Jan 042010
 

 (ಚಿತ್ರ ಕೃಪೆ : ದಟ್ಸ್ ಕನ್ನಡ)

೨೦೦೨ರಲ್ಲಿ ಡೆಟ್ರಾಯ್ಟ್ ನಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಕನ್ನಡಿಗರೊಬ್ಬರು ‘ನೆನಪಿನ ದೃಶ್ಯಗಳು’ ಎಂಬ ತಮ್ಮ ಆತ್ಮ ಚರಿತ್ರೆಯ ಪುಸ್ತಕವನ್ನು ಪುಕ್ಕಟೆಯಾಗಿ ಎಲ್ಲರಿಗೂ ಲಭ್ಯವಾಗಿಸಿದರು.  ಅವರ ಹೆಸರು ಕೃಷ್ಣ ಶಾಸ್ತ್ರಿ ಎಂದು ಪುಸ್ತಕ ನೋಡಿ ತಿಳಿಯಿತಾದರೂ ಯಾರಿಗೂ “ಯಾರೀ ಕೃಷ್ಣ ಶಾಸ್ತ್ರಿ?” ಎಂಬ ಕುತೂಹಲ ತಣಿಯಲೇ ಇಲ್ಲ!  ಯಾಕೆಂದರೆ ಕೃಷ್ಣ ಶಾಸ್ತ್ರಿಯವರು ವೇದಿಕೆಯ ಮೇಲೆ ರಾರಾಜಿಸಲಿಲ್ಲ.  ತಮ್ಮ ಹೆಸರನ್ನು ಮೈಕಿನಲ್ಲಿ ಹೇಳಿಸಿ ಜನರ ಗಮನ ಸೆಳೆಯಲಿಲ್ಲ.  ಏನೂ ಮಾಡಲಿಲ್ಲ.  ಅವರಿದ್ದಿದ್ದು ಸಭಾಂಗಣದ ಹೊರಗೆ ಒಂದು ಬುಕ್ ಸ್ಟಾಲಿನಲ್ಲಿ. ಅತಿಥಿಯಾಗಿ ಬಂದಿದ್ದ ನಿಸಾರ್ ಅಹಮದ್ ಅವರ ಪುಸ್ತಕಗಳನ್ನು ಮಾರುವ ಹೊಣೆ ಹೊತ್ತು ಕುಳಿತಿದ್ದರು!  ಈ ಒಂದು ಘಟನೆಯಲ್ಲಿ ಕೃಷ್ಣ ಶಾಸ್ತ್ರಿಯವರ ವ್ಯಕ್ತಿತ್ವದ ಮಿಂಚು ನೋಟ ನಮಗೆ ಸಿಕ್ಕುತ್ತದೆ. ಯಾವ ಥಳುಕು, ಆಡಂಬರ ಅವರಿಗೆ ಬೇಕಾಗಿಲ್ಲ.  ಕನ್ನಡದ ಸೇವೆಯನ್ನು ಮಾತ್ರ ತಪ್ಪಿಸುವುದಿಲ್ಲ! ಯಾವ ತುತ್ತೂರಿ, ನಗಾರಿಗಳಿಲ್ಲದೆ ಹಿನ್ನೆಲೆಯಲ್ಲೇ ಉಳಿದು ಸದ್ದಿಲ್ಲದೆ ಕನ್ನಡ ಸೇವೆ ಸಲ್ಲಿಸಿದ ಎಲೆಯ ಮರೆಯ ಕಾಯಿ ಕೃಷ್ಣ ಶಾಸ್ತ್ರಿ ಅವರು.  ಇಂದು ನಮ್ಮೆದೆಯಲ್ಲಿ ನೆನಪಾಗಿ, ಹಾಡಾಗಿ ಹಸಿರಾಗಿ ಉಳಿದೇ ಹೋದವರು.

‘ಅಕ್ಕ’ ಸಮ್ಮೇಳನ ಮುಗಿದ ಮೇಲೆ ಅವರು ನಿಸಾರ್ ಅಹಮದ್ ಅವರ ಅಮೆರಿಕಾ ಪ್ರವಾಸ ಹಾಗೂ ಉಪನ್ಯಾಸಗಳ ಸಂಪೂರ್ಣ ಹೊಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಮರ್ಥವಾಗಿ ನಿಭಾಯಿಸಿದರು! ಅಮೆರಿಕಾದಲ್ಲಿ ಸುಮಾರು ೪೨ ನಗರಗಳಲ್ಲಿ ನಿಸಾರ್ ಅಹಮದ್ ಅವರ ಉಪನ್ಯಾಸ ಏರ್ಪಾಡಾಗಿತ್ತು ಅಂದರೆ ಆಶ್ಚರ್ಯವೆನಿಸದೆ! ಮಾತ್ರವಲ್ಲ ಕರ್ನಾಟಕದಿಂದ ಆಗಮಿಸಿದ ಇನ್ನೂ ಅನೇಕ ಸಾಹಿತಿ, ಸಂಗೀತಗಾರರಿಗೂ ಇದೇ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು.

ಕೃಷ್ಣ ಶಾಸ್ತ್ರಿಯವರು ‘ಕನ್ನದ ಸಾಹಿತ್ಯ ರಂಗ’ದ ಸ್ಥಾಪಕ  ಸದಸ್ಯರಲ್ಲಿ ಒಬ್ಬರು.  ೨೦೦೪ರಲ್ಲಿ ನಡೆದ ‘ಕನ್ನಡ ಸಾಹಿತ್ಯ ರಂಗ’ದ ಸಮ್ಮೇಳನದಲ್ಲಿಯೂ ಇವರು ಪುಸ್ತಕ ಮಳಿಗೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದ್ದರು.

ಅಯೋವಾ ರಾಜ್ಯದ ಸೀಡರ್ ಫಾಲ್ಸಿನಲ್ಲಿ ನೆಲೆಸಿದ್ದ ಕೃಷ್ಣ ಶಾಸ್ತ್ರಿ ಅವರು ಬಿ.ಎಂ.ಎಸ್ ಕಾಲೇಜಿನಲ್ಲಿ ಓದಿದವರು.  ಆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿದ್ದರು.  ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲೆಂದು ಹಲವಾರು ವಿದ್ಯಾರ್ಥಿ ವೇತನಗಳನ್ನು ಕೊಡ ಮಾಡಿದ್ದರು.  ಕಳೆದ ನವೆಂಬರ್ ೨೫ರಂದು ಸ್ವರ್ಗಸ್ಥರಾದ ಕೃಷ್ಣ ಶಾಸ್ತ್ರಿಯವರು ಪತ್ನಿ ಶಾಂತಾ ಮತ್ತು ಮಕ್ಕಳಾದ ಮಾಲಾ ಮತ್ತು ಪ್ರಿಯಾ ಅವರನ್ನು ಅಗಲಿ ಹೋಗಿದ್ದಾರೆ.  ಅವರ ನಿರ್ಗಮನದಿಂದ ಅಮೆರಿಕಾದ  ನೆಲದಲ್ಲಿ ಕನ್ನಡದ ಕಂಪು ಸೂಸುವ ಒಂದು ಹೂವು ಇಲ್ಲವಾದಂತಾಗಿದೆ. 

– — ನಳಿನಿ ಮೈಯ

 Posted by at 4:19 AM