸ” ಎಲ್ಲರ ಮನಸ್ಸು ಗೆದ್ದಿತ್ತು. ಯಕ್ಷಗಾನ ಹಾಗೂ ನೃತ್ಯ ಕಾರ್ಯಕ್ರಮಗಳು ಸಹ ಸಭಿಕರ ಮನರಂಜಿಸಿದವು. ಕನ್ನಡಗೀತೆಗಳಿಂದ ಪ್ರಾರಂಭವಾದ ಎರಡನೇ ದಿನದ ಕಾರ್ಯಕ್ರಮ ಕಳೆದ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಅಮೆರಿಕೆಯ ಕನ್ನಡದ ಹೆಮ್ಮೆಯ ಬರಹಗಾರರ ಕೃತಿಗಳ ಬಗ್ಗೆ ವಿಶ್ಲೇಷಿಸಿ ಲೇಖಕರನ್ನು ಗೌರವಿಸಲಾಯಿತು. ನಂತರ ನಡೆದ ಕಾರ್ಯಕ್ರಮ ಒಂದು ಅಪರೂಪದ ಕಾರ್ಯಕ್ರಮ. ಕನ್ನಡದಲ್ಲೂ ಅಲ್ಲದೇ ಇಂಗ್ಲೀಷ್ ನಲ್ಲೂ ಶ್ರೇಷ್ಟ ಲೇಖಕರೆಂದೇ ಪ್ರಸಿದ್ಧರಾಗಿದ್ದ ರಾಜಾರಾವ್ ಅವರ ಬಗ್ಗೆ ಸಾಹಿತ್ಯರಂಗ ಒಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ’ಭಾಷಾ ಪ್ರಪಂಚಕ್ಕೆ ರಾಜಾರಾವ್ ಅವರ ಕೊಡುಗೆ’ ಎನ್ನುವುದರ ಬಗ್ಗೆ ಮಾತನಾಡಿದ ಸಂಹಿತ ಪ್ರಸನ್ನ ಮೂರ್ತಿ ಅವರು ರಾಜರಾವ್ ಅವರ ಭಾಷಾ ಪ್ರಪಂಚಕ್ಕೆ ಅವರ ಕೊಡುಗೆ ಅಪಾರ ಎಂದರು. “ಒಂದು ವೇಳೆ Song of Woman ಏನಾದರೂ ರಾಜಾರಾವ್ ಅವರೇ ಕನ್ನಡದಲ್ಲಿ ಬರೆದಿದ್ದರೆ ಕನ್ನಡಕ್ಕೆ ಇನ್ನೊಂದು ಜ್ಞಾನ ಪೀಠ ಬರುವುದರಲ್ಲಿ ಸಂಶಯವೇ ಇರಲಿಲ್ಲ” ಎಂದವರು ಪ್ರೊ. ಎಸ್ ಎನ್ ಶ್ರೀಧರ್ ಅವರು. ರಾಜರಾವ್ ಅವರ ಕನ್ನಡ ಕಾದಂಬರಿ ’ಕಾಂತಾಪುರ” ದ ಬಗ್ಗೆ ಹೆಮ್ಮೆಯ ಮಾತನಾಡಿದರು. ಶ್ರೀಮತಿ. ಸೂಸನ್ ರಾಜಾರಾವ್ ಅವರೂ ಸಹ ವೇದಿಕೆಯ ಮೇಲೆ ಪ್ರಸ್ತುತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿರುವವರು:- ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರಾದ ಎಂ.ಎಸ್.ನಟರಾಜ್, ಶ್ರೀಪತಿ ತಂತ್ರಿ, ಎಚ್. ವೈ. ರಾಜಗೋಪಾಲ್, ಕೆ.ವಿ, ತಿರುಮಲೇಶ್, ಎಸ್. ಎನ್. ಶ್ರೀಧರ್ ಮತ್ತು ವತ್ಸ ಕುಮಾರ್

 

ಸಭಿಕರಲ್ಲಿ ಬಹಳ ಆಸಕ್ತಿ ಮೂಡಿಸಿದ ಕಾರ್ಯಕ್ರಮವೆಂದರೆ “ಸಂವಾದ” ಕಾರ್ಯಕ್ರಮ. ಹೊರದೇಶದ ಕನ್ನಡಿಗ ಎಸ್ ಎನ್ ಶ್ರೀಧರ್, ಹೊರನಾಡ ಕನ್ನಡಿಗರಾದ ತಿರುಮಲೇಶ್ ಹಾಗೂ ಒಳನಾಡ ಕನ್ನಡಿಗರಾದ ತಂತ್ರಿಯವರೊಡನೆ “ವಿದೇಶದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ” ಎಂಬ ವಿಷಯವಾಗಿ ಉಲ್ಲಾಸಕರವಾಗಿ ನಡೆಸಿಕೊಟ್ಟವರು ವಲ್ಲೀಶ ಶಾಸ್ತ್ರಿ. ಇಂದಿನ ಇಂಟರ್ ನೆಟ್ ಯುಗದಲ್ಲಿ ಸಾಹಿತ್ಯ ಬೆಳವಣಿಗೆ ಹಾಗೂ ಒಳನಾಡ ಕನ್ನಡಿಗರ ಸಾಹಿತ್ಯಕ್ಕೂ ಹೊರನಾಡ ಕನ್ನಡಿಗರ ಸಾಹಿತ್ಯಕ್ಕೂ ಇರುವ ವ್ಯತ್ಯಾಸದ ಬಗ್ಗೆ ಚರ್ಚಿಸಲಾಯಿತು. ನಂತರ ಮಾತನಾಡಿದ ಪ್ರೊ. ತಂತ್ರಿ ಅವರು ಪಶ್ಚಿಮ ಕರಾವಳಿಯ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡಿ ಕರಾವಳಿಯ ಬಾಷಾ ಬೆಳವಣಿಗೆಯ ಬಗ್ಗೆ ಹಾಗೂ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು, ದಲ್ಲಾಸ್ ಕನ್ನಡ ಕಲಿ ಮಕ್ಕಳಿಂದ ನಡೆದ “ಕೌಬಾಯ್ ಕೃಷ್ಣ” ಎಲ್ಲರ ಮನ ಸೆಳೆದಿತ್ತು. ಎರಡೂ ದಿನದ ಊಟದ ವ್ಯವಸ್ಥೆ ಮಾತ್ರ ನಿಷ್ಕಳಂಕವಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಹ್ಯೂಸ್ಟನ್ ಕನ್ನಡ ಸಂಘದ ಎಲ್ಲಾ ಸ್ವಯಂ ಸೇವಕರಿಗೆ ವೈಯಕ್ತಕವಾಗಿ ವೇದಿಕೆಯ ಮೇಲೆ ಕರೆತಂದು ವಂದಿಸಿದ ವತ್ಸಕುಮಾರ್, ಸಮಾವೇಶಕ್ಕೆ ಸಹಾಯ ಮಾಡಿದ ಎಲ್ಲರಿಗೂ ವಂದಿಸಿದವರು ಸಾಹಿತ್ಯರಂಗದ ಅಧ್ಯಕ್ಷರಾದ ನಟರಾಜ್ ಅವರು. ಇದರೊಂದಿಗೆ 2 ದಿನದ ಸಾಹಿತ್ಯ ಹಬ್ಬ ಮುಗಿದಿತ್ತು.

– ಮವಾಸು

 Posted by at 1:44 PM