May 212007
 
ಕನ್ನಡ ಸಾಹಿತ್ಯ ರಂಗದ ಮುಡಿಗೆ ಮತ್ತೊಂದು ಗರಿ – ಇಲಿನಾಯ್ ವಸಂತೋತ್ಸವ

 

 ಮೇ, ೧೯ ಮತ್ತು ೨೦ರಂದು ಇಲಿನಾಯ್‌ನ ಅರೋರಾದಲ್ಲಿ ನಡೆದ ಮೂರನೆಯ ವಸಂತೋತ್ಸವ ಯಶಸ್ವಿಯಾಗಿ ನೆರವೇರಿತು.  ಕನ್ನಡ ಸಾಹಿತ್ಯ ರಂಗ ಮತ್ತು ಇಲಿನಾಯ್‍ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಡನೆ ನಡೆದ ಸಮ್ಮೇಳನದಲ್ಲಿ, ಇಲಿನಾಯ್ ಮತ್ತು ಅಮೆರಿಕದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅನೇಕ ಬರಹಗಾರರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

 ಸಮ್ಮೇಳನದ ಮೊದಲನೆಯ ದಿನವಾದ ೧೯ರಂದು “ನಗೆಗನ್ನಡಂ ಗೆಲ್ಗೆ” ಮತ್ತು “ಕನ್ನಡದಮರ ಚೇತನ” (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ” ಪುಸ್ತಕಗಳನ್ನು ಕ್ರಮವಾಗಿ ಪ್ರೊ. ಅ. ರಾ. ಮಿತ್ರ, ಡಾ. ಎಚ್. ಎಸ್. ರಾಘವೇಂದ್ರ ರಾವ್ ಬಿಡುಗಡೆ ಮಾಡಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅ. ರಾ. ಮಿತ್ರರ ವಿದ್ಪತ್ಪೂರ್ಣ ಭಾಷಣ, ಎಚ್. ಎಸ್. ರಾಘವೇಂದ್ರ ರಾವ್ ಅವರಿಂದ “ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಅಮೆರಿಕನ್ನಡಿಗರ ಅಭಿನಂದನೆ” ಕಾರ್ಯಕ್ರಮಗಳಲ್ಲದೆ, “ಅಮೆರಿಕದಲ್ಲಿ ಕನ್ನಡ ಕಲಿಕೆ”, “ನಮ್ಮ ಬರಹಗಾರರು” ಮುಂತಾದ ಪ್ರಸ್ತುತಿಗಳಿದ್ದವು.  ಶಿಕರ ತಂಡ ನಡೆಸಿಕೊಟ್ಟ ಡಾ| ಚಂದ್ರಶೇಖರ ಕಂಬಾರರ “ಖರೋ ಖರ” ಸಭಿಕರ ಮನ ಗೆಲ್ಲುವಲ್ಲಿ ಸಫಲವಾಯಿತು.

  ಎರಡನೆಯ ದಿನದ ಸಾಹಿತ್ಯ ಗೋಷ್ಟಿಯಲ್ಲಿ ಅಮೆರಿಕನ್ನಡಿಗ ಲೇಖಕರು ಸ್ವರಚಿತ ಕವನ, ನಗೆ ಬರಹ, ನಗೆಹನಿಗಳ ರಸದೌತಣವನ್ನು ಸಭಿಕರಿಗೆ ಉಣಬಡಿಸಿದರು.  ತ್ರಿವೇಣಿ ಶ್ರೀನಿವಾಸರಾವ್ ಅವರ “ತುಳಸೀವನ” ಅಂಕಣ ಬರಹ ಸಂಕಲನವನ್ನು ಪ್ರೊ. ಅ. ರಾ. ಮಿತ್ರರು ಲೋಕಾರ್ಪಣಗೊಳಿಸಿದರು. ಅಮೆರಿಕದಲ್ಲಿಯೇ ಮುದ್ರಣಗೊಂಡು, ಬೆಳಕು ಕಂಡ ಮೊದಲ ಕನ್ನಡ ಪುಸ್ತಕವೆಂಬ ದಾಖಲೆ ಈ ಪುಸ್ತಕದ ವಶವಾಯಿತು.

 ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ” ಅಮೆರಿಕದ ಕನ್ನಡಿಗರ ಸಾಹಿತ್ಯ ಸೃಷ್ಟಿ” – ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ಭೋಜನ ವಿರಾಮದ ನಂತರ ಅ. ರಾ. ಮಿತ್ರರೊಡನೆ ನಡೆದ ಸಂವಾದ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಸಭಿಕರಿಂದ ಅನೇಕ ಉತ್ತಮ ಪ್ರಶ್ನೆಗಳು ಹರಿದು ಬಂದಿದ್ದವು. ವಂದನಾರ್ಪಣೆ, ವಿದಾಯ ಗೀತೆಗಳೊಂದಿಗೆ ಸಂಭ್ರಮದ ವಸಂತೋತ್ಸವ ಮುಕ್ತಾಯ ಕಂಡಿತು.                                         *** 

 Posted by at 9:14 AM