May 062011
 

ಜಯಂತ್ ಕಾಯ್ಕಿಣಿ

 

 

 

ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು.  ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ ಅನುಭವಜನ್ಯ ವಿವರಗಳಲ್ಲಿ ಮೈದಾಳುತ್ತಲೇ,  ಅದರಾಚೆಗೂ ಚಿಂತನಶೀಲವಾಗಿ ರೆಕ್ಕೆ ಬಿಚ್ಚುವ ರೀತಿ ಭಾವೋದ್ದೀಪಕವಾಗಿದೆ.  ಹೊಸ ಆವರಣ, ಜೀವನ ಶೈಲಿಯ ವಿವರ, ಮಾಹಿತಿಗಳಷ್ಟೆ ಪ್ರಬಂಧವಾಗಲಾರವು. ವಿವರಗಳು ಅರಿವಿನೆಡೆಯ ಕಿಟಕಿಗಳೂ, ಬಾಗಿಲುಗಳೂ, ಕಾಲ್ದಾರಿಗಳೂ ಆದಾಗ ಮಾತ್ರ ಅದು ಸಾರ್ಥಕ ಸಲ್ಲಾಪ.

‘ಕೆಂಪು ಗಾಜಿನ ಹಣ್ಣುಗಳಂತೆ ಕಾಣುವ ಗಾರ್ನೆಟ್‌ಗಳು’, ‘ಸ್ಕೂಟರನ್ನು ಬೆದರಿಸುವ ಲಾರಿಯಂತೆ ಲೇಖಕಿಯನ್ನು ಕಂಗೆಡಿಸುವ ಖಾಲಿ ಹಾಳೆ’, ‘ಬಡಿಸಿದ್ದು ಆರಿ ಹೋಗ್ತಾ‌ಇದೆ, ಊಟಕ್ಕೆ ಬಾರೋ’ ಎಂದು ಕರೆಯುತ್ತಲೇ ಇರುವ ಅಮ್ಮನ ದನಿ, ‘ಮತಿಘಟ್ಟದ ಅಪರೂಪದ ಹತ್ತಿಯಷ್ಟೇ ಮೃದುವಾದ ನೆಹರೂರ ಕೈಕುಲುಕನ್ನು ನೆನೆಯುವ ಅಜ್ಜಯ್ಯ’, ‘ಐಸಿಯು’ನ ವೆಂಟಿಲೇಟರಿನಲ್ಲಿ ಹೋಗದ ಗಂಗೋದಕ’, ‘ಊರಿನ ಆಯಿಗೆಂದೇ ಕಾದಿರಿಸಿದ ಮಾಲ್‌ನ ಇಪ್ಪತ್ತು ಪೌಂಡ್ ಅಕ್ಕಿಯ ಸೋನಾಮಸೂರಿಯ ಖಾಲಿಚೀಲ’, ‘ಬಡವನ ಪಾಲಿನ ಕೇವಲ ಕಪ್ಪುಬಿಳಿಬಣ್ಣದ ಕಾಮನಬಿಲು’,  ‘ಎಂದೂ ಹಾದಿ ತಪ್ಪಿಸದ ಎದೆಯ ಜಿ.ಪಿ.ಎಸ್’,  ‘ಎಚ್‌ಒನ್‌ಎನ್‌ಒನ್’ಗಿಂತ ಭಯಾನಕವಾದ ‘ಎಚ್‌ಒನ್’(ವೀಸಾ) ಆತಂಕ, ‘ಕ್ಷಣವನ್ನು ಹಿಡಿಯುವುದನ್ನು ಹೇಳಿಕೊಡುವ ಟೀವಿ ಗುರು’, ‘ಕಳೆದುಕೊಂಡದ್ದರ ಕುರಿತ ದಿಢೀರ್ ವೈರಾಗ್ಯ’, ‘ಸೊನ್ನೆಯಿಂದ ಅನಂತದ ನಡುವಿನ ಶೂನ್ಯ ಸಂಪಾದನೆ’, ‘ನೆನಪಿನ ಚಿಲಿಪಿಲಿಗಳಿಂದ ನೇಯ್ದ ಖಾಲಿಗೂಡು’, ‘ಬರೆದು ಒರೆಸಿದಷ್ಟೂ ನುಣುಪಾಗುವ, ಅಂಚು ಮೊಂಡಾದ ಕಲ್ಲಿನ ಪಾಟಿ(ಸ್ಲೇಟ್)’ …. ಇಂಥ ಎಷ್ಟೊಂದು ಸಜೀವ ಸಂಗತಿಗಳು, ಒಟ್ಟಾಗಿ ಒಂದು ದರ್ಶನದೆಡೆಗೆ ಪ್ರಾಮಾಣಿಕವಾಗಿ ಚಲಿಸುವ ರೀತಿಯೇ ಈ ನಿಬಂಧಗಳ ನಿರಾಡಂಬರ ಸ್ಥೈರ್ಯವಾಗಿದೆ. ಇಂಥ ವಿವರಗಳು ಕೇವಲ ಕಲೆಹಾಕುವ ‘ಮಾಹಿತಿ’ಗಳಾಗದೆ, ಒಂದು ಮನೋಧರ್ಮವನ್ನು ರೂಪಿಸುವ ಸ್ಪಂದನವಾಗಿ ಬೆಳೆಯುವುದರಿಂದಲೇ, ಇಲ್ಲಿನ ಹೆಚ್ಚಿನ ಬರಹಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸುವಷ್ಟು ಸತ್ವಶಾಲಿಯಾಗಿವೆ.

ಜಯಂತ ಕಾಯ್ಕಿಣಿ

 Posted by at 10:39 AM
May 052011
 
ಪುಸ್ತಕ ಮಳಿಗೆಯಲ್ಲಿ ‘ …ಮಾತು.’

ಅಮೆರಿಕದಲ್ಲಿ ಬೇರೆಬೇರೆ ಬಗೆಯ ಕನ್ನಡಿಗರ ಸಮಾವೇಶಗಳು ನಡೆಯುವುದು ನಮಗೆಲ್ಲ ತಿಳಿದಿದೆ. ಅವುಗಳಲ್ಲೆಲ್ಲ ಗಂಭೀರ ಸಾಹಿತ್ಯಾಸಕ್ತರು ಸೇರಿ ರಚಿಸಿಕೊಂಡಿರುವ ಸಾಹಿತ್ಯರಂಗದ ಕಾರ್ಯಕ್ರಮಗಳು ಇದಕ್ಕಿಂತ ಕೊಂಚ ಭಿನ್ನವಾಗಿವೆ ಮತ್ತು ವಿಶಿಷ್ಟವಾಗಿವೆ. ಸಾಹಿತ್ಯ ರಂಗವು ಕನ್ನಡ ಸಾಹಿತ್ಯದ ಮೇಲೆ  ಚರ್ಚೆಯನ್ನು ಏರ್ಪಡಿಸುತ್ತದೆ; ಮತ್ತು ಅಮೆರಿಕದಲ್ಲಿರುವ ಕನ್ನಡ ಲೇಖಕರು ಬರೆದಿರುವ ಬರಹಗಳ ಸಂಕಲನವನ್ನು ಪ್ರಕಟಿಸುತ್ತದೆ. ಕರ್ನಾಟಕದಲ್ಲಿ ಉತ್ಸವಗಳು ಹೆಚ್ಚಾಗುತ್ತ ಸಂವಾದ ಮತ್ತು ಚರ್ಚೆಗಳು ಕಡಿಮೆಗೊಳ್ಳುತ್ತಿವೆ ಅನಿಸುತ್ತಿರುವ ಈ ಹೊತ್ತಲ್ಲಿ, ಸಾಹಿತ್ಯ ರಂಗದ ಈ ಉಪಕ್ರಮವು ಮಹತ್ವದ್ದಾಗಿ ತೋರುತ್ತಿದೆ. ಅಮೆರಿಕ ಕನ್ನಡಿಗರ ಬರೆಹಗಳ ಸಂಕಲನವಾಗಿರುವ ಪ್ರಸ್ತುತ ಕೃತಿಯು, ಈ ಬಾರಿಯ ವಸಂತೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ನಾನು ಮುನ್ನುಡಿಯನ್ನು ಬರೆಯಬೇಕೆಂದು ಸಾಹಿತ್ಯರಂಗದ ಅಧ್ಯಕ್ಷರಾದ ಶ್ರೀ. ರಾಜಗೋಪಾಲ್ ಅವರು ಇಚ್ಛೆಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಈ ಸಂಕಲನದಲ್ಲಿರುವ ಬರಹಗಳನ್ನು ಸಂಪಾದಕರು ಸಲ್ಲಾಪ ಹರಟೆ ಚಿಂತನೆ ಎಂದು ಮೂರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಆದರೆ ಅನುಭವ ಮತ್ತು ಚಿಂತನಾ ಪ್ರಧಾನವಾದ ಈ ಬರೆಹಗಳನ್ನು ಒಟ್ಟಾರೆಯಾಗಿ ಪ್ರಬಂಧಗಳು ಎನ್ನಬಹುದು. ಈ ಪ್ರಬಂಧಗಳನ್ನು ಓದುತ್ತ ನನಗೆ ಅಮೆರಿಕ ಕನ್ನಡಿಗರ ಬಾಳಿನ ಒಂದು ಮುಖದ ದರ್ಶನವಾದಂತಾಯಿತು. ಬೇರೆಬೇರೆ ಕ್ಷೇತ್ರದಲ್ಲಿ ಹಾಗೂ ಜ್ಞಾನಶಿಸ್ತಿನಲ್ಲಿ ಕೆಲಸ ಮಾಡುವ ಜನರು ಕನ್ನಡದೊಳಗೆ ಬರೆಯುವುದರಿಂದ ಕನ್ನಡ ಬರೆಹಕ್ಕೆ ಹೊಸಶಕ್ತಿಯ ಆವಾಹನೆಯಾಗುತ್ತದೆ ಎಂದು ನಂಬಿದವನು ನಾನು. ಈ ಬರೆಹಗಳನ್ನು ಓದಿದ ಮೇಲೆ, ಬೇರೆಬೇರೆ ದೇಶಗಳಲ್ಲಿ ಇರುವ ಕನ್ನಡಿಗರು ಬರೆದಾಗಲೂ ಕನ್ನಡಕ್ಕೆ ಹೊಸ ಆಯಾಮದ ಕೂಡಿಕೆಯಾಗುತ್ತದೆ ಎಂದು ಅನಿಸುತ್ತಿದೆ. ಈ ಬರೆಹಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಹೋಗಿಬಂದವರು ಬರೆದ ಅನೇಕ ಪ್ರವಾಸಕಥನಗಳ ಮಿತಿಯೂ ಹೊಳೆಯುತ್ತಿದೆ.

ಇಲ್ಲಿನ ಲೇಖಕರು ಮುಖ್ಯವಾಗಿ ವೈದ್ಯರು ಇಂಜಿನಿಯರರು ವಿಜ್ಞಾನಿಗಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆಗಿರುವರು. ಇವರಲ್ಲಿ ಅರ್ಧದಷ್ಟು ಜನ ಮಹಿಳೆಯರು ಎನ್ನುವುದು ಸಹ ಕುತೂಹಲಕರ. ಇಲ್ಲಿನ ಲೇಖಕರಿಗೆ ಪುರುಸೊತ್ತೇ ಇಲ್ಲದ ದುಡಿಮೆ ಮತ್ತು ಸಾಂಸ್ಕೃತಿಕ ಏಕಾಂಗಿತನವೇ ಈ ಬಗೆಯ ಬರೆಹಗಳಲ್ಲಿ ಅವರನ್ನು ತೊಡಗಿಸಿರುವಂತೆ ತೋರುತ್ತದೆ. ಹೀಗಾಗಿ ಇಲ್ಲಿನ ಬರೆಹಗಳಿಗೆ ಆಯಾ ಲೇಖಕರ ವೈಯಕ್ತಿಕ ವಿಶಿಷ್ಟತೆ ಮತ್ತು ಲೋಕದೃಷ್ಟಿಗಳ ಆಚೆ, ಒಂದು ಸಾಮುದಾಯಕ ಲಕ್ಷಣವೂ ಇದೆ. ಉದಾಹರಣೆಗೆ, ಇಲ್ಲಿನ ಬರೆಹದ ಮುಖ್ಯ ವಸ್ತು, ಕಳೆದುಹೋದ ಬಾಳಿನ ಅಥವಾ ಬಿಟ್ಟುಬಂದ ದೇಶದ ನೆನಪುಗಳಿಗೆ ಸಂಬಂಧಪಟ್ಟಿರುವುದು ಗಮನಿಸಬೇಕು. ಹೀಗಾಗಿಯೇ ಬಾಲ್ಯದ ಬದುಕಿನ ಸಂಗತಿಗಳು ಇಲ್ಲಿ ಬಹುತೇಕ ಬರೆಹಗಳ ‘ವಸ್ತು’ವಾಗಿವೆ. ಇದರಿಂದ ಸಹಜವಾಗಿಯೇ ಬರೆಹಗಳಲ್ಲಿ ಭಾವುಕತೆ ಪ್ರಧಾನವಾಗಿ ಕೆಲಸ ಮಾಡಿದೆ. ಇಲ್ಲಿರುವ ಅಡುಗೆ ಮತ್ತು ಊಟದ ವಿವರಗಳು ಕೂಡ ಗತದ ಸ್ಮೃತಿಗಳಲ್ಲಿ ಆಹಾರ ಸಂಸ್ಕೃತಿಯ ಪ್ರಾಮುಖ್ಯವನ್ನು ಸೂಚಿಸುತ್ತಿವೆ. ಇಲ್ಲಿ ಬಳಕೆಯಾಗಿರುವ ಕರ್ನಾಟಕದ ಬೇರೆಬೇರೆ ಭಾಗದ ಪ್ರಾದೇಶಿಕ ವಿಶಿಷ್ಟವಾದ ಮಾತುಕತೆಗಳು ಬರೆಹವನ್ನು ಜೀವಂತಗೊಳಿಸಿವೆ. ಮಾತ್ರವಲ್ಲ, ಅವು ದೂರದೇಶದಲ್ಲಿದ್ದು ಊರನ್ನು ನೆನೆಯುವ ಒಳ ಉಪಾಯವಾಗಿಯೂ ಬಂದಂತಿವೆ.

ಇಲ್ಲಿನ ಬರಹಗಳಿಗೆ ಇನ್ನೊಂದು ಮುಖವಿದೆ. ಅದು ಬದುಕಿಗಾಗಿ  ಆಯ್ದುಕೊಂಡಿರುವ ಹೊಸ ದೇಶದಲ್ಲಿ ಅನುಭವಿಸುವ ಕಷ್ಟ ಸುಖಗಳನ್ನು ಕುರಿತದ್ದು. ಅಪರಿಚಿತವಾದ ನಾಗರಿಕ ಸಮಾಜದಲ್ಲಿ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜನ ಮಾಡಿರುವ ಹೋರಾಟ ಮತ್ತು ಬೆಳೆಸಿಕೊಂಡಿರುವ ಹೊಸ ಸಂಬಂಧಗಳ ಚಿತ್ರಣವೂ ಇಲ್ಲಿದೆ. ಗೆಳತಿಯ ಮನೆಗೆ ಹೋದ ಅನುಭವವನ್ನು ಹೇಳಿಕೊಂಡಿರುವ ಮಾಲಾರಾವ್ ಅವರ ಲೇಖನವು ಅಮೆರಿಕವನ್ನು ತನ್ನದೆಂದು ಭಾವಿಸಿದ ಸದರ ಮತ್ತು ಆಪ್ತತೆಯಲ್ಲಿಯೇ ಹುಟ್ಟಿದ್ದು. ಇದಕ್ಕೆ ಪ್ರತಿಯಾಗಿ, ಮರಳಿ ಸ್ವದೇಶಕ್ಕೆ ಬಂದಾಗ, ಸ್ವಂತ ಊರಿನಲ್ಲಿ ತಿರುಗಾಡುವಾಗ, ಪರಕೀಯತೆಯ ಭಾವ ಅನುಭವಿಸುವಿಕೆ ಬರೆಹಗಳೂ ಇವೆ. ಬಹುಶಃ ಪರದೇಶದಲ್ಲಿ ಅನುಭವಿಸುವ  ಪರಕೀಯತೆಯ ಭಾವಕ್ಕಿಂತ ನಮ್ಮ ಊರುಗಳಲ್ಲೇ ಅನುಭವಿಸುವ ಪರಕೀಯತೆಯು ಹೆಚ್ಚು ವಿಚಿತ್ರವಾದುದು. ಸಂಕಟಕರವಾದುದು. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಪ್ರಾಮಾಣಿಕತೆ ಬೇಕು. ದತ್ತಾತ್ರಿಯವರ ಲೇಖನವು,  ನೆನಪುಗಳ ಭಾವುಕತೆಯು ಬದಲಾದ ವಾಸ್ತವತೆಯ ಜತೆ ಮುಖಾಮುಖಿ ಮಾಡಿದಾಗ ಹುಟ್ಟುವ ಕಟುವಾದ ಅನುಭವಗಳನ್ನು ನಮಗೆ ಮುಟ್ಟಿಸುತ್ತದೆ.

ಹೀಗೆ ಬಿಟ್ಟುಹೋದ ದೇಶದ ಮತ್ತು ಬದುಕುತ್ತಿರುವ ದೇಶದ ಎರಡೂ ಅನುಭವ ಲೋಕಗಳು ಸೇರಿ, ಇಲ್ಲಿನ ಬರೆಹಗಳಲ್ಲಿ ಒಂದು ಬಗೆಯ ಇಂಡೊ-ಅಮೆರಿಕನ್ ಎಂದು ಕರೆಯಬಹುದಾದ ಒಂದು ಅನುಭವಲೋಕವು ನಿರ್ಮಾಣವಾಗಿದೆ. ಹೊಸ ಮತ್ತು ಹಳೆಯ ತಲೆಮಾರಿನ ಲೇಖಕರು ಒಟ್ಟಿಗೆ ಬರೆದಿರುವುದರಿಂದ, ಹಳೆಯ ಅಮೆರಿಕ ಚಿತ್ರದಿಂದ ಬದಲಾದ ಅಮೆರಿಕದ ಚಿತ್ರದವರೆಗೆ ಹಳೆಯ ಭಾರತದಿಂದ ಬದಲಾದ ಭಾರತದವರೆಗೆ, ಎರಡೂ ದೇಶಗಳ ಅಂದು ಇಂದಿನ ಚಿತ್ರಗಳು ಇಲ್ಲಿ ಸಿಗುತ್ತವೆ. ಒಟ್ಟಾರೆ ಇಲ್ಲಿರುವುದು ಬದಲಾದ ಅಥವಾ ಬದಲಾಗುತ್ತಿರುವ ದೇಶಗಳ ಕಥನ.

ಇಲ್ಲಿನ ಎರಡು ಲೇಖನಗಳು ಅಮೆರಿಕದ ಹಿಂದುಧರ್ಮ ಬದಲಾಗುತ್ತಿರುವ ಚಿತ್ರವನ್ನು ಕೊಡುತ್ತದೆ. ‘ಅಮೆರಿಕೋಪನಯನ’ ಎಂಬ ಇಲ್ಲಿನ ಒಂದು ಲೇಖನದ ಹೆಸರು, ಬಹುಶಃ ಈ ಮಿಶ್ರಸಂಸ್ಕೃತಿಯನ್ನು ಮಾರ್ಮಿಕವಾಗಿ ಸೂಚಿಸುತ್ತಿದೆ. ‘ಗೇ’ ಮದುವೆ ಮಾಡಿಸಿದ ಪುರೋಹಿತನಿಂದ ಹಿಡಿದು ಭಾಷಣದ ಮೊದಲು ಶಂಖ ಊದುವ ವ್ಯಕ್ತಿಯವರೆಗೆ ಎಷ್ಟೊಂದು ಬಗೆಯ ಚಿತ್ರಗಳಿವೆ ಇಲ್ಲಿ! ಇವೆಲ್ಲವೂ ಸಂಸ್ಕೃತಿ ಧರ್ಮ ಅಧ್ಯಯನ ಮಾಡುವವರಿಗೆ ಮಹತ್ವದ ಸಂಗತಿಗಳಾಗಿವೆ. ಅಮೆರಿಕದ ಕನ್ನಡಿಗರ ಅನುಭವ ಲೋಕ ಮತ್ತು ಚಿಂತನಕ್ರಮಗಳಲ್ಲಿ ನಾನಾ ಪರಿಯಲ್ಲಿ ಅಡಗಿರುವ ಸಂಕರತನವು, ಅದನ್ನು ಅಭಿವ್ಯಕ್ತಿ ಮಾಡಲು ಬಳಸುತ್ತಿರುವ ಭಾಷೆಯನ್ನು ಸಹ ಸಂಕರಗೊಳಿಸಿಗೊಂಡಿದೆ. ಹೊಸ ಅನುಭವ ಮತ್ತು ಚಿಂತನೆಗಳು ಹೊಸ ಭಾಷೆಯನ್ನು ಕಟ್ಟಿಕೊಳ್ಳಲು ಒತ್ತಾಯ ಹಾಕುವುದು ಸಾಮಾನ್ಯ.

ಇಲ್ಲಿನ ಬರಹಗಳಲ್ಲಿ ಸಂಕ್ರಮಣದ ಅವಸ್ಥೆಯಲ್ಲಿರುವ ಜೀವನದ ಲಯವನ್ನು ಹಿಡಿಯುವುದೇ ಪ್ರಧಾನವಾಗಿದೆ. ಜಂಗಮಕ್ಕಳಿವಿಲ್ಲ ನಿಜ. ಆದರೆ ಜಂಗಮತನಕ್ಕೆ ನೋವಿನ ತಲ್ಲಣದ ಅಸ್ಥಿರತೆಯ ಸಂಕಟಗಳೂ ಇವೆ. ಇಲ್ಲಿನ ಅನೇಕ ಬರೆಹಗಳಲ್ಲಿ ಬದಲಾವಣೆ ಸಹಜವೆಂಬ ಭಾವವಿದ್ದರೂ, ಆಳದಲ್ಲಿ ಎಂತಹುದೊ ಒಂದು ಬಗೆಯ ಆತಂಕವೂ ಸುಪ್ತವಾಗಿ ಮಿಡಿಯುತ್ತ ಇದೆ. ಈ ಆತಂಕದ ಭಾಗವಾಗಿಯೇ ಇಲ್ಲಿನ ಬರೆಹಗಳಲ್ಲಿರುವ ವಿನೋದ ಪ್ರಜ್ಞೆಯನ್ನು ನೋಡಬೇಕು. ಇಲ್ಲ್ಲಿನ ಬರಹಗಳ ಶಕ್ತಿಯೂ ಆಗಿರುವ ಈ ಲಘುಶೈಲಿಯು ಲೇಖಕರ ಸಹಜ ವಿನೋದ ಪ್ರಜ್ಞೆಯಿಂದ ಮಾತ್ರ ಬಂದಿದ್ದಲ್ಲ; ಅದು ಬದುಕಿನ ಪರಿಸ್ಥಿತಿಗಳೇ ಅದನ್ನು ಸಹ್ಯವಾಗಿಸಿಕೊಂಡು ಬದುಕಲು ಹುಟ್ಟಿಸಿದ ಅನಿವಾರ್ಯವಾದ ಕೀಲೆಣ್ಣೆಯಂತೆ  ಬಂದಂತಿದೆ. ತಮ್ಮ ಹತೋಟಿಗೆ ಮಿರಿದ ಪಲ್ಲಟಗಳನ್ನು ಸಹಿಸುವುದಕ್ಕೆ ಈ ಹಾಸ್ಯಪ್ರಜ್ಞೆ ನೆರವಾಗಿರುವಂತಿದೆ. ವೈಯಕ್ತಿಕವಾಗಿ ಮೈಶ್ರೀ ಅವರ ಪ್ರಾಮಾಣಿಕ ಪೋಲಿತನ ಧ್ವನಿಪೂರ್ಣವಾದ ಮಾತುಗಳನ್ನು ಸಹಜವಾಗಿ ಬರೆಯುವುದು ಇಷ್ಟವಾಗುತ್ತದೆ.

ಇಲ್ಲಿನ ಬರಹಗಳ ಗುಣಮಟ್ಟ ಬೇರೆಬೇರೆ ತರಹ ಇದೆ. ಬರವಣಿಗೆಯ ಕಲೆಯನ್ನು ಬಲ್ಲ ಕುಶಲರು ಇರುವಂತೆ, ಕುಶಲತೆಯಿಲ್ಲದವರೂ ಇದ್ದಾರೆ. ಲವಲವಿಕೆಯ ಬರೆಹಗಳಿರುವಂತೆ ಕೆಲವು ಸೋತ ಬರೆಹಗಳೂ ಇವೆ. ಕೆಲವು ಪ್ರಬಂಧಗಳು ಅನುಭವ ಪ್ರಧಾನವಾಗಿವೆ. ಕೆಲವು ಚಿಂತನ ಪ್ರಧಾನವಾಗಿವೆ. ಆದರೆ ಅನುಭವ ಮತ್ತು ಚಿಂತನೆಯ ಎರಡೂ ಆಯಾಮಗಳನ್ನು ಬೆಸೆಯಲು ಯತ್ನಿಸಿರುವ ಬರಹಗಳೇ ಇಲ್ಲಿನ ಯಶಸ್ವೀ ಬರೆಹಗಳು. ದತ್ತಾತ್ರಿ, ಕಾಗಿನೆಲೆ, ಶಾಂತಲಾ, ಶಶಿಕಲಾ ಅವರ ಲೇಖನಗಳಲ್ಲಿ ಅಳವಟ್ಟಿರುವ ಚಿಂತನೆ ಅಪೂರ್ವವಾಗಿದೆ. ವೈಶಾಲಿ ಮತ್ತು ಶಶಿಕಲಾ ಅವರು ಒಳ್ಳೇ ಪ್ರಬಂಧಕಾರರು. ವಿಮಲಾ ಅವರು ಬಹಳ ಸಹಜವಾಗಿ ಬರೆದಿರುವ ಬರೆಹವು ಬಹಳ ಆಳವನ್ನು ಹೊಂದಿದೆ. ಅವರಿಗೆ ರೋಚಕಗೊಳ್ಳದೆ ತಣ್ಣಗೆ ದೊಡ್ಡದನ್ನು ಬರೆಯುವ ಶಕ್ತಿಯಿದೆ. ರಾಮಪ್ರಿಯನ್ ಅವರ ಹಳಹಳಿಕೆಯಿಂದ ಕೂಡಿದ್ದರೂ ಕಳೆದುಹೋದ ದಿನಗಳ ಚಿತ್ರವನ್ನು ಕೊಡುವ ಕಾರಣಕ್ಕಾಗಿಯೇ ಚಾರಿತ್ರಿಕ ಮಹತ್ವ ಪಡೆದಿದೆ.

ಅಮೆರಿಕದ ಬಗ್ಗೆ ಅದರ ಹೊರಗಿರುವ ನಮ್ಮಂತಹವರಿಗೆ ಎರಡು ಅತಿರೇಕದ  ಗ್ರಹಿಕೆಗಳಿದ್ದಂತಿವೆ. ಒಂದು ರೆಡ್‌ಇಂಡಿಯನರನ್ನು ಕೊಂದು ದೇಶವನ್ನು ಆಕ್ರಮಿಸಿಕೊಂಡು, ಗುಲಾಮಗಿರಿಯನ್ನು ಎಗ್ಗಿಲ್ಲದೆ ಮಾಡುತ್ತ, ತಮ್ಮ ಹಿತಾಸಕ್ತಿಗಳಿಗೆ ಯುದ್ಧಖೋರ ನೀತಿಯನ್ನು ಮಾಡುತ್ತಿರುವ ದೊಡ್ಡಣ್ಣ ಎಂಬುದು; ಇನ್ನೊಂದು ಅಮೆರಿಕವು ತಂತ್ರಜ್ಞಾನ ವಿಜ್ಞಾನದಲ್ಲಿ ಶಿಕ್ಷಣವುಳ್ಳ ಮಂದಿಗೆ ತೆರೆದಿರುವ ಭುವಿಯ ಮೇಲಣ ಸ್ವರ್ಗ ಎಂಬುದು. ಈ ಎರಡನೆಯ ಚಿತ್ರಕ್ಕೆ ಕಾರಣ, ಪ್ರವಾಸಿಗರಾಗಿ ಅಮೆರಿಕಕ್ಕೆ ಹೋಗಿಬಂದವರ ಪ್ರವಾಸ ಕಥನಗಳೂ  ಇರಬೇಕು. ಆದರೆ ಈ ಎರಡಕ್ಕೂ ಹೊರತಾಗಿ, ಅಲ್ಲಿಯೇ ಬದುಕುತ್ತಿರುವ ಜನರ ಗ್ರಹಿಕೆಗಳು ಬೇರೆಬೇರೆ ತರಹ ಇವೆ ಎಂಬುದನ್ನು ಈ ಕೃತಿ ಸಾದರಪಡಿಸುತ್ತದೆ. ಇಷ್ಟಾಗಿಯೂ ೯/೧೧ರ ಸ್ಮೃತಿಯು ಅನೇಕ ಬರಹಗಳಲ್ಲಿ ಕಾಣಿಸಿದ್ದು ಅದೊಂದು ವಿಷಾದಕರ ಘಟನೆಯಾಗಿ ಪಾಸಾಗಿದೆ. ಆದರೆ ಬರೆಹಗಳಲ್ಲಿ ಅಮೆರಿಕದ ಯುದ್ಧ ಮತ್ತು ವಿದೇಶನೀತಿಯನ್ನು ಕುರಿತ ವಿಮರ್ಶೆಯ ಮಾತು ಒಂದೇ ಒಂದು ಕಡೆ ಧ್ವನಿಪೂರ್ಣವಾಗಿ ಬಂದಿರುವುದು ಬಿಟ್ಟರೆ, ಉಳಿದಂತೆ ಈ ಕುರಿತು ಎಚ್ಚರಿಕೆಯ ಮೌನವೇ ಆವರಿಸಿದೆ. ಬಹುಶಃ ಅಮೆರಿಕದಲ್ಲಿದ್ದೇ ಅದನ್ನು ವಿಮರ್ಶಿಸುವುದು ಕಷ್ಟವೊ ಅಥವಾ ಹಾಗೆ ವಿಮರ್ಶೆ ಮಾಡುವಂತಹ ದೃಷ್ಟಿಕೋನವೇ ಇಲ್ಲವೊ ತಿಳಿಯದು. ಆದರೆ ಅಮೆರಿಕನ್ ಸಮಾಜದ ಚಿತ್ರಣವು ಇಲ್ಲಿನ ಬರೆಹಗಳಲ್ಲಿ ಬಹುಮಟ್ಟಿಗೆ ಕ್ಷೀಣವಾಗಿದೆ.

ತನ್ನ ಪಾಡಿಗೆ ತಾನಿರುವ ಅಮೆರಿಕನ್ ಬದುಕೇ ಇಂತಹುದೊ? ಅಥವಾ  ದೈಹಿಕ ಶ್ರಮ ಮಾಡುವ ಜನರು ಅಮೆರಿಕಕ್ಕೆ ಹೋಗಿ ಬರೆದರೆ ಅವರ ಅನುಭವ ಲೋಕ ಭಿನ್ನವಾಗಿರುವುದೊ? ಈ ಕುತೂಹಲವು ಈ ಬರೆಹಗಳನ್ನು ಓದಿದ ಬಳಿಕ ಹಾಗೆ ಉಳಿಯುತ್ತದೆ. ಇಲ್ಲಿನ ಲೇಖಕರ ಸಾಮಾಜಿಕ ಹಿನ್ನೆಲೆ ಮತ್ತ ವರ್ಗದ ಸ್ತರವು ಇಲ್ಲಿನ ಬರೆಹಗಳ ಅನುಭವ ಲೋಕಕ್ಕೆ ಒಂದು ಪರಿಮಿತಿಯನ್ನು ಒದಗಿಸಿದೆ. ಆದರೆ ಇಲ್ಲಿನ ಬರೆಹಗಳು ಅನಿವಾರ್ಯವಾಗಿ ಹೇರಲ್ಪಡುವ ಇಂತಹ ಸಾಮಾಜಿಕ ರಾಜಕೀಯ ಚೌಕಟ್ಟನ್ನು ಮೀರಲು ಪ್ರೇರಿಸುತ್ತವೆ. ಇದು ತಾನೇ ಬರೆಹದ ಅಥವಾ ಕಲೆಯ ಶಕ್ತಿ? ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವ ಚಹರೆಗಳು ಇಲ್ಲಿನ ಬರೆಹಗಳಲ್ಲಿವೆ. ಕನ್ನಡನಾಡಿನಲ್ಲಿ ಇರುವವರು ಬರೆಯುತ್ತಿರುವುದನ್ನು ವಿಶ್ವದ ಕನ್ನಡಿಗರು ಓದುವುದು ಒಂದು ಬಗೆಯಾಗಿದೆ; ವಿಶ್ವದ ಬೇರೆಬೇರೆ ಭಾಗದಲ್ಲಿರುವ ಕನ್ನಡಿಗರು ಬರೆಯುವುದು ಒಳನಾಡಿನಲ್ಲಿರುವ ನಾವು ಓದುವುದು ಇನ್ನೊಂದು ಬಗೆಯಾಗಿದೆ. ನಾವು ಎಲ್ಲಿದ್ದು ಬರೆಯುತ್ತೇವೆ ಎನ್ನುವುದು ಬರಹದ ಸ್ವರೂಪವನ್ನು ನಿರ್ಣಯಿಸುವಂತೆ, ನಾವು ಎಲ್ಲಿದ್ದುಕೊಂಡು ಓದುತ್ತೇವೆ ಎನ್ನುವುದು ನಮ್ಮ ಓದಿನ ಪರಿಯನ್ನೂ ನಿಯಂತ್ರಿಸುತ್ತದೆ.  ಅಮೆರಿಕದ ಕನ್ನಡಿಗರ ತಳಮಳಗಳನ್ನು ಸುಖ ಸಂಭ್ರಮಗಳನ್ನು ಆಶೋತ್ತರಗಳನ್ನು ಈ ಮೂಲಕ ತಿಳಿಯುವಂತೆ ಮಾಡಿದ ಇಲ್ಲಿನ ಲೇಖಕರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ರಹಮತ್ ತರೀಕೆರೆ

 Posted by at 8:15 AM